ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮತ್ತೆ ಜಾನಪದ ಜಾತ್ರೆ - ಅಧಿಕಾರಿಗಳಿಗೆ ಸಿಎಂ ಸೂಚನೆ

ಮಾನ್ಯ ಮುಖ್ಯಮಂತ್ರಿ

ಮೈಸೂರು, ಅಕ್ಟೋಬರ್ 10

-ನಾಡಿನ ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡಿ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಜಾನಪದ ಜಾತ್ರೆಯನ್ನು ಪುನರಾರಂಭಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

-ಅವರು ಸಂಜೆ ಮೈಸೂರು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಜಾನಪದ ಜಾತ್ರೆ ವೀಕ್ಷಿಸಿದ ನಂತರ ಈ ಕಲಾವಿದರನ್ನು ಉದ್ದೇಶಿಸಿ ಮಾತನಾಡಿ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.

-ಕರ್ನಾಟಕ ಜಾನಪದ ಕಲೆಯ ಸಿರಿ ಅಪೂರ್ವವಾದದ್ದು. ಇಂದು ಈ ಜಾನಪದ ಜಾತ್ರೆಯನ್ನು ವೀಕ್ಷಿಸಿದಾಗ ರೋಮಾಂಚನವಾಯಿತು. ಜಾನಪದ ಕಲಾವಿದರು ತಮ್ಮ ವರ್ಣರಂಜಿತ ಕಲಾ ಪ್ರದರ್ಶನದಿಂದ ನಮ್ಮನ್ನು ರಂಜಿಸುತ್ತಾರೆ. ಆದರೆ ವರ್ಣರಂಜಿತ ವೇಷ ಭೂಷಣಗಳ ಹಿಂದೆ ಇರುವ ಕಲಾವಿದರ ಜೀವನ ಹೇಗಿದೆ ಎಂದು ತಿಳಿದಿಲ್ಲ. ನಿಮ್ಮ ಕಲಾಪ್ರದರ್ಶನ ನೋಡಿ ಮನದುಂಬಿ ಬಂತು ಎಂದು ಗದ್ಗದಿತರಾಗಿ ನುಡಿದರು.

-ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳು ಹಾಗೂ ಕಲಾವಿದರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು.

-ಪಾಶ್ಚಿಮಾತ್ಯ ದೇಶಗಳಲ್ಲಿ ಅಲ್ಲಿನ ಕಲೆ, ಸಂಸ್ಕೃತಿಗಳ ಪ್ರದರ್ಶನಗಳೂ ಪ್ರವಾಸೋದ್ಯಮದ ಒಂದು ಭಾಗವಾಗಿರುತ್ತವೆ. ಅದೇ ರೀತಿ ಕರ್ನಾಟಕದ ಜಾನಪದ ಕಲೆ, ಸಂಸ್ಕೃತಿಗಳನ್ನು ನಮ್ಮ ಪ್ರವಾಸೋದ್ಯಮಕ್ಕೆ ಪೂರಕವಾಗಿ ಬೆಳೆಸಲು, ಕಲಾವಿದರನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ ಎಂದ ಅವರು, ಈ ನಿಟ್ಟಿನಲ್ಲಿ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

-------------------

ಮಾನ್ಯ ಮುಖ್ಯಮಂತ್ರಿ

ಜಾನಪದ ಕಲೆ ಕಂಡ ಮುಖ್ಯಮಂತ್ರಿಗಳ ಕಣ್ಣಲ್ಲಿ ಆನಂದಭಾಷ್ಪ

-ಜಾನಪದರ ಕಲೆಯನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ ಮತ್ತೆ ಜಾನಪದ ಜಾತ್ರೆ ಕಾರ್ಯಕ್ರಮಕ್ಕೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ ಭವ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಿದರು.

-ನಂತರ ವೇದಿಕೆ ಮುಂಭಾಗ ಆಸೀನರಾಗಿ, ಜಾನಪದ ಗಾಯನ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ವೀಕ್ಷಿಸಿದ ಮುಖ್ಯಮಂತ್ರಿಗಳ ಕಣ್ಣಲ್ಲಿ ಆನಂದಭಾಷ್ಪ ಹರಿಯಿತು. ತಮ್ಮ ಕಲೆಗೆ ಮುಖ್ಯಮಂತ್ರಿಗಳು ಇಷ್ಟು ಖುಷಿಪಟ್ಟಿದನ್ನು ನೋಡಿದ ಜಾನಪದ ಕಲಾವಿದರು, ಹರ್ಷಚಿತ್ರರಾಗಿ ಮುಖ್ಯಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿದರು.

-ದಸರಾ ಮಹೋತ್ಸವದ ಅರಮನೆ ವೇದಿಕೆ ಮೇಲೆ ಪ್ರದರ್ಶನ ನೀಡಿದ ಜನಪದ ಕಲಾವಿದರೊಂದಿಗೆ ಬೆರೆತು ಮನಃಪೂರ್ವಕವಾಗಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನಮ್ಮ ನಾಡಿನ ಹಾಗೂ ಗ್ರಾಮೀಣ ಜನರ ಬದುಕಾಗಿರುವ ಜಾನಪದ ಕಲೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ 12 ವರ್ಷಗಳ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದ ಮುಂದೆ ಜಾನಪದ ಜಾತ್ರೆ ಕಾರ್ಯಕ್ರಮ ಆರಂಭಿಸಿದ್ದೆ. ನಂತರ ಅದು ಬೆಂಗಳೂರಿನ ಲಾಲ್ ಬಾಗ್ ಗೆ, ಮತ್ತೊಂದು ಸ್ತಳಕ್ಕೆ ಸ್ತಳಾಂತರವಾಯಿತು. ಆ ನಂತರ ಬಂದ ಸರ್ಕಾರಗಳು ಈ ಕಾರ್ಯಕ್ರಮ ಮುಂದುವರಿಸುವ ಉತ್ಸಾಹ ತೋರಲಿಲ್ಲ ಎಂದರು.

-ಈ ಕಲೆಯ ಪ್ರೋತ್ಸಾಹಕ್ಕೆ ನಾನು ಬದ್ಧನಾಗಿದ್ದೇನೆ. ಅದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನ ಒದಗಿಸುತ್ತೇನೆ. ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಡಾ. ಜಯಮಾಲ ಅವರು ಕೂಡ ಕಲಾವಿದರಾಗಿದ್ದು, ನಿಮ್ಮ ಬೆಂಬಲವಾಗಿ ಇದ್ದಾರೆ ಎಂದರು.