ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಯೋಜನೆ

“ಆರೋಗ್ಯ ಕರ್ನಾಟಕ” ಯೋಜನೆ

ಯೋಜನೆ

ಆರೋಗ್ಯ ಕರ್ನಾಟಕ ಯೋಜನೆಯ ವಿಶೇಷತೆ:

-ರಾಜ್ಯದ ನಿವಾಸಿಗಳಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಲು ಕರ್ನಾಟಕ ಸರ್ಕಾರವು ಜಾರಿಗೊಳಿಸಿರುವ ಸಮಗ್ರ ಯೋಜನೆ ‘ಆರೋಗ್ಯ ಕರ್ನಾಟಕ’.

-ಈ ಯೋಜನೆ ದಿನಾಂಕ: 02-03-2018 ರಿಂದ ಜಾರಿಗೆ ಬಂದಿರುತ್ತದೆ.

-ಸಾರ್ವಜನಿಕರಿಗೆ ಒಂದೇ ಯೋಜನೆಯಡಿಯಲ್ಲಿ ಪ್ರಾಥಮಿಕ ಹಂತ, ದ್ವಿತೀಯ ಹಂತ, ತೃತೀಯ ಹಂತದ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಸೇರಿದಂತೆ ಹಾಗೂ ತುರ್ತು ಚಿಕಿತ್ಸೆಗಳು ಲಭ್ಯವಾಗುತ್ತವೆ.

-ಯಶಸ್ವಿನಿ ಯೋಜನೆ ಈಗ ಮುಕ್ತಾಯಗೊಂಡಿದೆಯೇ:

-ಯಶಸ್ವಿನಿ ಯೋಜನೆಯು ದಿನಾಂಕ: 31-05-2018 ಕ್ಕೆ ಮುಕ್ತಾಯಗೊಂಡಿದ್ದು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ವಿಲೀನಗೊಂಡಿರುತ್ತದೆ.

-ಈ ಹಿಂದೆ ಅನುಷ್ಠಾನದಲ್ಲಿದ್ದ ಯಶಸ್ವಿನಿ ಯೋಜನೆ, ವಾಜಪೇಯಿ ಆರೋಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ (RBSK), ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ ಮತ್ತು ಇಂದಿರಾ ಸುರಕ್ಷಾ ಯೋಜನೆಗಳು ಆರೋಗ್ಯ ಕರ್ನಾಟಕ ಯೋಜನೆಯೊಂದಿಗೆ ವಿಲೀನಗೊಂಡಿವೆ.

-ಈಗ ದೊಡ್ಡಮಟ್ಟದ ಯೋಜನೆಯಾದ “ಆರೋಗ್ಯ ಕರ್ನಾಟಕ” ದಲ್ಲಿ ಇನ್ನೂ ಹೆಚ್ಚಿನ ಚಿಕಿತ್ಸೆಗಳನ್ನು ರಾಜ್ಯದ ಎಲ್ಲಾ ಜನರಿಗೆ ನೀಡಲಾಗುತ್ತಿದೆ.

ಫಲಾನುಭವಿ ಮಾನದಂಡಗಳೇನು?

ಅರ್ಹತಾ ರೋಗಿ:

-2013 ರ ಆಹಾರ ಭದ್ರತಾ ಕಾಯಿದೆಯಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ರೋಗಿಗಳು ಈ ವರ್ಗದಲ್ಲಿ ಸೇರಿರುತ್ತಾರೆ.ಅರ್ಹತಾ ರೋಗಿಗಳಿಗೆ ಬಹುತೇಕ ಉಚಿತ ಚಿಕಿತ್ಸೆ ಲಭ್ಯವಿದೆ.

ಸಾಮಾನ್ಯ ರೋಗಿ:

-2013 ರ ಆಹಾರ ಭದ್ರತಾ ಕಾಯಿದೆಯಡಿ ಎಪಿಎಲ್ ಪಡಿತರ ಚೀಟಿ ಹೊಂದಿರುವವರು ಅಥವಾ ಯಾವುದೇ ಪಡಿತರ ಚೀಟಿ ಹೊಂದಿಲ್ಲದ ರೋಗಿಗಳು. ಸಾಮಾನ್ಯ ರೋಗಿಗಳಿಗೆ ಯೋಜನೆಯ ಪ್ಯಾಕೇಜ್ ದರದ ಶೇಕಡಾ 30 ರಷ್ಟನ್ನು ಸರ್ಕಾರ ಭರಿಸುತ್ತದೆ.

ವಂತಿಕೆ ಪಾವತಿಸಬೇಕೆ?

-ಯಶಸ್ವಿನಿ ಯೋಜನೆಯಲ್ಲಿ ವಾರ್ಷಿಕ ವಂತಿಗೆ ಪಾವತಿಸಿದಂತೆ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಯಾವುದೇ ವಂತಿಗೆ ಪಾವತಿಸಬೇಕಾಗಿಲ್ಲ.

ಆರೋಗ್ಯ ಕರ್ನಾಟಕ ಯೋಜನೆ ಯಶಸ್ವಿನಿ ಯೋಜನೆಗಿಂತ ಹೇಗೆ ಭಿನ್ನವಾಗಿದೆ?

-‘ಯಶಸ್ವಿನಿ’ ಯೋಜನೆ ಕೇವಲ ಸಹಕಾರ ಸಂಘಗಳ ಸದಸ್ಯರಿಗೆ ಮಾತ್ರ ಸೀಮಿತವಾಗಿತ್ತು.

-‘ಆರೋಗ್ಯ ಕರ್ನಾಟಕ’ ಯೋಜನೆಯು ಸಹಕಾರ ಸಂಘಗಳ ಸದಸ್ಯರೂ ಸೇರಿದಂತೆ ರಾಜ್ಯದ ಎಲ್ಲ ನಿವಾಸಿಗಳಿಗೂ ಲಭ್ಯವಿದೆ.

-‘ಯಶಸ್ವಿನಿ’ ಯೋಜನೆಯಡಿಯಲ್ಲಿ ದ್ವಿತೀಯ ಹಾಗೂ ತೃತೀಯ ಹಂತದ 823 ಚಿಕಿತ್ಸೆಗಳನ್ನು ಮಾತ್ರ ಒದಗಿಸುತಿತ್ತು.

-ಆರೋಗ್ಯ ಕರ್ನಾಟಕ ಯೋಜನೆಯು ಪ್ರಾಥಮಿಕ, ದ್ವಿತೀಯ, ತೃತೀಯ ಹಾಗೂ ತುರ್ತು ಚಿಕಿತ್ಸೆಗಳೂ ಸೇರಿದಂತೆ 1516 ಚಿಕಿತ್ಸೆಗಳನ್ನು ಒದಗಿಸುತ್ತದೆ.

-ಆರೋಗ್ಯ ಕರ್ನಾಟಕ’ ಯೋಜನೆಯಲ್ಲಿ ವೈದ್ಯರ ಸಮಾಲೋಚನಾ ಶುಲ್ಕ ಇರುವುದಿಲ್ಲ. ಶಸ್ತ್ರಚಿಕಿತ್ಸೆಯ ಪೂರ್ವ ಅಥವಾ ನಂತರದ ಸ್ಥಿರೀಕರಣ ವೈದ್ಯಕೀಯ ಆರೈಕೆ ಇರುತ್ತದೆ ಹಾಗೂ ಅನುಸರಣೆ ಚಿಕಿತ್ಸೆ ಮತ್ತು ವೈದ್ಯಕೀಯ ನಿರ್ವಹಣೆ (Medical Management) ಸಹ ಇರುತ್ತದೆ.

-ಯಶಸ್ವಿನಿ ಯೋಜನೆಯಲ್ಲಿ ದೊರಕುತ್ತಿದ್ದ ಚಿಕಿತ್ಸೆಗಳು ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಸಹ ದೊರೆಯುತ್ತಿದ್ದು, ಸಾರ್ವಜನಿಕರ ಚಿಕಿತ್ಸೆಗೆ ಯಾವುದೇ ರೀತಿಯಲ್ಲಿಯೂ ಸಹ ದಕ್ಕೆ ಬರುವುದಿಲ್ಲ.

ನೋಂದಣಿ ಹೇಗೆ ಮಾಡಲಾಗುತ್ತದೆ?

-ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ರೋಗಿಗಳ ನೋಂದಣಿ ಮಾಡಲಾಗುತ್ತದೆ.

-ನಿಮಗೆ ಹುಷಾರಿಲ್ಲದಾಗ ನಿಮ್ಮ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಗಳೊಂದಿಗೆ ಹತ್ತಿರದ ಆಸ್ಪತ್ರೆಗೆ ಬನ್ನಿ. ನೋಂದಣಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಂಡು, ರೂ 10/- (ಹತ್ತು) ಪಾವತಿಸಿ, ಆರೋಗ್ಯ ಕಾರ್ಡ್‍ನ್ನು ಪಡೆದುಕೊಳ್ಳಿ.

-ಪ್ರಸ್ತುತ ಆರೋಗ್ಯ ಕಾರ್ಡುಗಳನ್ನು ಪ್ರಥಮ ಹಂತದ ಪ್ರಮುಖ 11 ಆಸ್ಪತ್ರೆಗಳಲ್ಲಿ ಮಾತ್ರ ವಿತರಿಸಲಾಗುತ್ತಿದ್ದು, ಇತರ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ನೋಂದಣಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.

ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ಸಿಗುತ್ತದೆಯೇ?

-ಪ್ರಾಥಮಿಕ ಹಂತದ ಕಾಯಿಲೆಗಳು ಮತ್ತು ದ್ವಿತೀಯ ಹಂತದ ಸಾಮಾನ್ಯ ಚಿಕಿತ್ಸೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಉಚಿತವಾಗಿ ಅಥವಾ ಅತ್ಯಲ್ಪ ಶುಲ್ಕ ಪಾವತಿಸಿ ಪಡೆಯಬಹುದು.

ದೊಡ್ಡ ಕಾಯಿಲೆ ಬಂದರೆ ಏನು ಮಾಡಬೇಕು?

-ದ್ವಿತೀಯ ಹಂತದ ಕ್ಲಿಷ್ಟಕರ ಮತ್ತು ತೃತೀಯ ಹಂತದ ದೊಡ್ಡ ಕಾಯಿಲೆಗಳು ಬಂದಾಗ ಸಾರ್ವಜನಿಕರು ಕೊರಗಬೇಕಾಗಿಲ್ಲ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡಿನೊಂದಿಗೆ ನಿಮ್ಮ ಹತ್ತಿರದ ಸರ್ಕಾರ ಆಸ್ಪತ್ರೆಗೆ ಹೋಗಿ.

-ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಅಗತ್ಯವಿದ್ದರೆ ಜಿಲ್ಲಾ ಮಟ್ಟದ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ರೆಫರ್ ಮಾಡುತ್ತಾರೆ. ಅಲ್ಲಿ ಚಿಕಿತ್ಸಾ ಸಾಮಥ್ರ್ಯ ಇಲ್ಲದಿದ್ದರೆ ನೋಂದಾಯಿತ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡುತ್ತಾರೆ.

-ಆಗ ಸಾರ್ವಜನಿಕರು ತಾವು ಇಚ್ಚಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬಹುದು.

ತುರ್ತು ಚಿಕಿತ್ಸೆಗಳಿಗೆ ಏನು ಮಾಡಬೇಕು?

-ತುರ್ತು ಚಿಕಿತ್ಸೆಗಳಿಗೆ ಸಾರ್ವಜನಿಕರು ಕೂಡಲೇ ಹತ್ತಿರದ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬಹುದು.

ಯಾವ ಚಿಕಿತ್ಸೆಗಳಿಗೆ ಎಷ್ಟು ಮೊತ್ತ ಲಭ್ಯವಿರುತ್ತದೆ?

-ಐದು ಸದಸ್ಯರ ಒಂದು ಕುಟುಂಬಕ್ಕೆ (ಅರ್ಹತಾ ಕುಟುಂಬ) ನಿರ್ಧಿಷ್ಟ ಕ್ಲಿಷ್ಟಕರ ದ್ವಿತೀಯ ಹಂತದ ಚಿಕಿತ್ಸೆಗಳಿಗಾಗಿ ಒಂದು ವರ್ಷಕ್ಕೆ ರೂ 30,000/- ಗಳವರೆಗೆ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು.

-ನಿರ್ದಿಷ್ಟ ತೃತೀಯ ಹಂತದ ಆರೋಗ್ಯ ಚಿಕಿತ್ಸೆಗಳಿಗೆ ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ (ಆರ್ಹತಾ ಕುಟುಂಬ) ರೂ 1.50 ಲಕ್ಷಗಳವರೆಗೆ ಒದಗಿಸಲಾಗುವುದು.

-ಈ ಮಿತಿಯು ಪೂರ್ಣವಾಗಿ ಉಪಯೋಗವಾದ ಮೇಲೆ ತುರ್ತು ಚಿಕಿತ್ಸಾ ಸಂದರ್ಭ ಬಂದಲ್ಲಿ, ಇನ್ನೂ ಹೆಚ್ಚಿನ ರೂ 50,000/- ಗಳ ಆರ್ಥಿಕ ನೆರವನ್ನು ಒದಗಿಸಲಾಗುವುದು.

-ಸಾಮಾನ್ಯ ರೋಗಿಗಳಿಗೆ (ಎಪಿಎಲ್ ಕುಟುಂಬ) ಪ್ಯಾಕೇಜ್ ಮೊತ್ತದ ಶೇ 30/- ರಷ್ಟನ್ನು ಸರ್ಕಾರ ಭರಿಸುತ್ತದೆ.

ಚಿಕಿತ್ಸೆಗಳ ಮಾಹಿತಿ ಎಲ್ಲಿ ಸಿಗುತ್ತದೆ?

-ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿರುವ ಚಿಕಿತ್ಸೆಗಳ ಮಾಹಿತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ.

-ಯಾವ ಆಸ್ಪತ್ರೆಗಳಲ್ಲಿ ಯಾವ ಚಿಕಿತ್ಸೆಗಳು ಲಭ್ಯ ಎಂಬ ಮಾಹಿತಿಯನ್ನು ಈ ವೆಬ್‍ಸೈಟ್‍ಗಳಲ್ಲಿ www.arogya.karnataka.gov.in, www.sast.gov.in/home, www.karnataka.gov.in/hfw, ಪಡೆದುಕೊಳ್ಳಬಹುದಾಗಿದೆ.

ಯೋಜನೆ