ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಉದ್ಯಮಶೀಲರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ದೊರೆಯುವ ಸವಲತ್ತುಗಳ ಅರಿವು ಮೂಡಿಸುವ ಕಾರ್ಯಕ್ರಮ - ಸನ್ಮಾನ್ಯ ಮುಖ್ಯಮಂತ್ರಿಯವರ ಸಾಂದರ್ಭಿಕ ನುಡಿಗಳು

know_the_cm

(ಬೆಂಗಳೂರು), ಸೆಪ್ಟೆಂಬರ್ 19, 2019

- ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಸಂಘದ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ಡಾ. ಎಲ್. ಹನುಮಂತಯ್ಯ ಅವರೆ,

- ಮಾಜಿ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯ ಅವರೆ,

- ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವರಾದ ಶ್ರೀ ಗೋವಿಂದ ಕಾರಜೋಳ ಅವರೆ,

- ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಅವರೆ,

- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಬಿ. ಶ್ರೀರಾಮುಲು ಅವರೆ,

- ಅಬಕಾರಿ ಸಚಿವರಾದ ಶ್ರೀ ಹೆಚ್. ನಾಗೇಶ್ ಅವರೆ,

- ಪಶು ಸಂಗೋಪನೆ ಸಚಿವರಾದ ಶ್ರೀ. ಪ್ರಭು ಚವ್ಹಾಣ್ ಅವರೆ,

- ಶಾಸಕ ಮಿತ್ರರೆ,

- ವೇದಿಕೆಯ ಮೇಲಿರುವ ಎಲ್ಲಾ ಗಣ್ಯರೆ,

- ಮಾಧ್ಯಮ ಸ್ನೇಹಿತರೆ,

- ಮಹಿಳೆಯರೆ ಮತ್ತು ಮಹನೀಯರೆ,

1. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರ ಸಮಾವೇಶದಲ್ಲಿ ಅತ್ಯಂತ ಸಂತೋಷದಿಂದ ಪಾಲ್ಗೊಂಡಿದ್ದೇನೆ.

2. ಸಮ ಸಮಾಜ ನಿರ್ಮಾಣದ ಕನಸು ನನಸಾಗಲು ದುರ್ಬಲ ವರ್ಗದವರನ್ನು ಸಬಲರನ್ನಾಗಿಸುವುದು ಅಗತ್ಯ.

3. ಕರ್ನಾಟಕ ರಾಜ್ಯವು ದೇಶದ ಕೈಗಾರಿಕಾಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಮೊದಲ 5 ರಾಜ್ಯಗಳ ಪೈಕಿ ಒಂದಾಗಿದೆ.

4. ರಾಜ್ಯದಲ್ಲಿ ಇಂದು ಸುಮಾರು 7 ಲಕ್ಷ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನೋಂದಣಿಯಾಗಿದ್ದು, ಒಟ್ಟಾರೆ ರೂ. 62,291 ಕೋಟಿ ಬಂಡವಾಳ ಹೂಡಿಕೆಯಾಗಿದೆ.

5. ರಾಜ್ಯದ 47 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಯಾಗಿರುತ್ತದೆ. ಇದರಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಕೈಗಾರಿಕೆಗಳ 50,000 ಘಟಕಗಳು ಇವೆ.

6. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯು ಕೈಗಾರಿಕಾಭಿವೃದ್ಧಿಯ ಮೂಲಕ ಉದ್ಯೋಗವಕಾಶಗಳನ್ನು ಹೆಚ್ಚಿಸಲು, ಕೈಗಾರಿಕಾ ಬಂಡವಾಳವನ್ನು ಆಕರ್ಷಿಸಲು ಶ್ರಮಿಸಲಾಗುತ್ತಿದೆ.

7. ಕಳೆದ 8 ವರ್ಷಗಳಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ವರ್ಗದ ಉದ್ಯಮಶೀಲರಿಗಾಗಿ ರೂ. 656 ಕೋಟಿಗಳನ್ನು ವೆಚ್ಚ ಮಾಡಿದೆ.

8. ತಮಗೆಲ್ಲಾ ತಿಳಿದಿರುವಂತೆ ಕರ್ನಾಟಕ ರಾಜ್ಯವು ಕೈಗಾರಿಕಾ ನೀತಿಯನ್ನು ರೂಪಿಸಿದ ಮೊದಲ ರಾಜ್ಯವಾಗಿದೆ. ಸಮಗ್ರ ಕೈಗಾರಿಕಾ ಬೆಳವಣಿಗೆಗೆ ವರ್ಗವಾರು ನೀತಿಗಳನ್ನು ಜಾರಿಗೆ ತಂದ ಕೀರ್ತಿ ರಾಜ್ಯಕ್ಕೆ ಸಲ್ಲುತ್ತದೆ.

9. ಚಾಲ್ತಿಯಲ್ಲಿರುವ ಕೈಗಾರಿಕಾ ನೀತಿಯ ಅವಧಿಯು ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು ರಾಜ್ಯದಲ್ಲಿ ಸಮಗ್ರ ಕೈಗಾರಿಕಾ ಅಭಿವೃದ್ಧಿಗಾಗಿ ನೂತನ ಕೈಗಾರಿಕಾ ನೀತಿ 2019-24ನ್ನು ರೂಪಿಸಲಾಗುತ್ತಿದೆ.

10. ನೂತನ ಕೈಗಾರಿಕಾ ನೀತಿಯಲ್ಲಿ ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ವರ್ಗದ ಉದ್ಯಮಶೀಲರಿಗೆ ವಿಶೇಷ ಒತ್ತು ನೀಡಿ ಹೆಚ್ಚಿನ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ಕಲ್ಪಿಸಲಾಗುವುದು.

11. ಈ ಕೈಗಾರಿಕಾ ಅಭಿವೃದ್ಧಿಯಲ್ಲಿ ಸೃಜನೆಯಾಗುವ ಉದ್ಯೋಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವುದು ನಮ್ಮ ಪ್ರಥಮ ಆದ್ಯತೆಯಾಗಿದೆ.

12. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಸೇರಿದ ಉದ್ದಿಮೆದಾರರಿಗೆ ವಿವಿಧ ಮಂಡಳಿ, ನಿಗಮಗಳಿಂದ ಹಂಚಿಕೆಯಾಗುವ ಕೈಗಾರಿಕಾ ನಿವೇಶನ / ಪ್ಲಾಟ್ / ಶೆಡ್ ಗಳನ್ನು ಶೇಕಡಾ 50 ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಇದನ್ನು ಶೇಕಡಾ 75ರಷ್ಟು ಹೆಚ್ಚಿಸಲು ಪ್ರಕ್ರಿಯೆ ನಡೆದಿದೆ.

13. ಈ ವರ್ಗದ ಫಲಾನುಭವಿಗಳು ಗುಡಿ ಮತ್ತು ಅತೀ ಸೂಕ್ಷ್ಮ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಬ್ಯಾಂಕ್ಗಫಳಿಂದ ಮಂಜೂರಾದ ಸಾಲದ ಮೇಲೆ, ರೂ. 10 ಲಕ್ಷದೊಳಗಿರುವ ಯೋಜನೆಗಳಿಗೆ ಇಲಾಖೆ ವತಿಯಿಂದ ಸಹಾಯಧನವನ್ನು ಮಂಜೂರು ಮಾಡಲಾಗುತ್ತಿದೆ.

14. ಶೇ.90 ರಷ್ಟು ರಿಯಾಯಿತಿ ದರದಲ್ಲಿ “ಸಿ” ಮತ್ತು “ಡಿ” ಮಾದರಿಯ ಮಳಿಗೆಗಳನ್ನು ಕೈಗಾರಿಕಾ ವಸಾಹಾತುವಿನಲ್ಲಿ ನಿರ್ಮಾಣ ಮಾಡಿ ಈ ಸಮುದಾಯದ ಉದ್ಯಮಶೀಲರಿಗೆ ಕೈಗಾರಿಕಾ ಸ್ಥಾಪನೆಗಾಗಿ ಹಂಚಿಕೆ ಮಾಡುವ ಯೋಜನೆ ಜಾರಿಯಲ್ಲಿದೆ.

15. ಬ್ಯಾಂಕ್ / ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಸ್ಥಾಪಿಸುವ ಹೊಸ ಘಟಕಗಳಿಗೆ ಯೋಜನಾ ವೆಚ್ಚದಲ್ಲಿ ಪ್ರವರ್ತಕ ಬಂಡವಾಳ ಹೂಡಿಕೆಯ ಪಾಲಿನಲ್ಲಿ ಶೇಕಡಾ 50 ರಷ್ಟು ಬಡ್ಡಿ ರಹಿತ ಸಾಫ್ಟ್ ಸೀಡ್ ಕ್ಯಾಪಿಟಲ್ ರೂಪದಲ್ಲಿ ಆರ್ಥಿಕ ಸಹಾಯ ನೀಡಲಾಗುವುದು.

16. ರಾಷ್ಟ್ರೀಕೃತ ಬ್ಯಾಂಕ್, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ಗಳ ಮೂಲಕ ಕೈಗಾರಿಕೆ ಸ್ಥಾಪಿಸಲು ಗರಿಷ್ಟ 10 ರೂ. ಕೋಟಿ ವರೆಗೆ ಪಡೆದ ಸಾಲದ ಮೇಲೆ ಶೇಕಡಾ 4 ರಷ್ಟು ಬಡ್ಡಿ ಸಹಾಯಧನ ನೀಡಲಾಗುತ್ತದೆ.

17. ಒಟ್ಟಾರೆ ವಿಶೇಷ ಘಟಕ ಯೋಜನೆಯ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಈ ಕಾರ್ಯಕ್ರಮಗಳಿಗಾಗಿ 2018-19 ನೇ ಸಾಲಿನಲ್ಲಿ ರೂ. 75 ಕೋಟಿ ಅನುದಾನ ವೆಚ್ಚ ಮಾಡಲಾಗಿದೆ.

18. ಆರ್ಥಿಕ ಸ್ವಾವಲಂಬನೆಗಾಗಿ ತಳ ಸಮುದಾಯಕ್ಕೆ ಸೇರಿದವರ ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹದಾಯಕವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಅರ್ಥಪೂರ್ಣ.

19. ಎಷ್ಟೋ ಬಾರಿ ಮಾಹಿತಿ ಕೊರತೆಯಿಂದ ಸರ್ಕಾರದ ಸೌಲಭ್ಯಗಳು ಅರ್ಹರನ್ನು ತಲುಪದೆ ಇರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ ಎಂದು ನನ್ನ ಭಾವನೆ.

20. ಉದ್ಯಮಶೀಲತೆ ಮೂಲಕ ಆರ್ಥಿಕ ಸಬಲತೆ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರನ್ನು ತರುವುದು ಸರ್ಕಾರದ ಆಶಯವೂ ಹೌದು.

21. ರಾಜ್ಯದಲ್ಲಿ ಉದ್ದಿಮೆಗಳ ಸ್ಥಾಪನೆಗೆ ಉತ್ತೇಜನ ನೀಡುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ನಿರ್ಮಿಸುವುದು ಸರ್ಕಾರದ ಉದ್ದೇಶವಾಗಿದೆ.

22. ಈ ಸಮುದಾಯದ ಉದ್ದಿಮೆದಾರರಿಗೆ ತಾಂತ್ರಿಕ ನೆರವು ಮತ್ತು ಸಾಮಥ್ರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ.

23. ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರ ಸಂಘದ ಬೇಡಿಕೆಗಳನ್ನು ಸರ್ಕಾರ ಗಮನಿಸಿದೆ. ಇವುಗಳ ಬಗ್ಗೆ ಪರಿಶೀಲಿಸಿ ಸಕಾರಾತ್ಮಕವಾದ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಲು ಇಚ್ಛಿಸುತ್ತೇನೆ.

24. ಈ ಜನಾಂಗದವರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರ ಸಂಘ ಸರ್ಕಾರದೊಂದಿಗೆ ಕೈಜೋಡಿಸಿರುವುದು ನಮ್ಮ ಬಲವನ್ನು ಹೆಚ್ಚಿಸಿದೆ.

25. ಸರ್ವರ ಅಭಿವೃದ್ಧಿ ಎಂಬ ಸರ್ಕಾರದ ಆಶಯವನ್ನೇ ಈಡೇರಿಸುವ ಸಂಘಟನೆಯಾಗಿ ಮಹತ್ವದ ಕೆಲಸಗಳನ್ನು ಸಾಧಿಸುವ ಮೂಲಕ ದಲಿತ ಸಮುದಾಯದ ಏಳಿಗೆಗೆ ತಮ್ಮ ಸಂಘ ಶ್ರಮಿಸುತ್ತಿರುವುದು ಶ್ಲಾಘನೀಯ.

26. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ನಿಗದಿ ಪಡಿಸಿದ ಅನುದಾನವನ್ನು ಈ ಸಮುದಾಯಗಳ ಒಳಿತಿಗಾಗಿಯೇ ವೆಚ್ಚ ಮಾಡಲಾಗುವುದು. ಈ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡುವ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂಬುದನ್ನು ಮತ್ತೊಮ್ಮೆ ನಿಮ್ಮ ಗಮನಕ್ಕೆ ತರಬಯಸುತ್ತೇನೆ.

27. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಡುವ ಮಾದರಿ ರಾಜ್ಯ ಕರ್ನಾಟಕ ಎನ್ನುವ ಕೀರ್ತಿಗೆ ನಮ್ಮ ರಾಜ್ಯ ಪಾತ್ರವಾಗಬೇಕು ಎಂದು ಆಶಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಧನ್ಯವಾದಗಳು

*************