ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ರಾಜ್ಯಕ್ಕೆ ಸೂಕ್ತ ಪರಿಹಾರ - ಕೇಂದ್ರ ಅಧ್ಯಯನ ತಂಡಕ್ಕೆ ಮುಖ್ಯಮಂತ್ರಿಗಳ ಮನವಿ

know_the_cm

ಗೃಹ ಕಚೇರಿ ಕೃಷ್ಣಾ(ಬೆಂಗಳೂರು) ಸೆಪ್ಟೆಂಬರ್ 14

-ಕೊಡಗು, ದಕ್ಷಿಣ ಕನ್ನಡ, ಹಾಸನ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಹಾನಿ ಉಂಟಾಗಿರುವುದರಿಂದ ಉದಾರ ಪರಿಹಾರ ಒದಗಿಸಲು ಶಿಫಾರಸ್ಸು ಮಾಡುವಂತೆ ಕೇಂದ್ರ ಅಧ್ಯಯನ ತಂಡಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.

-ಹಾನಿಗೊಳಗಾಗಿದ್ದ ಜಿಲ್ಲೆಗಳಿಗೆ ಭೇಟಿ ನೀಡಿದ ನಂತರ ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್ ನೇತೃತ್ವದ ಕೇಂದ್ರ ಅಧ್ಯಯನ ತಂಡವು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತು.

-ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿರುವ ರಸ್ತೆ, ಸೇತುವೆ, ಮನೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಪುನರ್ ನಿರ್ಮಿಸಲು ರಾಜ್ಯ ವಿಕೋಪ ಪರಿಹಾರ ನಿಧಿಯಡಿ ಒದಗಿಸಲಾಗಿರುವ ಮೊತ್ತ ತೀರಾ ಕಡಿಮೆ ಎಂದು ಮುಖ್ಯಮಂತ್ರಿಗಳು ತಂಡಕ್ಕೆ ತಿಳಿಸಿದರು. ಈ ಹಿಂದಿನ ವಿಕೋಪದ ಸಂದರ್ಭದಲ್ಲಿ ಪಡೆದ ಅನುದಾನಕ್ಕಿಂತಲೂ ದುಪ್ಪಟ್ಟು ಮೊತ್ತವನ್ನು ರಾಜ್ಯ ಸರ್ಕಾರ ಖರ್ಚು ಮಾಡಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಾಶವೂ ಆಗಿದ್ದು, ಹೆಚ್ಚಿನ ಪರಿಹಾರವನ್ನು ಒದಗಿಸಲು ತಿಳಿಸಿದರು.

-ಸಚಿವರುಗಳಾದ ಡಿ.ಕೆ.ಶಿವಕುಮಾರ್ ಮತ್ತು ಕೃಷ್ಣ ಭೈರೇಗೌಡ ಅವರು ಮಾತನಾಡಿ ಈ ಸಾಲಿನ ಅತಿವೃಷ್ಟಿ ಹೇಗೆ ವಿನಾಶಕಾರಿಯಾಗಿತ್ತು ಎಂದು ಮನದಟ್ಟು ಮಾಡಿದರು.

-ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್ ಮಾತನಾಡಿ ಅತಿವೃಷ್ಟಿಯಿಂದ ಹಾನಿಗೊಳಗಾದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಪರಿಶೀಲನೆ ನಡೆಸಲಾಗಿದೆ. ರಾಜ್ಯದಲ್ಲಿ ಜಿ.ಪಿ.ಎಸ್.ಆಧಾರಿತ ಬೆಳೆ ಸಮೀಕ್ಷೆ ಹಾಗೂ ಮಾಹಿತಿ ಸಂಗ್ರಹಣೆಯ ವಿಧಾನ ದೇಶದಲ್ಲಿಯೇ ಅತ್ಯುತ್ತಮವಾದದ್ದು ಎಂದರು.

-ಹಾನಿಗೊಳಗಾದ ಯಾವ ಜಿಲ್ಲೆಯಲ್ಲಿಯೂ ಸರ್ಕಾರದ ವಿರುದ್ಧ ಜನರು ಪ್ರತಿಭಟನೆ ಮಾಡಲಿಲ್ಲ. ಇದು ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿ ಎಂದರು.

-ಸಭೆಯಲ್ಲಿ ಕೇಂದ್ರ ತಂಡದ ಸದಸ್ಯರಾದ ಜಿತೇಂದರ್ ಪನ್ವರ್, ಡಾ. ಪೊನ್ನುಸ್ವಾಮಿ, ಭರತೇಂದು ಕುಮಾರ್ ಸಿಂಗ್, ಮಾಣಿಕ್ ಚಂದ್ರ ಪಂಡಿತ್, ಸದಾನಂದ ಬಾಬು ಭಾಗವಹಿಸಿದ್ದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ, ಕಂದಾಯ ಇಲಾಖೆ (ವಿಕೋಪ ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು