ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

29ನೇ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸನ್ಮಾನ್ಯ ಮುಖ್ಯಮಂತ್ರಿಯವರ ಭಾಷಣದ ಮುಖ್ಯಾಂಶಗಳು

ಮಾನ್ಯ ಮುಖ್ಯಮಂತ್ರಿ

(ದಾವಣಗೆರೆ), ನವೆಂಬರ್ 17, 2018

1. ವೈದ್ಯರಲ್ಲಿ ದೇವರನ್ನು ಕಂಡ ಸಂಸ್ಕೃತಿ ನಮ್ಮದು. ನಮ್ಮ ಜನ ಮುಗ್ಧರು, ಅವರ ಅನಾರೋಗ್ಯದ ಸಂದರ್ಭದಲ್ಲಿ ವೈದ್ಯರು ಹೇಳುವುದು ಅವರಿಗೆ ವೇದವಾಕ್ಯ. ವೈದ್ಯರ ಮೇಲೆ ಅಚಲ ನಂಬಿಕೆಯನ್ನು ಇರಿಸಿರುವ ನಮ್ಮ ಜನ ಅವರು ಹೇಳಿದಂತೆಯೇ ಕೇಳುವವರು.

2. ಜನರ ಈ ಮುಗ್ಧನಂಬುಗೆಯನ್ನು ಹುಸಿಹೋಗದಂತೆ ಕಾಪಾಡುವ ಹೊಣೆಗಾರಿಕೆ ಎಲ್ಲ ವೈದ್ಯರದ್ದು. ವಿಶೇಷವಾಗಿ ಸರ್ಕಾರಿ ವೈದ್ಯಾಧಿಕಾರಿಗಳದ್ದು.

3. ಎಲ್ಲ ಜನರಿಗೂ ಹೈಟೆಕ್ ಆಸ್ಪತ್ರೆಗಳಿಗೆ ತೆರಳಿ, ದುಬಾರಿ ಹಣ ತೆತ್ತು, ಚಿಕಿತ್ಸೆ ಪಡೆಯುವ ಅವಕಾಶಗಳಿರಲಾರವು. ಬಹುತೇಕ ಜನ ನಂಬುವುದು ಮತ್ತು ಧಾವಿಸುವುದು ಸರ್ಕಾರಿ ಆಸ್ಪತ್ರೆಗಳಿಗೆ.

4. ಕರ್ನಾಟಕ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆಯನ್ನು ಅಕ್ಟೋಬರ್ ೩೦ ರಿಂದ ಚಾಲನೆಗೊಳಿಸಿದೆ. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆಗೆ ಪೂರಕವಾಗಿ ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆ ಕಾರ್ಯನಿರ್ವಹಿಸುತ್ತದೆ.

5. ಈ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ವರ್ಷಕ್ಕೆ ೫ ಲಕ್ಷ ರೂ. ಮತ್ತು ಎಪಿಎಲ್ ಕುಟುಂಬಗಳಿಗೆ ವರ್ಷಕ್ಕೆ ೧.೫ ಲಕ್ಷ ರೂ. ಆರೋಗ್ಯ ಚಿಕಿತ್ಸೆಗೆಂದು ದೊರೆಯಲಿದೆ. ಒಟ್ಟಾರೆ ೧೬೪೦ ಸೇವೆಗಳನ್ನು ನಿಗದಿಪಡಿಸಲಾಗಿದೆ.

6. ಎಲ್ಲ ಜನರಿಗೂ ಎಲ್ಲ ರೀತಿಯ ಆರೋಗ್ಯ ಸೇವೆ ದೊರೆಯಬೇಕು ಎನ್ನುವುದು ರಾಜ್ಯ ಸರ್ಕಾರದ ಮಹದಾಶೆ. ಈ ಆಶಯಕ್ಕೆ ಪೂರಕವಾಗಿ ಸರ್ಕಾರಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸರ್ಕಾರಿ ಆಸ್ಪತ್ರೆಗಳ ಸೇವಾ ಗುಣಮಟ್ಟ ಮತ್ತು ಅಲ್ಲಿನ ಇತರ ಮೂಲಭೂತ ಸೌಲಭ್ಯಗಳು ಉತ್ಕೃಷ್ಟ ಮಟ್ಟದಲ್ಲಿ ಇರಬೇಕಾದದ್ದು ಅತ್ಯಗತ್ಯ.

7. ನಮ್ಮ ವೈದ್ಯರು ಹಾಗೂ ವೈದ್ಯೇತರ ಸಿಬ್ಬಂದಿಗಳ ಸತತ ಪರಿಶ್ರಮ ಮತ್ತು ಸೇವೆಯಿಂದ ಸಿಡುಬು, ಪ್ಲೇಗು, ಪೋಲಿಯೋ ಮುಂತಾದ ರೋಗಗಳ ನಿರ್ಮೂಲನೆ ಮಾಡಲಾಗಿದೆ, ಕ್ಷಯ, ಕುಷ್ಠ, ಕಾಲರ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣಕ್ಕೆ ತರಲಾಗಿದೆ. ಇದಕ್ಕಾಗಿ ನಮ್ಮ ವೈದ್ಯ ಮತ್ತು ವೈದ್ಯೇತರ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ.

8. ನಿಮ್ಮೆಲ್ಲರ ಪರಿಶ್ರಮದಿಂದ ತಾಯಂದಿರ ಮರಣ ಪ್ರಮಾಣ ಪ್ರತಿ 1 ಲಕ್ಷ ಜೀವಂತ ಜನನಗಳಿಗೆ 213 (ಎಸ್.ಆರ್.ಎಸ್ 2005-06) ರಿಂದ 108 ಕ್ಕೆ (ಎಸ್.ಆರ್.ಎಸ್ 2014-16) ಇಳಿಕೆಯಾಗಿದೆ ಹಾಗೂ ಪ್ರತಿ ಸಾವಿರ ಜೀವಂತ ಜನನಗಳಿಗೆ ಶಿಶು ಮರಣ ಪ್ರಮಾಣವು 24 ಕ್ಕೆ ಇಳಿಕೆಯಾಗಿದೆ. ಇದಕ್ಕಾಗಿ ಹಲವು ಪ್ರಶಸ್ತಿಗಳನ್ನು ನಮ್ಮ ರಾಜ್ಯ ಪಡೆದಿದೆ. ಶ್ರಮಿಸಿದ ಎಲ್ಲ ಅಧಿಕಾರಿಗಳಿಗೂ ಅಭಿನಂದನೆಗಳು.

9. ಮೂತ್ರಪಿಂಡ ತೊಂದರೆಗೊಳಗಾಗಿ ಸಾವಿರಾರು ರೂಪಾಯಿಗಳ ವೆಚ್ಚದಲ್ಲಿ ಡಯಾಲಿಸಿಸ್ ಚಿಕಿತ್ಸೆ ಮಾಡಿಸಲಾಗದೆ ಬದುಕು ನರಕಸದೃಶವಾಗಿರುವ ರೋಗಿಗಳ ಬದುಕಿಗೆ ಆಸರೆಯಾಗಿ ರಾಜ್ಯದಲ್ಲಿ 160 ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸಿ ಉಚಿತವಾಗಿ ಸೇವೆಯನ್ನು ನೀಡಲಾಗುತ್ತಿದೆ. ಇದೊಂದು ರಾಷ್ಟ್ರೀಯ ಪ್ರಥಮ. ಇದು ನಿಜವಾಗಿಯೂ ರಾಜ್ಯ ಸರ್ಕಾರಕ್ಕೆ ಹೆಮ್ಮೆ ತರುವ ವಿಷಯ.

10. ಜೀವನ್ಮರಣಗಳ ಮಧ್ಯೆ ಹೋರಾಡುವ ರೋಗಿಗಳ ಪ್ರಾಣ ಉಳಿಸುವ ಸಲುವಾಗಿ ರಾಜ್ಯದ ಎಲ್ಲಾ ಮೇಲ್ದರ್ಜೆ ಆಸ್ಪತ್ರೆಗಳು ಜಿಲ್ಲಾ ಆಸ್ಪತ್ರೆಗಳಲ್ಲಿ 10 ಹಾಸಿಗೆಗಳ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ 3 ಹಾಸಿಗೆಗಳ ಸಾಮಥ್ರ್ಯದ ತೀವ್ರ ನಿಗಾ ಘಟಕ (ಐ.ಸಿ.ಯು) ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈಗಾಗಲೇ 103 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

11. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರೋಗಪತ್ತೆ ಸೌಲಭ್ಯ ಒದಗಿಸಲು ಚಿತ್ರದುರ್ಗ ವಿಜಯಪುರ, ಉಡುಪಿ, ಕೋಲಾರ ಮತ್ತು ತುಮಕೂರಿನಲ್ಲಿ ಸಿ.ಟಿ. ಸ್ಕ್ಯಾನ್ ಸೌಲಭ್ಯ ಹಾಗೂ ಕೋಲಾರ ಮತ್ತು ತುಮಕೂರಿನಲ್ಲಿ ಎಂ.ಅರ್.ಐ.ಸ್ಕ್ಯಾನ್ ಈಗಾಗಲೇ ಪ್ರಾರಂಭಿಸಲಾಗಿದೆ. ಈ ಯೋಜನೆಗಳನ್ನು ಶೀಘ್ರದಲ್ಲಿಯೇ ವಿಸ್ತರಿಸಲಾಗುವುದು.

12. ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಮಾನಸಿಕ ಅಸ್ವಸ್ಥರಲ್ಲಿ ಮನೋಸ್ಥೈರ್ಯವನ್ನು ತುಂಬಿ ಸರಳ ಜೀವನ ನಡೆಸುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ “ಮನೋಚೈತನ್ಯ” ಮತ್ತು “ಮಾನಸಧಾರ” ಕೇಂದ್ರಗಳನ್ನು ಸ್ಥಾಪಿಸಿ ಪ್ರತಿ ಮಂಗಳವಾರ (ಸೂಪರ್ ಮಂಗಳವಾರ) ಮಾನಸಿಕ ರೋಗಗಳಿಂದ ಬಳಲುವ ಜನರಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.

13. ದೇಶದಲ್ಲಿಯೇ ಪ್ರಪ್ರಥಮವಾಗಿ ನಮ್ಮ ರಾಜ್ಯದಲ್ಲಿ ಮಾನಸಿಕ ಆರೋಗ್ಯ ಪ್ರಾಧಿಕಾರವನ್ನು ಆರಂಭಿಸಲಾಗುತ್ತಿದೆ.

14. ಇತ್ತೀಚೆಗೆ ಭಾರತ ಸರ್ಕಾರವು ಆಯೋಜಿಸಿದ್ಧ ರಾಷ್ಟ್ರಮಟ್ಟದ ಆರೋಗ್ಯ ಸಮಾವೇಶದಲ್ಲಿ ರಾಜ್ಯಕ್ಕೆ 3 ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ವಿಷಯ. ಸಂಬಂಧಿಸಿದ ಎಲ್ಲರಿಗೂ ನಾನು ಅಭಿನಂದಿಸುತ್ತೇನೆ.

15. ದೇಶದಲ್ಲೇ ಪ್ರಥಮ ಬಾರಿಗೆ ಹೆಚ್.ಐ.ವಿ ರೋಗಿಗಳಿಗೆ ಅವರ ವಾಸಸ್ಥಳಗಳ ಹತ್ತಿರ ಎ.ಆರ್.ಟಿ ಮಾತ್ರೆಗಳು ದೊರೆಯುವಂತೆ ಮಾಡಲು 130 ಉಪ-ಎ.ಆರ್.ಟಿ. ಕೇಂದ್ರಗಳನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆ.

16. ನಾನು ಈಗಾಗಲೇ ಹಲವಾರು ವೇದಿಕೆಗಳಲ್ಲಿ ಹೇಳಿರುವಂತೆ, ನಮ್ಮ ಸರ್ಕಾರದ ಪ್ರಥಮ ಆದ್ಯತೆ ಕೃಷಿ, ಶಿಕ್ಷಣ ಮತ್ತು ಆರೋಗ್ಯ ವಲಯಗಳು. ಇವುಗಳನ್ನು ಒಳಗೊಂಡಂತೆ ಅಭಿವೃದ್ಧಿಯ ಪ್ರಸ್ತಾಪ ಬಂದಾಗ ರಾಜ್ಯ ಸರ್ಕಾರದಲ್ಲಿ ಹಣದ ಕೊರತೆಯಂತೂ ಇಲ್ಲ. ಅಭಿವೃದ್ಧಿಗೆ ಅಗತ್ಯವಿರುವ ಹಣಕಾಸು ಸಮೃದ್ಧಿ ನಮಗಿದೆ. ಅಭಿವೃದ್ಧಿಗಾಗಿ ವೆಚ್ಚ ಮಾಡುವ ಇಚ್ಛಾಶಕ್ತಿಯೂ ಇದೆ.

17. ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿನ ಮನ:ಸ್ಥಿತಿ ಬದಲಾಗಬೇಕು. ಸೇವೆಗಾಗಿಯೇ ಸರ್ಕಾರಿ ನೌಕರಿ ಎನ್ನುವ ಭಾವನೆ ಮೂಡಬೇಕು.

18. ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗಳು ಮತ್ತು ಇತರೆ ಸರ್ಕಾರಿ ಸೇವೆಗಳಲ್ಲಿ ಕಂಡುಬರುತ್ತಿರುವ ಲೋಪಗಳ ಕುರಿತು ಮಾಧ್ಯಮದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ನಾನು ತೀವ್ರವಾಗಿ ಗಮನಿಸಿದ್ದೇನೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಲು ನಾನು ಸಿದ್ಧನಿದ್ದೇನೆ. ನಮ್ಮ ವ್ಯವಸ್ಥೆಗಳು ಸಶಕ್ತವಾಗಬೇಕು. ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆ, ಸರ್ಕಾರಿ ಉಪಕ್ರಮಗಳು ವಿಶ್ವಾಸಾರ್ಹ ಎನ್ನುವ ಭಾವ ಮೂಡಬೇಕು.

19. ನಮ್ಮ ಕೆಲ ಸರ್ಕಾರಿ ವೈದ್ಯ ಸಂಸ್ಥೆಗಳು ವಿಶ್ವಖ್ಯಾತಿಯನ್ನು ಪಡೆದಿವೆ. ಜಗತ್ತಿನ ಮೂಲೆ ಮೂಲೆಗಳಿಂದ ಚಿಕಿತ್ಸೆಗಾಗಿ ನಮ್ಮಲ್ಲಿ ಬರುವವರಿದ್ದಾರೆ. ಆದರೆ ಕೆಳಸ್ತರದ ಸರ್ಕಾರಿ ಆಸ್ಪತ್ರೆಗಳು, ಕೆಲವೊಮ್ಮೆ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳ ಸ್ಥಿತಿಯನ್ನು ಅತ್ಯಂತ ಶೋಚನೀಯವಾಗಿರುವುದನ್ನು ನಾನು ಕಂಡಿದ್ದೇನೆ. ಇದು ಬದಲಾಗಬೇಕಿದೆ.

20. ಮೂಲಸೌಲಭ್ಯಗಳು ಮತ್ತು ಇತರ ಅಗತ್ಯಗಳನ್ನು ಪೂರೈಸಲು ಸರ್ಕಾರ ಸಿದ್ಧವಿದೆ. ಆದರೆ ತಾನು ಒದಗಿಸುವ ಸವಲತ್ತುಗಳ, ವೈದ್ಯೋಪಕರಣ ಸಲಕರಣೆಗಳ ದುರುಪಯೋಗವಾದಲ್ಲಿ ಸರ್ಕಾರ ಖಂಡಿತವಾಗಿಯೂ ಸಹಿಸುವುದಿಲ್ಲ.

21. ನಮ್ಮ ವೈದ್ಯರು ಸೇವಾ ಮನೋಭಾವವನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ.

22. ಸರ್ಕಾರಿ ವೈದ್ಯರು ಮತ್ತು ವೈದ್ಯೇತರ ಸಿಬ್ಬಂದಿ ಸಲ್ಲಿಸಿರುವ ಅನೇಕ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರ ಸಿದ್ಧವಿದೆ.

23. ವೈದ್ಯಕೀಯ ಸಮ್ಮೇಳನ ಯಶಸ್ವಿಯಾಗಲಿ, ಈ ಸಮ್ಮೇಳನದಲ್ಲಿ ಹೊರಬರುವ ಉತ್ತಮಾಂಶಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಸಂಕಲ್ಪ ಶಕ್ತಿ ನಿಮ್ಮದಾಗಲಿ.

ನಮಸ್ಕಾರ

***********************************************