ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆಯ ಮುಖ್ಯಾಂಶಗಳು

know_the_cm

(ವಿಧಾನಸೌಧ, ಬೆಂಗಳೂರು), ಡಿಸೆಂಬರ್ 13, 2019

-ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಯಿತು.

ಸಭೆಯಲ್ಲಿ ಮುಖ್ಯಮಂತ್ರಿಗಳು ಕೊಟ್ಟ ನಿರ್ದೇಶನಗಳು ಇಂತಿವೆ.

1. ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 1 ಲಕ್ಷ ರೂ. ಬಿಡುಗಡೆಯಾಗಿದ್ದರೂ, ಅನೇಕ ಸಂತ್ರಸ್ತರು ಮನೆ ನಿರ್ಮಿಸಲು ಮುಂದಾಗಿಲ್ಲ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ವಾರದೊಳಗೆ ಜಿಲ್ಲೆಗಳಿಗೆ ಭೇಟಿ ನೀಡಿ, ಸಮಸ್ಯೆ ಪರಿಹರಿಸಲು ನಿರ್ದೇಶನ. ಭೂ ಕುಸಿತ ಹಾಗೂ ಇನ್ನಿತರ ಕಾರಣಗಳಿಂದ ಮನೆ ನಿರ್ಮಿಸಲು ಸಾಧ್ಯವಾಗದ ಕಡೆಗಳಲ್ಲಿ ಪರ್ಯಾಯ ಜಾಗ ಒದಗಿಸಲು ಸೂಚನೆ.

2. ಈವರೆಗೆ 5.06 ಲಕ್ಷ ರೈತರಿಗೆ 785.94 ಕೋಟಿ ರೂ. ಬೆಳೆ ಪರಿಹಾರ ವಿತರಿಸಲಾಗಿದೆ. ಸುಮಾರು 37 ಸಾವಿರ ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಾಗದಿರುವುದರಿಂದ ಪರಿಹಾರ ಪಾವತಿಗೆ ಅಡಚಣೆಯಾಗಿದೆ. ಈ ಬಗ್ಗೆ ಪರ್ಯಾಯ ವಿಧಾನಗಳನ್ನು ಅನುಸರಿಸಿ ವಾರದೊಳಗೆ ಪರಿಹಾರ ಪಾವತಿಸಲು ಸೂಚನೆ.

3. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಖಾತೆಗಳಿಗೆ ಜಮೆಯಾದ ಇನ್ಪುಟ್ ಸಬ್ಸಿಡಿ ಮತ್ತು ಬೆಳೆ ವಿಮೆ ಪರಿಹಾರಗಳನ್ನು ಸಾಲದ ಖಾತೆಗೆ ಜಮಾ ಮಾಡಲಾಗುತ್ತಿದೆ. ಈ ಬಗ್ಗೆ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ ಸಭೆಯಲ್ಲಿ ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ ತಿಳಿಸಲು ಮತ್ತೊಮ್ಮೆ ಲಿಖಿತ ಸೂಚನೆ ಕಳುಹಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ.

4. ಕಾರ್ಯದರ್ಶಿಗಳು ನಿಯಮಿತವಾಗಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ, ವರದಿಗಳನ್ನು ಆಯಾ ಸಚಿವರಿಗೆ ಸಲ್ಲಿಸಬೇಕು. ಇದರಲ್ಲಿ ಸಮಸ್ಯೆಗಳಿದ್ದರೆ ಬಗೆಹರಿಸಬೇಕು. ಕಾರ್ಯದರ್ಶಿಗಳು ಪ್ರತಿ 15 ದಿನಗಳಿಗೊಮ್ಮೆ ಜಿಲ್ಲೆಗಳಿಗೆ ಭೇಟಿ ನೀಡಬೇಕು. ಅಧಿಕಾರಿಗಳ ಸಭೆ ನಡೆಸುವುದರ ಜತೆಗೆ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಖುದ್ದು ಪರಿಶೀಲಿಸಲು ಸೂಚನೆ ನೀಡಲಾಯಿತು.

5. ಸಕಾಲ ಯೋಜನೆಯಡಿ ಕಡತ ವಿಲೇವಾರಿ ತ್ವರಿತವಾಗಿ ಆಗಬೇಕು. ಜತೆಗೆ ಇತರ ಕಡತಗಳನ್ನೂ ಒಂದು ವಾರಕ್ಕಿಂತ ಹೆಚ್ಚಿನ ಅವಧಿಗೆ ಬಾಕಿ ಉಳಿಸದಂತೆ ನಿರ್ದೇಶನ.

6. ಎಲ್ಲಾ ಇಲಾಖೆಗಳಲ್ಲಿ ಇ-ಆಫೀಸ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಹಾಗೂ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ಅರಣ್ಯ ಮತ್ತು ಕಂದಾಯ ಇಲಾಖೆಗಳೊಂದಿಗೆ ಸಭೆ ನಡೆಸಿ ತೊಡಕುಗಳನ್ನು ನಿವಾರಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ.

7. ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ ಬಹುತೇಕ ಯೋಜನೆಗಳು ವಿಫಲವಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿ ಗತಿ ಕುರಿತು ಅಧ್ಯಯನ ವರದಿ ಹಾಗೂ ಸಲಹೆ ಪಡೆದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ.

8. ವಸತಿ ಯೋಜನೆಗಳನ್ನು ತ್ವರಿತಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಈ ವರ್ಷಾಂತ್ಯಕ್ಕೆ 1.5 ಲಕ್ಷ ಮನೆಗಳು ನಿರ್ಮಾಣವಾಗಬೇಕಿದ್ದು, ಈವರೆಗೆ 1.09 ಲಕ್ಷ ಮನೆಗಳ ನಿರ್ಮಾಣವಾಗಿದೆ. ಪ್ರಗತಿಯಲ್ಲಿರುವ ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಲು ಆದ್ಯತೆ ನೀಡುವಂತೆ ತಿಳಿಸಲಾಯಿತು.

9. ಎಸ್ಸಿಪಿ ಟಿಎಸ್ಪಿ ಯೋಜನೆಯಡಿ 30,444 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಈವರೆಗೆ 11,642 ಕೋಟಿ ರೂ. ಬಿಡುಗಡೆಯಾಗಿದ್ದು, 9,667 ಕೋಟಿ ರೂ. ವೆಚ್ಚವಾಗಿದೆ. ಮಾರ್ಚ್ 15 ರೊಳಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ಅನುದಾನ ವೆಚ್ಚ ಮಾಡುವಂತೆ ತಿಳಿಸಲಾಯಿತು.

10. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಹಾಸ್ಟೆಲ್ ವೆಚ್ಚ ಮತ್ತು ವಿದ್ಯಾರ್ಥಿ ವೇತನಗಳಿಗೆ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದರು.

11. ಕಾರ್ಮಿಕರ ಪಿಂಚಣಿ ಯೋಜನೆಯಡಿ ಕೇಂದ್ರ ಸರ್ಕಾರವು 7 ಲಕ್ಷ ಗುರಿ ನೀಡಿತ್ತು. ರಾಜ್ಯದ 8 ಲಕ್ಷ ಕಾರ್ಮಿಕರಿಗೆ ಪಿಂಚಣಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಹೆಚ್ಚಿನ ನೆರವಿನ ಬಗ್ಗೆ ಚರ್ಚಿಸಲಾಯಿತು.

12. ಬೆಂಗಳೂರಿನಲ್ಲಿ ಸಂಜೆ ಮತ್ತು ರಾತ್ರಿ ಓಡಾಡುವ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪೊಲೀಸ್ ಗಸ್ತು ಹೆಚ್ಚಿಸುವುದರ ಜತೆಗೆ ರಾತ್ರಿ ವೇಳೆ ಮಹಿಳಾ ಪೊಲೀಸರು ಸಹ ಗಸ್ತು ತಿರುಗುವ ವ್ಯವಸ್ಥೆ ಮಾಡಲು ಸೂಚಿಸಲಾಯಿತು.

13. ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲು, ಬೆಂಗಳೂರು ಕೆರೆಗಳ ಅಭಿವೃದ್ಧಿಗೆ ಕೂಡಲೇ ಕ್ರಮ ಕೈಗೊಳ್ಳಲು, ಬೆಂಗಳೂರನ್ನು ಕಸ ಮುಕ್ತ ನಗರವನ್ನಾಗಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ.

*************