ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರೆಗುಡ್ಡೆ ಗ್ರಾಮ (ಮಾನ್ವಿ ತಾಲ್ಲೂಕು , ರಾಯಚೂರು ಜಿಲ್ಲೆ)

ಕರೆಗುಡ್ಡೆ(ರಾಯಚೂರು), ಜೂನ್ 26, 2019

ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಯಚೂರು ಜಿಲ್ಲೆಯ ಕರೆಗುಡ್ಡೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಫಲಾನುಭವಿಗಳಿಗೆ ಚೆಕ್ ಸೇರಿದಂತೆ ಇತರೆ ಸೌಲಭ್ಯಗಳನ್ನು ವಿತರಿಸಿದರು.

-ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ, ಸಚಿವರಾದ ಸಾ.ರಾ.ಮಹೇಶ್, ಶಾಸಕರಾದ ರಾಜಾವೆಂಕಟಪ್ಪ ನಾಯಕ್, ಬಸವನಗೌಡ ದದ್ದಲ್, ಬಿ.ಎಸ್.ಹೂಲಿಗೇರಿ, ಪ್ರತಾಪಗೌಡ, ವಿಧಾನಪರಿಷತ್ ಸದಸ್ಯ ಎನ್.ಎಸ್.ಭೋಸರಾಜು ಉಪಸ್ಥಿತರಿದ್ದರು.

ಗ್ರಾಮವಾಸ್ತವ್ಯ ಕನಿಷ್ಠ ವೆಚ್ಚದ ಕಾರ್ಯಕ್ರಮ: ಮುಖ್ಯಮಂತ್ರಿ ಸ್ಪಷ್ಟನೆ

-"ನನ್ನ ಗ್ರಾಮವಾಸ್ತವ್ಯ ಅತ್ಯಂತ ಕನಿಷ್ಠ ವೆಚ್ಚದ ಕಾರ್ಯಕ್ರಮ. ನನ್ನ ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಹಾಗೂ ಜಿಲ್ಲಾಡಳಿತ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳುಗೆ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲು ನಿಯಮಾವಳಿಗಳಂತೆ ವ್ಯವಸ್ಥೆ ಮಾಡಿರುತ್ತಾರೆ. ಈ ವೆಚ್ಚವನ್ನು ಗ್ರಾಮವಾಸ್ತವ್ಯಕ್ಕೆ ಜೋಡಣೆ ಮಾಡುವುದು ಸರಿಯಲ್ಲ" ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.

-ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿದಂತೆ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ ಎಂಬ ಆರೋಪಗಳಿಗೆ ಸ್ಪಷ್ಟೀಕರಣ ನೀಡಿರುವ ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಜನತಾದರ್ಶನ ನಡೆಸಲು ಜನರ ಅನುಕೂಲಕ್ಕಾಗಿ ವೇದಿಕೆ, ಆಸನಗಳ ವ್ಯವಸ್ಥೆ ಸೇರಿದಂತೆ ಇನ್ನೀತರ ವ್ಯವಸ್ಥೆ ಮಾಡಲಾಗಿರುತ್ತದೆ. ಗ್ರಾಮವಾಸ್ತವ್ಯ ಇಲ್ಲದಿದ್ದರೂ ಶಿಷ್ಟಾಚಾರದ ಪ್ರಕಾರ ಕ್ರಮ ಜರುಗಿಸುತ್ತಾರೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ನಡೆಸಿಕೊಂಡು ಬಂದಿರುವ ಮತ್ತು ಹಿಂದಿನ ಮುಖ್ಯಮಂತ್ರಿಗಳು ನಡೆಸಿಕೊಂಡು ಬಂದ ಪರಂಪರೆ ಎಂದು ಅವರು ವಿವರಿಸಿದ್ದಾರೆ.

-ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಶಾಲೆಯಲ್ಲಿ ನಿದ್ರಿಸಲು ಕನಿಷ್ಠ ಸೌಲಭ್ಯ, ಶಾಲೆಗೆ ಅನುಕೂಲವಾಗುವಂತೆ ಶೌಚಾಲಯ ನಿರ್ಮಿಸುವಂತೆ ಸೂಚಿಸಿದ್ದಾಗಿ ಅವರು ತಿಳಿಸಿದ್ದಾರೆ.

-----------------------------

ಜನಾಕರ್ಷಣೆಯ ಕೇಂದ್ರವಾದ ವಾರ್ತಾ ಇಲಾಖೆ ಮಳಿಗೆ

-ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಬುಧವಾರ ನಡೆದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜನತಾದರ್ಶನ ಹಾಗೂ ಗ್ರಾಮವಾಸ್ತವ್ಯದ ಹಿನ್ನೆಲೆಯಲ್ಲಿ ಗ್ರಾಮದ ಹೊರವಲಯದಲ್ಲಿ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ಒದಗಿಸುವ ಮತ್ತು ಸಾಧನೆ ಬಿಂಬಿಸುವ ಹಾಗೂ ಅರಿವು ಮೂಡಿಸುವ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಜನರು ಮಳಿಗೆಗಳ ಹತ್ತಿರ ತೆರಳಿ ವೀಕ್ಷಿಸಿ ಮಾಹಿತಿ ಪಡೆದುಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದವು.

-ಸರ್ಕಾರದ ಕಳೆದ ಒಂದು ವರ್ಷದ ಮಾಹಿತಿಯನ್ನು ನಿಖರ ಅಂಕಿ ಅಂಶಗಳೊಂದಿಗೆ ಆಕರ್ಷಕ ಫಲಕಗಳನ್ನು ನಿರ್ಮಿಸಿ ಕಲಾತ್ಮಕವಾಗಿ ಅನಾವರಣಗೊಳಿಸಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರದರ್ಶನ ಮಳಿಗೆ ಕಾರ್ಯಕ್ರಮದ ಆವರಣದ ಆಕರ್ಷಕ ಕೇಂದ್ರವಾಗಿ ಮಾರ್ಪಟ್ಟಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಳಿಗೆಗೆ ಆಗಮಿಸಿ ವೀಕ್ಷಿಸಿದರು. ಇನ್ನೂ ಕೆಲವರು ವೀಕ್ಷಿಸುವುದರ ಜತೆಗೆ ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದ ದೃಶ್ಯಗಳು ಕಂಡುಬಂದವು.

-ರೈತರ ಸಾಲ ಮನ್ನಾ, ಬಡವರ ಬಂಧು, ಕಾಯಕ, ಎಲ್ಲರಿಗೂ ಶಿಕ್ಷಣ, ತಳಸಮುದಾಯಗಳ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮೂಲಕ ಕೈಗೊಂಡಿರುವ ಚಟುವಟಿಕೆಗಳನ್ನು ಸಚಿತ್ರವಾಗಿ ,ನಿಖರ ಮಾಹಿತಿಯೊಂದಿಗೆ ಅಳವಡಿಸಿ ಜನರಿಗೆ ಪರಿಚಯಿಸುತ್ತಿರುವ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

-ಪಶುಸಂಗೋಪನೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಕೃಷಿ ಇಲಾಖೆ, ಕೈಗಾರಿಕೆ ಇಲಾಖೆ,ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳು ಗಮನಸೆಳೆದವು.

-ಮಳಿಗೆಗಳಲ್ಲಿ ಇಲಾಖೆಗೆ ಸಂಬಂಧಿಸಿದ ಹಾಗೂ ಅಲ್ಲಿನ ಯೋಜನೆಗಳ ಮಾಹಿತಿಗಳನ್ನು ಫಲಕಗಳ ಮೂಲಕ ಪ್ರದರ್ಶನಕ್ಕಿಟ್ಟಿದ್ದರು. ಆಗಮಿಸಿದ ಜನರಿಗೆ ಇಲಾಖೆಯ ಮಾಹಿತಿ ಒಳಗೊಂಡ ಕರಪತ್ರಗಳನ್ನು ವಿತರಿಸಿದರು.

-----------------------------

22 ವಿಕಲಚೇತನರ ವಾಹನಗಳ ವಿತರಣೆ

-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಯಚೂರು ಜಿಲ್ಲೆಯ ಕರೆಗುಡ್ಡೆ ಗ್ರಾಮದಲ್ಲಿ ವಿಕಲಚೇತನರಿಗೆ ವಾಹನಗಳನ್ನು ವಿತರಿಸಿದರು.

-ಮಾನ್ವಿ ಶಾಸಕ ರಾಜಾವೆಂಕಟಪ್ಪ ನಾಯಕ್ ಹಾಗೂ ವಿಧಾನಪರಿಷತ್ ಸದಸ್ಯ ಎನ್.ಎಸ್.ಭೋಸರಾಜು ಅವರ ಅನುದಾನದಡಿಯಲ್ಲಿ 22 ವಿಕಲಚೇತನರ ವಾಹನಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಕಲಚೇತನರಿಗೆ ವಿತರಿಸಿದರು.

-15ಲಕ್ಷ ರೂ.ವೆಚ್ಚದಲ್ಲಿ ಈ ವಾಹನಗಳನ್ನು ವಿಕಲಚೇತನರಿಗೆ ವಿತರಿಸಲಾಗಿದೆ.

-ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ, ಸಚಿವರಾದ ಸಾ.ರ.ಮಹೇಶ, ಶಾಸಕರಾದ ರಾಜಾವೆಂಕಟಪ್ಪ ನಾಯಕ್, ಬಸವನಗೌಡ ದದ್ದಲ್, ಬಿ.ಎಸ್.ಹೂಲಿಗೇರಿ, ಪ್ರತಾಪಗೌಡ, ವಿಧಾನಪರಿಷತ್ ಸದಸ್ಯ ಎನ್.ಎಸ್.ಭೋಸರಾಜು, ಸೇರಿದಂತೆ ವಿವಿಧ ಶಾಸಕರು,ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಎಚ್.ಬಿ.ದಿನೇಶ, ಜಿಲ್ಲಾಧಿಕಾರಿಗಳು,ಜಿಪಂ ಸಿಇಒ ಸೇರಿದಂತೆ ಅನೇಕರು ಇದ್ದರು.

-----------------------------

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ರಾಯಚೂರಿನ ನಿವಾಸಿಗೆ 2 ಲಕ್ಷ ರೂ. ಪರಿಹಾರ

-ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ರಾಯಚೂರಿನ ನಿವಾಸಿ ನಂದಿನಿ ಪಾಟೀಲ್ ಚಿಕಿತ್ಸೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರೂ.ಗಳ ಚೆಕ್ ನ್ನು ಅವರ ಕುಟುಂಬದವರಿಗೆ ವಿತರಿಸಿದರು.

-ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಉಪಸ್ಥಿತರಿದ್ದರು.

-----------------------------

ಮುಖ್ಯಮಂತ್ರಿಗಳಿಂದ ಸಾರ್ವಜನಿಕರ ಅಹವಾಲುಗಳ ಸ್ವೀಕಾರ

-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಯಚೂರು ಜಿಲ್ಲೆ, ಮಾನ್ವಿ ತಾಲ್ಲೂಕಿನ ಕರೆಗುಡ್ಡೆ ಗ್ರಾಮದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿದರು.

-----------------------------

ಬಸ್ ನಲ್ಲಿ ಕರೆಗುಡ್ಡೆಯತ್ತ ಮುಖ್ಯಮಂತ್ರಿ

-ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಯಚೂರು ಜಿಲ್ಲೆ, ಮಾನ್ವಿ ತಾಲ್ಲೂಕಿನ ಕರೆಗುಡ್ಡೆ ಗ್ರಾಮಕ್ಕೆ ರಾಯಚೂರಿನಿಂದ ಬಸ್ ನಲ್ಲಿ ಆಗಮಿಸಿದರು.

-----------------------------

ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ: ಮುಖ್ಯಮಂತ್ರಿ

-ಈಗಾಗಲೇ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಂಬಂಧಿಸಿದಂತೆ ಆದ್ಯತೆ ಮೇರೆಗೆ ಯಾವ ಕೆಲಸಗಳಿಗೆ ಅದ್ಯತೆ ನೀಡಬೇಕು ಎಂಬ ಮಾಹಿತಿಯನ್ನು ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಂದ ಪಡೆದುಕೊಂಡಿದ್ದು, ಗ್ರಾಮವಾಸ್ತವ್ಯದ ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳಿಗಾಗಿ 3 ಸಾವಿರ ಕೋಟಿ ರೂ. ವೆಚ್ಚದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

-ರಾಯಚೂರಿನ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ಯಾಬಿನೆಟ್ ನಲ್ಲಿ ರಾಯಚೂರು ವಿವಿ ಕುರಿತು ಸುಗ್ರಿವಾಜ್ಷೆ ಮಾಡಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ವಿವರಣೆಯನ್ನು ರಾಜ್ಯಪಾಲರಿಗೆ ಕೇಳಿದ್ದು, ಆ ಕುರಿತು ಮನವೋಲಿಸಲಾಗುವುದು ಎಂದರು.

-ಐಐಐಟಿಗೆ ಭೂಮಿ ನೀಡುವುದು ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

-ತುಂಗಭದ್ರಾ ಜಲಾಶಯದ 31 ಟಿಎಂಸಿ ಹೂಳು ತುಂಬಿಕೊಂಡಿದ್ದು, ಅದು ತೆಗೆಯುವುದು ಅಸಾಧ್ಯ ಎಂಬ ವರದಿ ಹಿನ್ನೆಲೆಯಲ್ಲಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಎಆರ್ ರೂಪಿಸುವುದಕ್ಕೆ ಸೂಚನೆ ನೀಡಲಾಗಿದೆ.

-ಅಭಿವೃದ್ಧಿ ವಿಷಯದಲ್ಲ ನಮ್ಮ ಸರಕಾರ ಹಿಂಜರಿಯುವ ಪ್ರಶ್ನೆಯೇ ಇಲ್ಲ. ಅಭಿವೃದ್ಧಿಗೆ ದುಡ್ಡಿನ ಕೊರತೆ ಇಲ್ಲ; ಸಾಲಮನ್ನಾಕ್ಕಾಗಿ ಹಣವನ್ನು ವಿವಿಧ ಇಲಾಖೆಗಳಿಗೆ ಹಣ ಕಡಿತಮಾಡಲಾಗಿದೆ ಎಂಬುದು ಸುಳ್ಳು. ಸಣ್ಣ ಮತ್ತು ಬೃಹತ್ ನೀರಾವರಿಗೆ ಈ ವರ್ಷ 19 ಸಾವಿರ ಕೋಟಿ ರೂ. ಒದಗಿಸಲಾಗಿದೆ.

-ರಾಯಚೂರು ಜಿಲ್ಲೆಗೆ 182 ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು.

-ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದು ಜನರಿಗೆ ಕಾಣುವುದಕ್ಕೆ ಇನ್ನೂ 4ತಿಂಗಳು ಬೇಕು ಎಂದು ಹೇಳಿದ ಅವರು, ಆರೋಪ ಮಾಡುವವರು ಸುಖಾಸುಮ್ಮನೆ ಆರೋಪ ಮಾಡಬಾರದು ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿದಂತೆ ವಿನಾಕಾರಣ ಟೀಕೆ, ಆರೋಪಗಳು ಮಾಡುತ್ತಿದ್ದು, ಅವರನ್ನು ವಿಧಾನಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗುವುದು ಎಂದರು.

-ವಿವಿಧ ಇಲಾಖೆಗಳ 61 ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಪಟ್ಟಿ ಪಡೆದುಕೊಳ್ಳಲಾಗಿದ್ದು, ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದರು.

-ಶಾಶ್ವತವಾದ ಕುಡಿಯುವ ನೀರಿನ ಯೋಜನೆಗಳು ಇಡೀ ರಾಜ್ಯಾದ್ಯಂತ ಆಗಬೇಕು ಎಂಬುದು ನಮ್ಮ ಬಯಕೆ ಎಂದರು.

-ಗ್ರಾಮವಾಸ್ತವ್ಯ ಕಾರ್ಯಕ್ರಮ ಮೈತ್ರಿ ಸರಕಾರದ್ದೇ ಹೊರತು ಯಾವುದೇ ಪಕ್ಷಕ್ಕೆ ಸಂಬಂಧಿಸಿಲ್ಲ ಎಂಬುದನ್ನು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

-ಈ ಸಂದರ್ಭದಲ್ಲಿ ಸಚಿವರಾದ ಸಾ.ರ.ಮಹೇಶ, ವೆಂಕಟರಾವ ನಾಡಗೌಡ, ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಇದ್ದರು.

-----------------------------

ಜಲಧಾರೆ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಪೂರೈಕೆ: ಮುಖ್ಯಮಂತ್ರಿ

-ಜಲಧಾರೆ ಯೋಜನೆಯ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಪ್ರಸ್ತಾವನೆ ಸರಕಾರದ ಮುಂದಿದ್ದು ಅದನ್ನು ಶೀಘ್ರ ಅನುಮೋದನೆ ನೀಡುವುದರ ಮೂಲಕ ಇಡೀ ಜಿಲ್ಲೆಗೆ ನೀರು ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

-ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಜನತಾದರ್ಶನ, ಗ್ರಾಮವಾಸ್ತವ್ಯ ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ರೈಲಿನ ಮೂಲಕ ಬೆಂಗಳೂರಿನಿಂದ ಆಗಮಿಸಿ ರಾಯಚೂರು ಅತಿಥಿಗೃಹದಲ್ಲಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಬುಧವಾರ ಬೆಳಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

-ಬರಗಾಲಕ್ಕೆ ಸಂಬಂಧಿಸಿದಂತೆ ಹಾಗೂ ಅದರ ನಿರ್ವಹಣೆಗೆ ಸಂಬಂಧಿಸಿದಂತೆ ಚರ್ಚಿಸಿದ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಿ, ಎಲ್ಲಿಯೂ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಿ ಎಂದು ಡಿಸಿ ಶರತ್ ಹಾಗೂ ಜಿಪಂ ಸಿಇಒ ನಳಿನಿ ಅತುಲ್ ಅವರಿಗೆ ಖಡಕ್ ಆಗಿ ಸೂಚನೆ ನೀಡಿದರು.

-ಬರಗಾಲದ ಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ಹಣಕಾಸಿನ ಕೊರತೆ ಇಲ್ಲ ಎಂದು ಡಿಸಿ ಶರತ್ ಅವರು ಸಿಎಂ ಅವರಿಗೆ ತಿಳಿಸಿದರು.

-ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಎಚ್ ಕೆಆರ್ಡಿಬಿ, ಬಿಸಿಎಂ ಇಲಾಖೆಗಳಿಗೆ ಸಂಬಂಧಿಸಿದ 8144.99 ಲಕ್ಷ ರೂ.ಗಳ 38ಕಾಮಗಾರಿಗಳು ಶಂಕುಸ್ಥಾಪನೆ ಮತ್ತು ಉದ್ಘಾಟನೆಯಾಗಲಿವೆ ಎಂದು ಅವರು ತಿಳಿಸಿದರು.

-ಸಚಿವರಾದವ ಸಾ.ರಾ.ಮಹೇಶ, ಶಿವಶಂಕರ ರೆಡ್ಡಿ, ವೆಂಕಟರಾವ ನಾಡಗೌಡ, ಶಾಸಕ ರಾಜಾವೆಂಕಟಪ್ಪ ನಾಯಕ್ , ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಎಚ್.ಬಿ.ದಿನೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

-----------------------------

(ಬೆಂಗಳೂರು), ಜೂನ್ 24, 2019

ರೈಲು ನಿಲ್ದಾಣದಲ್ಲಿ ಮುಖ್ಯಮಂತ್ರಿ: ಆತ್ಮೀಯ ಹಾರೈಕೆ

-ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರೆಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಂಜೆ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಪ್ರಯಾಣ ಬೆಳೆಸಿದರು.

*********************************