ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ನಾಡಿನಲ್ಲಿ ಶಾಂತಿ ವಾತಾವರಣ ನಿರ್ಮಿಸಿ : ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

(ಮೈಸೂರು), ಅಕ್ಟೋಬರ್ 27, 2018

-ಪೊಲೀಸ್ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ, ವೃತ್ತಿಯಲ್ಲಿ ಪ್ರಾಮಾಣಿಕ, ನಿಷ್ಠೆಯಿಂದ ಕಾರ್ಯನಿರ್ವಹಿಸಿ. ಕಾನೂನು ರಕ್ಷಿಸಿ ನಾಡಿನಲ್ಲಿ ಶಾಂತಿಯ ವಾತಾವರಣ ನಿರ್ಮಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

-ಅವರು ಮೈಸೂರು ನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ, 34ನೇ ತಂಡದ ಪೊಲೀಸ್ ಉಪಾಧೀಕ್ಷಕ ಪ್ರಶಿಕ್ಷಣಾರ್ಥಿಗಳು ಹಾಗೂ 1 ನೇ ತಂಡದ ಸಹಾಯಕ ಕಾರಾಗೃಹ ಅಧೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

-ಶಿಕ್ಷಣಾರ್ಥಿಗಳಿಗೆ ಒಂದು ವರ್ಷದಿಂದ ಶಿಸ್ತುಬದ್ಧವಾಗಿ ಹಾಗೂ ಕಠಿಣ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ಮಾನಸಿಕವಾಗಿ ಸದೃಢಗೊಳಿಸಿ ತರಬೇತಿ ನೀಡಲಾಗಿದೆ. ಯಾವುದೇ ಒತ್ತಡಕ್ಕೆ ಮಣಿಯದೇ ಕಾರ್ಯನಿರ್ವಹಿಸಿ, ತರಬೇತಿಯ ನಂತರ ಸ್ಥಳ ನಿಯುಕ್ತಿಗೆ ರಾಜಕಾರಣಿಗಳ ಮನೆ ಬಾಗಿಲು ತಟ್ಟಬೇಡಿ. ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

-ಶ್ರದ್ಧೆ ಮತ್ತು ನಿಷ್ಠೆ ಇದ್ದರೆ, ಯಾವುದೇ ರಾಜಕಾರಣಿ ಹಾಗೂ ಸರ್ಕಾರ ನಿಮ್ಮನ್ನು ತೊಂದರೆಗೆ ಸಿಲುಕಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಹಲವಾರು ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರು ಎಷ್ಟೇ ದೊಡ್ಡವರಿರಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ ಕಠಿಣ ನಿರ್ಧಾರ ಮಾಡುವ ದೃಢ ಸಂಕಲ್ಪವನ್ನು ಇಂದಿನಿಂದಲೇ ರೂಢಿಸಿಕೊಳ್ಳಿ ಎಂದರು.

-ಸರ್ಕಾರ ಹಾಗೂ ಜನಪ್ರತಿನಿಧಿಗಳು ಬದಲಾಗುತ್ತಾರೆ. ಪೊಲೀಸ್ ಅಧಿಕಾರಿಗಳಾಗಿ ಅಧಿಕಾರ ಸ್ವೀಕರಿಸುವ ಪ್ರಶಿಕ್ಷಣಾರ್ಥಿಗಳು ಸುದೀರ್ಘವಾಗಿ ವೃತ್ತಿಯಲ್ಲಿರುತ್ತಾರೆ. ವೃತ್ತಿ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು, ಯಾವುದೇ ಲೋಪವಿಲ್ಲದೇ ಕಾರ್ಯನಿರ್ವಹಿಸಿ ನಾಡಿನ ರಕ್ಷಣೆ ಮಾಡಿ ಜನತೆಗೆ ಸುಭದ್ರ ವಾತಾವರಣ ನೀಡಿ ಎಂದರು.

-ಪ್ರಾಮಾಣಿಕವಾಗಿ ಹಾಗೂ ಉತ್ತಮವಾಗಿ ಕೆಲಸ ನಿರ್ವಹಿಸುವವರಿಗೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ತರಬೇತಿಯ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಲ್ಲಿ ದೇಶ ಪ್ರೇಮ, ದೈಹಿಕ ಹಾಗೂ ಮಾನಸಿಕವಾಗಿ ಶಕ್ತಿಯನ್ನು ಬೆಳಸಲಾಗಿದೆ. ಇದನ್ನು ವೃತ್ತಿ ಜೀವನದಲ್ಲೂ ಉಳಿಸಿಕೊಳ್ಳಿ ಯಾವುದೇ ಸಮಾಜಘಾತುಕ ಶಕ್ತಿಗಳಿಗೆ ಬಲಿಯಾಗಿ ಒಳ್ಳೆತನವನ್ನು ಕಳೆದುಕೊಳ್ಳಬೇಡಿ. ವೃತ್ತಿ ಜೀವನದಲ್ಲಿ ಜನಸಾಮಾನ್ಯರಿಗೆ ನೆಮ್ಮದಿಯಾಗಿ ಬದುಕಲು ಬೇಕಿರುವ ವಾತಾವರಣವನ್ನು ನಿರ್ಮಿಸಿ ಎಂದು ತಿಳಿಸಿದರು.

-ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್, ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದ ನೀಲಮಣಿ ಎನ್ ರಾಜು, ತರಬೇತಿ ವಿಭಾಗ ಪೊಲೀಸ್ ಮಹಾ ನಿರ್ದೇಶಕರಾದ ಪದಮ್ ಕುಮಾರ್ ಗರ್ಗ್, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಮತ್ತು ಕಾರಾಗೃಹಗಳ ಮಹಾನಿರೀಕ್ಷಕರಾದ ಎನ್. ಎಸ್. ಮೇಘರಿಕ್, ಪೊಲೀಸ್ ಮಹಾನಿರೀಕ್ಷಕರು ಮತ್ತು ನಿರ್ದೇಶಕರಾದ ವಿಪುಲ್ ಕುಮಾರ್, ತರಬೇತಿ ಪೊಲೀಸ್ ಮಹಾನಿರೀಕ್ಷಕರಾದ ರವಿ ಎಸ್, ಐಜಿಪಿ ಕೆ.ವಿ ಶರತ್‍ಚಂದ್ರ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಡಾ|| ಸುಬ್ರಮಣ್ಯೇಶ್ವರ್ ರಾವ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಮಿತ್ ಸಿಂಗ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಮಾನ್ಯ ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

***********************************************