ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮೈತ್ರಿ ಸರ್ಕಾರ ಅನ್ನದಾತರ ಮನೆಬಾಗಿಲಿಗೆ ಬಂದಿದೆ ಎಂದು ಅಭಯ ನೀಡಿದ ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ಬೀದರ್, ನವೆಂಬರ್ 15, 2018

ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿದ ರೈತ ಸ್ಪಂದನ

-ವಾರ್ತಾ ಇಲಾಖೆ ಮತ್ತು ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ಜಿಲ್ಲಾ ರಂಗಮಂದಿರದಲ್ಲಿ ನಡೆದ ರೈತ ಸ್ಪಂದನ ಕಾರ್ಯಕ್ರಮ ಅಕ್ಷರಶಃ ಬೀದರ ಜಿಲ್ಲೆಯ ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡಿತು.

-ಜ್ಯೋತಿ ಬೆಳಗಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರು ಚಾಲನೆ ನೀಡಿದರು. ಒಂದೆಡೆ ರೈತ ಬಂಧುಗಳು ಮತ್ತೊಂದೆಡೆ ಮುಖ್ಯಮಂತ್ರಿ ಅವರು ಸೇರಿದಂತೆ ಸಚಿವರು, ಜಿಪಂ ಅಧ್ಯಕ್ಷರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳನ್ನೊಳಗೊಂಡು ನಡೆದ ರೈತ ಸಂವಾದ ಕಾರ್ಯಕ್ರಮ ಸುಧೀರ್ಘವಾಗಿ ನಡೆಯಿತು. ರೈತರ ಅನುಭವ ಅನಾವರಣಗೊಂಡಿತು.

ಮಾನ್ಯ ಮುಖ್ಯಮಂತ್ರಿ

ಸಂವಾದದಲ್ಲಿ ಏನೇನು?

-ಬೀದರ ಜಿಲ್ಲೆಯಲ್ಲಿ ಕೃಷಿ ಕಾಲೇಜು ಬೇಕು ಎಂದು ರೈತ ಕಾಶಿಲಿಂಗ ಕೇಳಿದರು.

ಇಲ್ಲಿನ ಯುವಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗವಕಾಶ ಲಭ್ಯವಾಗುವ ದಿಶೆಯಲ್ಲಿ ಆಲೋಚಿಸಿ ಬರುವ ವರ್ಷದಿಂದ ಕಾಲೇಜು ಆರಂಭ ಮಾಡುವ ಪ್ರಯತ್ನ ಮಾಡುವುದಾಗಿ ಮುಖ್ಯಮಂತ್ರಿ ಅವರು ಪ್ರತಿಕ್ರಿಯಿಸಿದರು. ರೈತ ಉಳಿದರೆ ದೇಶ ಉಳಿಯುತ್ತೆ ಎನ್ನುವ ರೈತ ಮಹಮ್ಮದ್ ಜಾಫರ್ ಅವರ ಆಶಯದಂತೆ, ಕೃಷಿ ಪದ್ಧತಿಯ ಹಳೆಯ ಕ್ರಮಗಳನ್ನು ಬದಲಾಯಿಸಿ ಹೊಸ ಪದ್ದತಿಗೆ ಚಾಲನೆ ಕೊಡಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಸರ್ಕಾರ ಮನೆಬಾಗಲಿಗೆ

-ನಾವು ವಿಧಾನಸೌಧದಲ್ಲಿ ಕೂಡುವುದಿಲ್ಲ. ನಿಮ್ಮ ಮನೆ ಬಾಗಿಲಿಗೆ ಬರುತ್ತೇವೆ, ಈಗ ಬಂದಿದ್ದೇವೆ. ನೀರನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಸುತ್ತೇವೆ. ಜೊತೆಗೆ ನಿಮಗೆ ಆರ್ಥಿಕ ನೆರವು ಕೊಡುತ್ತೇವೆ. ಕೃಷಿಯಲ್ಲಿ ಹೊಸ ವಾತಾವರಣ ಕಲ್ಪಿಸುವ ಉದ್ದೇಶ ನಮ್ಮದಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

ಇಡೀ ರಾಜ್ಯ ಸಾವಯವ ಕೃಷಿಗೆ...

-ನಮ್ಮ ಜಿಲೆಯನ್ನು ಸಾವಯವ ಕೃಷಿ ಜಿಲ್ಲೆಯನ್ನಾಗಿ ಮಾಡಿ ಎನ್ನುವ ರೈತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಿಎಂ ಅವರು, ಬರುವ ವರ್ಷ ಈ ಹಿನ್ನೆಲೆಯಲ್ಲಿ ಕೆಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಆಲೋಚಿಸಿದ್ದೇವೆ. ಬೀದರ ಅಷ್ಟೆ ಅಲ್ಲ, ಇಡೀ ರಾಜ್ಯವನ್ನು ಸಾವಯವ ಕೃಷಿಗೆ ಒಳಪಡಿಸುತ್ತೇವೆ. ನಾವು ನಿಮ್ಮ ಜೊತೆಗಿರುತ್ತೇವೆ ಎಂದು ಸಿಎಂ ತಿಳಿಸಿದರು.

ರೈತ ಮಕ್ಕಳಿಗೆ ಮೀಸಲು ಕೊಡಿ

-ರೈತ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡಿ. ಶುಲ್ಕ ರಹಿತ ಶಿಕ್ಷಣ ಕೊಡಿ ಎಂದು ರೈತ ವಿಠಲ್ ತಿಳಿಸಿದರು. ರೈತರು ಯಾವುದೇ ಸಮುದಾಯಕ್ಕೆ ಸೇರಿರಲಿ ಅವರೆಲ್ಲ ಬಡವರೆ. ಹೀಗಾಗಿ ಎಲ್ಲರನ್ನೂ ಸರಿ‌ಸಮಾನವಾಗಿ ಕಾಣುತ್ತೇವೆ. ರೈತ ಮಕ್ಕಳಿಗೆ ಅನುಕೂಲ ಮಾಡಿಕೊಡುತ್ತೇವೆ. ಹೊಸ ತಳಿಯ ಸಂಶೋಧಕರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುತ್ತೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬದಲಾವಣೆ

-ಇಂತಹ ಕಾರ್ಯಕ್ರಮಗಳ ಮೂಲಕ ರಾಜ್ಯದ ಕೃಷಿ ರಂಗದಲ್ಲಿ ಬದಲಾವಣೆ ತರಲು ಯೋಜಿಸಲಾಗಿದೆ. ಎಲ್ಲ ಸಹಕಾರವನ್ನು ಸರಕಾರ ತಮಗೆ ಕೊಡುತ್ತದೆ. ಅದನ್ನು ತಾವು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಸಿಎಂ ತಿಳಿಸಿದರು.

ಸೋಯಾ ಸಂಶೋಧನಾ ಕೇಂದ್ರಕ್ಕೆ ಅನುದಾನ

-ಸೊಯಾ ರಿಸರ್ಚ್ ಸೆಂಟರ್ ತೆರೆಯಲು ಮುಂದಿನ ಬಜೆಟ್ನಲ್ಲಿ ಅನುದಾನ ಮೀಸಲಿಡುವುದಾಗಿ ಸಿಎಂ ಅವರು ರೈತರೊಬ್ಬರ ಪ್ರಶ್ನೆಗೆ ಉತ್ತರಿಸಿದರು.

ಸಮಗ್ರ ನೀರಾವರಿಗೆ ಕ್ರಮ

-ಈ ವರ್ಷ ಮಳೆ ಸರಿಯಾಗಿ ಆಗಿರುವುದಿಲ್ಲ. ಕೆರೆ ಬತ್ತಿವೆ. ಇದನ್ನರಿತಿದ್ದು ಇಲ್ಲಿನ ಎಲ್ಲ ಶಾಸಕರೊಂದಿಗೆ ಸಭೆ ನಡಿಸಿ ಚರ್ಚಿಸಿ ಸಮಗ್ರ ನೀರಾವರಿ ಯೋಜನೆ ಜಾರಿಗೆ ಪ್ರಯತ್ನಿಸಲಾಗುವುದು. ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಹೂಳೆತ್ತುವ ಕೆಲಸ ಮಾಡಿಸಲಾಗುವುದು.

ಕಬ್ಬು ಬೆಳೆಗಾರರಿಗೆ ಧೈರ್ಯ

-ಒಂದನೇ ತಾರಿಖಿನಿಂದ ಬಿಎಸ್ಎಸ್ ಕೆ ಕಾರ್ಖಾನೆ ಆರಂಭಿಸುತ್ತೇವೆ. ಈಗಾಗಲೆ ಇದಕ್ಕಾಗಿ 20 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ತಾವು ಧೈರ್ಯಗುಂದಬೇಡಿ ಎಂದು ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಿಎಂ ಅಭಯ‌ ನೀಡಿದರು.

ಆತಂಕ ಬೇಡ

-ಹಿಂದಿನ ಸರ್ಕಾರ ರೂಪಿಸಿದ ‌ಕೆಲವು ರೈತಪರ ಯೋಜನೆಗಳನ್ನು ಮುಂದುವರೆಸಿದ್ದೇವೆ. ಮೈತ್ರಿ ಸರ್ಕಾರ ಮಾನವೀಯ ನೆಲೆಯಲ್ಲಿ ಆಲೋಚಿಸಿ ರೈತ ಪರ ಹಲವಾರು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸುತ್ತಿದೆ ಎಂದು ತಿಳಿಸಿದರು. ನಮ್ಮ‌ಕಾಲದಲ್ಲಿ ನೀವು ರಸ್ತೆಗೆ ಬರಬಾರದು. ನೀವು ರಸ್ತೆಗೆ ಬಂದರೆ ನಮಗೆ ಮರ್ಯಾದೆ ಇರುವುದಿಲ್ಲ. ಸರ್ಕಾರ ಕೆಲಸ ಮಾಡುತ್ತಿರುವುದೇ ನಿಮ್ಮ ಹಿತಕೋಸ್ಕರ ಎಂದರು.

ಮನದಾಳದ ನಮಸ್ಕಾರಗಳು

-ಸಿಎಂ ಅವರು ರೈತ ಪರ ಆಲೋಚನೆ ಉಳ್ಳವರು. ರೈತರನ್ನು ಕುಟುಂಬದ ಸದಸ್ಯರಂತೆ, ಬಂಧಬಿರಾದಾರ ಜನಕಾಣುತ್ತಾರೆ. ತಮ್ಮ ಜೊತೆಗೆ ಕೂಡಿಸಿಕೊಂಡು ಮಾತನಾಡುತ್ತಾರೆ. ಖಂಡಿತಾ ರೈತರ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಕೊಡ್ತಾರೆ ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಉಮಾಶಂಕರ ಮಿಶ್ರಾ ತಿಳಿಸಿದರು.

ಚಿಂತನೆಯಷ್ಟೆ ಅಲ್ಲ; ಚಾಲನೆ

-ಇದಕ್ಕು ಮೊದಲು ಮಾತನಾಡಿದ ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರು, ಇದು ರೈತ ಕಾರ್ಯಕ್ರಮಗಳ ಚಿಂತನೆಯಷ್ಟೇ ಅಲ್ಲ; ಚಾಲನೆ ನೀಡಿದರು ಎಂದು ಮಾರ್ಮಿಕವಾಗಿ ನುಡಿದರು. ಈ ಕಾರ್ಯಕ್ರಮ ನೋಡಿ ಸಂತಸವಾಗಿದೆ. ಇದು ರೈತರ ಹೊಲದಲ್ಲಿ ಕೆಲಸ ಮಾಡುವ ಸರ್ಕಾರ, ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡುವ ಸರ್ಕಾರವಲ್ಲ ಎಂಬುದಕ್ಕೆ ಈ ಕಾರ್ಯಕ್ರಮ ಮತ್ತೊಂದು ನಿದರ್ಶನ ಎಂದು ತಿಳಿಸಿದರು.

ರೈತರೊಂದಿಗೆ ಸಾಕ್ಷ್ಯಚಿತ್ರ ವೀಕ್ಷಣೆ

-ಈ ಕಾರ್ಯಕ್ರಮದಡಿ ವಾರ್ತಾ ಇಲಾಖೆಯು ಸಿದ್ದಪಡಿಸಿದ್ದ ಬೀದರ ಜಿಲ್ಲೆಯ ವಿವಿಧ ತಾಲೂಕುಗಳ ಆಯ್ದ ರೈತರ ಕೃಷಿ ಯಶೋಗಾಥೆಯ ಸಾಕ್ಷ್ಯಚಿತ್ರಗಳನ್ನು ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ರೈತ ಬಾಂಧವರೊಂದಿಗೆ ಕುಳಿತು ವೀಕ್ಷಿಸಿದ್ದು ವಿಶೇಷವಾಗಿತ್ತು.

ಆತ್ಮವಿಶ್ವಾಸ ಮೂಡಿಸುವ ಉದ್ದೇಶ

-ಪ್ರಾಸ್ತಾವಿಕ ಮಾತನಾಡಿದ ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು, ರೈತ ಸ್ಪಂದನೆ ಯಾಕೆ ಬೇಕು? ಎಂಬುದನ್ನು ಅರಿತು ರೂಪಿಸಿದ ಕಾರ್ಯಕ್ರಮ ಇದಾಗಿದೆ. ರೈತ ಸಮೂಹದಲ್ಲಿ ಆತ್ಮವಿಶ್ವಾಸ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಗ್ರಾಮವಾಸ್ತವ್ಯ ನಡೆಸಿ ಇಡೀ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಸಿಎಂ ಕುಮಾರಸ್ವಾಮಿ ಅವರು ರೂಪಿಸಿದ ಮಹಾತ್ವಕಾಂಕ್ಷಿ ಕಾರ್ಯಕ್ರಮ ಇದಾಗಿದೆ. ಅನ್ಮದಾತರ ಪ್ರಶ್ನೆಗಳಿಗೆ ನಾವು ಭಾವನಾತ್ಮಕವಾಗದೇ, ವೈಜ್ಞಾನಿಕ ನೆಲೆಯಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಇಂತಹ ಕಾರ್ಯಕ್ರಮದ ಮೂಲಕ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್.ಆರ್.ವಿಶುಕುಮಾರ ಸ್ವಾಗತಿಸಿದರು.

-ಈ ಸಂದರ್ಭದಲ್ಲಿ ಸಚಿವರಾದ ರಾಜಶೇಖರ ಪಾಟೀಲ, ವೆಂಕಟರಾವ್ ನಾಡಗೌಡ, ಜಿಪಂ ಅಧ್ಯಕ್ಷರಾದ ಭಾರತಬಾಯಿ ಶೆರಿಕಾರ, ಶಾಸಕರಾದ ಈಶ್ವರ ಖಂಡ್ರೆ, ರಹೀಂ ಖಾನ್, ಬಿ.ನಾರಾಯಣರಾವ್, ವಿಧಾನ ಪರಿಷತ್ ಸದಸ್ಯರಾದ ಅರವಿಂದ ಅರಳಿ, ಚಂದ್ರಶೇಖರ ಪಾಟೀಲ, ಜಿಪಂ ಉಪಾಧ್ಯಕ್ಷರಾದ ಡಾ.ಪ್ರಕಾಶ ಪಾಟೀಲ, ಮಾನ್ಯ ಮುಖ್ಯಮಂತ್ರಿ ಅವರ ಮಾಧ್ಯಮ ಕಾರ್ಯದರ್ಶಿ ಎಚ್.ಬಿ. ದಿನೇಶ, ಕೃಷಿ ಇಲಾಖೆಯ ಆಯುಕ್ತರಾದ ಡಾ.ಕೆ.ಜಿ.ಜಗದೀಶ, ಜಿಲ್ಲಾಧಿಕಾರಿ ಡಾ.ಹೆಚ್.ಆರ್. ಮಹಾದೇವ, ಬೀದರ ಹಾಗೂ ಕಲಬುರಗಿ‌ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ.ಶ್ರೀಧರ, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ರವಿಕುಮಾರ, ಉಪ ನಿರ್ದೇಶಕಾರದ ಬಸವರಾಜ ಕಂಬಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ವಿದ್ಯಾನಂದ ಸಿ., ಉಪ ನಿರ್ದೇಶಕರಾದ ಸೋಮಶೇಖರ ಬಿರಾದಾರ ಹಾಗೂ ವಾರ್ತಾಇಲಾಖೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಇದ್ದರು.

ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಎ.ಆರ್.ಪ್ರಕಾಶ ನಿರೂಪಿಸಿದರು.

***********************************************