ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ - ಸನ್ಮಾನ್ಯ ಮುಖ್ಯಮಂತ್ರಿಯವರ ಭಾಷಣ

know_the_cm

ಕಲಬುರಗಿ ಸೆಪ್ಟೆಂಬರ್ 15

ಮೊದಲನೆಯದಾಗಿ ನಿಮಗೆಲ್ಲರಿಗೂ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

-ಭಾರತ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಹೊಂದಿ 1947ರ ಆಗಸ್ಟ್ 15 ರಂದು ಇಡೀ ದೇಶ ಸಂಭ್ರಮಾಚರಣೆಯಲ್ಲಿದ್ದರೆ, ಗುಜರಾತಿನ ಜುನಾಗಢ, ಕಾಶ್ಮೀರ ಹಾಗೂ ಹೈದರಾಬಾದ್ ಪ್ರಾಂತ್ಯಗಳು ಭಾರತ ಒಕ್ಕೂಟ ವ್ಯವಸ್ಥೆಯಿಂದ ಹೊರಗೆ ಉಳಿದಿದ್ದವು. ಅಂದಿನ ಹೈದರಾಬಾದ್ ಪ್ರಾಂತ್ಯದಲ್ಲಿದ್ದ ಈ ಭಾಗದ ಜನರಿಗೆ ಬಾಣಲೆಯಿಂದ ಬೆಂಕಿಗೆ ಬಿದ್ದ ಅನುಭವ.

-ಹೈದರಾಬಾದ್ ನಿಜಾಮ ಉಸ್ಮಾನ್ ಅಲಿ ಖಾನ್ ಭಾರತ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಯಾಗಲು ನಿರಾಕರಿಸಿದ್ದರು. ಅಷ್ಟರೊಳಗಾಗಲೇ ರಜಾಕಾರರ ದೌರ್ಜನ್ಯದಿಂದ ರೋಸಿ ಹೋಗಿದ್ದ ಅಂದಿನ ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳ ಜನತೆ ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಹೋರಾಟಕ್ಕೆ ಅಣಿಯಾದರು.

-ಆ ನಂತರ ರಮಾನಂದ ತೀರ್ಥರೊಂದಿಗೆ ಅಪ್ಪಾರಾವ್ ಪಾಟೀಲ್, ಚಂದ್ರಶೇಖರ್ ಪಾಟೀಲ್ ಸೇರಿಕೊಂಡು ಚಳುವಳಿಯನ್ನು ಇನ್ನಷ್ಟು ತೀವ್ರಗೊಳಿಸಿ ಹೈದರಾಬಾದ್ ಕರ್ನಾಟಕ ವಿಮೋಚನೆ ಹೊಂದಬೇಕಾದರೆ ಒಗ್ಗೂಡಿದ ಹೋರಾಟ ಅಗತ್ಯ ಎಂದು ಜನರಿಗೆ ಮನವರಿಕೆ ಮಾಡಿಕೊಡತೊಡಗಿದರು. ಆ ಸಂದರ್ಭದಲ್ಲಿ ಗೋವಿಂದ್ ಭಾಯ್, ಪಿ.ವಿ, ನರಸಿಂಹರಾವ್, ಜೆ.ಕೆ.ಪ್ರಾಣೇಶಾಚಾರ್ಯ, ಡಾ ಮೇಲುಕೋಟಿ, ಭಾವುಸಾಹೇಬ್, ವೆಂಕಟರಾವ್ ದೇವುಳಗಾಂವಕರ್, ಚಂದ್ರಶೇಖರ್ ಪಾಟೀಲ್, ಮಲ್ಲಪ್ಪ ಕೋಯಿಲೂರು, ವೆಂಕಟಪ್ಪ ನಾಯಕ್, ಮುಂಡರಗಿ ಭೀಮರಾಯ, ಪ್ರೇಮಿಲಾಬಾಯಿ ಪಟ್ಟಣಕರ್, ಚನ್ನಬಸಪ್ಪ ಕುಳಗೇರಿ, ದಾಸರಾವ್ ಮುಕ್ತೇದಾರ್, ಪಂಡಿತ್ ತಾರಾನಾಥ್, ಶಂಕರಶೆಟ್ಟಿ ಪಾಟೀಲ್ ಕಮಲಾಪುರ, ಎನ್.ಕೆ. ಸರಾಫ್, ಚಟ್ನಳ್ಳಿ ವಿರೂಪಾಕ್ಷಪ್ಪ, ವಿರೂಪಾಕ್ಷಪ್ಪ ರಾಜನಕೋಳೂರು, ಜಯರಾಮಚಾರ್ಯ ತೀರ್ಥನಕೇಸರಿ, ದತ್ತಾತ್ರೇಯಿ ಔರಾದಿ, ಶಿವಮೂರ್ತಿಸ್ವಾಮಿ ಆಳವಂಡಿ, ಅನ್ನದಾನಯ್ಯ ಪುರಾಣಿಕ್, ನರಸಿಂಗ್ರಾವ್ ಮಾನವಿ, ಎಂ. ನಾಗಪ್ಪ, ಕಾಶೀನಾಥ್ ರಾವ್, ಜಗನ್ನಾಥ್ರಾವ್ ಚಂಡ್ರಕಿ, ವಿಶ್ವನಾಥರೆಡ್ಡಿ ಮುದ್ನಾಳ್, ವಿದ್ಯಾಧರ ಗುರುಜೀ, ಸರ್ದಾರ ಶರಣಗೌಡ ಇನಾಂದಾರ್, ಭೀಮರಾವ್ ಪಟವರ್ಧನ್, ವಿರೂಪಾಕ್ಷಯ್ಯ ಸ್ವಾಮಿ, ನೀಲಕಂಠಪ್ಪ ಪಾಟೀಲ್ ಹಾಗೂ ವೀರಶೆಟ್ಟಪ್ಪ ವನಕೆ ಇನ್ನೂ ಅನೇಕ ಹೋರಾಟಗಾರರು ನಿಜಾಮನ ವಿರುದ್ದ ಸೆಡ್ಡು ಹೊಡೆದು ನಿಂತರು.

-ರಜಾಕರ ದೌರ್ಜನ್ಯದ ಸುದ್ದಿ ತಿಳಿದ ಪ್ರಧಾನಿ ಜವಾಹರಲಾಲ್ ನೆಹರು ಸಂಪುಟದ ಗೃಹ ಸಚಿವರಾಗಿದ್ದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲ್, ನಿಜಾಮನ ವಿರುದ್ದ ಪೊಲೀಸ್ ಕಾರ್ಯಾಚರಣೆಗೆ ನಿರ್ಧಾರ ಮಾಡಿ ಅಮಾಯಕ ಜನರ ಜೀವ ರಕ್ಷಣೆಗೆ ಮುಂದಾದರು. ಪರಿಣಾಮವಾಗಿ ಸಪ್ಟೆಂಬರ್ 13, 1948 ರಲ್ಲಿ ಸೋಲಾಪುರ ಸೇರಿದಂತೆ ಒಟ್ಟು 5 ಕಡೆಯಿಂದ ಮೇಜರ್ ಜನರಲ್ ಜೆ ಎನ್ ಚೌಧರಿ ಅವರ ನೇತೃತ್ವದಲ್ಲಿ ನಿಜಾಮನ ವಿರುದ್ದ “ಆಪರೇಷನ್ ಪೋಲೋ” ಎನ್ನುವ ಹೆಸರಿನಲ್ಲಿ ಕಾರ್ಯಾಚರಣೆ ನಡೆಯಿತು. ಮೊದಮೊದಲು ಪ್ರತಿರೋಧ ತೋರಿದ್ದ ನಿಜಾಮನ ರಜಾಕ ಪಡೆ ಮೂರು ದಿನಗಳ ನಂತರ ಸೋತು ಸುಣ್ಣವಾಯಿತು. ಸೆಪ್ಟೆಂಬರ್ 17, 1948 ರಂದು ನಿಜಾಮನು ಶರಣಾಗಿ ಹೈದರಾಬಾದ್ ಪ್ರಾಂತ್ಯವನ್ನು ಭಾರತದ ಒಕ್ಕೂಟದಲ್ಲಿ ಸೇರಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ಹೈದರಾಬಾದ್ ಕರ್ನಾಟಕದಲ್ಲಿ ಸ್ವಾತಂತ್ರ್ಯದ ಬೆಳಕು ಮೂಡಿತು.

-ಸರ್ದಾರ್ ವಲ್ಲಭಭಾಯಿ ಪಟೇಲರ ದೃಢಸಂಕಲ್ಪ, ದಿಟ್ಟ ಕ್ರಮದ ಫಲವಾಗಿ ಸ್ವಾತಂತ್ರ್ಯದ ಸವಿ ದೊರಕುವಂತಾಯಿತು. ಈ ಮಹಾನ್ ಚೇತನಕ್ಕೆ ಆದರಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ. ಹಾಗೂ ಈ ಹೋರಾಟದಲ್ಲಿ ಹುತಾತ್ಮರಾದ ಎಲ್ಲ ಹೋರಾಟಗಾರರಿಗೂ ಹೃತ್ಪೂರ್ವಕ ಗೌರವ ಅರ್ಪಿಸಬಯಸುತ್ತೇನೆ.

-ಹೈದರಾಬಾದ್ ಕರ್ನಾಟಕ ಭಾಗ ಭಾರತದ ಅತ್ಯಂತ ಒಣ ಪ್ರದೇಶಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. ಸತತ ಬರಗಾಲಗಳ ಕಾರಣ ಇಲ್ಲಿ ಅಭಿವೃದ್ಧಿ ಮರೀಚಿಕೆಯಾಗಿತ್ತು. ಡಾ. ನಂಜುಂಡಪ್ಪ ವರದಿಯ ಪ್ರಕಾರ ಅಂದು ಈ ಭಾಗದಲ್ಲಿದ್ದ 31 ತಾಲ್ಲೂಕುಗಳಲ್ಲಿ 28 ತಾಲ್ಲೂಕುಗಳು ಹಿಂದುಳಿದಿದ್ದವು.

-ಈ ಹಿನ್ನೆಲೆಯಲ್ಲಿ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ ಸಂವಿಧಾನದ ಕಲಂ 371ಕ್ಕೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡಬೇಕು ಎಂಬ ಮತ್ತೊಂದು ಹೋರಾಟ ಪ್ರಾರಂಭವಾಯಿತು.

-ದಶಕಗಳ ಹೋರಾಟ ಹಿರಿಯರಾದ ವೈಜನಾಥ ಪಾಟೀಲ, ಈ ಭಾಗದ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಎನ್. ಧರಂಸಿಂಗ್ ಮತ್ತಿತರ ನಾಯಕರ ಸತತ ಹೋರಾಟ, ಪ್ರಯತ್ನಗಳ ಫಲವಾಗಿ 2012ರ ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರವು ಸಂವಿಧಾನ ಕಲಂ 371 ಕ್ಕೆ ತಿದ್ದುಪಡಿ ತಂದು (ಜೆ) ಪರಿಚ್ಛೇದ ಸೇರಿಸುವ ಮೂಲಕ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿ ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಹಾಗೂ ಅಭಿವೃದ್ಧಿ ಕಾರ್ಯ ಚುರುಕುಗೊಳಿಸಲು ಅವಕಾಶ ಕಲ್ಪಿಸಲಾಯಿತು. ಸಂಸತ್ತಿನಲ್ಲಿ ಹಾಗೂ ಕೇಂದ್ರ ಸರ್ಕಾರಕ್ಕೆ ಸಂವಿಧಾನ ತಿದ್ದುಪಡಿಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡುವಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಹಾಗೂ ಮಾಜಿ ಮುಖ್ಯಮಂತ್ರಿ ದಿ.ಎನ್. ಧರಂ ಸಿಂಗ್ ಅವರು ಮಾಡಿದ ಪ್ರಯತ್ನವನ್ನು ನಾವು ಇಲ್ಲಿ ಸ್ಮರಿಸಲೇ ಬೇಕು.

-ಇದರಿಂದಾಗಿ ಈ ಭಾಗದ 20 ಸಾವಿರಕ್ಕೂ ಅಧಿಕ ವಿದ್ಯಾವಂತ ಯುವಕ ಯುವತಿಯರಿಗೆ ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ದೊರೆಯುವಂತಾಗಿದೆ ಎನ್ನುವುದು ಸಂತೋಷದ ಸಂಗತಿ. ಆದರೆ ಹೈದರಾಬಾದ್ ಕರ್ನಾಟಕ ಮೀಸಲಾತಿ ಕುರಿತು ಕೆಲವು ಇಲಾಖೆಗಳಲ್ಲಿ ಕೆಲವು ಗೊಂದಲಗಳಿರುವುದು ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ನಾನು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ.

-ಇದಲ್ಲದೆ ಈ ಭಾಗದ ಹಲವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ, ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಹ ಈ ಮೀಸಲಾತಿಯಿಂದ ಅನುಕೂಲವಾಗಿದೆ.

-ಹಿಂದೆಯೂ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಕಾರ್ಯನಿರ್ವಹಿಸುತ್ತಿತ್ತು. 371 ಜೆ ತಿದ್ದುಪಡಿ ಆದ ನಂತರ 2013ರ ನವೆಂಬರ್ ತಿಂಗಳಿನಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚಿಸಲಾಗಿದೆ. ಮಂಡಳಿಗೆ ಈವರೆಗೆ 2880 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದ್ದು 2411.41 ಕೋಟಿ ರೂ. ವೆಚ್ಚವಾಗಿದೆ. ಈ ಯೋಜನೆಯಡಿ ಮಂಜೂರಾಗಿರುವ 13691 ಕಾಮಗಾರಿಗಳಲ್ಲಿ 8146 ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಯೋಜನೆಗಳ ಅನುಷ್ಠಾನದಲ್ಲಿಯೂ ಸಿಬ್ಬಂದಿ ಕೊರತೆ ಮತ್ತಿತರ ಹಲವಾರು ತೊಡಕುಗಳಿರುವುದನ್ನು ನನ್ನ ಗಮನಕ್ಕೆ ತಂದಿದ್ದೀರಿ. ಖಂಡಿತವಾಗಿಯೂ ಇವುಗಳನ್ನು ನಮ್ಮ ಸರ್ಕಾರ ಆದ್ಯತೆಯ ಮೇಲೆ ಬಗೆಹರಿಸಲಿದೆ. ಈ ಭಾಗವು ಅಭಿವೃದ್ಧಿಯತ್ತ ದಾಪುಗಾಲು ಹಾಕಲಿದೆ ಎನ್ನುವ ದೃಢ ವಿಶ್ವಾಸ ನನ್ನದು.

-ಜನರ ಸಮಸ್ಯೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಸದಾ ಸಿದ್ಧವಾಗಿದೆ. ಇತ್ತೀಚೆಗೆ ಹೆಸರು ಕಾಳನ್ನು ಬೆಂಬಲ ಬೆಲೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿ, ಖರೀದಿ ಕೇಂದ್ರ ತೆರೆಯುವ ಬಗ್ಗೆ ಸಕಾಲದಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದು ಖರೀದಿ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಂಡಿದ್ದೇವೆ.

-ರಸ್ತೆಗಳು, ಸೇತುವೆಗಳು, ಒಳಚರಂಡಿ, ಬೀದಿದೀಪ, ಕಟ್ಟಡಗಳು ಅಭಿವೃದ್ಧಿಯ ಒಂದು ಭಾಗ ಅಷ್ಟೆ. ಉತ್ತಮ ಆರೋಗ್ಯ, ಶಿಕ್ಷಣ, ಜೀವನ ಭದ್ರತೆ ದೊರೆತಾಗಲೇ ಅಭಿವೃದ್ಧಿಯ ಪರಿಭಾಷೆ ಪೂರ್ಣವಾಗುವುದು ಎಂಬುದು ನನ್ನ ಅಚಲ ನಂಬಿಕೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ಮಿತ್ರ ಪಕ್ಷ ಕಾಂಗ್ರೆಸ್ ತನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದೆ. ಜಯದೇವ ಹೃದ್ರೋಗ ಸಂಸ್ಥೆಯನ್ನು ಸ್ಥಾಪಿಸಿ ಈ ಭಾಗದ ಬಡ ರೋಗಿಗಳಿಗೆ ಅನುಕೂಲ ಕಲ್ಪಿಸಿದೆ. ನಂದೂರು-ಕೆಸರಟಗಿ ಕೈಗಾರಿಕಾ ಪ್ರದೇಶದಲ್ಲಿ 230 ಮಹಿಳಾ ಉದ್ದಿಮೆದಾರರಿಗೆ ನಿವೇಶನ ಹಂಚಿಕೆ ಮಾಡಿದೆ. ಕೌಶಲ್ಯ ಅಭಿವೃದ್ಧಿ, ವಸತಿ, ಮೂಲಸೌಕರ್ಯ ಹೀಗೆ ವಿವಿಧ ವಲಯಗಳಲ್ಲಿ ಸಾಕಷ್ಟು ಉತ್ತಮ ಕೆಲಸಗಳಾಗಿವೆ.

-ಇಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ನಾನು ಪ್ರಯಾಣಿಸುತ್ತಿದ್ದ ವಿಮಾನ ಭೂಸ್ಪರ್ಶ ಮಾಡಿದಾಗ ನನಗೆ ರೋಮಾಂಚನವಾಯಿತು. ಕಾರ್ಯಾಚರಣೆಗೆ ಸಿದ್ಧವಾಗಿರುವ, ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿಯಾಗಿರುವ ಈ ವಿಮಾನ ನಿಲ್ದಾಣ ಶೀಘ್ರವೇ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಹೆಬ್ಬಾಗಿಲು ಆಗುವುದು ಎಂಬ ಆಶಾಭಾವ ಮನದಲ್ಲಿ ಮಿಂಚಿತು. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ, ವಾಣಿಜ್ಯೋದ್ಯಮ, ರಫ್ತು ಉದ್ಯಮಗಳ ಬೆಳವಣಿಗೆಗೆ ಇದು ಪೂರಕವಾಗಲಿದೆ ಎಂಬ ವಿಶ್ವಾಸ ನನ್ನದು.

-ನಮ್ಮ ಮೈತ್ರಿ ಸರ್ಕಾರವೂ ಈ ಅಭಿವೃದ್ಧಿ ಪರ್ವವನ್ನು ಮುಂದುವರಿಸಲಿದೆ. ಇಲ್ಲಿನ ಸಮಸ್ಯೆಗಳ ಕುರಿತು ಸ್ಥಳೀಯರೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಲು ಸಿದ್ಧನಿದ್ದೇನೆ. ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಬಲಪಡಿಸುವ ಮೂಲಕ ಸಂವಿಧಾನ ತಿದ್ದುಪಡಿಯ ಆಶಯವನ್ನು ಸಾಕಾರಗೊಳಿಸಲು ಸರ್ಕಾರ ಕಾರ್ಯನಿರ್ವಹಿಸಲಿದೆ.

-ಪ್ರಸಕ್ತ ವರ್ಷದ ಆಯವ್ಯಯದಲ್ಲಿಯೂ ಸಾಕಷ್ಟು ಯೋಜನೆಗಳನ್ನು ಘೋಷಿಸಲಾಗಿದ್ದು, ಈ ಕಾರ್ಯಕ್ರಮಗಳು ಹೈದರಾಬಾದ್ ಕರ್ನಾಟಕ ಭಾಗದ ಜನರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ನಾನು ನಂಬಿದ್ದೇನೆ.

-ಕೃಷಿ ಹಾಗೂ ತೋಟಗಾರಿಕಾ ವಲಯದಲ್ಲಿ ಈ ಬಾರಿ ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ರೈತರ ಬದುಕು ಹಸನುಗೊಳಿಸಲು ಕೃಷಿ ಮತ್ತು ತೋಟಗಾರಿಕೆಯಲ್ಲಿ ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ಅಳವಡಿಸುವ ಯೋಜನೆಯನ್ನು ಮೊದಲ ಹಂತದಲ್ಲಿ 8 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುತ್ತಿದ್ದು, ಹೈದರಾಬಾದ್ ಕರ್ನಾಟಕದ ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿಯೂ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.

-ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಹ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಭಾಗದ ಜನತೆಗೂ ಇದರಿಂದ ಅನುಕೂಲವಾಗಲಿದೆ ಎಂದು ನಾನು ನಂಬಿದ್ದೇನೆ.

-ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮರಾಠಿ, ತೆಲುಗು ಹಾಗೂ ಉರ್ದು ಪ್ರಭಾವದಿಂದಾಗಿ ವಿಶಿಷ್ಟ ಸಂಸ್ಕೃತಿ ಮೇಳೈಸಿದೆ. ಐತಿಹಾಸಿಕವಾಗಿಯೂ ಬೌದ್ಧ, ಇಸ್ಲಾಮಿಕ್, ಜೈನ ಸ್ಮಾರಕಗಳು, ಕೋಟೆ ಕೊತ್ತಲಗಳು, ಯಾತ್ರಾಸ್ಥಳಗಳು ಸಹ ಇಲ್ಲಿ ಇರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶವಿದೆ. ಇದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿ, ಆದಾಯ ಹೆಚ್ಚಳ ಸಾಧ್ಯ. ರಾಜ್ಯ ಸರ್ಕಾರವು ಪ್ರಸಕ್ತ ವರ್ಷ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಉತ್ತಮ ಗುಣಮಟ್ಟದ ಹೋಟೆಲ್ ಸ್ಥಾಪನೆಗೆ ಪ್ರೋತ್ಸಾಹ, ಯುವಜನರಿಗೆ ಪ್ರವಾಸೋದ್ಯಮ ವಲಯದಲ್ಲಿ ತರಬೇತಿ ಹೀಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಇವುಗಳ ಪ್ರಯೋಜನ ಈ ಭಾಗಕ್ಕೆ ಒದಗಿಸುವ ನಿಟ್ಟಿನಲ್ಲಿ ಹಿಂದಿನ ಪ್ರವಾಸೋದ್ಯಮ ಸಚಿವರೂ ಆದ ಪ್ರಿಯಾಂಕ್ ಖರ್ಗೆ ಮತ್ತಿತರ ಪರಿಣತರೊಂದಿಗೆ ಚಿಂತನೆ ನಡೆಸಿ ಸೂಕ್ತ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ತಿಳಿಸಬಯಸುತ್ತೇನೆ. ಇದಲ್ಲದೆ ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಬಗ್ಗೆ ಸರ್ಕಾರ ಆಯವ್ಯಯದಲ್ಲಿ ಘೋಷಿಸಿದ್ದು, ಇದರಿಂದಲೂ ಈ ಭಾಗಕ್ಕೆ ಅನುಕೂಲವಾಗಲಿದೆ ಎಂದು ನಾನು ನಂಬಿದ್ದೇನೆ.

-ಈ ಭಾಗದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಪದವೀಧರರಿಗೆ ಕಲಬುರಗಿ ನಗರದಲ್ಲಿ ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಯುಪಿಎಸ್ಸಿ/ ಕೆಪಿಎಸ್ಸಿ / ಬ್ಯಾಂಕಿಂಗ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವವುದು.

-ಇದಲ್ಲದೆ ಸಮಾಜ ಕಲ್ಯಾಣ ವಸತಿ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳಲ್ಲಿ ಸೌಲಭ್ಯಗಳನ್ನು ಉತ್ತಮಗೊಳಿಸಲು, ಇವುಗಳ ಕಾರ್ಯನಿರ್ವಹಣೆಯಲ್ಲಿ ಅಮೂಲಾಗ್ರ ಸ್ಮಧಾರಣೆ ತರುವ ನಿಟ್ಟಿನಲ್ಲಿ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಈ ಸಮಿತಿಯ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಿದ್ದೇವೆ.

-ಕೈಗಾರಿಕೆಗಳು ಆರ್ಥಿಕ ಅಭಿವೃದ್ಧಿಗೆ ಅತಿ ಅಗತ್ಯ. ರಾಜ್ಯದ ಎಲ್ಲ ಭಾಗಗಳಲ್ಲಿ, ಅದರಲ್ಲೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡಲು ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಕೈಗಾರಿಕೆ ಸ್ಥಾಪಿಸಿ, ಸ್ಥಳೀಯವಾಗಿ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಚೈನಾದೊಂದಿಗೆ ಆರೋಗ್ಯಕರ ಸ್ಪರ್ಧೆ ಎಂಬ ಯೋಜನೆಯಡಿ ರಾಜ್ಯದಲ್ಲಿ 9 ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸಲು ಸಚಿವ ಸಂಪುಟ ಸೆಪ್ಟೆಂಬರ್ 6ರ ಸಭೆಯಲ್ಲಿ ಅನುಮೋದನೆ ನೀಡಿದೆ. ಇದರಲ್ಲಿ ಬೀದರ್ ನಲ್ಲಿ ಕೃಷಿ ಯಂತ್ರೋಪಕರಣಗಳ ತಯಾರಿಕೆ, ಕಲಬುರಗಿಯಲ್ಲಿ ಸೋಲಾರ್ ಉಪಕರಣಗಳ ತಯಾರಿಕೆ, ಕೊಪ್ಪಳದಲ್ಲಿ ಇಲೆಕ್ಟ್ರಾನಿಕ್ ಆಟಿಕೆಗಳ ತಯಾರಿಕೆ ಹಾಗೂ ಬಳ್ಳಾರಿಯಲ್ಲಿ ವಸ್ತ್ರೋದ್ಯಮದ ಕ್ಲಸರ್ ಗಳನ್ನು ಸ್ಥಾಪಿಸಲಾಗುವುದು. ಸ್ಥಳೀಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಮೂಲಕ ಈ ಉದ್ಯಮಗಳಲ್ಲಿ ಉದ್ಯೋಗಾವಕಾಶ ಒದಗಿಸಲೂ ಸಹ ಕ್ರಮ ವಹಿಸುತ್ತಿದೆ. ಮುಂದಿನ 5 ವರ್ಷಗಳಲ್ಲಿ ಈ ಯೋಜನೆ ಸಾಕಾರಗೊಳ್ಳಲಿದೆ.

-ಇದಲ್ಲದೆ ನಮ್ಮ ಸರ್ಕಾರ ಹಮ್ಮಿಕೊಂಡಿರುವ ಹಲವಾರು ದೂರದರ್ಶಿತ್ವ ಇರುವ ಯೋಜನೆಗಳ ಅನುಷ್ಠಾನ ಈ ಭಾಗದ ಅಭಿವೃದ್ಧಿಗೆ ನೆರವಾಗಲಿದೆ ಎಂಬ ನಂಬಿಕೆ ನನಗಿದೆ. ಈ ಭಾಗದ ಜನರ ಹಿತದೃಷ್ಟಿಯಿಂದ ಸರ್ಕಾರ ಏನೇನು ಕ್ರಮ ಕೈಗೊಳ್ಳಲು ಸಾಧ್ಯವೋ ಅವೆಲ್ಲವನ್ನೂ ಕೈಗೊಳ್ಳಲಿದೆ.ಈ ನಿಟ್ಟಿನಲ್ಲಿ ನಾವು ನೀವೆಲ್ಲರೂ ಜೊತೆಗೂಡಿ ಕಾರ್ಯ ನಿರ್ವಹಿಸಿದರಷ್ಟೇ ಅಭಿವೃದ್ಧಿಯ ಹಾದಿಯಲ್ಲಿ ಯಶಸ್ಸು ಕಾಣಲು ಸಾಧ್ಯ.

-“Manpower without unity is not a strength unless it is harmonized; united properly, it becomes a spiritual power“ ಎಂದು ಹೈದರಾಬಾದ್ ಕರ್ನಾಟಕಕ್ಕೆ ಸ್ವಾತಂತ್ರ್ಯ ದೊರಕಿಸಿದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಹೇಳಿದ್ದಾರೆ. ನಾವೆಲ್ಲರೂ ಒಂದಾಗಿ ಕೆಲಸ ಮಾಡಿದರೆ ಮಾತ್ರ ಅಜ್ಞಾನ, ಅನಕ್ಷರತೆ, ಬಡತನ, ಅನಾರೋಗ್ಯ, ಅಪೌಷ್ಟಿಕತೆ, ಇವೆಲ್ಲವುಗಳಿಂದ ವಿಮೋಚನೆ ಪಡೆಯಲು ಸಾಧ್ಯ. ಬನ್ನಿ, ಹೈದರಾಬಾದ್ ಕರ್ನಾಟಕದ ಕಲ್ಯಾಣಕ್ಕಾಗಿ ಕೆಲಸ ಮಾಡೋಣ. ಸರ್ಕಾರ ಸದಾ ನಿಮ್ಮೊಂದಿಗೆ ಇದೆ ಎಂದು ಹಾರೈಸಿ, ನನ್ನ ಮಾತು ಮುಗಿಸುತ್ತೇನೆ.

ನಮಸ್ಕಾರ

ಜೈ ಹಿಂದ್, ಜೈ ಕರ್ನಾಟಕ