ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮಹದಾಯಿ ನೀರನ್ನು ಸದುಪಯೋಗಿಸಿಕೊಳ್ಳಲು 15 ದಿನಗಳಲ್ಲಿ ರೂಪುರೇಷೆ - ಮುಖ್ಯಮಂತ್ರಿ

know_the_cm

ಬೆಳಗಾವಿ ಸೆಪ್ಟೆಂಬರ್ 15

-ಮಹದಾಯಿ ನೀರನ್ನು ಯಾವ ರೀತಿ ಸದುಪಯೋಗಿಸಿಕೊಳ್ಳಬೇಕು ಎನ್ನುವ ಬಗ್ಗೆ ರಾಜ್ಯದ ಕಾನೂನು ತಜ್ಞರು ಹಾಗೂ ನೀರಾವರಿ ತಜ್ಞರೊಂದಿಗೆ ಈಗಾಗಲೇ ಸಭೆ ನಡೆಿಸಲಾಗಿದ್ದು, 15 ದಿನದ ಒಳಗೆ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.

-ಬೆಳಗಾವಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಹದಾಯಿ ಹೋರಾಟಗಾರರ ಮೇಲಿನ ಕೇಸ್ಗಳನ್ನು ಶೀಘ್ರವೇ ಹಿಂಪಡೆಯಲಾಗುವುದು ಎಂದು ಹೇಳಿದರು.

-ಸರ್ಕಾರ ರೈತರ 45 ಸಾವಿರ ಕೋಟಿ ರೂ. ಸಾಲಮನ್ನಾ ಘೋಷಣೆ ಮಾಡಿದೆ. ಸಾಲಮನ್ನಾ ಮಾಡಿದ ಹಣಕ್ಕೂ ಇಲಾಖೆಗಳ ಕಾರ್ಯಕ್ರಮಗಳಿಗೆ ಮೀಸಲಿರಿಸಿರುವ ಹಣಕ್ಕೂ ಯಾವುದೇ ಸಂಬಂಧವಿಲ್ಲ. ಸಾಲಮನ್ನಾದಿಂದ ಸರ್ಕಾರದ ಯಾವುದೇ ಯೋಜನೆಗಳಿಗೆ ತೊಂದರೆಯಾಗಿಲ್ಲ. ಸರ್ಕಾರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

-ಕೆಲವು ಬ್ಯಾಂಕ್ನವರು ರೈತರಿಗೆ ಸಾಲ ಪಡೆದುಕೊಂಡ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಯಾವುದೇ ಬ್ಯಾಂಕ್ನವರು ರೈತರಿಗೆ ಹಣ ನೀಡುವಂತೆ ಕಿರುಕುಳ ನೀಡಬಾರದು ಎಂದು ಸೂಚನೆ ನೀಡಿದರು.ಸರ್ಕಾರದಿಂದ ಘೋಷಣೆ ಮಾಡಿರುವ ರಾಷ್ಟ್ರೀಕೃತ ಬ್ಯಾಂಕ್ಗಳ 35 ಸಾವಿರ ಕೋಟಿ ಸಾಲವನ್ನು 4 ವರ್ಷಗಳಲ್ಲಿ ಕಂತುಗಳ ಮೂಲಕ ಪೂರೈಸಬೇಕೆಂದು ಚರ್ಚೆ ಮಾಡಲಾಗಿತ್ತು. ಆದರೆ ಬರುವ ಜುಲೈನೊಳಗೆ ಎಲ್ಲ ಹಣವನ್ನು ಬ್ಯಾಂಕ್ಗಳಿಗೆ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ. ಆದ್ದರಿಂದ ಬ್ಯಾಂಕ್ನವರು ಸರ್ಕಾರಕ್ಕೆ ಸಹಕಾರ ನೀಡಬೇಕೆಂದು ತಿಳಿಸಿದರು.

-ಬೆಳಗಾವಿಯಲ್ಲಿ ವಿಧಾನಸಭೆಯ ಕಲಾಪಗಳು ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಪ್ರಥಮ ಬಾರಿಗೆ ಇಲ್ಲಿ ಕಲಾಪವನ್ನು ಏರ್ಪಡಿಸಿದ್ದೆ. ಸುವರ್ಣಸೌಧ ವರ್ಷದ 365 ದಿನವೂ ಕಾರ್ಯನಿರ್ವಹಿಸಬೇಕೆಂದು ನಾನು ಕೂಡ ಆಶಿಸುತ್ತಿದ್ದೇನೆ. ಈ ಬಗ್ಗೆ ಶೀಘ್ರ ಸರ್ಕಾರದ ಎಲ್ಲ ಪ್ರತಿನಿಧಿಗಳೊಂದಿಗೆ ಚರ್ಚಿಸಿ, ಇಲಾಖೆಗಳ ಸ್ಥಳಾಂತರ ಮಾಡಲಾಗುವುದೆಂದು ಕುಮಾರಸ್ವಾಮಿ ಅವರು ಹೇಳಿದರು.

-ಬೆಳಗಾವಿ, ಕಲಬುರಗಿ, ಬೀದರ್, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಉತ್ಪಾದನಾ ವಲಯವನ್ನು ನಿರ್ಮಿಸಲು ಹೆಚ್ಚಿನ ಒತ್ತು ನೀಡಲಾಗುವುದು. ಉತ್ತರ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಎಲ್ಲ ಜಿಲ್ಲೆಗಳ ಅಭಿವೃದ್ಧಿಗೂ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರದ ಕುರಿತ ಅಪಪ್ರಚಾರಕ್ಕೆ ಯಾರು ಕೂಡ ಕಿವಿಗೊಡಬಾರದು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

-ಬೆಳಗಾವಿ ಜಿಲ್ಲೆಯಿಂದಲೇ 2006 ರಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಆರಂಭಿಸಿದ್ದೆ. ಈ ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 19 ಬಾರಿ ಬೆಳಗಾವಿಗೆ ಭೇಟಿ ನೀಡಿದ್ದೆ. ಇಲ್ಲಿಯೇ ವಿಧಾನಸಭೆ ಕಲಾಪಗಳನ್ನು ಆರಂಭಿಸಿದ್ದೆ. ಬೆಳಗಾವಿ ಜಿಲ್ಲೆಯೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದು, ಅವಿನಾಭಾವ ಸಂಬಂಧವನ್ನು ಹೊಂದಿದ್ದೇನೆ ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.