ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಅಕ್ರಮ ಸಕ್ರಮ: ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ – ಮುಖ್ಯಮಂತ್ರಿ ಎಚ್ಚರಿಕೆ

know_the_cm

(ಬೆಂಗಳೂರು), ಜನವರಿ 28, 2020

-ಅಕ್ರಮ ಸಕ್ರಮ ಯೋಜನೆಯಡಿ ಹಕ್ಕು ಪತ್ರ ವಿತರಿಸಲು ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದರು.

-ಕಂದಾಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಅಕ್ರಮ ಸಕ್ರಮ ಯೋಜನೆಯಡಿ 10 ಸಾವಿರ ಫಲಾನುಭವಿಗಳಿಗೆ ಮನೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.

-ಅಕ್ರಮ ಸಕ್ರಮ ಮಾಡಲು ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬರುತ್ತಿದೆ. ಲಂಚ ಕೇಳುವ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದ್ದಲ್ಲಿ ತಕ್ಷಣ ಅಂತಹ ಅಧಿಕಾರಿಗಳನ್ನು ಅಮಾನತ್ತು ಮಾಡಿ ಕ್ರಮ ಜರುಗಿಸಲಾಗುವುದು ಎಂದರು.

-ಜನರ ಶ್ರೇಯೋಭಿವೃದ್ಧಿಗಾಗಿ ಕಂದಾಯ ಇಲಾಖೆಯು ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.

-ಅದರಲ್ಲಿ 94 (ಸಿ) ಮತ್ತು 94 (ಸಿಸಿ) ಯಡಿ ಅಕ್ರಮ ಸಕ್ರಮ ಯೋಜನೆ ಬಡಜನರಿಗೆ ಅತ್ಯಂತ ಉಪಯುಕ್ತವಾಗಿದೆ. ಸರ್ಕಾರಿ ಜಮೀನುಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳು ವಾಸದ ಮನೆಗಳನ್ನು ನಿರ್ಮಿಸಿಕೊಂಡಿದ್ದಲ್ಲಿ ಅಂತಹ ವಾಸದ ಮನೆಗಳನ್ನು ಸಕ್ರಮ ಮಾಡಲು ಕರ್ನಾಟಕ ಭೂ-ಕಂದಾಯ ಕಾಯ್ದೆ 1964 ರ ಕಲಂ 94 (ಸಿ) ಮತ್ತು 94 (ಸಿಸಿ) ಅವಕಾಶವನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ ಎಂದರು.

-ಈ ಅವಕಾಶದಂತೆ ಕಲಂ 94ಸಿ ರಡಿ ಗ್ರಾಮೀಣ ಪ್ರದೇಶದಲ್ಲಿ (ಬಿ.ಬಿ.ಎಂ.ಪಿ ವ್ಯಾಪ್ತಿಯ ಹೊರಗಡೆ) ಗರಿಷ್ಠ 4,000 ಚದರ ಅಡಿಗಳಷ್ಟು ಅನಧಿಕೃತ ವಾಸದ ಮನೆಗಳನ್ನು ಸಕ್ರಮ ಮಾಡಬಹುದಾಗಿದೆ ಹಾಗೂ ನಗರ ಪ್ರದೇಶ (ಬಿ.ಬಿ.ಎಂ.ಪಿ) ವ್ಯಾಪ್ತಿ ಒಳಗಡೆ 600 ಚದರ ಅಡಿ ಮತ್ತು ಬಿ.ಬಿ.ಎಂ.ಪಿ ಸರಹದ್ದಿನ 18 ಕಿ.ಮೀ ಒಳಗಡೆ 1,200 ಚದರ ಅಡಿವರೆಗಿನ ಅನಧಿಕೃತ ವಾಸದ ಮನೆಗಳನ್ನು ಸಕ್ರಮ ಮಾಡಬಹುದಾಗಿದೆ.

-ಬೆಂಗಳೂರು ನಗರ ಜಿಲ್ಲೆಯಲ್ಲಿ 9,000 ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1,000 ಸೇರಿದಂತೆ ಒಟ್ಟು 10,000 ಹಿಂದುಳಿದ ವರ್ಗದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿರುವುದು ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

-ಇನ್ನು ಆರು ತಿಂಗಳಲ್ಲಿ ಬೆಂಗಳೂರಿನ ಚಿತ್ರಣ ಬದಲಾಯಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಂದಾಯ ಇಲಾಖೆಯ ಭೂಮಿ ಒತ್ತುವರಿದಾರರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತದೆ. ಇದಕ್ಕಾಗಿ, ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್. ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಸಂಸದ ಪಿ.ಸಿ.ಮೋಹನ್, ಶಾಸಕರಾದ ಉದಯ ಗರುಡಾಚಾರ್, ಎಸ್.ಆರ್.ವಿಶ್ವನಾಥ್ ಉಪಸ್ಥಿತರಿದ್ದರು.

know_the_cm

*************