ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಕೊಡಗು ಪುನರ್ ನಿರ್ಮಾಣಕ್ಕೆ ಪ್ರಾಧಿಕಾರ ಸ್ಥಾಪನೆ - ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ಮಡಿಕೇರಿ (ಕೊಡಗು), ಅಕ್ಟೋಬರ್ 17, 2018

-ಪ್ರಾಕೃತಿಕ ವಿಕೋಪದಿಂದ ನಲುಗಿರುವ ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

-ಅವರು ನಗರದ ಗಾಂಧೀ ಮೈದಾನದಲ್ಲಿ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೊಳಗಾಗಿರುವ ಕೊಡಗು ಜಿಲ್ಲೆಯ ಸಂತ್ರಸ್ಥರೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಕೊಡಗಿನ ಪುನರ್ ನಿರ್ಮಾಣಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸಲು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿ, ಪ್ರಾಧಿಕಾರ ರಚಿಸಲಾಗುವುದು. ಇದರಿಂದ ಪುನರ್ ನಿರ್ಮಾಣ ಕಾರ್ಯಕ್ರಮಗಳಿಗೆ ಇನ್ನಷ್ಟು ವೇಗ ಸಿಕ್ಕಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

-ಇದುವರೆಗೆ ಕೊಡಗು ಜಿಲ್ಲೆಗೆ 127 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಕೊಡಗು ಪರಿಹಾರ ನಿಧಿಗೆ ಬಂದ ಹಣವನ್ನು ಸಂಪೂರ್ಣವಾಗಿ ಸಂತ್ರಸ್ತರ ಬದುಕು ಬದಲಾಯಿಸಲು ಹಾಗೂ ಅವರ ಪುನರ್ವಸತಿಗೆ ಬಳಕೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಇದರ ದುರ್ಬಳಕೆ ಅವಕಾಶ ನೀಡುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

-ಮನೆ ಕಳೆದುಕೊಂಡ ಸುಮಾರು 800 ಕುಟುಂಬಗಳಿಗೆ ತಾತ್ಕಾಲಿಕವಾಗಿ ಮಾಸಿಕ ರೂ. 10000 ದವರೆಗೆ ಮನೆ ಬಾಡಿಗೆ ನೀಡಲಾಗುವುದು. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ನಿಯಮವನ್ನು ಬದಿಗಿಟ್ಟು ದೇಶದಲ್ಲಿಯೇ ಪ್ರಥಮ ಬಾರಿಗೆ ಮನೆ ಕಳೆದುಕೊಂಡವರಿಗೆ ಅತ್ಯಧಿಕ ಪರಿಹಾರ ನೀಡಲಾಗುತ್ತಿದೆ. ಪ್ರತೀ ಮನೆ ಪುನರ್ ನಿರ್ಮಾಣಕ್ಕೆ ಸಂತ್ರಸ್ತರಿಗೆ ಒಟ್ಟಾರೆಯಾಗಿ ರೂ. 8.53 ಲಕ್ಷ ಮೊತ್ತವನ್ನು ನೀಡಲಾಗುವುದು. ಮನೆಗಳ ಪುನರ್‍ನಿರ್ಮಾಣ ಕಾರ್ಯವನ್ನು ಯುದ್ದೋಪಾಧಿಯಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

-ಗದ್ದೆ, ಕೃಷಿ ಜಮೀನು ಮತ್ತು ತೋಟಗಳಲ್ಲಿ ಕೃಷಿ ಕಾರ್ಯಗಳ ಪುನರ್ ಚಾಲನೆಗೆ ಕೊಡಗು ಜಿಲ್ಲೆಗೆ ಹೆಚ್ಚುವರಿಯಾಗಿ ವಿವಿಧ ಜಿಲ್ಲೆಗಳ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಅವರು ತಿಳಿಸಿದರು.

-ಸಂತ್ರಸ್ತರ ಮಕ್ಕಳ ಒಂದು ವರ್ಷದ ಸಂಪೂರ್ಣ ಶೈಕ್ಷಣಿಕ ಖರ್ಚುವೆಚ್ಚಗಳನ್ನು ರಾಜ್ಯ ಸರಕಾರ ನೋಡಿಕೊಳ್ಳಲಿದೆ. ಇದಲ್ಲದೇ, ಹಾನಿಗೊಂಡಿರುವ ಶಾಲಾ ಕಾಲೇಜುಗಳನ್ನು ಪುನರ್ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿಗಳು ಪ್ರಕಟಿಸಿದರು. ಕೊಡಗಿಗೆ ಮತ್ತೊಮ್ಮೆ ಭೇಟಿ ನೀಡಿ ಪುನರ್ ವಸತಿ ಹಾಗೂ ಪರಿಹಾರ ಕಾರ್ಯಗಳನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

-ಅತಿವೃಷ್ಠಿಯಿಂದ ಸಂಕಷ್ಟದಲ್ಲಿರುವ ಸಂತ್ರಸ್ತರಲ್ಲಿ ಆತ್ಮವಿಶ್ವಾಸ ತುಂಬಲು ಸಂವಾದ ನಡೆಸಲಾಗುತ್ತಿದೆ. ಸಂತ್ರಸ್ತರು ಸರಕಾರದಿಂದ ಏನು ಬಯಸಿದ್ದಾರೆ ಎಂಬುದು ತಿಳಿಯುವುದು ಇದರ ಉದ್ದೇಶ. ಯಾವುದೇ ರಾಜಕೀಯ ಉದ್ದೇಶ ಇದರಲ್ಲಿ ಇಲ್ಲ. ಅಧಿಕಾರ ತನಗೆ ಮುಖ್ಯ ಅಲ್ಲ. ಕೊಡಗು ಸಂಕಷ್ಟದಲ್ಲಿದ್ದಾಗ ಇಲ್ಲಿನ ಸಂಘಸಂಸ್ಥೆಗಳು, ಜನಪ್ರತಿನಿಧಿಗಳು ಸ್ಪಂದಿಸಿದ್ದಾರೆ. ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಒದಗಿಸುವ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

-ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸಂತ್ರಸ್ತರಿಗೆ ತಲಾ ರೂ. 50 ಸಾವಿರ ಮೊತ್ತ ಪರಿಹಾರದ ತಿಳಿವಳಿಕೆ ಪತ್ರವನ್ನು ಸಾಂಕೇತಿಕವಾಗಿ ವಿತರಿಸಿದರು.

-ಅಧ್ಯಕ್ಷತೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಹಿಸಿದ್ದರು. ಅವರು ಜಿಲ್ಲೆಯ ಶಾಸಕರ ಪರವಾಗಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾದ ಮನವಿಯನ್ನು ಓದಿದರು. ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಸಣ್ಣ ನೀರಾವರಿ ಸಚಿವ ಪುಟ್ಟರಾಜು, ಶಾಸಕರಾದ ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಸುನೀಲ್ ಸುಬ್ರಮಣ್ಯ, ಎಸ್.ಎಲ್. ಭೋಜೇಗೌಡ, ಶ್ರೀಕಂಠೇಗೌಡ, ಜಿ.ಪಂ. ಅಧ್ಯಕ್ಷ ಹರೀಶ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಶ್ರೀವಿದ್ಯಾ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ಜಗದೀಶ್ ನಿರೂಪಿಸಿ, ವಂದಿಸಿದರು.

ಮಾನ್ಯ ಮುಖ್ಯಮಂತ್ರಿ

--------------------------------

-ಅತಿವೃಷ್ಠಿ ಸಂತ್ರಸ್ತರೊಂದಿಗಿನ ಸಂವಾದದಲ್ಲಿ ಕೊಡಗಿನ ಸ್ಥಳೀಯರು, ಅತಿವೃಷ್ಠಿ ಸಂತ್ರಸ್ಥರು ಮುಖ್ಯಮಂತ್ರಿಗಳ ಬಳಿ ಬಂದು ತಮ್ಮ ನೋವನ್ನು ವಿವರಿಸಿದರು.

-ಮುಖ್ಯಮಂತ್ರಿಗಳು ತಾವು ಶೋಶಿತರ, ನೋವುಂಡವರ ಪರ ಇದ್ದೇನೆ ಹೆದರಬೇಡಿ ಎಂದು ಅಭಯ ನೀಡಿದರು.

ಮಾನ್ಯ ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

--------------------------------

-ನೆರೆ ಸಂತ್ರಸ್ತರ ಸಂಕಷ್ಟ ಆಲಿಸಿ ಸಹಭೋಜನ ಮಾಡಿದ ನಾಡದೊರೆ.

-ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರಿಗೆ ಇರುವ ತಾಳ್ಮೆ, ತಾಯಿ ಕರುಳು, ಎಲ್ಲಾ ರಾಜಕಾರಣಿಗಳಿಗೂ ಇರಬೇಕು. ಹೀಗೆಂದೂ ಮಾತು ನೆರೆ ಸಂತ್ರಸ್ತರ ಗುಂಪಿನಿಂದ ಕೇಳಿ ಬಂತು.

- ಮಡಿಕೇರಿ ಗಾಂಧಿ ಮೈದಾನದಲ್ಲಿ ಮುಖ್ಯಮಂತ್ರಿ ಅವರು ಅತಿವೃಷ್ಠಿ ಸಂತ್ರಸ್ತರೊಂದಿಗೆ ಸಂವಾದ ಮಾಡುತ್ತಾ ಅವರ ಸಮಸ್ಯೆಯನ್ನು ಅತ್ಯಂತ ತಾಳ್ಮೆಯಿಂದ ಕೇಳಿ ಕಾರ್ಯಕ್ರಮ ಮುಗಿದ ನಂತರವು ಎಲ್ಲರ ಮನವಿಗಳನ್ನು ಸ್ವೀಕರಿಸಿ ಸಮಾದಾನ ಹೇಳುತ್ತಿದ್ದ ಮುಖ್ಯಮಂತ್ರಿಯನ್ನು ಕಂಡು ಮಹಿಳೆಯರು ಆಡಿದ ಮಾತುಗಳಿವು.

-ಇದಲ್ಲದೆ ಮುಖ್ಯಮಂತ್ರಿ ಅವರು ಕಾರ್ಯಕ್ರಮ ಮುಗಿದ ನಂತರ ಗಾಂಧಿ ಮೈದಾನದಲ್ಲಿ ನಿರ್ಮಿಸಲಾಗಿದ್ದ ವೇದಿಕೆ ಮುಂಭಾಗದ ಸರದಿ ಸಾಲಿನಲ್ಲಿ ಕುಳಿತು ನೆರೆ ಸಂತ್ರಸ್ತರೊಂದಿಗೆ ಭೋಜನ ಮಾಡಿ ನಿಮ್ಮ ನೋವಿನಲ್ಲಿ ನಾನು ಇದ್ದೀನಿ ಎಂದು ಹೇಳಿದ್ದು ಮುಖ್ಯಮಂತ್ರಿಯವರಲ್ಲಿ ಪ್ರೀತಿ ಹೆಚ್ಚಲು ಕಾರಣವಾಯಿತು.

-ಸಚಿವರು, ಶಾಸಕರುಗಳೊಂದಿಗೆ ಕುಳಿತು ಕೆಲವು ನೆರೆ ಸಂತ್ರಸ್ತರೊಂದಿಗೆ ಸಹಭೋಜನ ಮಾಡುತ್ತಾ ಕೊಡಗು ಜಿಲ್ಲೆಯ ಪುನರ್ ನಿರ್ಮಾಣವನ್ನು ನಿಮ್ಮ ಕನಸಿನಂತೆಯೇ ಮಾಡುವುದಾಗಿ ಕುಮಾರ ಸ್ವಾಮಿ ಅವರು ಹೇಳಿದರು.

--------------------------------

-ಸಂತ್ರಸ್ತರೊಂದಿಗೆ ಸಂವಾದಕ್ಕೆ ‌ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಕೊಡಗಿನ‌ ಜನರ ಸಂಕಷ್ಟ ನಮ್ಮೆಲ್ಲರ ಸಂಕಷ್ಟ ಎಂದೇ ಪರಿಗಣಿಸಿದ್ದೇವೆ ,ಕೇವಲ‌ ವಿಧಾನ‌ ಸೌಧದಲ್ಲಿ ಕುಳಿತು ಅಥವಾ ಅಧಿಕಾರಿಗಳ ಅಲೋಚನೆಯಂತೆ ಜಿಲ್ಲೆ ಅಭಿವೃದ್ಧಿ ಪಡಿಸಲು ತಾವು ಸಿದ್ದರಿಲ್ಲ .ಸಂತ್ರಸ್ತರು,ಸ್ತಳೀಯರೊಂದಿಗೆ ಸಾಂವಾದ ನಡೆಸಿ,ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿ ಅದಕ್ಕೆ ಪೂರಕವಾಗಿ ಕೊಡಗನ್ನು ಮತ್ತೆ ಮೊದಲಿಗೂ ಉತ್ತಮವಾಗಿ ಕಟ್ಟಬೇಕೆಂಬುದು ತಮ್ಮ ಆಶಯವಾಗಿದೆ .ಅದಕ್ಕಾಗಿಯೇ ತಾವಿಂದು ಕೊಡಗಿಗೆ ಅಗಮಿಸಿರುವುದಾಗಿ ಹೇಳಿದರು.

ಮಾನ್ಯ ಮುಖ್ಯಮಂತ್ರಿ

--------------------------------

-ಮಡಿಕೇರಿ ಅಗಮಿಸಿದ ಮುಖ್ಯಮಂತ್ರಿ ಶ್ರೀ ಹೆಚ್ .ಡಿ ಕುಮಾರಸ್ವಾಮಿ ಅವರು ಅತಿವೃಷ್ಠಿ ಸಂತ್ರಸ್ತರೊಂದಿಗೆ ಸಂವಾದಕ್ಕೆ ತೆರಳುವ ಮುನ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಕೃತಿ ವಿಕೋಪ ಪರಿಹಾರ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಇತರ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮಾನ್ಯ ಮುಖ್ಯಮಂತ್ರಿ

--------------------------------

-ಮಡಿಕೇರಿ ಅಗಮಿಸಿದ ಮುಖ್ಯಮಂತ್ರಿ ಶ್ರೀ ಹೆಚ್ .ಡಿ ಕುಮಾರಸ್ವಾಮಿ ಅವರು ಅತಿವೃಷ್ಠಿ ಸಂತ್ರಸ್ತರೊಂದಿಗೆ ಸಂವಾದಕ್ಕೆ ತೆರಳುವ ಮುನ್ನ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿದರು.

ಮಾನ್ಯ ಮುಖ್ಯಮಂತ್ರಿ

***********************************************