ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮುಖ್ಯಮಂತ್ರಿಗಳ ಮೊದಲ ʼರೈತ ಸ್ಪಂದನʼ ನಾಳೆ ಬೀದರ್ ನಲ್ಲಿ

ಮಾನ್ಯ ಮುಖ್ಯಮಂತ್ರಿ

ಬೆಂಗಳೂರು, ನವೆಂಬರ್ 14, 2018

-ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮಾಡಿದ ಘೋಷಣೆಯಂತೆ ಮುಖ್ಯಮಂತ್ರಿಗಳು ತಮ್ಮ ಮೊದಲ ʼರೈತ ಸ್ಪಂದನʼ ಕಾರ್ಯಕ್ರಮಕ್ಕೆ ನಾಳೆ
(15-11-2018) ಬೀದರ್ ನಲ್ಲಿ
ಚಾಲನೆ ನೀಡಲಿದ್ದಾರೆ.

-ಕೃಷಿ ಒಂದು ಲಾಭದಾಯಕ ಉದ್ಯಮ ಎಂಬ ಭಾವವನ್ನು ನಮ್ಮ ರೈತರ ಮನದಲ್ಲಿ ಮೂಡಿಸಿ, ಕೃಷಿಕರನ್ನು ಆಧುನಿಕ ತಂತ್ರಜ್ಞಾನದತ್ತ ಸೆಳೆದೊಯ್ಯುವುದು ರೈತ ಸ್ಪಂದನ ಕಾರ್ಯಕ್ರಮದ ಮೂಲ ಆಶಯ.

-ಆಗಸ್ಟ್ ತಿಂಗಳಿನಲ್ಲಿ ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ʼಭತ್ತ ನಾಟಿʼ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿಗಳು ಇದರ ಮುಂದುವರೆದ ಭಾಗವಾಗಿ ನಾಳೆ ಮಧ್ಯಾಹ್ನ 2.30ಕ್ಕೆ ಬೀದರ್ ಜಿಲ್ಲೆಯ ಚಿಟ್ಟಾ ಗ್ರಾಮದ ಪ್ರಗತಿಪರ ರೈತರ ತೋಟಕ್ಕೆ ಭೇಟಿ ನೀಡಲಿದ್ದಾರೆ.

-ಸಂಜೆ 4 ಗಂಟೆಗೆ ಬೀದರ್ ನ ರಂಗಮಂದಿರದಲ್ಲಿ ಆಯೋಜಿಸಿರುವ ರೈತ ಸ್ಪಂದನ ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲೆಯ ರೈತರೊಂದಿಗೆ ಸಂವಾದ ನಡೆಸುವರು. ಬೀದರ್ ಜಿಲ್ಲೆಯ ಪ್ರಗತಿಪರ ರೈತರ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಯಾರಿಸಿರುವ ಸಾಕ್ಷ್ಯಚಿತ್ರ ಹಾಗೂ ಸರ್ಕಾರ ರೈತರಿಗೆ ನೀಡುತ್ತಿರುವ ಯೋಜನೆಗಳ ಕುರಿತ ಕಿರುಚಿತ್ರವನ್ನು ಮುಖ್ಯಮಂತ್ರಿಗಳು ವೀಕ್ಷಿಸುವರು.

-ಮಿಶ್ರ ಬೆಳೆಯ ಪ್ರಯೋಗದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ರಾಯಚೂರು ಜಿಲ್ಲೆಯ ಪ್ರಗತಿಪರ ಕೃಷಿಕರಾದ ಕವಿತಾ ಉಮಾಶಂಕರ ಮಿಶ್ರಾ ಅವರು ಈ ಸಂದರ್ಭದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಬೀದರ್ ಜಿಲ್ಲೆಯ ಸುಮಾರು 800 ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಸಹಕಾರ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಬಂಡೆಪ್ಪ ಕಾಶೆಂಪೂರ, ಕೃಷಿ ಸಚಿವರಾದ ಎನ್. ಹೆಚ್.ಶಿವಶಂಕರ ರೆಡ್ಡಿ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಸಚಿವರಾದ ರಾಜಶೇಖರ ಬಿ.ಪಾಟೀಲ ಅವರು ಭಾಗವಹಿಸಲಿದ್ದಾರೆ.

***********************************************