ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ದುಡಿಯಲು ಇಚ್ಚಿಸುವ ಕೈಗಳಿಗೆ ಉದ್ಯೋಗ ಕೊಡಿಸುವುದಕ್ಕಿಂತ ಶ್ರೇಷ್ಟ ಕೆಲಸ ಮತ್ತೊಂದಿಲ್ಲ - ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ಬೆಂಗಳೂರು, ಸೆಪ್ಟೆಂಬರ್ 29

-"ದುಡಿಯಲು ಇಚ್ಚಿಸುವ ಕೈಗಳಿಗೆ ಉದ್ಯೋಗ ಕೊಡಿಸುವುದಕ್ಕಿಂತ ಶ್ರೇಷ್ಟ ಕೆಲಸ ಮತ್ತೊಂದಿಲ್ಲ" ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

-ಅವರು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲ ಮತ್ತು ಜೀವನೋಪಾಯ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾಡಳಿತ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಉದ್ಯೋಗ ಮೇಳದ ಉದ್ಫಾಟನೆ ನೆರವೇರಿಸಿ ಮಾತನಾಡಿದರು.

-ರಾಜ್ಯ ಮೂಲೆ ಮೂಲೆಗಳಿಂದ ಆಗಮಿಸಿರುವ ಉದ್ಯೋಗಕಾಂಕ್ಷಿಗಳು ಸರ್ಕಾರದ ಮನವಿಗೆ ಸ್ಪಂಧಿಸಿ 100 ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದಾರೆ. ತಾವು ನಡೆಸಿದ ಜನತಾ ದರ್ಶನದಿಂದ ಬಂದ ಒಟ್ಟು 12,000 ಅರ್ಜಿಗಳಲ್ಲಿ 3,000 ಅರ್ಜಿಗಳು ಉದ್ಯೋಗಕ್ಕೆ ಸಂಬಂಧಿಸಿದ್ದೆ ಆಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಸುಮಾರು 300 ಕುಟುಂಬಗಳಿಗೆ ಉದ್ಯೋಗ ದೊರೆತಿದೆ.

-ರಾಜ್ಯದ 9 ಜಿಲ್ಲೆಗಳಲ್ಲಿ ವಿಷನ್ ಸಂಸ್ಥೆಯವರು ಒಂದು ಲಕ್ಷ ಉದ್ಯೋಗ ಸೃಷ್ಟಿಸಿದ್ದಾರೆ. ಜನತಾ ದರ್ಶನದಲ್ಲಿ ಉದ್ಯೋಗ ಅರಸಿಬಂದ ಸುಮಾರು 3,000 ಜನರಿಗೆ ಇಲ್ಲಿ ಉದ್ಯೋಗ ಸಿಗುವುದರ ಜೊತೆಗೆ ಹೊಸದಾಗಿ ಅರಸಿ ಬಂದವರಿಗೂ ಆದ್ಯತೆ ನೀಡಲಾಗುವುದು.

-ನಮ್ಮ ಮೈತ್ರಿ ಸರ್ಕಾರ ರೈತರ ಪರಿವಾಗಿದ್ದು ರೈತರ ಸಾಲಮನ್ನಾ ಕೈಗೊಂಡಿದೆ. ಸಾಲ ಪಾವತಿಗೆ ಬ್ಯಾಂಕ್ ದಲ್ಲಾಳಿಗಳ ಕಿರುಕುಳವನ್ನು ತಪ್ಪಿಸಲು ಕ್ರಮಕೈಗೊಂಡಿದ್ದು, ಸಣ್ಣ ವ್ಯಾಪಾರಿಗಳಿಗೆ ಮೊಬೈಲ್ ಬ್ಯಾಂಕ್ ತೆರೆದು ಬಡ್ಡಿರಹಿತ ಸಾಲ ನೀಡುತ್ತಿದೆ. .

-ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವತಿಯಿಂದ ರೋಷನಿ ಯೋಜನೆಗೆ 500 ಕೋಟಿ ರೂ. ವ್ಯಯಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ವಸತಿ ಶಾಲೆಗಳ ಬಾಡಿಗೆ ಕಟ್ಟಡ ತೆರವುಗೊಳಿಸಿ 4,500 ಕೋಟಿ ರೂ. ವೆಚ್ಚದಲ್ಲಿ ಉತ್ತಮ ಮೂಲಭೂತ ಸೌಕರ್ಯವುಳ್ಳ ಕಟ್ಟಡ ನಿರ್ಮಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

-ಇಡೀ ರಾಷ್ಟ್ರದಲ್ಲಿ ಅತಿ ಕಡಿಮೆ ಪೆಟ್ರೋಲ್ ದರ ಹೊಂದಿರುವ ರಾಜ್ಯ ನಮ್ಮದು. ಸರ್ಕಾರ ಪೆಟ್ರೋಲ್ ಮೇಲಿನ ಸೆಸ್ ನ್ನು ಶೇ 3.25 ರಷ್ಟು ಕಡಿಮೆಗೊಳಿಸಿದೆ ಎಂದರು.

-ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಂದಾಯ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಕರ್ನಾಟಕ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನ ಹೊಂದಿದೆ. ಮುಖ್ಯಮಂತ್ರಿಗಳ ಜನತಾ ದರ್ಶನದಿಂದ ಬಂದ ಅರ್ಜಿಗಳ ವಿಲೇವಾರಿ ಈ ಉದ್ಯೋಗ ಮೇಳದಿಂದ ಆಗುತ್ತದೆ. ಈ ಮೇಳ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಸಹಯೋಗವಿದ್ದು, ನೂರಾರು ಉದ್ಯೋಗಾಕಾಂಕ್ಷಿಗಳು ಭಾಗವಹಿಸಲಿದ್ದಾರೆ ಹಾಗೂ ಹಲವರು ಈಗಾಗಲೇ ನೋಂದಾಣಿ ಮಾಡಿಕೊಂಡಿದ್ದಾರೆ.

-21ನೇ ಶತಮಾನ ಬಹುದೊಡ್ಡ ಸವಾಲು ಎಂದರೆ ಮಾನವ ಸಂಪನ್ಮೂಲ ನಿರ್ಮಾಣ ಮಾಡುವುದೇ ಆಗಿದೆ. ಕೇಂದ್ರ ಸರ್ಕಾರ ಸಹ ಆರು ಕೋಟಿ ಜನರಿಗೆ ಉದ್ಯೋಗ ಸೃಷ್ಟಿ ಮಾಡುವಲ್ಲಿ ಕಾರ್ಯಕ್ರಮ ಯೋಜಿಸಿದೆ. ಈಗ ವಿಜ್ಞಾನ ತಂತ್ರಜ್ಞಾನದಲ್ಲಿ ಬೆಳವಣಿಗೆಯಾಗಿದ್ದರೂ ಸಹ ನಿರುದ್ಯೋಗಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಮುಂಬರುವ ವರ್ಷಗಳಲ್ಲಿ ಸುಮಾರು 1 ಕೋಟಿ 88 ಲಕ್ಷ ಯುವಕ, ಯುವತಿಯರಿಗೆ ಉದ್ಯೋಗ ತರಬೇತಿ ನೀಡುವುದು ಸರ್ಕಾರ ಉದ್ದೇಶಿಸಿದೆ. ಅಂಗವಿಕಲರಿಗೆ ಅವರ ಮನೆಬಾಗಿಲಿಗೆ ತರಬೇತಿ ನೀಡುವ ಕಾರ್ಯಕ್ರಮ, ಅಪ್ರೆಂಟಿಸ್ ತರಬೇತಿ ಮುಂತಾದ ಯೋಜನೆಗಳು ಪ್ರಮುಖವಾದದ್ದು ಎಂದರು.

-ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದರಾದ ಡಾ. ಎಂ. ವೀರಪ್ಪ ಮೊಯಿಲಿ ಅವರು ಮಾತನಾಡಿ ಉದ್ಯೋಗ ಮೇಳವನ್ನು ನಗರದ ಕೇಂದ್ರ ಭಾಗದಲ್ಲಿ ಹಮ್ಮಿಕೊಂಡಿರುವುದು ಒಳ್ಳೆಯ ಸಂಗತಿ. ಚಿಕ್ಕಬಳ್ಳಾಪುರದಲ್ಲೂ ಸಹ ನವೆಂಬರ್ 28 ಹಾಗೂ 29 ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಉದ್ಯೋಗಾಕಾಂಕ್ಷಿಗಳು ಉದ್ಯೋಗ ದೊರೆಯದಿದ್ದರೆ ಆತ್ಮವಿಶ್ವಾಸ ಕಳೆದುಕೊಳ್ಳದೆ ಮರಳಿ ಯತ್ನವ ಮಾಡಬೇಕೆಂದರು.

-ಮುಖ್ಯಮಂತ್ರಿಗಳು ವಿಕಲಚೇತನರು ಸೇರಿದಂತೆ ಹಲವರಿಗೆ ‘ಉದ್ಯೋಗ ಪತ್ರ’ ವಿತರಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕಪೇಟೆ ಶಾಸಕ ಉದಯ್ ಬಿ. ಗರುಡಾಚಾರ್, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ್, ಶಾಸಕಿ ಸೌಮ್ಯ ರೆಡ್ಡಿ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಬಿ.ಎಂ. ವಿಜಯಾಶಂಕರ್ ಗಣ್ಯರನ್ನು ಸ್ವಾಗತಿಸಿದರು.