ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ನೀಡಿದ ನಿರ್ದೇಶನಗಳು

ಮಾನ್ಯ ಮುಖ್ಯಮಂತ್ರಿ

ವಿಧಾನಸೌಧ(ಬೆಂಗಳೂರು), ನವೆಂಬರ್ 27, 2018

-ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಮ್ಮೇಳನ ಸಭೆ ನಡೆಯಿತು.

-ಸಭೆಯಲ್ಲಿ ರೈತರ ಸಾಲಮನ್ನಾ, ಬರ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆ, ವಸತಿ , ಆರೋಗ್ಯ, ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ ಸ್ಥಾಪನೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ, ಪ್ರತಿ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಂಬಂಧಿತ ಸಚಿವರುಗಳು ಕೆಳಕಂಡ ನಿರ್ದೇಶನಗಳನ್ನು ನೀಡಿದರು.

1. ರೈತರ ಸಾಲ ಮನ್ನಾ ಯೋಜನೆ ಕುರಿತಂತೆ ಕೆಲವು ವಲಯಗಳಲ್ಲಿ ಅನಗತ್ಯ ಅಪಪ್ರಚಾರ ನಡೆಯುತ್ತಿದೆ. ರೈತರ ಆತಂಕ ದೂರವಾಗಬೇಕು. ಸಾಲ ಮನ್ನಾ ಪ್ರಕ್ರಿಯೆ ಸ್ಪಷ್ಟವಾಗಿ , ಈ ಬಗ್ಗೆ ಜಿಲ್ಲಾಧಿಕಾರಿಗಳು ರೈತರಿಗೆ ಸ್ಪಷ್ಟ ಚಿತ್ರಣ ನೀಡಬೇಕು.

2. ಡಿಸೆಂಬರ್ ೧ ರೊಳಗಾಗಿ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ, ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲಮನ್ನಾಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಡಿಸೆಂಬರ್ ೫ ರಿಂದ ಪ್ರಾರಂಭಿಸಬೇಕು.

3. ಈಗಾಗಲೇ ೩೩ ಬ್ಯಾಂಕುಗಳಿಂದ 20.8 ಲಕ್ಷ ರೈತರ ಬೆಳೆ ಸಾಲ ಮಾಹಿತಿ ಸಂಗ್ರಹಿಸಲಾಗಿದೆ. ಬೆಳೆ ಸಾಲ ಮನ್ನಾ ಯೋಜನೆ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.

4. ಸೇಡಂ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದ್ದು, ಈ ಕೆಲಸ ನಿರಾಂತಕವಾಗಿ ನಡೆದಿದೆ. 4000 ರೈತರು ಸ್ವಯಂ ಘೋಷಿತ ದೃಢೀಕರಣ ಸಲ್ಲಿಸಿದ್ದಾರೆ.

5. ನವೆಂಬರ್ ೨೯ ರಂದು ಬೆಳಿಗ್ಗೆ ೯.೦೦ ಗಂಟೆಗೆ ಸಾಲ ಮನ್ನಾ ಯೋಜನೆಯ ಸಮನ್ವಯಾಧಿಕಾರಿ ಮನೀಶ್ ಮೌದ್ಗಿಲ್ನವರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮಾಡಿ ಗೊಂದಲಗಳನ್ನು ನಿವಾರಿಸಲಿದ್ದಾರೆ.

6. ಮಹತ್ವಾಕಾಂಕ್ಷಿ ಯೋಜನೆಯಾದ ಬಡವರ ಬಂಧು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಬೀದಿ ಬದಿ ವ್ಯಾಪಾರಿಗಳಿಗೆ ನೆರವು ಒದಗಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

7. ಬರಪೀಡಿತ ಜಿಲ್ಲೆಗಳಲ್ಲಿ ತುರ್ತು ಕುಡಿಯುವ ನೀರು ಪರಿಹಾರಕ್ಕೆ ಜಿಲ್ಲೆಗೆ 50 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದ್ದು, ಪ್ರತಿ ತಾಲ್ಲೂಕಿಗೆ ೨೫ ಲಕ್ಷ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

8. ರಾಜ್ಯದ ೧೦೦ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿತವಾಗಿದ್ದು, ಈ ಪ್ರತಿ ತಾಲ್ಲೂಕಿಗೂ ಬರಪರಿಸ್ಥಿತಿ ನಿರ್ವಹಣೆಗಾಗಿ ಒಬ್ಬ ನೋಡೆಲ್ ಅಧಿಕಾರಿಯನ್ನು ನಿಯೋಜಿಸಲಾಗಿದೆ.

9. ಪ್ರಸ್ತುತ ೧೫ ಜಿಲ್ಲೆಗಳ ೨೧೩ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಹಾಗೂ ೨೫೦ ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆಯುವ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

10. ಗೋಶಾಲೆ ಅಥವಾ ಮೇವಿನ ಬ್ಯಾಂಕ್ ತೆರೆಯುವ ಅವಶ್ಯಕತೆ ಬಂದರೆ ಅದಕ್ಕೆ ಸೂಕ್ತ ಸ್ಥಳವನ್ನು ನಿರ್ಧರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

11. ಹಸಿರು ಮೇವು ಬೆಳೆಯಲು ರೈತರಿಗೆ ಮೇವಿನ ಬೀಜಗಳನ್ನು ಉಚಿತವಾಗಿ ವಿತರಿಸಲು ೧೫ ಕೋಟಿ ರೂ.ಗಳನ್ನು ಪಶು ಸಂಗೋಪನೆ ಇಲಾಖೆಗೆ ಬಿಡುಗಡೆ ಮಾಡಲಾಗಿದೆ.

12. ಬರ , ಪ್ರವಾಹ ಪರಿಸ್ಥಿತಿಯಂತಹ ನೈಸರ್ಗಿಕ ವಿಪತ್ತುಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ನಿರ್ವಹಿಸಲು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಈ ಸಮಿತಿ ಈಗಾಗಲೇ ೭ ಬಾರಿ ಸಭೆ ಸೇರಿ, ಜಿಲ್ಲಾಡಳಿತಗಳಿಗೆ ಸೂಕ್ತ ನಿರ್ದೇಶನ ನೀಡುತ್ತಿದೆ.

13. 16 ಜಿಲ್ಲೆಗಳ ೪೬೨ ಗ್ರಾಮಗಳನ್ನು ನೀರಿನ ಸಮಸ್ಯೆ ಇರುವ ಹಳ್ಳಿಗಳೆಂದು ಗುರುತಿಸಲಾಗಿದೆ. ಇಲ್ಲಿಗೆ ಟ್ಯಾಂಕರ್ ಮುಖಾಂತರ ಮತ್ತು ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆಯುವ ಮುಖಾಂತರ ನೀರು ಪೂರೈಸಲಾಗುವುದು.

14. ಕಳೆದ ಸಾಲಿನಲ್ಲಿ ಬರಪರಿಹಾರಕ್ಕಾಗಿ ೧೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಈವರೆಗೆ 87.20 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. 6951 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

15. ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್ಗಳಿಗೆ ತಲಾ ೧ ಕೋಟಿಯಂತೆ ೩೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಈಗಾಗಲೇ 7.34 ಕೋಟಿ ರೂ.ಗಳ ವೆಚ್ಚ ಮಾಡಲಾಗಿದೆ.

16. ಈರುಳ್ಳಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆಗಾರರಿಗೆ ಬೆಂಬಲ ಬೆಲೆ ನೀಡಲು ತೀರ್ಮಾನಿಸಲಾಗಿದೆ.

17. ಪ್ರಕೃತಿ ವಿಕೋಪಕ್ಕೆ ತುತ್ತಾದ ಜಿಲ್ಲೆಗಳಿಗೆ ಬಿಡುಗಡೆಯಾದ ಪರಿಹಾರದ 200 ಕೋಟಿ ರೂ. ಮೊತ್ತವನ್ನು ಯಾವ ಕೆಲಸಗಳಿಗೆ ಬಳಕೆಯಾಗಿದೆ ಎಂದು ಒಂದು ವಾರದೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ.

18. 200 ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 79 ಕೋಟಿ , ಲೋಕೋಪಯೋಗಿ ಇಲಾಖೆಗೆ ೯೨ ಕೋಟಿ ರೂ. , ನಗರಾಭಿವೃದ್ಧಿ ಇಲಾಖೆಗೆ ೧೬ ಕೋಟಿ ರೂ. , ಸಣ್ಣ ನೀರಾವರಿ ಇಲಾಖೆಗೆ ೬.೯೧ ಕೋಟಿ ರೂ. ಹಾಗೂ ಇಂಧನ ಇಲಾಖೆಗೆ ೫.೨೧ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

19. ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡಲು ಸೂಚನೆ.

20. ವಸತಿ ಇಲಾಖೆಯ ಬಸವ ವಸತಿ, ಪ್ರಧಾನ ಮಂತ್ರಿ ಆವಾಸ್, ಡಾ|| ಬಿ.ಆರ್. ಅಂಬೇಡ್ಕರ್ , ವಾಜಪೇಯಿ ನಗರ ವಸತಿ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಸತಿಗೆ ಲಭ್ಯವಿರುವ ಸ್ಥಳಗಳನ್ನು ಗುರುತಿಸಲು ಸೂಚನೆ ನೀಡಲಾಗಿದೆ.

21. ಸಂಯೋಜಿತ ಆಯುಷ್ಮಾನ ಭಾರತ : ಆರೋಗ್ಯ ಕರ್ನಾಟಕ :- ಆರೋಗ್ಯ ಕರ್ನಾಟಕ ಸಾರ್ವತ್ರಿಕ ರಕ್ಷಣಾ ಯೋಜನೆಯನ್ನು ೦೨-೦೩-೨೦18 ರಿಂದ ರಾಜ್ಯದಿಂದ ಅನುಷ್ಠಾನಗೊಳಿಸಲಾಗುತ್ತಿದೆ.

22. ಆಯುಷ್ಮಾನ್ ಭಾರತ್ –ಆರೋಗ್ಯ ಭದ್ರತಾ ಯೋಜನೆಯನ್ನು ಕೇಂದ್ರ ಸರ್ಕಾರ 25-09-2018ರಿಂದ ಜಾರಿಗೊಳಿಸಿದೆ. ಈ ಎರಡೂ ಯೋಜನೆಗಳ ಉದ್ದೇಶ , ವ್ಯಾಪ್ತಿಗಳಲ್ಲಿ ಹೋಲಿಕೆ ಇರುವುದರಿಂದ, ಎರಡೂ ಯೋಜನೆಗಳನ್ನು ಸಂಯೋಜಿಸಿ ಜಾರಿಗೊಳಿಸಲಾಗುತ್ತಿದೆ.

23. ಸಂಯೋಜಿತ ಯೋಜನೆಯನ್ನು ಆಯುಷ್ಮಾನ ಭಾರತ : ಆರೋಗ್ಯ ಕರ್ನಾಟಕ ಎಂದು ಕರೆಯಲಾಗುತ್ತದೆ. ಭರವಸೆಯ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದೊಂದಿಗೆ ದಿನಾಂಕ: 30-10-2018ರಂದು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ 15-11-2018 ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ.

24. ಶಿಕ್ಷಣಇಲಾಖೆಯಲ್ಲಿ ಶಿಕ್ಷಕರ ವೇತನ ಪಾವತಿ ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ಕ್ರಮ ವಹಿಸಲು ಸೂಚನೆ.

25. 950 ಕೋಟಿ ರೂ.ಗಳ ಅನುದಾನವನ್ನು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಬಿಡುಗಡೆ ಮಡಲಾಗಿದೆ.

26. ಇದಲ್ಲದೆ, 450 ಕೋಟಿ ರೂ. ಗಳ ವಿಶೇಷ ಪ್ಯಾಕೇಜ್ ಮೊತ್ತ ವನ್ನು ಲೋಕೋಪಯೋಗಿ ಇಲಾಖೆ ಖಾತೆಗೆ ಜಮಾ ಮಾಡಿ , ಕಾಮಗಾರಿ ಕೈಗೊಳ್ಳಲು ಅನುವು ಮಾಡಿಕೊಡಲು ಸೂಚನೆ, ಆಡಳಿತದಲ್ಲಿ ಸುಧಾರಣೆ ತರಲು , ಒಂದೇ ಗ್ರಾಮದಲ್ಲಿ ಒಂದು ಕಿ.ಮಿ ವ್ಯಾಪ್ತಿಯಲ್ಲಿ ರುವ ಶಾಲೆಗಳ ಸಮೀಕರಣಕ್ಕೆ ಕ್ರಮ ಕೈಗೊಳ್ಳಲು ಸೂಚನೆ.

27. ಒಂಭತ್ತು ಜಿಲ್ಲೆಗಳಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಕೈಗಾರಿಕಾ ಕ್ಲಸ್ಟರ್ ಗಳಿಗೆ ಅಗತ್ಯವಾದ ಭೂಮಿ ಮಂಜೂರು ಮಾಡಲು ಜಿಲ್ಲಾಧಿಕಾರಿ ಗಳು ಕ್ರಮ ಕೈಗೊಳ್ಳಬೇಕು. ಪ್ರತಿ ಜಿಲ್ಲೆಯಲ್ಲಿ 1 ಲಕ್ಷ ಉದ್ಯೋಗ ಕಲ್ಪಿಸುವ ಈ ಯೋಜನೆಗೆ ತುರ್ತು ಕ್ರಮಕೈಗೊಳ್ಳಲು ಸೂಚಿಸಲಾಯಿತು.

28. ಮರಳು ಹಾಗೂ ಗಣಿಗಾರಿಕೆ ಗೆ ಸಂಬಂಧಿಸಿದಂತೆ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಒರುವ ಸಮಸ್ಯೆ ಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ಗಳ ಗಮನಕ್ಕೆ ತರಲು ಸೂಚಿಸಲಾಯಿತು.

-ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್, ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಕೃಷಿ ಸಚಿವ ಶಿವಶಂಕರ ರೆಡ್ಡಿ, ಆಹಾರ ಸಚಿವ ಜಮೀರ್ ಅಹ್ಮದ್ ಖಾನ್, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಅರಣ್ಯ ಸಚಿವ ವಿ.ಶಂಕರ್, ಪಶುಸಂಗೋಪನೆ ಸಚಿವ ನಾಡಗೌಡ, ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ, ತೋಟಗಾರಿಕಾ ಸಚಿವ ವಿ. ಮನಗೂಳಿ ಅವರುಗಳು ಭಾಗವಹಿಸಿದರು.

***********************************************