ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಕಾರಂಜಾ ನೀರಾವರಿ ಯೋಜನೆ ಮುಳುಗಡೆ ಸಂತ್ರಸ್ಥರಿಗೆ ಪರಿಹಾರಕ್ಕೆ ಸೂಕ್ತ ಕ್ರಮ - ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ವಿಧಾನಸೌಧ (ಬೆಂಗಳೂರು), ಅಕ್ಟೋಬರ್ 15, 2018

-ಬೀದರ್ ಜಿಲ್ಲೆಯ ಕಾರಂಜಾ ನೀರಾವರಿ ಯೋಜನೆಯಲ್ಲಿ ಮುಳುಗಡೆ ಸಂತ್ರಸ್ಥರಿಗೆ ಸಮರ್ಪಕವಾದ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರ ಕಾಯೋನ್ಮುಖವಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿರವರು ಹೇಳಿದರು.

-ಬೆಳಿಗ್ಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾರಂಜಾ ನೀರಾವರಿ ಯೋಜನೆಯ ಸಂತ್ರಸ್ಥರ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿದ ನಂತರ ಮಾತನಾಡಿದ ಕುಮಾರಸ್ವಾಮಿರವರು, ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣೆ ಮುಗಿದ ಬಳಿಕ, ನೀರಾವರಿ ಇಲಾಖೆ ಹಾಗೂ ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಮ್ಮ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುವುದು ಎಂದರು.

-ಜನಸಾಮಾನ್ಯರ ನೋವನ್ನು ಸರ್ಕಾರ ಅರ್ಥಮಾಡಿಕೊಂಡಿದೆ. ಇನ್ನು 45 ವರ್ಷಗಳಿಂದ ಸಂತ್ರಸ್ಥರಾಗಿರುವ ನಿಮ್ಮ ನೋವು ನಮಗೆ ಅರ್ಥವಾಗಿದೆ. 2015 ರಲ್ಲಿ ಇದ್ದ ಸರ್ಕಾರ ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನವನ್ನು ಮರು ಪರಿಶೀಲನೆ ಮಾಡಲಾಗುವುದು. ಉಪ ಚುನಾವಣೆ ನಂತರ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ನೀಡಲು ಸಾದ್ಯವೇ ಎಂಬ ಚಿಂತನೆಯನ್ನು ಮಾಡಿ, ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಅಲ್ಲಿ ನೆರೆದಿದ್ದ ಕಾರಂಜಾ ಮುಳಗಡೆ ಸಂತ್ರಸ್ಥರಿಗೆ ಭರವಸೆ ನೀಡಿದರು.

-ನಂತರ 60 ದಿನಗಳಿಂದ ಧರಣಿ ನಡೆಸುತ್ತಿರುವ ಹೋರಾಟಗಾರರಿಗೆ ಧರಣಿಯನ್ನು ಕೈಬಿಡುವಂತೆ ಮನವಿ ಮಾಡಿದರು. ಉಪ ಚುನಾವಣೆ ನಂತರ ಸಭೆ ಕರೆಯಲಾಗುವುದು. ಆಗ ಕೆಲ ಮುಖಂಡರನ್ನು ಆಹ್ವಾನಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಒಳಗೊಂಡ ಸಭೆ ನಡೆಸಿ ಸಾಧಕ-ಭಾದಕಗಳ ಬಗ್ಗೆ ಚರ್ಚಿಸಿ, ಶಾಸ್ವತ ಪರಿಹಾರ ಸೇರಿದಂತೆ ತಮ್ಮ ಹಲವು ಬೇಡಿಕೆಗಳ ಈಡೇರಿಕೆ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.

-ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಆದ ಸಹಕಾರ ಸಚಿವರಾದ ಶ್ರೀ ಬಂಡೆಪ್ಪ ಖಾಶೆಂಪೂರ ರವರು ಮಾತನಾಡಿ, ರಾಜ್ಯದ ಸಮ್ಮಿಶ್ರ ಸರ್ಕಾರ ಜನ ಸಾಮಾನ್ಯರ ಹಾಗೂ ರೈತರ ಪರಿವಾಗಿದ್ದು, ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

-ಕಾರಂಜಾ ಮುಳುಗಡೆ ಸಂತ್ರಸ್ಥರಲ್ಲಿ ಕೆಲವರು ನ್ಯಾಯಾಲಯದ ಮೆಟ್ಟಲೇರಿ ಪರಿಹಾರ ಹೆಚ್ಚಿಸಿಕೊಂಡರು. ಆದರೆ, ಶೇಕಡಾ 80 ರಷ್ಟು ಸಂತ್ರಸ್ಥರು ನ್ಯಾಯಾಲಯಕ್ಕೆ ಹೋಗಲೇ ಇಲ್ಲ, ಜೊತೆಗೆ ಫಾರಂ 28 ಎ ಅಡಿಯಲ್ಲಿ ಹೆಚ್ಚಿನ ಪರಿಹಾರ ಕೋರಿ ಅರ್ಜಿ ಸಲ್ಲಿಸಲೇ ಇಲ್ಲ. ನ್ಯಾಯಾಲಯ ಇದು ಮರುಪರಿಶೀಲನಾ ಅರ್ಜಿಗೆ ಯೋಗ್ಯವಲ್ಲದ ದಾವೆ ಎಂದು ಹೇಳಿದ್ದರು, ರಾಜ್ಯ ಸರ್ಕಾರ ಮುಳುಗಡೆ ಸಂತ್ರಸ್ಥರಿಗಾಗಿ ವಿಶೇಷ ಪ್ಯಾಕೇಜನ್ನು ಕಾನೂನಿನ ಚೌಕಟ್ಟಿನಲ್ಲಿ ಘೋಷಿಸಲು ಸಾದ್ಯವೇ ಎಂಬುದನ್ನು ಸಹ ಪರಿಶೀಲಸಲಾಗುವುದು ಎಂದರು.

-ಬೀದರ್ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಕಾರಂಜಾ ಮುಳುಗಡೆ ಸಂತ್ರಸ್ಥರ ಪರಿವಾಗಿದ್ದು, ಅವರಿಗೆ ಶಾಶ್ವತ ಪರಿಹಾರ ಕೊಡಿಸಲು ಸಿದ್ದನಿದ್ದೇನೆ ಎಂದು ಹೇಳಿದರು.

-ಯೋಜನೆಗಾಗಿ ಮನೆ ಮತ್ತು ಭೂಮಿ ಕಳೆದುಕೊಂಡ ಸಂತ್ರಸ್ಥರಿಗಾಗಿ ಈಗಾಗಲೇ 8 ಸಾವಿರ ಮನೆಗಳನ್ನು ಪುನರ್ವಸತಿ ಯೋಜನೆಯಡಿಯಲ್ಲಿ ಕಟ್ಟಿಸಿಕೊಡಲಾಗಿದೆ. ಅಲ್ಲಿ ಕೆಲ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಅದನ್ನು ಕಲ್ಪಿಸಲು ಜಿಲ್ಲಾಡಳಿತ ಹಾಗೂ ಸರ್ಕಾರ ಸಿದ್ದವಿದೆ ಎಂದು ಬಂಡೆಪ್ಪ ಖಾಶೆಂಪೂರ ರವರು ತಿಳಿಸಿದರು.

-ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ರವರು ಮಾತನಾಡಿ, ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಜೊತೆಗೆ ಸಂತ್ರಸ್ಥರಿಗೆ ಆದ ಅನ್ಯಾಯವನ್ನು ಮಾನವೀಯತೆ ದೃಷ್ಠಿಯಿಂದ ಪರಿಗಣಿಸಿ, ಶಾಶ್ವತ ಪರಿಹಾರ ನೀಡಲಾಗುವುದು ಎಂದರು.

-ಅಲ್ಲದೇ, ನಿರಾಶ್ರಿತರಿಗೆ ಪ್ರಮಾಣ ಪತ್ರ ಹಾಗೂ ಸವಲತ್ತುಗಳನ್ನು ಕಲ್ಪಿಸುವ ಭರವಸೆಯನ್ನು ನೀಡಿದರು. 1971 ರಲ್ಲಿ ಪ್ರಾರಂಭವಾದ ಕಾರಂಜಾ ಯೋಜನೆ ಇದಾಗಿದ್ದು, ಅಂದು ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರ ಎಕರೆಗೆ ಮೂರು ಸಾವರದಂತೆ ಪರಿಹಾರ ನೀಡಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರಿದವರಿಗೆ ಒಂದು ಎಕರೆಗೆ 78 ಸಾವಿರ ಹಾಗೂ ಬಡ್ಡಿ ನೀಡಬೇಕು ಎಂದು ಕೋರ್ಟ್ ಆದೇಶಿಸಿತ್ತು. ಈಗ ಪರಿಹಾರ ಮೊತ್ತವನ್ನು ಹೆಚ್ಚಿಸಲು ಸಾಧ್ಯವಿದೆಯೇ ಎಂಬುದನ್ನು ನೀರಾವರಿ ಹಾಗೂ ಕಾನೂನು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

-ಗಣಿ, ಭೂ ವಿಜ್ಞಾನ ಹಾಗೂ ಮುಜರಾಯಿ ಸಚಿವರಾದ ಶ್ರೀ ರಾಜಶೇಖರ್ ಬಿ. ಪಾಟೀಲ್ ರವರು ಮಾತನಾಡಿ ಸಂತ್ರಸ್ಥ ಕುಟುಂಬಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರ ಶ್ರಮಿಸಲಿದೆ. ಹೀಗಾಗಿ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

-ಸಂತ್ರಸ್ಥರ ಮಕ್ಕಳಿಗೆ, ಮೊಮ್ಮಕ್ಕಳಿಗೂ ಸವಲತ್ತು ಸಿಗಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ, ಸಂವಿಧಾನ ಪರಿಚ್ಛೇಧ 371ಜೆ ಅಡಿಯಲ್ಲಿ ಅವರ ವಿದ್ಯಾಭ್ಯಾಸ, ಸರ್ಕಾರಿ ಕೆಲಸ ನೀಡಲು ಅವಕಾಶವಿದೆಯೇ ಎಂಬ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದರು.

-ಕೆ.ಪಿ.ಸಿ.ಸಿ. ಕಾರ್ಯಾಧ್ಯಕರು ಹಾಗೂ ಭಾಲ್ಕಿ ಶಾಸಕರಾದ ಈಶ್ವರ ಖಂಡ್ರೆ ಮಾತನಾಡಿ, ಹಿಂದೆ ಇದ್ದ ಅಧಿಕಾರಿಗಳ ತಪ್ಪಿನಿಂದಾಗಿ ಭೂಮಿ ಕಳೆದುಕೊಂಡ ಸಂತ್ರಸ್ಥರ ಜಮೀನಿನ ಮೌಲ್ಯಮಾಪನವನ್ನು ವೈಜ್ಞಾನಿಕವಾಗಿ ಮಾಡದ ಪರಿಣಾಮ ಅವರಿಗೆ ಪರಿಹಾರ ನೀಡುವಲ್ಲಿಯೂ ಅನ್ಯಾಯವಾಗಿದೆ. ಈ ಅನ್ಯಾಯವನ್ನು ಸರಿಪಡಿಸಲು ರಾಜ್ಯ ಸಮ್ಮಿಶ್ರ ಸರ್ಕಾರ ಸಿದ್ದವಿದ್ದು, ಯಾವುದೇ ಸಂತ್ರಸ್ಥರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಸಂತ್ರಸ್ಥರಿಗೆ ನ್ಯಾಯಯುತವಾಗಿ ಹಾಗೂ ವೈಜ್ಞಾನಿಕವಾಗಿ ಪರಿಹಾರ ಸಿಗವಂತೆ ಮಾಡಲಾಗುವುದು ಎಂದು ತಿಳಿಸಿದರು.

-ಕಾರಂಜಾ ಯೋಜನೆಯಲ್ಲಿ ಮುಳುಗಡೆ ಸಂತ್ರಸ್ಥರು ರಾಜ್ಯದಲ್ಲಿ ಇನ್ನಿತರ ಯೋಜನೆಗಳಲ್ಲಿ ಅಲ್ಲಿನ ರೈತರು ಪಡೆದಿರುವ ಸವಲತ್ತುಗಳನ್ನು ಇಲ್ಲಿನ ರೈತರು ಪಡೆದಿಲ್ಲ. ಕಾನೂನಿನ ಪ್ರಕಾರ ದೊರೆತ ಸರ್ಕಾರಿ ಉದ್ಯೋಗ, ಬದಲಿ ಜಮೀನು ನೀಡಿಕೆ ಸೇರಿದಂತೆ ಹಲವಾರು ಸರ್ಕಾರಿ ಸವಲತ್ತುಗಳಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ ಎಂದು ಹಲವು ಹೋರಾಟಗಾರರು ಇದೇ ಸಂದರ್ಭದಲ್ಲಿ ಬೆಳಕು ಚೆಲ್ಲಿದರು. ಶಾಶ್ವತ ಪರಿಹಾರ ನೀಡಬೇಕು ಎಂದು ಕೆಲ ಸಂತ್ರಸ್ಥರು ಸರ್ಕಾರವನ್ನು ಒತ್ತಾಯಿಸಿದರು.

-ಬೀದರ್ ಸಂಸದರಾದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ವಿಜಯಸಿಂಗ್, ವಿಧಾನಸಭಾ ಸದಸ್ಯರಾದ ರಹೀಮ್ ಖಾನ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಖೇಶ್ ಸಿಂಗ್, ಬೀದರ್ ಜಿಲ್ಲಾಧಿಕಾರಿ ಮಹೇಶ್, ಕಾರಂಜಾ ಮುಳಗುಡೆ ಸಂತ್ರಸ್ಥರ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಪಾಟೀಲ್ ಹೊಚ್ಚಕನಹಳ್ಳಿ, ಕಾರಂಜಾ ಮುಳುಗಡೆ ಸಂತ್ರಸ್ಥರ ಹೋರಾಟ ಸಮಿತಿ ಅಧ್ಯಕ್ಷರಾದ ಸೂರ್ಯಕಾಂತ್ ಪಾಟೀಲ್ ಡಾಕುಳಿಗಿ ಸೇರಿದಂತೆ 50 ಕ್ಕೂ ಹೆಚ್ಚು ಮಂಡಿ ಸಂತ್ರಸ್ಥರು ಉಪಸ್ಥಿತರಿದ್ದರು.

***********************************************