ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ರಾಜ್ಯದ ಬೇಡಿಕೆಗಳಿಗೆ ಸ್ಪಂದಿಸಿದ ಪ್ರಧಾನಿ: ಮುಖ್ಯಮಂತ್ರಿ ಸ್ಪಷ್ಟನೆ

know_the_cm

(ಬೆಂಗಳೂರು), ಜನವರಿ 03, 2020

-ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.

-ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಿಗೆ ಸಂಬಂಧಿಸಿದಂತೆ, ಪತ್ರಿಕಾ ಹೇಳಿಕೆಯನ್ನು ಅವರು ಬಿಡುಗಡೆ ಮಾಡಿದ್ದಾರೆ.

-“ಹೊಸವರ್ಷದ ಪ್ರಾರಂಭದಲ್ಲಿಯೇ ರಾಜ್ಯದ ಪ್ರಸಿದ್ದ ಕ್ಷೇತ್ರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಘನ ಉಪಸ್ಥಿತಿಯಲ್ಲಿ ನಡೆದ ರೈತ ಸಮಾವೇಶ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ನಮ್ಮ ಅಹವಾಲನ್ನು ದೇಶದ ಪ್ರಧಾನಮಂತ್ರಿಗಳಲ್ಲಿ ಪ್ರಾಮಾಣಿಕವಾಗಿ ಸಲ್ಲಿಸಿದ್ದೇನೆ. ಇದು ನಮ್ಮ ಪ್ರಜಾಪ್ರಭುತ್ವದಲ್ಲಿ ಸಹಜವಾಗಿ ನಡೆಯುವಂತಹ ವಿದ್ಯಮಾನವಾಗಿದೆ.

-ಆದರೆ ಕೆಲವು ಮಾಧ್ಯಮಗಳಲ್ಲಿ ವಿಷಯವನ್ನು ತಿರುಚಿ ಸನ್ಮಾನ್ಯ ಪ್ರಧಾನಮಂತ್ರಿಗಳು ನಮ್ಮ ಬೇಡಿಕೆಗೆ ಮೌನವಹಿಸಿದ್ದರು, ಅವರು ಮುನಿಸಿಕೊಂಡಿದ್ದಾರೆ, ಅವರಿಗೆ ಅಸಮಾಧಾನವಾಗಿದೆ ಎಂದು ವಾಸ್ತವ ಸಂಗತಿಗಳನ್ನು ತಿಳಿಯುವ ಗೋಜಿಗೂ ಹೋಗದೆ, ತಮ್ಮ ಕಪೋಲಕಲ್ಪಿತ ವ್ಯಾಖ್ಯಾನಗಳನ್ನು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇಂತಹ ಸುದ್ದಿಗಳು ಸತ್ಯಕ್ಕೆ ದೂರವಾದವುಗಳು ಎನ್ನುವುದನ್ನು ನಾನು ಅತ್ಯಂತ ಸ್ಪಷ್ಟವಾಗಿ ಹೇಳುತ್ತಿದ್ದೇನೆ.

-ಸನ್ಮಾನ್ಯ ಪ್ರಧಾನಮಂತ್ರಿಗಳು ನಮ್ಮ ರಾಜ್ಯದ ಬೇಡಿಕೆಗಳನ್ನು ಸ್ವೀಕರಿಸಿದ್ದಾರೆ. ನಮ್ಮ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು, ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು, ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ಹೆಚ್ಚಿನ ನೆರವು - ಇದೆಲ್ಲವುಗಳಿಗೆ 50 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಮಾನ್ಯ ಪ್ರಧಾನಮಂತ್ರಿಗಳಲ್ಲಿ ನಮ್ಮ ಮನವಿಯನ್ನು ರೈತ ಸಮಾವೇಶದ ವೇದಿಕೆಯಿಂದ ಮತ್ತೊಮ್ಮೆ ಅರಿಕೆ ಮಾಡಿಕೊಳ್ಳುವುದು ಸಮಂಜಸ ಎನ್ನುವ ಕಾರಣಕ್ಕೆ ಅಲ್ಲಿ ಅದನ್ನು ಉಲ್ಲೇಖಿಸಿದ್ದೇನೆ.

-ಸನ್ಮಾನ್ಯ ಪ್ರಧಾನಮಂತ್ರಿಗಳ ದಕ್ಷ, ಪಾರದರ್ಶಕ, ಪ್ರಾಮಾಣಿಕ ಆಡಳಿತ ವೈಖರಿ ಇಡೀ ಜಗತ್ತಿಗೆ ಗೊತ್ತಿದೆ. ಇಡೀ ದೇಶಕ್ಕೆ ತಿಳಿದಿರುವಂತೆ, ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಸರ್ಕಾರ ರೈತರಿಗೆ ಅಭೂತಪೂರ್ವ ನೆರವು ನೀಡಿದೆ, ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಿ, ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಹೆಜ್ಜೆಗಳನ್ನು ಇಡುತ್ತಿದೆ. ನಮ್ಮ ರಾಜ್ಯದ ಕೃಷಿಕರ, ನೀರಾವರಿ ಯೋಜನೆಗಳ ವಾಸ್ತವತೆಗಳೂ ಪ್ರಧಾನಿಗಳಿಗೆ ತಿಳಿದಿದೆ. ಅವರು ನಮ್ಮ ಅತ್ಯುನ್ನತ ನಾಯಕರು. ಕರ್ನಾಟಕಕ್ಕೆ ಅತಿ ಹೆಚ್ಚಿನ ನೆರವು, ಅನುದಾನ ನೀಡಿರುವುದು ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರೇ ಎನ್ನುವುದೂ ಕೂಡ ಎಲ್ಲರಿಗೂ ತಿಳಿದಿದೆ.

-ನಮ್ಮ ಎಲ್ಲ ಮನವಿಗೆ ಸನ್ಮಾನ್ಯ ಪ್ರಧಾನಮಂತ್ರಿಗಳು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಈ ಬಗ್ಗೆ ದೆಹಲಿಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲು ಮತ್ತು ಇಲಾಖಾವಾರು ಕೇಂದ್ರ ಸಚಿವರುಗಳಿಗೆ ಪ್ರಸ್ತಾವನೆ ಸಲ್ಲಿಸಲು ಮಾನ್ಯ ಪ್ರಧಾನಮಂತ್ರಿಗಳು ಸೂಚಿಸಿದ್ದಾರೆ. ಸನ್ಮಾನ್ಯ ಪ್ರಧಾನಮಂತ್ರಿಗಳು ಈ ವಿಷಯದ ಬಗ್ಗೆ ಖುದ್ದಾಗಿ ನನ್ನೊಂದಿಗೆ ಮಾತನಾಡಿದ್ದಾರೆ.

-ವಾಸ್ತವ ಸಂಗತಿಗಳನ್ನು ಮರೆಮಾಚಿ, ಜನರಿಗೆ ತಪ್ಪು ಸಂದೇಶ ನೀಡುವ ಕೆಲವು ಮಾಧ್ಯಮಗಳ ಧೋರಣೆ ಸರಿಯಲ್ಲ ಎನ್ನುವುದನ್ನು ಮತ್ತೊಮ್ಮೆ ಇಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ. ರಾಜ್ಯದ ಹಿತದೃಷ್ಟಿಯಿಂದ ನಮ್ಮ ಪ್ರಯತ್ನಗಳನ್ನು ಬೆಂಬಲಿಸಿ ಮತ್ತು ವಿಷಯಗಳಿಗೆ ತಪ್ಪು ವಾಖ್ಯಾನ ಮಾಡದಿರಿ ಎಂದು ಎಲ್ಲ ವಿದ್ಯುನ್ಮಾನ ಮತ್ತು ಸುದ್ದಿ ಮಾಧ್ಯಮಗಳಲ್ಲಿ ನಾನು ಕೋರಿಕೊಳ್ಳುತ್ತಿದ್ದೇನೆ” ಎಂದು ಅವರು ತಿಳಿಸಿದ್ದಾರೆ.

--------------

PM assured to consider our demands: Chief Minister

(Bengaluru), January 03, 2020

-Chief Minister B.S. Yediyurappa has clarified that Prime Minister Shri Narendra Modi has assured to consider the demands of our State.

-In his statement he said, “A section of media has attached motive to my speech which was plain and honest in its content. Being in federal set up, there is nothing wrong in placing the facts before the Prime Minister and making submissions.

-As a Chief Minister, I placed our state's problems and need of more funds for the developmental activities. I pleaded before the Prime Minister for more funds to the relief works, scientific and remunerative price for the farm produces, and special fund of Rs. 50,000 crore for speeding up of on-going irrigation works.

-As it was a farmers meet, I felt it worthy and timely to plead the prime minister for more funds to all the developmental activities in the state.

-Undoubtedly, Prime Minister Narendra Modi is a great visionary and his concern for the poor and farmers is unquestionable. When whole world is appreciating his statesmanship and visionary zeal, it is in very bad taste for the media to attribute motives to my speech and relate it to prime minister.

-Infact, Prime Minister spoke to me personally and assured me of all help and suggested I come to New Delhi and meet the concerned Ministers and apprise them about the state’s problems and pending projects. He also directed me to prepare a detail report on this matter.

-I humbly request the electronic and print media not to misinterpret but support the government in the interest of development of state and interests of the people. I hope media will respond to my request.

*************