ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

"ಮಾಧ್ಯಮ ಸಂಜೀವಿನಿ" ಸರ್ಕಾರಿ ಆದೇಶ ಪ್ರಕಟ

know_the_cm

ಬೆಂಗಳೂರು, ಸೆಪ್ಟೆಂಬರ್ 25

-ಪ್ರಸ್ತುತ ಸಾಲಿನ ಆಯವ್ಯಯ ಭಾಷಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗಾಗಿ ಘೋಷಿಸಿದ್ದ "ಮಾಧ್ಯಮ ಸಂಜೀವಿನಿ" ಯೋಜನೆಯ ಅನುಷ್ಠಾನಕ್ಕೆ ಸರ್ಕಾರ ಆದೇಶ ಹೊರಡಿಸಿದೆ.

-ಪತ್ರಕರ್ತರು ವೃತ್ತಿನಿರತ ಕೆಲಸಗಳ ವೇಳೆ ಅಪಘಾತಕ್ಕೆ ಒಳಗಾದರೆ ಇಲ್ಲವೆ ಇನ್ನಿತರೆ ಅವಘಡಗಳಿಗೆ ತುತ್ತಾಗಿ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಅವರುಗಳ ಕುಟುಂಬದವರಿಗೆ ರೂ. 5ಲಕ್ಷ ವರೆಗಿನ ಜೀವ ವಿಮೆ ಖಾತರಿ ನೀಡಲಿರುವ "ಮಾಧ್ಯಮ ಸಂಜೀವಿನಿ" ಸಮೂಹ ಜೀವವಿಮೆ ಸೌಲಭ್ಯವನ್ನು ಪತ್ರಕರ್ತರಿಗೆ ಕಲ್ಪಿಸಲಾಗುವುದು.

-ಈ ಯೋಜನೆಯಡಿ ಪತ್ರಕರ್ತರಿಗೆ ರೂ. 5ಲಕ್ಷ ವರೆಗಿನ ಜೀವವಿಮೆ ಸೌಲಭ್ಯದ ಖಾತ್ರಿ ನೀಡಲಾಗುವುದು, ಹಾಗೂ ಈ ವಿಮೆ ಕಂತುಗಳನ್ನು 'ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ' ಇಲಾಖೆಯ ಮೂಲಕ ಭರಿಸಲಾಗುವುದು.

-ಪತ್ರಕರ್ತರು ತಮ್ಮ 60 ವರ್ಷ ವಯಸ್ಸಿನವರೆಗೆ ಈ ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಈ ಯೋಜನೆಯಿಂದ ರಾಜ್ಯದಾದ್ಯಂತ ಪ್ರಸ್ತುತ ಇರುವ 2065 ಮಾನ್ಯತೆ ಪಡೆದ ಪತ್ರಕರ್ತರು ಪ್ರಯೋಜನೆ ಪಡೆದುಕೊಳ್ಳಲಿದ್ದಾರೆ. ಈ ಯೋಜನೆಯನ್ನು ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ನಿಯಮ 1999/2000 ರಡಿ ಟೆಂಡರ್ ಆಹ್ವಾನಿಸಿ ಕ್ರಮ ವಹಿಸಲಾಗುವುದು.

-"ಮಾಧ್ಯಮ ಸಂಜೀವಿನಿ" ಸಮೂಹ ಜೀವವಿಮೆ ಸೌಲಭ್ಯವನ್ನು ಪತ್ರಕರ್ತರಿಗೆ ಕಲ್ಪಿಸಲಾಗುವ ಯೋಜನೆಗೆ ಅನುಮತಿ ನೀಡಿ ಈ ಕೆಳಕಂಡ ಮಾನದಂಡಗಳನ್ವಯ ಆದೇಶಿಸಿದೆ.

-ಪತ್ರಕರ್ತರು ಇಲಾಖೆಯಿಂದ ಮಾನ್ಯತೆ ಪತ್ರವನ್ನು ಪಡೆದಿರಬೇಕು. 25 ವರ್ಷದಿಂದ 60 ನೇ ವಯಸ್ಸಿನವರೆಗೆ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಪತ್ರಕರ್ತರು ವೃತ್ತಿ ನಿರತ ಕೆಲಸದ ಮೇಲೆ ಅಪಘಾತಕ್ಕೆ ಒಳಗಾಗದರೆ ಅಥವಾ ಗಂಭೀರ ಮತ್ತು ಇನ್ನಿತರೆ ಮಾರಣಾಂತಿಕ ಕಾಯಿಲೆಗಳಿಂದ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

-ವಿಮಾ ಸೌಲಭ್ಯ ಪಡೆಯಲು ನಾಮ ನಿರ್ದೇಶಿತ ವ್ಯಕ್ತಿಯು ಕಂದಾಯ ಇಲಾಖೆಯಿಂದ ಕುಟುಂಬ ಅವಲಂಬಿತ ಪ್ರಮಾಣ ಪತ್ರವನ್ನು ಪಡೆದು ವಿಮಾ ಸಂಸ್ಥೆಗೆ ಸಲ್ಲಿಸಬೇಕು. ಕಾರ್ಯ ನಿರ್ವಹಿಸುವ ವೇಳೆಯಲ್ಲಿ ಅಮಾನತ್ತು ಇಲ್ಲವೆ ವಜಾಗೊಂಡಿರುವ ಪತ್ರಕರ್ತರು ಈ ಸೌಲಭ್ಯಕ್ಕೆ ಅರ್ಹರಾಗಿರುವುದಿಲ್ಲ. ಪತ್ರಕರ್ತರು ಕಾರ್ಯ ಅವಧಿಯಲ್ಲಿ ಭಾರತೀಯ ಪತ್ರಿಕಾ ಮಂಡಳಿ ಅಥವಾ ಐ.ಬಿ.ಎ. ನಲ್ಲಿ ಛೀಮಾರಿ ಅಥವಾ ದಂಡ ಇಲ್ಲವೆ ಎರಡೂ ಶಿಕ್ಷೆಗಳಿಗೆ ಗುರಿಯಾಗಿರುವಂತ ಪತ್ರಕರ್ತರು ಮತ್ತು ಸದನದ ಹಕ್ಕುಚ್ಯುತಿ ಸಮಿತಿಯ ದಂಡನೆಗೊಳಗಾದ ಪತ್ರಕರ್ತರು ಈ ಸೌಲಭ್ಯಕ್ಕೆ ಅರ್ಹರಲ್ಲ. ಅರ್ಜಿ ಸಲ್ಲಿಸುವ ವೇಳೆಯಲ್ಲಿ ಯಾವುದೇ ರೀತಿಯ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾಗಿರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.