ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮೈತ್ರಿ ಸರ್ಕಾರದ 5 ತಿಂಗಳ ಆಡಳಿತ: ಒಂದು ಅವಲೋಕನ - ಮಾಧ್ಯಮ ಸಂವಾದದಲ್ಲಿ ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ಬೆಂಗಳೂರು, ಅಕ್ಟೋಬರ್ 23, 2018

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮೈತ್ರಿ ಸರ್ಕಾರದ ಸಾಧನೆ, ಸವಾಲುಗಳ ಕುರಿತು ಮಾಧ್ಯಮ ಸಂವಾದ ನಡೆಸಿದರು.

-2018-19ನೇ ಸಾಲಿನ ಆಯವ್ಯಯ ಭಾಷಣಗಳಲ್ಲಿ ಮಾಡಿರುವ ಒಟ್ಟು 460 ಘೋಷಣೆಗಳಲ್ಲಿ ಬಹುತೇಕ ಘೋಷಣೆಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಅಂದರೆ ಈ ಕಾರ್ಯಕ್ರಮಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ.

ಮಾನ್ಯ ಮುಖ್ಯಮಂತ್ರಿ

ರಾಜ್ಯದ ಹಣಕಾಸು ಸ್ಥಿತಿ: ನಿಗದಿತ ಗುರಿಗಿಂತ ಶೇ. 11 ರಷ್ಟು ಹೆಚ್ಚು ತೆರಿಗೆ ಸಂಗ್ರಹ

-ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿದ್ದು, ಸೆಪ್ಟೆಂಬರ್ ಅಂತ್ಯದ ವರೆಗೆ 75,634 ಕೋಟಿ ರೂ. ಗಳಷ್ಟು ವಿವಿಧ ತೆರಿಗೆಗಳ ಸಂಗ್ರಹವಾಗಿದ್ದು, ಶೇ. 11.4 ರಷ್ಟು ಹೆಚ್ಚಳವಾಗಿದೆ.

-ಚುನಾವಣೆಯ ಹಿನ್ನೆಲೆಯಲ್ಲಿ ಆಯವ್ಯಯ ವೆಚ್ಚ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ. 38 ರಷ್ಟಾಗಿದ್ದು, 2013-14 ರಲ್ಲಿ ಈ ಅವಧಿಯಲ್ಲಿ ಶೇ. 37 ರಷ್ಟು ವೆಚ್ಚವಾಗಿತ್ತು. ಮಾರ್ಚ್ ವೇಳೆಗೆ ನಿರೀಕ್ಷಿತ ಗುರಿ ತಲುಪುವ ಆಶಾಭಾವನೆ ಇದೆ.

--------------------------------

ಮಾನ್ಯ ಮುಖ್ಯಮಂತ್ರಿ

--------------------------------

ಸಾಲ ಮನ್ನಾ ಯೋಜನೆ: ಬ್ಯಾಂಕುಗಳಿಂದ ಮಾಹಿತಿ ಸಂಗ್ರಹ- 15 ಬ್ಯಾಂಕುಗಳಿಂದ 10 ಲಕ್ಷ ರೈತರ ಬೆಳೆ ಸಾಲ ಮಾಹಿತಿ ಲಭ್ಯ

-ಸಾಲ ಮನ್ನಾ ಪ್ರಕ್ರಿಯೆ ಪ್ರಾರಂಭವಾಗಿದ್ದು, ಈಗಾಗಲೇ 15 ಬ್ಯಾಂಕುಗಳಿಂದ 10 ಲಕ್ಷ ರೈತರ ಬೆಳೆ ಸಾಲಗಳ ಮಾಹಿತಿ ಲಭ್ಯವಾಗಿದೆ.

-ರೈತರಿಂದಲೂ ಮಾಹಿತಿ ಪಡೆಯಲಾಗುತ್ತಿದೆ, ಎಲ್ಲ ಅರ್ಹ ರೈತರಿಗೆ ಪ್ರಯೋಜನ ದೊರಕಿಸಲು ಸಾಲಗಳ ಮಾಹಿತಿಯನ್ನು ಭೂಮಿ ನಿರ್ವಹಣಾ ಕೋಶದ ನೆರವಿನಿಂದ ಅಭಿವೃದ್ಧಿ ಪಡಿಸಿದ ತಂತ್ರಾಂಶದ ಸಹಾಯದೊಂದಿಗೆ ಪರಿಶೀಲಿಸಲಾಗುತ್ತದೆ.

-ಸಹಕಾರಿ ಬ್ಯಾಂಕುಗಳ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ವಾಣಿಜ್ಯ ಬ್ಯಾಂಕುಗಳ ಅಧಿಕಾರಿಗಳಿಗೆ ಮುಂದಿನವಾರ ತರಬೇತಿ ನೀಡಲಾಗುವುದು.

-ಸಹಕಾರಿ ಬ್ಯಾಂಕುಗಳಲ್ಲಿ ಕಂದಾಯ ಇಲಾಖೆ ಅಭಿವೃದ್ಧಿ ಪಡಿಸಿರುವ ತಂತ್ರಾಂಶದಲ್ಲಿ ಮಾಹಿತಿ ಅಪ್‍ಲೋಡ್ ಮಾಡುವ ಕಾರ್ಯಕ್ರಮ ಪ್ರಗತಿಯಲ್ಲಿದೆ.

-ಸರ್ಕಾರವು ಸಾಲಮನ್ನಾ ಯೋಜನೆಗೆ ಪ್ರತ್ಯೇಕ ಸಂಪನ್ಮೂಲ ಕ್ರೋಢೀಕರಣ ವ್ಯವಸ್ಥೆ ರೂಪಿಸಿದೆ. ಆಯವ್ಯಯದ ಇತರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಇದರಿಂದ ಯಾವುದೇ ಅಡ್ಡಿಯಾಗುವುದಿಲ್ಲ ಎಂಬುದನ್ನು ಮತ್ತೊಮ್ಮೆ ಮುಖ್ಯಮಂತ್ರಿ ಅವರು ಸ್ಪಷ್ಟ ಪಡಿಸಿದರು.

ಮಾನ್ಯ ಮುಖ್ಯಮಂತ್ರಿ

--------------------------------

ರಾಷ್ಟ್ರಪತಿಗಳ ಅಂಗಳದಲ್ಲಿ ಋಣ ಪರಿಹಾರ ಕಾಯ್ದೆ 2018

-ಸಣ್ಣ ರೈತರು, ಕೃಷಿ ಕೂಲಿ ಕಾರ್ಮಿಕರು, ಸಣ್ಣ ಪುಟ್ಟ ವ್ಯಾಪಾರಿಗಳು, ಬಡ ಜನರಿಗೆ ಬಡ್ಡಿ ವ್ಯಾಪಾರಿಗಳು, ಲೇವಾದೇವಿದಾರರ ಕಿರುಕುಳದಿಂದ ಮುಕ್ತಿ ದೊರಕಿಸಲು ಋಣ ಪರಿಹಾರ ಕಾಯ್ದೆ 2018ನ್ನು ರೂಪಿಸಲಾಗಿದ್ದು, ರಾಷ್ಟ್ರಪತಿಗಳ ಅಂಕಿತವನ್ನು ನಿರೀಕ್ಷಿಸಲಾಗುತ್ತಿದೆ. ಕಾಯ್ದೆಯ ರೂಪುರೇಷೆಗಳನ್ನು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಹಾಗೂ ಗೃಹ ಸಚಿವರಿಗೆ ಖುದ್ದು ಭೇಟಿ ಮಾಡಿ ವಿವರಿಸಲಾಗಿದೆ.

ಮಾನ್ಯ ಮುಖ್ಯಮಂತ್ರಿ

--------------------------------

ಕೊಡಗು ಅಭಿವೃದ್ಧಿಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕೊಡಗು ಪುನರ್‍ನಿರ್ಮಾಣ ಪ್ರಾಧಿಕಾರ ರಚನೆ

-ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದು, ಅವರ ಇಚ್ಛೆಗೆ ಅನುಗುಣವಾಗಿ ಮನೆ ನಿರ್ಮಿಸಿ ಕೊಡಲಾಗುವುದು.

-ಈ ವರೆಗೆ ಕೊಡಗು ಜಿಲ್ಲೆಗೆ ರಾಜ್ಯ ಸರ್ಕಾರ 127 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿದೆ.

-ಪ್ರಕೃತಿಯ ಕೋಪಕ್ಕೆ ಜರ್ಝರಿತವಾಗಿರುವ ಕೊಡಗು ಜಿಲ್ಲೆಯ ಪುನರ್ ನಿಮಾಣ ಸರ್ಕಾರದ ಆದ್ಯತೆ. ಇದನ್ನು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

-ಕೊಡಗು ಜಿಲ್ಲೆಯ ಸಂಕಷ್ಟಕ್ಕೆ ಸಾರ್ವಜನಿಕರು ಅಭೂತಪೂರ್ವ ಬೆಂಬಲ ನೀಡಿದ್ದು, ಈ ವರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 187.16 ಕೋಟಿ ರೂ. ಗಳ ದೇಣಿಗೆ ಹರಿದುಬಂದಿದೆ. ಇನ್‍ಫೋಸಿಸ್ ಪ್ರತಿಷ್ಠಾನವು 25 ಕೋಟಿ ರೂ. ಗಳ ನೆರವು ನೀಡುವುದಾಗಿ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಸುಧಾ ಮೂರ್ತಿ ಅವರು ಘೋಷಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿ

--------------------------------

ಯಶಸ್ವಿ ದಸರಾ: ಮುಂದಿನ ಬಾರಿ ಪ್ರವಾಸೋದ್ಯಮ ಕೇಂದ್ರಿತ ದಸರಾ- ನೀಲನಕ್ಷೆ ತಯಾರಿಗೆ ಸೂಚನೆ: ನವೆಂಬರ್ 1 ರಿಂದ ಜಾನಪದ ಜಾತ್ರೆಗೆ ಮರುಚಾಲನೆ

-ಮೈಸೂರು ದಸರಾ ಉತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ, ಯಶಸ್ವಿಯಾಗಿ ನೆರವೇರಿಸಲಾಯಿತು. ದಸರಾ ಉತ್ಸವವನ್ನು ಉದ್ಘಾಟಿಸಿದ ಇನ್‍ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು 10 ದಿನಗಳಲ್ಲೂ ಮೈಸೂರಿನಲ್ಲೇ ಇದ್ದು ವಿವಿಧ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು ಈ ಬಾರಿಯ ವಿಶೇಷ.

-ಈ 10 ದಿನಗಳಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿರುವುದಾಗಿ ಅಂದಾಜಿಸಲಾಗಿದೆ. ದಸರಾ ಮೆರವಣಿಗೆಯನ್ನು ವೀಕ್ಷಿಸಲು 10-12 ಲಕ್ಷ ಪ್ರವಾಸಿಗರು ಆಗಮಿಸಿದ್ದರು.

-ಮುಂದಿನ ವರ್ಷ ದಸರಾವನ್ನು ಇನ್ನಷ್ಟು ವೈವಿಧ್ಯಮಯವಾಗಿ, ಪ್ರವಾಸೋದ್ಯಮ ಕೇಂದ್ರಿತವಾಗಿ ರೂಪಿಸಲು ನೀಲನಕ್ಷೆ ಸಿದ್ಧಪಡಿಸುವಂತೆ ಮೈಸೂರು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.

-ಅಳಿವಿನಂಚಿಗೆ ಸರಿಯುತ್ತಿರುವ ಜಾನಪದ ಕಲೆಗಳನ್ನು ಮತ್ತೆ ಮುನ್ನೆಲೆಗೆ ತರಲು ಹಾಗೂ ಕಲಾವಿದರಿಗೆ ಬೆಂಬಲ ನೀಡಲು ನವೆಂಬರ್ 1 ರಿಂದ ಜಾನಪದ ಜಾತ್ರೆಯನ್ನು ಮತ್ತೆ ಪ್ರಾರಂಭಿಸಲಾಗುತ್ತಿದೆ. ರಾಜ್ಯದ ಆರು ಸ್ಥಳಗಳಲ್ಲಿ ಅಂದು ಜಾನಪದ ಜಾತ್ರೆ ಏರ್ಪಡಿಸಲಾಗುತ್ತಿದೆ.

ಮಾನ್ಯ ಮುಖ್ಯಮಂತ್ರಿ

--------------------------------

ಕೈಗಾರಿಕಾ ಕ್ಲಸ್ಟರ್‍ಗಳ ಸ್ಥಾಪನೆಗೆ ಉದ್ಯಮಿಗಳ ಬೆಂಬಲ- ವಿಷನ್ ಗ್ರೂಪ್‍ಗಳಿಂದ ಅಧ್ಯಯನ- ಶೀಘ್ರವೇ ವರದಿ ಸಲ್ಲಿಕೆ

-ರಾಜ್ಯ ಸರ್ಕಾರವು ‘ಕಾಂಪೀಟ್ ವಿತ್ ಚೈನಾ’ ಎಂಬ ಯೋಜನೆಯಡಿ 9 ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕಾ ಕ್ಲಸ್ಟರ್‍ಗಳನ್ನು ಸ್ಥಾಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಕ್ಲಸ್ಟರ್‍ಗೆ ಸಂಬಂಧಿಸಿದಂತೆ ಮುಂಚೂಣಿಯ ಉದ್ಯಮಿಗಳನ್ನೊಳಗೊಂಡ ವಿಷನ್ ಗ್ರೂಪ್ ರಚಿಸಲಾಗಿದೆ.

-ಈಗಾಗಲೇ ಅವರೊಂದಿಗೆ ಸಂವಾದ ನಡೆಸಲಾಗಿದೆ. ಈ ತಂಡದ ಸದಸ್ಯರು, ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ, ಉದ್ಯಮ ಸ್ಥಾಪನೆಗೆ ಪೂರಕ ವಾತಾವರಣ ನಿರ್ಮಿಸಲು ಅಗತ್ಯ ಸಲಹೆ, ಮಾರ್ಗದರ್ಶನ ನೀಡಲಿದೆ. ಅದರಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ.

-ಪ್ರತಿ ವಲಯದಲ್ಲಿ 5000 ಕೋಟಿ ರೂ. ಹೂಡಿಕೆ ನಿರೀಕ್ಷೆಯಿಂದ ತಲಾ ಒಂದು ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ.

ಮಾನ್ಯ ಮುಖ್ಯಮಂತ್ರಿ

--------------------------------

ಬೆಂಗಳೂರು ಅಭಿವೃದ್ಧಿಗೆ ವಿಶೇಷ ಆದ್ಯತೆ: ಪೆರಿಫೆರಲ್ ರಿಂಗ್ ರಸ್ತೆ, ಎಲಿವೇಟೆಡ್ ಕಾರಿಡಾರ್ ಯೋಜನೆ ಜಾರಿಗೆ ಸಿದ್ಧತೆ- ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ನಂತರ ಯೋಜನೆ ಜಾರಿ

-ಸಂಚಾರ ದಟ್ಟಣೆ ನಿವಾರಣೆಗೆ ರಸ್ತೆಗಳ ದುರಸ್ತಿ, ಅಭಿವೃದ್ಧಿ, ಮೇಲು ಸೇತುವೆ ನಿರ್ಮಾಣ, ಮೆಟ್ರೋ 3ನೇ ಹಂತದ ಯೋಜನೆಯ ಕಾರ್ಯಸಾಧ್ಯತೆ ಪರಿಶೀಲನೆ, ಎಲೆವೇಟೆಡ್ ಕಾರಿಡಾರ್ ನಿರ್ಮಾಣ ಇತ್ಯಾದಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

-ಉಪಮುಖ್ಯಮಂತ್ರಿಗಳು ನಿಯಮಿತವಾಗಿ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸುವುದಲ್ಲದೆ, ಖುದ್ದು ಸ್ಥಳ ಪರಿಶೀಲನೆ ನಡೆಸುವ ಮೂಲಕ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ.

-ಎಲಿವೇಟೆಡ್ ಕಾರಿಡಾರ್: ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆಗೊಳಿಸಲು 14540 ಕೋಟಿ ರೂ ಅಂದಾಜು ವೆಚ್ಚದಲ್ಲಿ ಒಟ್ಟು 102 ಕಿಲೋಮೀಟರ್ ಉದ್ದದ ಆರು ಕಾರಿಡಾರ್‍ಗಳನ್ನು ಐದು ಹಂತಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

-ಪ್ರಸ್ತುತ ಈ ಯೋಜನೆಯ ಎನ್ವಿರಾನ್‍ಮೆಂಟ್ ಇಂಪ್ಯಾಕ್ಟ್ ಅಸೆಸ್‍ಮೆಂಟ್ ವರದಿ ತಯಾರಿಸಲಾಗುತ್ತಿದೆ.

-ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲಾಗುವುದು; ನಂತರವೇ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.

-ಪೆರಿಫೆರಲ್ ರಿಂಗ್ ರಸ್ತೆ: ಸುಮಾರು 6500 ಕೋಟಿ ರೂ. ವೆಚ್ಚದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಈ ಯೋಜನೆಗೆ ಹೈಬ್ರಿಡ್ ಆನ್ಯುಟಿ ಮಾದರಿಯಲ್ಲಿ ಸಂಪನ್ಮೂಲ ಕ್ರೋಢೀಕರಣ ಮಾಡಲಾಗುವುದು.

-ಭೂಸ್ವಾಧೀನ ಪ್ರಕ್ರಿಯೆಗೆ ಇಂದು ಅತಿ ಹೆಚ್ಚು ಅನುದಾನ ಅಗತ್ಯವಿದೆ. ಇದನ್ನು ಕಡಿಮೆಗೊಳಿಸಲು ಇರುವ ವಿವಿಧ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.

-ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಇರುವ ಅಡೆತಡೆಗಳನ್ನು ನಿವಾರಿಸಲು ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

ಮಾನ್ಯ ಮುಖ್ಯಮಂತ್ರಿ

--------------------------------

ಸುಸ್ಥಿರ ಕೃಷಿಗೆ ಇಸ್ರೇಲ್ ಮಾದರಿ ಕೃಷಿ ಪದ್ಧತಿ: ನವೆಂಬರ್ 1 ರಂದು ಸಮಿತಿ ವರದಿ ಸಲ್ಲಿಕೆ

-ಇಸ್ರೇಲ್ ಮಾದರಿ ಕೃಷಿ ಪದ್ಧತಿ: ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಅಧ್ಯಯನ ನಡೆಸಿ, ಅನುಷ್ಠಾನದ ವಿಧಾನದ ಕುರಿತು ವರದಿ ನೀಡಲು ಸಹಕಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು ನವೆಂಬರ್ 1 ರಂದು ವರದಿ ಸಲ್ಲಿಸಲಿದೆ.

-ಈಗಾಗಲೇ ಕೃಷಿ ಸಚಿವರು, ತೋಟಗಾರಿಕೆ ಸಚಿವರು ಹಾಗೂ ಅಧಿಕಾರಿಗಳನ್ನೊಳಗೊಂಡ ನಿಯೋಗವು ಸೆಪ್ಟೆಂಬರ್ ತಿಂಗಳಿನಲ್ಲಿ ಇಸ್ರೇಲ್‍ಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ.

-ಸಮಿತಿಯು 7 ಸಭೆಗಳನ್ನು ನಡೆಸಿದೆಯಲ್ಲದೆ 7 ಬಾರಿ ಕ್ಷೇತ್ರ ಭೇಟಿ ಮಾಡಿದ್ದು, ಕೃಷಿ ಮತ್ತು ತೋಟಗಾರಿಕಾ ಸಚಿವರೊಂದಿಗೆ ಶಿಫಾರಸಿನ ಕುರಿತು ಚರ್ಚೆ ನಡೆಸಿದೆ. ನವೆಂಬರ್ 1 ರಂದು ವರದಿ ಸಲ್ಲಿಸಲಿದ್ದು, ನವೆಂಬರ್ ತಿಂಗಳಲ್ಲಿಯೇ ಸಚಿವ ಸಂಪುಟ ಸಭೆಯಲ್ಲಿಯೂ ಈ ಕುರಿತು ಚರ್ಚಿಸಿ, ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು.

ಮಾನ್ಯ ಮುಖ್ಯಮಂತ್ರಿ

--------------------------------

ಶಿಕ್ಷಣಕ್ಕೆ ಆದ್ಯತೆ: ಸಾವಿರ ಕೋಟಿ ವೆಚ್ಚದಲ್ಲಿ ಶಾಲೆ-ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿ- ಕ್ರಿಯಾ ಯೋಜನೆಗೆ ಅನುಮೋದನೆ

-ಸಾವಿರ ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಶಾಲೆ-ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗುತ್ತಿದೆ.

-ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಮೂಲಸೌಲಭ್ಯಕ್ಕೆ 450 ಕೋಟಿ ರೂ. ಗಳ ಕ್ರಿಯಾಯೋಜನೆಗೆ ಮಂಜೂರಾತಿ ನೀಡಲಾಗಿದ್ದು, ಈ ವರ್ಷ 150 ಕೋಟಿ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು. 1521 ಶಾಲೆ/ ಪದವಿಪೂರ್ವ ಕಾಲೇಜುಗಳಲ್ಲಿ 2711 ಕೊಠಡಿಗಳು, 86 ಪ್ರಯೋಗಾಲಯಗಳು ಹಾಗೂ 154 ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ.

-66 ಸರ್ಕಾರಿ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‍ಗಳು, 8 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಮೂಲಸೌಕರ್ಯಕ್ಕೆ 470.37 ಕೋಟಿ ರೂ. ಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ.

-ಪದವೀಧರರ ಎಂಪ್ಲಾಯೇಬಿಲಿಟಿ ಅನುಪಾತ ಅತಿ ಕಡಿಮೆ ಇರುವುದನ್ನು ಗಮನಿಸಿರುವ ಸರ್ಕಾರ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಮೂರು ಕೌಶಲ್ಯಾಧಾರಿತ ವಿಶ್ವವಿದ್ಯಾಲಯ ಸ್ಥಾಪನೆಗೆ ತೀರ್ಮಾನ ಕೈಗೊಂಡಿದೆ. ಆಯವ್ಯಯದಲ್ಲಿ 9 ಕೋಟಿ ರೂ. ಅನುದಾನ ನಿಗದಿ ಪಡಿಸಲಾಗಿದೆ. ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

ಮಾನ್ಯ ಮುಖ್ಯಮಂತ್ರಿ

--------------------------------

‘ಶಾಲಾ ಸಂಪರ್ಕ ಸೇತು’ ಹೊಸ ಯೋಜನೆ

-ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ತೋಡು, ಹಳ್ಳ-ಕೊಳ್ಳಗಳನ್ನು ದಾಟಲು ಬಳಸುವ ಅಪಾಯಕಾರಿ ಸ್ಥಿತಿಯಲ್ಲಿರುವ ಸಣ್ಣ ತೂಗುಸೇತುವೆ, ಕಾಲು ಸಂಕಗಳ ಬದಲಿಗೆ ಶಾಶ್ವತ ಸೇತುವೆಗಳನ್ನು ನಿರ್ಮಿಸಲು ಶಾಲಾ ಸಂಪರ್ಕ ಸೇತು ಯೋಜನೆಯನ್ನು ಹೊಸದಾಗಿ ರೂಪಿಸಲಾಗಿದೆ.

-ಮೊದಲ ಹಂತದಲ್ಲಿ ಕರಾವಳಿ ಭಾಗದ 3 ಜಿಲ್ಲೆಗಳು ಹಾಗೂ ಮಲೆನಾಡು ಭಾಗದ 4 ಜಿಲ್ಲೆಗಳ ಒಟ್ಟು 444 ತೂಗುಸೇತುವೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ಶಾಶ್ವತ ಸಂಪರ್ಕ ಸೇತುವೆ ನಿರ್ಮಿಸಲಾಗುವುದು.

-ಇದಕ್ಕಾಗಿ ಪ್ರಸಕ್ತ ವರ್ಷ 100 ಕೋಟಿ ರೂ. ಅನುದಾನ ಒದಗಿಸಲಾಗಿದೆ.

-ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಚುರುಕು: ರಾಜ್ಯದಲ್ಲಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಇರುವ ಅಡೆತಡೆಗಳನ್ನು ನಿವಾರಿಸಲು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಭೆಗಳನ್ನು ಕಾಲ ಕಾಲಕ್ಕೆ ನಡೆಸಲಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ, ವಿದ್ಯುತ್ ಕಂಬಗಳ ಸ್ಥಳಾಂತರ ಮತ್ತಿತರ ಸಮಸ್ಯೆಗಳನ್ನು ಸಮನ್ವಯ ವಹಿಸಿ ಶೀಘ್ರವಾಗಿ ಪರಿಹರಿಸಿ ಕ್ರಮ ಕೈಗೊಳ್ಳಲು ಇದರಿಂದ ಅನುಕೂಲವಾಗಿದೆ.

-ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ 3 ರ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಹಂತ 4 ರಡಿ 3,500 ಕೋಟಿ ರೂ ವೆಚ್ಚದಲ್ಲಿ 2720 ಕಿ.ಮೀ. ಉದ್ದದ ರಸ್ತೆ ಸುಧಾರಣೆ ಕೈಗೊಳ್ಳಲು ಉದ್ದೇಶಿಸಿದೆ.

ಮಾನ್ಯ ಮುಖ್ಯಮಂತ್ರಿ

--------------------------------

ದೆಹಲಿ ಭೇಟಿ: ಕೇಂದ್ರದಿಂದ ಹೆಚ್ಚಿನ ನೆರವು ಪಡೆಯುವ ಪ್ರಯತ್ನ, ವಿವಿಧ ಸಮಸ್ಯೆಗಳಿಗೆ ಪರಿಹಾರ

-ಒಟ್ಟು ಏಳು ಬಾರಿ ದೆಹಲಿಗೆ ಭೇಟಿ ನೀಡಿದ್ದು, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ವಿಷಯಗಳಲ್ಲಿ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಉತ್ತಮ ಸ್ಪಂದನೆ ದೊರೆತಿದೆ.

-ಬೆಂಗಳೂರು ನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಭೂಮಿ ಹಸ್ತಾಂತರಕ್ಕೆ ಇರುವ ತೊಡಕುಗಳನ್ನು ಕೇಂದ್ರ ರಕ್ಷಣಾ ಸಚಿವರಿಗೆ ಮನವರಿಕೆ ಮಾಡಿ, ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿ, ಇರುವ ತೊಡಕುಗಳನ್ನು ನಿವಾರಿಸಲಾಗಿದೆ.

-ಮೊದಲ ಬಾರಿಗೆ ಹೆಸರು ಬೆಳೆಗೆ ಸಕಾಲದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸಲು ಸಾಧ್ಯವಾಗಿದೆ.

-ಅಲ್ಲದೆ ಹಿಂದಿನ ಬಾಕಿ 954 ಕೋಟಿ ರೂ. ಬಿಡುಗಡೆಗೂ ಅಗತ್ಯ ದಾಖಲೆ, ಮಾಹಿತಿಗಳನ್ನು ಒದಗಿಸಲಾಗಿದ್ದು, ಶೀಘ್ರವೇ ಈ ಮೊತ್ತ ಬಿಡುಗಡೆಯಾಗುವ ನಿರೀಕ್ಷೆ ಇದೆ.

-ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಮೆಗಾ ಡೈರಿ ಸ್ಥಾಪನೆಗೆ ನೆರವು, ಕೃಷಿ ಮಾರುಕಟ್ಟೆ ಉನ್ನತೀಕರಣ ಮತ್ತಿತರ ವಿಷಯಗಳ ಕುರಿತು ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ.

-ಇದಲ್ಲದೆ ಇತ್ತೀಚೆಗೆ ಮೈಸೂರು ದಸರಾ ಉತ್ಸವಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿ, ರಾಜ್ಯದ ಕಾಫಿ, ತಂಬಾಕು ಹಾಗೂ ಏಲಕ್ಕಿ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಿದ್ದು, ಇವುಗಳ ಪರಿಹಾರಕ್ಕೆ ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ.

ಮಾನ್ಯ ಮುಖ್ಯಮಂತ್ರಿ

--------------------------------

ವಿಶೇಷ ಘಟಕ ಯೋಜನೆಯಡಿ ದಾಖಲೆಯ 29 ಸಾವಿರ ಕೋಟಿ ಅನುದಾನ ನಿಗದಿ

-ಎಸ್‍ಸಿಪಿ / ಟಿಎಸ್‍ಪಿ ಯೋಜನೆಯಡಿ ದಾಖಲೆಯ 29 ಸಾವಿರ ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಅನುದಾನದ ಸದ್ಬಳಕೆಗೆ ಮೊದಲ ಬಾರಿ ಸ್ಪಷ್ಟ ಮಾರ್ಗಸೂಚಿ ರಚನೆ ಮಾಡಲಾಗಿದ್ದು, ಅನುದಾನ ವೆಚ್ಚ ಮಾಡದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವ ನಿಯಮವನ್ನು ಈ ಬಾರಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.

-ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲಿ ವಿದ್ಯಾರ್ಥಿ ವೇತನ ಪಾವತಿಗೆ ಕ್ರಮ ವಹಿಸಲಾಗಿದ್ದು, ಇದರಿಂದ 56.69 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ. ಬಡ ಗರ್ಭಿಣಿ.

ಬಾಣಂತಿಯರಿಗೆ ಮಾಸಿಕ ಸಾವಿರ ರೂ. ನೆರವು.

-ಬಿಪಿಎಲ್ ಕುಟುಂಬಗಳ ಮಹಿಳೆಯರಿಗೆ ಹೆರಿಗೆಗೆ ಮುನ್ನ 3 ತಿಂಗಳು ಹಾಗೂ ಹೆರಿಗೆ ನಂತರ 3 ತಿಂಗಳು ಒಟ್ಟು 6 ತಿಂಗಳ ಕಾಲ ಮಾಸಿಕ ಸಾವಿರ ರೂ. ನೆರವು ನೀಡುವ ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆ ನವೆಂಬರ್ 1 ರಿಂದ ಜಾರಿಗೆ ಬರಲಿದೆ. 350 ಕೋಟಿ ರೂ. ಅನುದಾನ ಮೀಸಲಿರಿಸಿದೆ.

ಮಾನ್ಯ ಮುಖ್ಯಮಂತ್ರಿ

--------------------------------

ಜನತಾ ದರ್ಶನ- 17 ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕಾರ, ಶೇ. 50ರಷ್ಟು ಇತ್ಯರ್ಥ

-ಜೂನ್ 1 ರಿಂದ ಈ ವರೆಗೆ ಸಾರ್ವಜನಿಕರಿಂದ 17,723 ಮನವಿಗಳನ್ನು ಸ್ವೀಕರಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ನಡೆಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದ್ದು, ಹಲವು ಜಿಲ್ಲಾಧಿಕಾರಿಗಳು ಕ್ರಮ ವಹಿಸಿದ್ದಾರೆ.

-ಕಳೆದ 4 ತಿಂಗಳಲ್ಲಿ ಸ್ವೀಕರಿಸಿದ ಮನವಿಗಳಲ್ಲಿ ಶೇ. 50 ರಷ್ಟು ಇತ್ಯರ್ಥಪಡಿಸಲಾಗಿದೆ.

ಬೆಂಗಳೂರಿನಲ್ಲಿ ಸೆಪ್ಟೆಂಬರ್ ಕೊನೆಯ ವಾರ ಉದ್ಯೋಗ ಮೇಳ ಯಶಸ್ವಿಯಾಗಿ ಏರ್ಪಡಿಸಲಾಯಿತು.

-ಎಲ್ಲ ಜಿಲ್ಲೆಗಳಲ್ಲೂ ಉದ್ಯೋಗ ಮೇಳ ಏರ್ಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

-ಈ ವರೆಗೆ 10ಕ್ಕೂ ಹೆಚ್ಚು ಜಿಲ್ಲೆಗಳಿಗೆ ಭೇಟಿ ನೀಡಿದ್ದು, 6 ಜಿಲ್ಲಾಡಳಿತಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇತರ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲಾಗುವುದು.

ಮಾನ್ಯ ಮುಖ್ಯಮಂತ್ರಿ

***********************************************