ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮುಖ್ಯಮಂತ್ರಿ ಅವರ, 'ಆಗ್ರೊ ಫುಡ್ ಟೆಕ್ ಎಕ್ಸ್ ಪೋ-2020' ಕಾರ್ಯಕ್ರಮದಲ್ಲಿನ ಭಾಷಣದ ಮುಖ್ಯಾಂಶಗಳು

know_the_cm

(ಬೆಂಗಳೂರು), ಡಿಸೆಂಬರ್ 16, 2019

-ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದೆ.

-ಕೃಷಿ ಉತ್ಪನ್ನಗಳ ಸಂಗ್ರಹಣೆ ಮತ್ತು ಬಳಕೆ ನಡುವೆ ಆಗುತ್ತಿರುವ ನಷ್ಟದ ಪ್ರಮಾಣ ಶೇ. 40 ರಷ್ಟಿರುವುದು ನಮ್ಮೆಲ್ಲರಲ್ಲೂ ಆತಂಕ ಉಂಟು ಮಾಡಿದೆ.

-ಭಾರತದಲ್ಲಿ ಉತ್ಪಾದಿಸಲಾಗುತ್ತಿರುವ ಆಹಾರ ಧಾನ್ಯಗಳ ಪೈಕಿ ಶೇ. 40 ರಷ್ಟು ಪೋಲಾಗುತ್ತಿದೆ. ಉದಾಹರಣೆಗೆ ಭಾರತದಲ್ಲಿ 21 ದಶಲಕ್ಷ ಟನ್ನಷ್ಟು ಗೋಧಿ ನಷ್ಟವಾಗುತ್ತಿದೆ.

-ವಾರ್ಷಿಕ ಸುಮಾರು 50 ಸಾವಿರ ಕೋಟಿ ರೂ. ಮೌಲ್ಯದ ಆಹಾರ ನಮ್ಮ ದೇಶದಲ್ಲಿ ಬಳಸಲಾಗದೆ ನಷ್ಟಕ್ಕೊಳಗಾಗುತ್ತಿದೆ.

-ಇತ್ತೀಚಿನ ಜಾಗತಿಕ ಹಸಿವು ಸೂಚ್ಯಂಕ ತಿಳಿಸಿರುವಂತೆ, ಭಾರತ ದೇಶ 117 ರಾಷ್ಟ್ರಗಳ ಪೈಕಿ 102 ನೇ ಸ್ಥಾನದಲ್ಲಿದೆ. ಒಂದೆಡೆ ಜನ ಹಸಿವಿನಿಂದ ಬಳಲುತ್ತಿದ್ದರೆ, ಮತ್ತೊಂದೆಡೆ ಕೃಷಿ ಉತ್ಪನ್ನಗಳ, ಅದರಲ್ಲೂ ವಿಶೇಷವಾಗಿ ಆಹಾರಧಾನ್ಯಗಳ ಪೋಲು ಅವ್ಯಾಹತವಾಗಿ ನಡೆದಿದೆ.

-ಇಂದು ಕೃಷಿ ವಲಯವನ್ನು ಲಾಭದಾಯಕವಾಗಿಸುವ ಸವಾಲು ನಮ್ಮ ಮುಂದಿದೆ.

-ಕೃಷಿ ಪದ್ಧತಿಯಲ್ಲಿನ ಬದಲಾವಣೆ, ಕೃಷಿ ಉತ್ಪನ್ನಗಳ ಸಂಸ್ಕರಣೆ ಮೊದಲಾದವುಗಳು ರೈತರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲವು.

-ರೈತ ಬೆಳೆದ ಬೆಳೆಗಳನ್ನು ಆಹಾರ ಸಂಸ್ಕರಣಾ ಘಟಕಗಳು ಖರೀದಿಸಿ, ಇವುಗಳನ್ನು ಸಂಸ್ಕರಿಸಿ, ಹೊಸ ರೂಪ ನೀಡಿ, ಮಾರುಕಟ್ಟೆಯಲ್ಲಿ ಸಿದ್ಧಪಡಿಸಿದ ಆಹಾರೋತ್ಪನ್ನಗಳನ್ನಾಗಿ ಮಾರಾಟ ಮಾಡುವುದು ಸಂಸ್ಕರಣಾ ಕೈಗಾರಿಕೆಗಳ ಪಾತ್ರವಾಗಿದೆ.

-ಇಂತಹ ಘಟಕಗಳು ಇಂದು ಬೃಹತ್ ಉದ್ದಿಮೆಗಳಾಗಿ ರಾಷ್ಟ್ರವ್ಯಾಪಿ ಬೆಳೆದು ಹೆಚ್ಚು ಉದ್ಯೋಗಾವಕಾಶವನ್ನು ಕಲ್ಪಿಸಿರುವುದು ಗಮನಾರ್ಹ.

-ಭಾರತ ಸರ್ಕಾರವು ಆಹಾರ ಸಂಸ್ಕರಣಾ ಉದ್ದಿಮೆಗಳಲ್ಲಿ ಶೆ. 100 ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಿರುವುದು ಈ ಕ್ಷೇತ್ರ ಬೆಳವಣಿಗೆಗೆ ಒತ್ತು ನೀಡಿದಂತಾಗಿದೆ. ಇದರಿಂದ ಈ ಕ್ಷೇತ್ರದಿಂದ 8.7 ಬಿಲಿಯನ್ ಡಾಲರ್ ವಿದೇಶಿ ಬಂಡವಾಳ ಹರಿದು ಬಂದಿರುವುದು ಸಂತೋಷದ ಸಂಗತಿ.

-ವಿದೇಶಿ ಬಂಡವಾಳದ ಜೊತೆಗೆ ಹೊಸ ತಂತ್ರಜ್ಞಾನಗಳೂ ಸಹ ಈ ಕ್ಷೇತ್ರದಲ್ಲಿ ನಮ್ಮ ದೇಶಕ್ಕೆ ವರ್ಗಾವಣೆಯಾಗಿದ್ದು, ಈ ಕ್ಷೇತ್ರದ ತ್ವರಿತ ಬೆಳವಣಿಗೆಗೆ ಪೂರಕವಾಗಿದೆ.

-ನಮ್ಮದು ರೈತಪರ ಸರ್ಕಾರ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವುದು ನಮ್ಮ ಸರ್ಕಾರದ ಆದ್ಯತೆ. ಆಹಾರ ಸಂಸ್ಕರಣಾ ಘಟಕಗಳನ್ನು ಉತ್ತೇಜಿಸಿದಲ್ಲಿ ಪರೋಕ್ಷವಾಗಿ ರೈತರನ್ನು ಬೆಂಬಲಿಸಿದಂತಾಗುತ್ತದೆ.

-ಎಫ್ಕೆಸಿಸಿಐ ಸಂಸ್ಥೆಯು ರೈತರನ್ನು ಬೆಂಬಲಿಸುವುದಕ್ಕೆ ಪೂರಕವಾಗಿ ಈ ಮೇಳವನ್ನು ಆಯೋಜಿಸುತ್ತಿರುವುದು ಸ್ವಾಗತಾರ್ಹ.

-ಹೊಸ ತಂತ್ರಜ್ಞಾನವನ್ನು ನಾವು ಅಳವಡಿಸಿಕೊಂಡು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ಈ ಮೇಳದಲ್ಲಿ ಒತ್ತು ನೀಡಬೇಕಿದೆ.

-ರಾಜ್ಯದ ಪ್ರಮುಖ ಬೆಳೆಗಳಾದ ತೆಂಗು, ಅಡಿಕೆ, ಮಾವು, ಟೊಮೋಟೋ, ಮೆಣಸಿನ ಕಾಯಿ, ದ್ರಾಕ್ಷಿ ಹಾಗೂ ಇತರೆ ತೋಟಗಾರಿಕೆ ಬೆಳೆಗಳನ್ನು ಹೊಸ ತಂತ್ರಜ್ಞಾನದ ನೆರವಿನೊಂದಿಗೆ ಶೇಖರಿಸಿ, ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಲು ಅನುಕೂಲವಾಗುವ ಉದ್ದಿಮೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಬೇಕಾಗಿದೆ.

-ರಾಜ್ಯದ ವಿವಿಧ ಪ್ರದೇಶಗಳಲ್ಲಿ ಬೆಳೆಯುವ ಬೆಳೆಗಳನ್ನಾಧರಿಸಿ ಅಲ್ಲಿಯೇ ಕ್ಲಸ್ಟರ್ಗಳನ್ನು ನಿರ್ಮಿಸಿ, ಆಹಾರ ಉತ್ಪಾದನಾ ಘಟಕಗಳನ್ನು ಅಂತಹ ಸ್ಥಳಗಳಲ್ಲಿಯೇ ಸ್ಥಾಪಿಸಲು ಆಕರ್ಷಕ ರಿಯಾಯಿತಿ ವಿನಾಯಿಗಳನ್ನು ನೀಡಿ ಉತ್ತೇಜಿಸಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ.

-ಹೊಸ ಆವಿಷ್ಕಾರ, ನವೀನ ತಂತ್ರಜ್ಞಾನಗಳ ಪರಸ್ಪರ ವಿನಿಮಯ, ಬಂಡವಾಳ ಹೂಡಿಕೆದಾರರನ್ನು ಗುರುತಿಸುವ ಕಾರ್ಯಗಳನ್ನು ಕೈಗೊಂಡು, ಪ್ರಮುಖವಾಗಿ ರೈತರಿಗೆ ಉತ್ತೇಜನ ನೀಡುವಲ್ಲಿ ಈ ಮೇಳವು ಪ್ರಮುಖ ಪಾತ್ರ ವಹಿಸಲಿ.

know_the_cm

*************