ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ದೇಶದ ಆರ್ಥಿಕ ವಸ್ತುಸ್ಥಿತಿ ಅರಿಯಲು ಆರ್ಥಿಕ ಗಣತಿ ಅತಿಮುಖ್ಯ - ಮುಖ್ಯಮಂತ್ರಿ

know_the_cm

(ವಿಧಾನಸೌಧ, ಬೆಂಗಳೂರು), ನವೆಂಬರ್ 06, 2019

-ದೇಶದ ಆರ್ಥಿಕ ವಸ್ತುಸ್ಥಿತಿ ಅರಿಯಲು ಆರ್ಥಿಕ ಗಣತಿ ಪ್ರಮುಖ ಪಾತ್ರವಹಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.

-ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಮ್ಮಿಕೊಂಡಿದ್ದ 7 ನೇ ಆರ್ಥಿಕ ಗಣತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಅವರು ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಆರ್ಥಿಕ ಗಣತಿ ದಿಕ್ಸೂಚಿ ಆಗಿದೆ ಎಂದರು.

-ಪ್ರಥಮ ಬಾರಿಗೆ 7ನೇ ಆರ್ಥಿಕ ಗಣತಿಯನ್ನು ಮೊಬೈಲ್ ಆಪ್ ಮೂಲಕ ಸಂಗ್ರಹಿಸುತ್ತಿರುವುದು ಪ್ರಶಂಸನೀಯ. ಈ ವ್ಯವಸ್ಥೆಯಿಂದ ಮಾಹಿತಿಗಳನ್ನು ಅತಿ ಶೀಘ್ರವಾಗಿ ಸಂಗ್ರಹಿಸುವುದರ ಮೂಲಕ ವರದಿ ತಯಾರಿಸುವುದು ಸೇರಿದಂತೆ ಮಾಹಿತಿಯು ಹೆಚ್ಚು ನಿಖರವಾಗಿರುತ್ತದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

-ರಾಜ್ಯದಲ್ಲಿನ ವಿವಿಧ ಭಾಗಗಳಲ್ಲಿರುವ ಉದ್ದಿಮೆಗಳು ಯಾವ ರೀತಿ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತಿವೆ ಎಂಬ ಮಾಹಿತಿಯು ಈ ಗಣತಿಯಿಂದ ದೊರೆಯುತ್ತದೆ ಎಂದು ತಿಳಿಸಿದ ಮುಖ್ಯಮಂತ್ರಿ ಅವರು ನಿಖರ ಮಾಹಿತಿಗಳನ್ನು ಸಂಗ್ರಹಿಸುವ ಮೂಲಕ ರಾಜ್ಯದಲ್ಲಿ ಹೊಸ ನೀತಿ ರೂಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

-ಗಣತಿ ಪಡೆಯಲು ತಮ್ಮ ಮನೆ ಬಾಗಿಲಿಗೆ ಬರುವ ಗಣತಿದಾರರಿಗೆ ಸಂಪೂರ್ಣ ಮಾಹಿತಿಗಳನ್ನು ಮನೆಯ ಹಿರಿಯರು ನೀಡಬೇಕು ಎಂದು ಮನವಿ ಮಾಡಿದ ಮುಖ್ಯಮಂತ್ರಿ ಅವರು ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಗಣತಿದಾರರು ಸಹ ನಿಖರ ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.

-ಆರ್ಥಿಕ ಗಣತಿಯಿಂದ ಬರುವ ಮಾಹಿತಿಗಳು ರಾಜ್ಯದಲ್ಲಿ ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್ ಅವರು ರಾಜ್ಯದ ಈ ಗಣತಿ ಕಾರ್ಯಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

-7ನೇ ಆರ್ಥಿಕ ಗಣತಿ ಕಾರ್ಯವು ನವೆಂಬರ್ 15 ರಿಂದ ಪ್ರಾರಂಭವಾಗಿ 2020 ರ ಮಾರ್ಚ್ವರೆಗೆ ನಡೆಯಲಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀಮತಿ ಎ. ಮಂಜುಳ ಅವರು ತಿಳಿಸಿದರು. ಅಲ್ಲದೆ ನಗರ ಪ್ರದೇಶದಲ್ಲಿ 54,96,473 ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 82,24,143 ಕುಟುಂಬಗಳನ್ನು ಭೇಟಿಮಾಡಿ ಮಾಹಿತಿ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.

-ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ. ಜೆ. ಪುಟ್ಟಸ್ವಾಮಿ, ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಮಹಾನಿರ್ದೇಶಕ ವಿಜಯ್ಕುಮಾರ್, ಮುಖ್ಯಮಂತ್ರಿ ಸಲಹೆಗಾರರಾದ ಶ್ರೀ ಲಕ್ಷಿನಾರಾಯಣ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

*************