ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಎಲ್ಲ ಜಿಲ್ಲೆಗಳಲ್ಲಿ ಗಾಂಧಿ ಭವನ- ಆದ್ಯತೆ ಮೇರೆಗೆ ನಿರ್ಮಿಸಲು ಮುಖ್ಯಮಂತ್ರಿ ಸೂಚನೆ

ಮಾನ್ಯ ಮುಖ್ಯಮಂತ್ರಿ

ಗೃಹ ಕಚೇರಿ ಕೃಷ್ಣಾ (ಬೆಂಗಳೂರು), ಅಕ್ಟೋಬರ್ 09

-ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗಾಂಧಿ ಭವನಗಳನ್ನು ಆದ್ಯತೆಯ ಮೇರೆಗೆ ನಿರ್ಮಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸೂಚನೆ ನೀಡಿದರು.

-ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಹಾತ್ಮಾ ಗಾಂಧೀಜಿಯವರ 150 ನೆ ಜನ್ಮ ವರ್ಷಾಚರಣೆ ಕುರಿತು ಚರ್ಚಿಸಲು ಕರೆದಿದ್ದ ಉನ್ನತ ಮಟ್ಟದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಾಂಧಿ ಭವನಕ್ಕೆ 21 ಜಿಲ್ಲೆಗಳಲ್ಲಿ ನಿವೇಶನ ಲಭ್ಯವಿದೆ. ಉಳಿದ ಜಿಲ್ಲೆಗಳಲ್ಲಿ ನಿವೇಶನ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದ್ದರಿಂದ ಈ ಕಾರ್ಯಕ್ರಮ ವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

-ಗಾಂಧಿ ಭವನ ನಿರ್ಮಿಸಿದ ನಂತರ ಅಲ್ಲಿ ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಸಮಿತಿ ಸದಸ್ಯರ ಸಲಹೆಗಳನ್ನು ಆಲಿಸಿದ ಮುಖ್ಯಮಂತ್ರಿಗಳು, ಗಾಂಧಿ ಚಿಂತನೆ, ಆಶಯಗಳಿಗೆ ಅನುಗುಣವಾಗಿ ನಿರಂತರ ಕಾರ್ಯಕ್ರಮವನ್ನು ಏರ್ಪಡಿಸುವಂತೆ ಹಾಗೂ ಗಾಂಧಿಭವನ ನಿರ್ವಹಣೆಗೆ ಅಗತ್ಯ ಕ್ರಮ ವಹಿಸುವಂತೆಯೂ ಸೂಚನೆ ನೀಡಿದರು.

-ಈ ಬಾರಿ ಮಹಾತ್ಮಾ ಗಾಂಧಿಯವರನ್ನೇ ಪ್ರಮುಖ ವಿಷಯವಾಗಿಟ್ಟುಕೊಂಡು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಏರ್ಪಡಿಸುವಂತೆ ತಿಳಿಸಿದರು.

-ಇದಲ್ಲದೆ, ಭಾರತ ಸರ್ಕಾರವು ಗಣರಾಜ್ಯೋತ್ಸವ ಸ್ತಬ್ಧ ಚಿತ್ರಕ್ಕೆ ಎಲ್ಲ ರಾಜ್ಯಗಳೂ ಗಾಂಧೀಜಿ ಕುರಿತ ಸ್ತಬ್ಧಚಿತ್ರವನ್ನೇ ಪ್ರಸ್ತುತಪಡಿಸುವಂತೆ ಸೂಚಿಸಿದೆ. ಅದರಂತೆ ರಾಜ್ಯದಿಂದ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ ಎಂಬ ಹೆಗ್ಗಳಿಕೆಯ ಬೆಳಗಾವಿ ಕಾಂಗ್ರೆಸ್ ಅಧಿವೇಶನವನ್ನು ವಿಷಯವಾಗಿಟ್ಟುಕೊಂಡು ಸ್ತಬ್ಧಚಿತ್ರ ಸಿದ್ಧಪಡಿಸಲಾಗುವುದು ಎಂದು ಸಭೆಗೆ ತಿಳಿಸಲಾಯಿತು.

-ಇದಲ್ಲದೆ ಶಾಲೆ, ಕಾಲೇಜುಗಳಲ್ಲಿ ಗಾಂಧೀಜಿ ಹಾಗೂ ಅವರ ವಿಚಾರಧಾರೆ ಕುರಿತ ವಿವಿಧ ಸ್ಪರ್ಧೆಗಳು, ವಿಶ್ವವಿದ್ಯಾಲಯಗಳಲ್ಲಿ ವಿಚಾರಸಂಕಿರಣಗಳು, ಗಾಂಧೀಜಿ, ಅವರ ಹೋರಾಟ,ಅವರ ಒಡನಾಡಿಗಳು, ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆ, ಕರ್ನಾಟಕದಲ್ಲಿ ನಡೆದ ಸತ್ಯಾಗ್ರಹಗಳ ದಾಖಲೀಕರಣ ಹೀಗೆ ವಿವಿಧ ವಿಷಯಗಳ ಕುರಿತು ಕಿರುಹೊತ್ತಿಗೆಗಳನ್ನು ಪ್ರಕಟಿಸಲು ಸಮಿತಿಯು ತೀರ್ಮಾನಿಸಿತು.

-ಸಾರ್ವಜನಿಕರನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಈ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಏರ್ಪಡಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

-ಗಾಂಧಿ ಜಯಂತಿ ಆಚರಣೆಗೆ ನೋಡಲ್ ಇಲಾಖೆಯಾಗಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ರಂಗ ಪಯಣ ಕಾರ್ಯಕ್ರಮವು ಜನ ಮೆಚ್ಚುಗೆ ಗಳಿಸಿರುವುದನ್ನು ಸಮಿತಿಯ ಸದಸ್ಯರು ಶ್ಲಾಘಿಸಿದರು.

-ಸಭೆಯಲ್ಲಿ ಸಮಿತಿಯ ಸದಸ್ಯರಾಗಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್. ದೊರೆಸ್ವಾಮಿ, ಚನ್ನಮ್ಮಾ ಹಳ್ಳಿಕೇರಿ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ. ಕೃಷ್ಣ, ಉಪಾಧ್ಯಕ್ಷ ಶಿವರಾಜ್, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಮತ್ತಿತರರು ಪಾಲ್ಗೊಂಡು ಹಲವಾರು ಸಲಹೆ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಉಪಸ್ಥಿತರಿದ್ದರು.