ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ನೂರಾರು ಸಮಸ್ಯೆ ಸಮಚಿತ್ತದ ಭರವಸೆ ಬೆಳಗಾವಿ ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಜನಸಾಗರ

know_the_cm

ಸುವರ್ಣ ವಿಧಾನಸೌಧ (ಬೆಳಗಾವಿ) ಸೆಪ್ಟೆಂಬರ್ 15

-ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಡೆಸಿದ ಜನತಾದರ್ಶನಕ್ಕೆ ಉತ್ತರ ಕರ್ನಾಟಕದ ಭಾಗದ ಅಸಂಖ್ಯಾತ ಜನರು ಸೇರಿ ತಮ್ಮ ಅಹವಾಲನ್ನು ತೋಡಿಕೊಂಡರು.

-ಇದೇ ಮೊದಲ ಬಾರಿಗೆ ಸುವರ್ಣ ವಿಧಾನಸೌಧದಲ್ಲಿಮುಖ್ಯಮಂತ್ರಿಯವರಿಂದ ಜನತಾದರ್ಶನ ನಡೆದಿದ್ದು, ಬೆಳಗಿನಿಂದಲೇ ಬಂದಿದ್ದ ಸಾರ್ವಜನಿಕರು, ವಿಕಲಚೇತನರು, ವಿವಿಧ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಮುಂದೆ ಬಿಚ್ಚಿಟ್ಟರು.

-ಸುವರ್ಣ ವಿಧಾನಸೌಧದ ನೆಲ ಮಹಡಿಯಲ್ಲಿ ವಿಶೇಷ ಚೇತನರಿಗೆ ಹಾಗೂ ಮೊದಲ ಮಹಡಿಯಲ್ಲಿ ಸಾರ್ವಜನಿಕರಿಂ ಅಹವಾಲು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನಿಂದಲೇ ಇ-ಜನಸ್ಪಂದನದಲ್ಲಿ ಸಾರ್ವಜನಿಕರ ನೊಂದಣಿ ಮಾಡಲಾಗಿತ್ತು. ಅದರಂತೆ ಸುಮಾರು 3ಸಾವಿರಕ್ಕೂ ಹೆಚ್ಚು ಮಂದಿ ಇಂದಿನ ಜನತಾ ದರ್ಶನದಲ್ಲಿ ಭಾಗವಹಿಸಿದ್ದರು.

-ರಾಯಭಾಗ ತಾಲೂಕು ನೀಲಜಿ ಗ್ರಾಮದ ಮಹಾದೇವಿ ಶ್ರೀಶೈಲ ಜಂಗಮ ದಂಪತಿಯ 10ತಿಂಗಳ ಮಗುವಿಗೆ ಕೀಲು ಸಂಬಂಧಿ ರೋಗವಿದ್ದು ಮಗುವಿನ ಕಾಲುಗಳು ಹಾಗೂ ಕೈಗಳು ಸ್ವಾದೀನದಲ್ಲಿಲ್ಲ.ತೀವ್ರ ಬಡತನದಲ್ಲಿ ಬದುಕುತ್ತಿರುವ ಇವರು ಆಪರೇಷನ್ ಗೆ ತುಂಬಾ ಹಣ ವೆಚ್ಚವಾಗಲಿದ್ದು ನಮ್ಮ ಬಳಿ ಹಣವಿಲ್ಲ ಎಂದು ಹೇಳಿದರು. ತಕ್ಷಣ ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸುವುದಾಗಿ ಹಾಗೂ ಸಂಬಂಧಿಸಿದ ಖರ್ಚುಗಳಿಗೆ ನೆರವು ನೀಡುವ ಭರವಸೆ ನೀಡಿ. ಮುಂದಿನ ವಾರ ಬೆಂಗಳೂರಿಗೆ ಬರುವಂತೆ ತಿಳಿಸಿದರು.

-ಗೋಕಾಕ್ ತಾಲೂಕು ಪಟಗುಂದಿಯ ವಿಶೇಷ ಚೇತನ ರೂಪಾ (28) ಇವರು ಎಂಎಸ್ ಡಬ್ಲು ಓದಿದ್ದು ಕಂಪ್ಯೂಟರ್ ಕೂಡಾ ಮಾಡಿದ್ದೇನೆ ಉದ್ಯೋಗ ಬೇಕು ಎಂದು ಕೋರಿದರು ಇದಕ್ಕೆ ಸ್ಪಂದಿಸಿದ ಸಿಎಂ ಉದ್ಯೋಗ ಕೊಡಿಸುವ ಭರವಸೆ ನೀಡಿದರು.

-ದಾವಣಗೆರೆ ಈಜಕಟ್ಟ ಗ್ರಾಮದ ರಾಮಾನಾಯ್ಕ್ (70) ಪಾರ್ಶ್ವವಾಯು ರೋಗ ಪೀಡಿತರಾಗಿದ್ದು ಅವರ ಪತ್ನಿ ಪಾರಿಬಾಯಿ ಗರ್ಭಕೋಶ ಕ್ಯಾನ್ಸರ್ ಬಾಧಿತರಾಗಿದ್ದಾರೆ. ಕಡುಬಡವರಾದ ರಾಮಾನಾಯ್ಕ್ ದಂಪತಿಗೆ ಆದಾಯ ಮೂಲಗಳಿಲ್ಲದೆ. ಆಸ್ಪತ್ರೆಗಾಗಿ ಲಕ್ಷಾಂತರ ರೂ. ಖರ್ಚು ಮಾಡಬೇಕಾಗಿದೆ. ಇವರನ್ನು ಭೇಟಿಯಾದ ಸಿ.ಎಂ. ಆಸ್ಪತ್ರೆ ವೆಚ್ಚ ಹಾಗೂ ಬದುಕಲು ಆರ್ಥಿಕ ನೆರವು ನೀಡುವುದಾಗಿ ಹೇಳಿದರು.

-ಗೋಕಾಕ್ ತಾಲೂಕು ನಾಗನೂರಿನ ವಿಠಲ ಸಿದ್ದಪ್ಪ ಬಾಗೇವಾಡಿ 10ತಿಂಗಳ ಹಿಂದೆ ಮುದೋಳ್ ಬಳಿ ಮೋಟಾರ್ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ಕಾಲು ಮೂಳೆ ಮುರಿದಿದೆ. ಈ ಸಂಬಂಧ ಕೇಸು ದಾಖಲಾಗಿದೆಯಾದರೂ ಡಿಕ್ಕಿ ಹೊಡೆದ ಲಾರಿ ಸಿಕ್ಕಿಲ್ಲ. ತೀವ್ರ ಬಡತನದಲ್ಲಿರುವ ಇವರ ಪತ್ನಿ ಕೂಡ ನಿಧನರಾಗಿದ್ದಾರೆ. ಮುಖ್ಯಮಂತ್ರಿಗಳು 3.5ಲಕ್ಷ ಆರ್ಥಿಕ ನೆರವು ನೀಡುವುದಾಗಿ ತಿಳಿಸಿ ಅದನ್ನು ಬ್ಯಾಂಕ್ ಖಾತೆಯಲ್ಲಿ ಠೇವಣಿ ಇರಿಸಿ ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳಲು ಸೂಚಿಸಿದರು.

-ಹುಕ್ಕೇರಿ ತಾಲೂಕು ಯಲ್ಲಾಪುರ ಕರಗುಪ್ಪಿಯ ಶ್ರೀಕಾಂತ ಕಾಡಗೋಡ ( 40) ನರ ರೋಗದಿಂದ ಬಳಲುತ್ತಿದ್ದಾರೆ. ಸಿಎಂ 3 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ಹಾಗೂ ಈ ಹಣವನ್ನು ಠೇವಣಿ ಇರಿಸಿ ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳುವಂತೆ ತಿಳಿಸಿದರು.

-ನವಲಗುಂದ ತಾಲುಕು ಅಳಗವಾಡಿಯ ಮನೋಜ್ ಯಡ್ರಾಮಿ (15) ಹಾಗೂ ಸಚಿನ್ ಯಡ್ರಾಮಿ (18) ಗೆ ದಾಟಾ2 ಎಂಬ ವಿಚಿತ್ರ ಖಾಯಿಲೆ ಕಾಣಿಸಿಕೊಂಡಿದೆ. ಕಳೆದ ಒಂದು ವರ್ಷದಿಂದ ಈ ಕಾಯಿಲೆಯಿದ್ದು ರಕ್ತ ವಾಂತಿಯಾಗುತ್ತದೆ. ಇಬ್ಬರಿಗೂ ತಲಾ 5 ಲಕ್ಷ ರೂ. ನೆರವು ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

------------------------------

know_the_cm

ಮುಖ್ಯಮಂತ್ರಿ ಜನತಾದರ್ಶನ: ಗಂಟೆಗಟ್ಟಲೇ ಕಾಯ್ದು ಕುಳಿತ ವಿಕಲಚೇತನರಿಗೆ ಸಂತಸ, ಹಿರಿಯಣ್ಣನಂತೆ ಅಹವಾಲು ಆಲಿಸಿದ ಮುಖ್ಯಮಂತ್ರಿ

-ಸಾಲಾಗಿ ಕುಳಿತಿರುವ ವಿಕಲಚೇತನರು. ಎಲ್ಲರ ಮೊಗದಲಿ ನಿರೀಕ್ಷೆ ಒಂದೆಡೆಯಾದರೆ ನಾಡಿನ ಸಿಎಂ ಸ್ವತಃ ತಮ್ಮ ಬಳಿ ಬಂದು ಅಹವಾಲು ಆಲಿಸಿಯಾರೇ ಎಂಬ ಪ್ರಶ್ನಾರ್ಥಕ ಭಾವ ಇನ್ನೊಂದೆಡೆ; ಆದರೆ ಯಾರ ನಿರೀಕ್ಷೆಯೂ ಹುಸಿಯಾಗಲಿಲ್ಲ!

-ಸುವರ್ಣ ವಿಧಾನಸೌಧದ ದಕ್ಷಿಣ ದ್ವಾರದ ಬಳಿಯ ನೆಲಮಹಡಿಯಲ್ಲಿ ಗಂಟೆಗಟ್ಟಲೆ ಕಾದು ಕುಳಿತಿದ್ದ ವಿಕಲಚೇತನರ ಬಳಿ ತೆರಳಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಅತ್ಯಂತ ತಾಳ್ಮೆಯಿಂದ ಅಹವಾಲುಗಳನ್ನು ಸ್ವೀಕರಿಸಿದರು.

-ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಮನೆಯ ಯಜಮಾನನಂತೆ ಸಮಾಧಾನದಿಂದಲೇ ಪ್ರತಿಯೊಬ್ಬರ ಬಳಿ ತೆರಳಿ ಅಹವಾಲು ಕೇಳಿದರು.

-ಹಿರಿಯರು-ಕಿರಿಯರು ಎಂಬ ಭೇದವೆಣಿಸದೇ ಎಲ್ಲರೊಂದಿಗೆ ಶಾಂತಚಿತ್ತರಾಗಿಯೇ ಮಾತನಾಡಿದ ಮುಖ್ಯಮಂತ್ರಿಗಳು, ಜನತಾದರ್ಶನದ ಮೊದಲ ಹಂತದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಅಹವಾಲು ಆಲಿಸಿದರು.

-ದುಃಖ ತಡೆಯದೇ ಕಣ್ಣೀರು ಹಾಕಿದ ಮಹಿಳೆಯರು, ಅನೇಕ ವರ್ಷಗಳಿಂದ ನ್ಯಾಯ ಸಿಗದೇ ಕಚೇರಿಗಳಿಗೆ ಅಲೆದಾಡಿ ಸುಸ್ತಾದ ಜನರಿಗೆ ಸ್ವತಃ ಮುಖ್ಯಮಂತ್ರಿಗಳೇ ಎದುರು ನಿಂತು‌ ಸಮಸ್ಯೆ ಕೇಳಿದಾಗ ಒಂದು ಕ್ಷಣ ದಿಗ್ಞೂಢರಾದರು. ಕೆಲವರು ಕೈಮುಗಿದು ನನಗೆ ಸಹಾಯ ಮಾಡಿ ನಿಮಗೆ ಉಪಕಾರವಾಗುತ್ತೆ ಎಂದರೆ‌ ಇನ್ನೂ ಕೆಲವರು ಮಾತಿನ ಮೂಲಕ‌ ಹೇಳಲಾಗದೇ ಕಾಲು ಮುಗಿಯಲು ಮುಂದಾದರು. ಅದಕ್ಕೆ ಆಸ್ಪದ ನೀಡದ ಮುಖ್ಯಮಂತ್ರಿಗಳು, ನಿಮ್ಮ ಅಹವಾಲು ಕೇಳಲೆಂದೇ ಬಂದಿರುವೆ ಎಂದಾಗ ಹಿರಿಯಣ್ಣನ ಮುಂದೆ ಸಮಸ್ಯೆ ತೋಡಿಕೊಳ್ಳುವ ರೀತಿಯಲ್ಲಿ ತುಸು ಮುಜುಗರದಿಂದಲೇ ಅಹವಾಲು ಬಿಚ್ಚಿಟ್ಟರು, ಅಹವಾಲು ಆಲಿಸುತ್ತಲೇ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

-ಇದಾದ ನಂತರ ಸಂಜೆ 7 ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ಜನತಾದರ್ಶನ ಮುಂದುವರಿಸಿದರು.

-ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು 1271 ಜನರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು, ಇಷ್ಟು‌ ಜನರನ್ನು ನೇರವಾಗಿ ಮಾತನಾಡಿಸಿ ಅಹವಾಲು ಹೇಗೆ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳ ತಾಳ್ಮೆಯು ಉತ್ತರವಾಗಿತ್ತು.

-ಒಂದಿನಿತು ಬೇಸರ ಮಾಡಿಕೊಳ್ಳದೇ ಜನತಾ ದರ್ಶನ ಮುಂದುವರಿಸಿದರು. ನೊಂದವರ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ ಮುಖ್ಯಮಂತ್ರಿಗಳು ಕೆಲವೊಂದು ಸಮಸ್ಯೆಗಳನ್ನು ಸ್ಥಳ ದಲ್ಲೇ ಬಗೆಹರಿಸಿದರು. ಕೆಲವು ಮನವಿಪತ್ರಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ವಹಿಸುವಂತೆ ಷರಾ ಬರೆದರು.

-ಮುಖ್ಯಮಂತ್ರಿಯೇ ಸ್ವತಃ ಐದಾರು ಗಂಟೆಗಳ ಕಾಲ‌ನಿರಂತರವಾಗಿ ಅಹವಾಲು ಆಲಿಸುವುದನ್ನು ಕಂಡ ಜನರು ತಮ್ಮ ಸಮಸ್ಯೆಯನ್ನು ಅವರಿಗೆ ತಿಳಿಸಿ, ಮನವಿಪತ್ರ ಅವರ ಕೈಗಿಟ್ಟು ಇಂದಲ್ಲ ನಾಳೆಯಾದರೂ ತಮ್ಮ ಸಮಸ್ಯೆ ಇತ್ಯರ್ಥವಾಗಲಿದೆ ಎಂಬ ನೆಮ್ಮದಿಯ ನಿಟ್ಟುಸಿರಿನಿಂದ ಮನೆ ಕಡೆ ಹೆಜ್ಜೆ ಹಾಕಿದರು.

------------------------------

know_the_cm

ಸುವರ್ಣ ಸೌಧದಲ್ಲಿ ಜನರ ನೋವಿಗೆ ಸ್ಪಂದಿಸಿದ ಮುಖ್ಯಮಂತ್ರಿ

-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಏರ್ಪಡಿಸಿದ ಜನತಾದರ್ಶನ ಕಾರ್ಯಕ್ರಮದಲ್ಲಿ ಸುಮಾರು 3000 ಜನ ಆಗಮಿಸಿ ತಮ್ಮ ಕುಂದುಕೊರತೆಗಳ ಅಹವಾಲು ಸಲ್ಲಿಸಿದರು.

-ಬೆಳಿಗ್ಗೆ ಕೆಎಲ್‍ಎಸ್ ಸಂಸ್ಥೆ ಹಾಗೂ ರಾಜಾ ಲಖಮಗೌಡ ಕಾನೂನು ಕಾಲೇಜು ಅಮೃತ ಮಹೋತ್ಸವ ಸಮಾರಂಭ, ಕನ್ನಡ ಭವನ ಉದ್ಘಾಟನೆ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಬಡಾವಣೆಯ ಜನರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು ಮಧ್ಯಾಹ್ನ 3 ಗಂಟೆಗೆ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದಾಗ ವಿಕಲಚೇತನರೂ ಸೇರಿದಂತೆ ಸಾವಿರಾರು ಜನ ತಮ್ಮ ಸಮಸ್ಯೆಗೆ ಪರಿಹಾರ ಕಾಣುವ ನಿರೀಕ್ಷೆಯಲ್ಲಿದ್ದರು, ಮೊದಲಿಗೆ ವಿಕಲಚೇತನರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿದ್ದ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಖುದ್ದು ಪ್ರತಿಯೊಬ್ಬರ ಬಳಿಗೆ ತೆರಳಿ ಅವರ ಅಹವಾಲು ಸ್ವೀಕರಿಸಿ, ಅಧಿಕಾರಿಗಳಿಗೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳನ್ನು ಸೂಚಿಸಿದರು.

-ವೈದ್ಯಕೀಯ ಸಮಸ್ಯೆ ಹೊತ್ತು ಬಂದವರಿಗೆ ಪರಿಹಾರ ನಿಧಿಯಿಂದ ನೆರವು ಕಲ್ಪಿಸುವುದರ ಜೊತೆಗೆ ವಿವಿಧ ಆಸ್ಪತ್ರೆಗಳ ವೈದ್ಯರೊಂದಿಗೆ ಖುದ್ದು ಮಾತನಾಡಿ, ಚಿಕಿತ್ಸೆ ನೀಡಲು ಸೂಚಿಸಿದರು, ಶಾಸಕರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ್, ಜಿಲ್ಲಾಧಿಕಾರಿ ಜಿಯಾವುಲ್ಲಾ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಸಚಿವಾಲಯದಲ್ಲಿ ಜನತಾದರ್ಶನ ನಿರ್ವಹಿಸುವ 16 ಮಂದಿ ಅಧಿಕಾರಿ/ ಸಿಬ್ಬಂದಿಯ ತಂಡ ಜೊತೆಗಿದ್ದರು.

-ಅರ್ಜಿದಾರರಿಗೆ ಕೂಡಲೇ ನೆರವು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು, ಅಲ್ಲದೆ ನೆರವು ನೀಡಲು ಕಾನೂನಿನ ತೊಡಕೇನಾದರೂ ಇದ್ದಲ್ಲಿ ತಮ್ಮ ಅನುಮತಿ ಪಡೆದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡಿದರು.

-ಬೆಳಗಾವಿ ಬಸ್ ನಿಲ್ದಾಣದಿಂದ ಸುವರ್ಣ ಸೌಧಕ್ಕೆ 5 ಉಚಿತ ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು. ಆಗಮಿಸಿದ ಸಾರ್ವಜನಿಕರಿಗೆ ಮಜ್ಜಿಗೆ, ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.

-ಅಹವಾಲು ಸಲ್ಲಿಸಿದ ಜನರು ತಮ್ಮ ಕಷ್ಟ ಬಗೆಹರಿಯುವ ಭರವಸೆಯೊಂದಿಗೆ ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿದರು. ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳು, ಉತ್ತರಕನ್ನಡ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಿಂದ ಜನರು ಆಗಮಿಸಿದ್ದರು.