ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ: ಹೆಚ್ಚುವರಿ ಸಂಪರ್ಕ ಬಿಡುಗಡೆಗೆ ಮನವಿ

know_the_cm

ನವದೆಹಲಿ ಸೆಪ್ಟೆಂಬರ್ 10:

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿ, ಭಾರತ ಸರ್ಕಾರದ ಉಜ್ವಲಾ ಯೋಜನೆಗೆ ಪೂರಕವಾಗಿ ಜಾರಿಗೊಳಿಸುತ್ತಿರುವ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಜಾರಿಗೊಳಿಸಲು ಬೆಂಬಲ ನೀಡುವಂತೆ ಹಾಗೂ ಹೆಚ್ಚುವರಿ ಸಂಪರ್ಕಗಳನ್ನು ಬಿಡುಗಡೆ ಮಾಡಲು ತೈಲ ಮಾರಾಟ ಕಂಪೆನಿಗಳಿಗೆ ಸೂಚಿಸುವಂತೆ ಮನವಿ ಮಾಡಿದರು.

ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಉಚಿತ ಎಲ್.ಪಿ.ಜಿ. ಪಡೆಯಲು ಆಯ್ಕೆಯಾಗದ ಬಡವರಿಗೆ ಉಚಿತ ಎಲ್.ಪಿ.ಜಿ. ಸಂಪರ್ಕ, ಎರಡು ಉಚಿತ ರಿಫಿಲ್ ಗಳನ್ನು ನೀಡುವ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ರೂಪಿಸಲಾಗಿದೆ.

ಮುಂದಿನ 18 ರಿಂದ 24 ತಿಂಗಳುಗಳಲ್ಲಿ 30 ಲಕ್ಷ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ವಿಸ್ತರಿಸಲು ಉದ್ದೇಶಿಸಲಾಗಿದೆ.

ಫೆಬ್ರುವರಿ 2018 ರಲ್ಲಿಯೇ ಈ ಯೋಜನೆಗೆ ಚಾಲನೆ ನೀಡಿದ್ದರೂ, ಚುನಾವಣೆಯ ಕಾರಣ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಈ ಯೋಜನೆಯ ಭಾಗೀದಾರರ ಸಭೆ ನಡೆಸಿದಾಗ ತೈಲ ಮಾರಾಟ ಕಂಪೆನಿಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ 1 ಲಕ್ಷ ಸಂಪರ್ಕಗಳನ್ನು ಬಿಡುಗಡೆ ಮಾಡಲು ಸಮ್ಮತಿಸಿದ್ದರು.

ಠೇವಣಿ ಪಾವತಿ ಹಾಗೂ ಎರಡು ರಿಫಿಲ್ ಗಳ ಶುಲ್ಕ ಪಾವತಿ ಸರ್ಕಾರ ಮಾಡುತ್ತದೆ ಎನ್ನುವುದನ್ನು ಹೊರತು ಪಡಿಸಿ ಈ ಫಲಾನುಭವಿಗಳನ್ನು ಇತರ ಅರ್ಜಿದಾರರಂತೆಯೇ ಪರಿಗಣಿಸಲು ಒಪ್ಪಿದ್ದವು.

ಈ ಸಂದರ್ಭದಲ್ಲಿ ಪ್ರತಿ ತಿಂಗಳು 50 ಸಾವಿರಕ್ಕೂ ಹೆಚ್ಚು ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಸಂಪರ್ಕಗಳನ್ನು ಒದಗಿಸಬೇಕಾದರೆ ತಮ್ಮ ಸಂಪನ್ಮೂಲಗಳನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ತೈಲ ಮಾರಾಟ ಕಂಪೆನಿಗಳು ತಿಳಿಸಿದ್ದವು.

ಕರ್ನಾಟವನ್ನು ಸೀಮೆ ಎಣ್ಣೆ ಮುಕ್ತ ಮಾಡುವ ಗುರಿ ಸಾಧಿಸಲು ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ತಿಂಗಳಿಗೆ ಕನಿಷ್ಠ 1.5-2 ಲಕ್ಷ ಸಂಪರ್ಕಗಳನ್ನು ಒದಗಿಸುವ ಅಗತ್ಯವಿದೆ. ಹಾಗೂ ಸರ್ಕಾರದಿಂದ ಭದ್ರತಾ ಠೇವಣಿಯನ್ನು ವಿತರಕರಿಗೆ ಪಾವತಿಸಲು ಅವಕಾಶ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ತೈಲ ಕಂಪೆನಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳು ಕೇಂದ್ರ ಸಚಿವರನ್ನು ಮನವಿ ಮಾಡಿದರು.

ಇದಕ್ಕೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.