ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಸಮ್ಮತಿಸಿದ ದರದಲ್ಲಿ ಬಾಕಿ ಪಾವತಿಸಲು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೂಚನೆ - ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ವಿಧಾನಸೌಧ (ಬೆಂಗಳೂರು), ನವೆಂಬರ್ 20, 2018

-ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಗೆ ನೀಡಿದ ದರದಂತೆ ಬಾಕಿ ಪಾವತಿಸುವ ಬಗ್ಗೆ ಮಾಲೀಕರಿಗೆ ಸೂಚಿಸಲಾಗಿದ್ದು, ನವೆಂಬರ್ 22 ರಂದು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.

-ಪ್ರತಿಭಟನಾ ನಿರತ ರೈತ ಸಂಘಟನೆಗಳ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆಗಳು ಮತ್ತು ಅಧಿಕಾರಿಗಳೊಂದಿಗೆ ಆರೂವರೆ ಗಂಟೆಗಳ ಸುದೀರ್ಘ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

-ಸಕ್ಕರೆ ಕಾರ್ಖಾನೆ ಮಾಲೀಕರು ಸಮ್ಮತಿಸಿದ ದರದಲ್ಲಿ ರೈತರಿಗೆ ಬಾಕಿ ಪಾವತಿಸುವ ನಿಟ್ಟಿನಲ್ಲಿ ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ.

-ಇದಲ್ಲದೆ ಮುಂದಿನ ದಿನಗಳಲ್ಲಿ ರೈತರಿಗೆ ಕಾರ್ಖಾನೆಗಳಿಂದ ತೂಕ, ಇಳುವರಿ ಪ್ರಮಾಣ, ಕಟಾವು ಮತ್ತು ಸಾರಿಗೆ ವೆಚ್ಚ ಮೊದಲಾದ ವಿಚಾರಗಳಲ್ಲಿ ಮೋಸವಾಗದಂತೆ ತಡೆಯಲು ಸರ್ಕಾರ ಕೆಲವು ನಿಯಮಾವಳಿಗಳನ್ನು ರೂಪಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

-ಇಂದು ನಡೆದ ಸಭೆಯಲ್ಲಿ ರೈತರು ಮನವಿಯಲ್ಲಿ ಸಲ್ಲಿಸಿದ 13 ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

-2018-19ರ ಹಂಗಾಮಿನಲ್ಲಿ ಎಫ್ ಆರ್ ಪಿ ದರದಲ್ಲಿ ಸಕ್ಕರೆ ಕಾರ್ಖಾನೆಗಳು 15 ದಿನಗಳೊಳಗಾಗಿ ಒಂದೇ ಹಂತದಲ್ಲಿ ಹಣ ಪಾವತಿಸಲು ಸೂಚನೆ ನೀಡಲಾಗಿದೆ.

-ಸಭೆಯಲ್ಲಿ ರೈತರು ಮನವಿ ಮಾಡಿದಂತೆ ಎಫ್ ಆರ್ ಪಿ ದರವನ್ನು ex-field ನಿಗದಿಪಡಿಸುವ ಬಗ್ಗೆ ಪರಿಶೀಲಿಸಲು ಸಕ್ಕರೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

-ರೈತರು ಯಾವ ಸಮಸ್ಯೆಯಿದ್ದರೂ ನನ್ನೊಂದಿಗೆ ನೇರವಾಗಿ ಚರ್ಚಿಸುವಂತೆ ಕೋರಿದ್ದೇನೆ. ರೈತರು ಯಾವ ಕಾರಣಕ್ಕೂ ಕಳವಳಕ್ಕೆ ಒಳಗಾಗಬಾರದು. ಸರ್ಕಾರ ರೈತರ ಪರವಾಗಿದೆ ಎಂದು ತಿಳಿಸಿದರು.

-ಇಂದಿನ ಸಭೆಯಲ್ಲಿ ಪರಸ್ಪರ ವಿಶ್ವಾಸದಲ್ಲಿ ಸಮಸ್ಯೆ ಇತ್ಯರ್ಥಪಡಿಸಲಾಗಿದೆ. ರೈತರ ಬೇಡಿಕೆಯಂತೆ ಗುಜರಾತ್, ಮಹಾರಾಷ್ಟ್ರ ಮಾದರಿಗಳ ಮಾಹಿತಿಯನ್ನು ತರಿಸುವಂತೆಯೂ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ. ಮುಂದಿನ ವರ್ಷ ರೈತರು ಇಂತಹ ಯಾವುದೇ ಸಮಸ್ಯೆಗೊಳಗಾಗಿ ಪ್ರತಿಭಟನೆ ನಡೆಸುವ ಸಂದರ್ಭ ಬಾರದಂತೆ ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ.

-ಕಳೆದ 7-8 ವರ್ಷ ಹೋರಾಟಗಾರರ ವಿರುದ್ಧ ದಾಖಲಿಸಿರುವ ಮೊಕದ್ದಮೆಗಳನ್ನು ಹಿಂಪಡೆಯುವ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

***********************************************