ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಗ್ರಾಮ ವಾಸ್ಯವ್ಯದಿಂದ ಅಧಿಕಾರಿಗಳಿಗೆ ಹೊಸ ಅನುಭವ: ಮುಖ್ಯಮಂತ್ರಿ

ಉಜಳಂಬ(ಬೀದರ), ಜೂನ್ 27, 2019

-ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಅಧಿಕಾರಿಗಳಿಗೆ ಒಂದು ಹೊಸ ಅನುಭವ ಕೊಡುತ್ತದೆ ಎಂದು ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

-ಉಜಳಂಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿಯಿಂದ ಜಿಲ್ಲಾಧಿಕಾರಿವರೆಗಿನ ಅಧಿಕಾರಿಗಳು ಬೆಳಗ್ಗೆಯಿಂದ ಸಂಜೆವರೆಗೆ ಜನರ ಜೊತೆಗಿದ್ದು ತಾಳ್ಮೆಯಿಂದ ಜನರ ನೋವು ಆಲಿಸುವುದನ್ನು, ಜನರು ಬದಲಾವಣೆ ಆಗುವದನ್ನು ನಾನು ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕಾಣುತ್ತಿದ್ದೇನೆ ಎಂದು ಅವರು ತಿಳಿಸಿದರು.

-ಜನತಾ ದರ್ಶನದಲ್ಲಿ ಅರ್ಜಿ ಸಲ್ಲಿಸಿದ ಜನರ ನೋವುಗಳಿಗೆ ಸ್ಪಂದಿಸಬೇಕಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಚರ್ಚಿಸುವುದು ನಮ್ಮ ಕರ್ತವ್ಯವಾಗಿದೆ. ಈ ಗ್ರಾಮವಾಸ್ತವ್ಯ ಕಾರ್ಯಕ್ರಮ ರೂಪಿಸುವ ಮೂಲಕ ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ತಿಳಿಸಿದರು.

-ಯಾದಗಿರಿ, ರಾಯಚೂರ ಹಾಗೂ ಬೀದರ ಜಿಲ್ಲೆಗಳಲ್ಲಿ ಮಾಡಿದ ಗ್ರಾಮ ವಾಸ್ತವ್ಯದಲ್ಲಿ ಬಂದ ಮನವಿಗಳ ಪೈಕಿ ಆಯಾ ಪ್ರದೇಶಗಳ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳು ಕೆಲವು ಇವೆ. ಸಾವಿರಾರು ಜನರು ಕುಟುಂಬದಲ್ಲಿರುವ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ನಾವು ಗಮನ ಕೊಡುತ್ತೇವೆ ಎಂದು ತಿಳಿಸಿದರು.

-ಈ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಸಿಎಂ ಕಚೇರಿಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ತಾಯಿ ಹೃದಯದಿಂದ ಕೆಲಸ ಮಾಡಿರುವುದು ಕೂಡ ನಮ್ಮ ಬಲವಾಗಿದೆ. ಇಲ್ಲಿ ಅರ್ಜಿ ಸಲ್ಲಿಸಿದವರಿಗೆ ಸಿಎಂ ಕಚೇರಿಯಿಂದ ನೇರವಾಗಿ ಸೌಕರ್ಯ ಸಿಗಲಿದೆ ಎಂದು ತಿಳಿಸಿದರು.

-2006ರಲ್ಲಿ ಇಷ್ಟು ದೊಡ್ಡಮಟ್ಟದ ಗ್ರಾಮವಾಸ್ತವ್ಯ ನಡೆದಿರಲಿಲ್ಲ. ಈ ಹಿಂದೆ ನಾವು ಹಳ್ಳಿಗೆ ಹೋಗೋದೇ ರಾತ್ರಿ 1 ಗಂಟೆಯಾಗುತ್ತಿತ್ತು. ಬರೀ ಅಧಿಕಾರಿಗಳೇ ಅರ್ಜಿ ಪಡೆಯುತ್ತಿದ್ದರು. ಈ ಹಿಂದೆ ನಡೆದ ಗ್ರಾಮವಾಸ್ತವ್ಯ ವೇಳೆ ಪರಿಹಾರ ಪಡೆದುಕೊಂಡವರು ಅದನ್ನು ಈಗಲೂ ನೆನಪಿಸುವುದು ಈಗ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದ ವೇಳೆ ಗೊತ್ತಾಗಿದೆ ಎಂದು ಅವರು ತಿಳಿಸಿದರು.

-ಈ ವೇಳೆ ಸಚಿವರಾದ ಬಂಡೆಪ್ಪ ಖಾಶೆಂಪೂರ, ರಾಜಶೇಖರ ಪಾಟೀಲ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ನಾರಾಯಣರಾವ್ ಇದ್ದರು.

*********************************