ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಮುಖ್ಯಮಂತ್ರಿಗಳ ಜನಪ್ರಿಯ ಕಾರ್ಯಕ್ರಮ ‘ಗ್ರಾಮ ವಾಸ್ತವ್ಯಕ್ಕೆ’ ಚಾಲನೆ…….

ಚಂಡ್ರಕಿ(ಯಾದಗಿರಿ), ಜೂನ್ 22, 2019

ಕೈಕಾಲು ಕಳೆದುಕೊಂಡ ಇಂಜಿನಿಯರಿಂಗ್ ಪದವೀಧರನಿಗೆ 5 ಲಕ್ಷ ರೂ. ಪರಿಹಾರ

-ಅಪಘಾತದಿಂದಾಗಿ ಕಳೆದ ಒಂದೂವರೆ ವರ್ಷದ ಹಿಂದೆ ಕೈ ಮತ್ತು ಕಾಲುಗಳು ಶಕ್ತಿಹೀನವಾಗಿ ಹಾಸಿಗೆ ಹಿಡಿದಿರುವ ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ಇಂಜಿನಿಯರಿಂಗ್ ಪದವೀಧರ ಭೀಮರೆಡ್ಡಿ ಶಂಕರಪ್ಪ ಅವರ ತಂದೆಗೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಗುರುಮಠಕಲ್ ತಾಲೂಕಿನ ಚಂಡರಕಿಯಲ್ಲಿ ಐದು ಲಕ್ಷ ರೂ.ಗಳ ಪರಿಹಾರದ ಚೆಕ್ ಹಸ್ತಾಂತರಿಸಿದರು.

-ನಿನ್ನೆ ನಡೆದ ಜನತಾದರ್ಶನದಲ್ಲಿ ಯುವಕನ ತಾಯಿ ಭಾಗವಹಿಸಿ, ಮಗನ ಚಿಕಿತ್ಸೆಗಾಗಿ ಮನೆ, ಹೊಲ, ಎತ್ತುಗಳನ್ನು ಕಳೆದುಕೊಂಡು ಮೂವತ್ತು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದರೂ ಗುಣವಾಗಿಲ್ಲ ಎಂದು ದುಃಖ ತೋಡಿಕೊಂಡಿದ್ದರು.

-ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿಗಳು ಕೂಡಲೇ ಸ್ಪಂದಿಸಿ ಬೆಳಿಗ್ಗೆ ಬಂದು ಐದು ಲಕ್ಷ ರೂ.ಗಳ ಪರಿಹಾರದ ಚೆಕ್ ಸ್ವೀಕರಿಸಲು ಭೀಮರೆಡ್ಡಿ ಅವರ ಪಾಲಕರಿಗೆ ತಿಳಿಸಿದ್ದರು. ಕೊಟ್ಟ ಭರವಸೆಯಂತೆ ಇಂದು ಬೆಳಿಗ್ಗೆ ಚೆಕ್ ಹಸ್ತಾಂತರಿಸಿದರು.

-ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಮತ್ತಿತರರು ಇದ್ದರು.

-----------------------------

ಚಂಡರಕಿಯಲ್ಲಿ ಯಶಸ್ವಿಯಾಗಿ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ನಡೆಸಿದ ಮುಖ್ಯಮಂತ್ರಿ ಅವರು ಬೆಳಗ್ಗೆಯೇ ಪ್ರಮುಖರೊಂದಿಗೆ ಸಭೆ ನಡೆಸಿದರು

-ಚಂಡರಕಿಯಲ್ಲಿ ಯಶಸ್ವಿಯಾಗಿ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ನಡೆಸಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಳಗ್ಗೆಯೇ ಜಿಲ್ಲಾ ಅಡಳಿತದ ಪ್ರಮುಖರೊಂದಿಗೆ ಸಭೆ ನಡೆಸಿದರು.

-ಈ ಸಂದರ್ಭದಲ್ಲಿ ಸಚಿವರುಗಳಾದ ಬಂಡೆಪ್ಪ ಕಾಶಂಪೂರ, ವೆಂಕಟರಾವ ನಾಡಗೌಡ, ಸಾ.ರಾ. ಮಹೇಶ, ಶಾಸಕ ನಾಗನಗೌಡ ಕಂದಕೂರ ಇದ್ದರು.

-----------------------------

ಗುರುಮಿಟ್ಕಲ್ ತಾಲೂಕಿನ ಚಂಡ್ರಕಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ

-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಯಾದಗರಿ ಜಿಲ್ಲೆಯ ಗುರುಮಿಟ್ಕಲ್ ತಾಲೂಕಿನ ಚಂಡ್ರಕಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಮಾಡಿದರು.

-ಸಚಿವರುಗಳಾದ ರಾಜಶೇಖರ ಪಾಟೀಲ, ಬಂಡೆಪ್ಪ ಕಾಶಂಪೂರ, ವೆಂಕಟರಾವ ನಾಡಗೌಡ, ಸಾ.ರಾ. ಮಹೇಶ್, ಶಾಸಕ ನಾಗನಗೌಡ ಕಂದಕೂರ ಜೊತೆಗಿದ್ದರು.

-----------------------------

ಚಂಡ್ರಕಿ(ಯಾದಗಿರಿ), ಜೂನ್ 21, 2019

ಮುಖ್ಯಮಂತ್ರಿ ಅವರು ಇಡೀ ದಿನ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು

-ಜಿಲ್ಲೆಯ ಚಂಡ್ರಕಿ ಗ್ರಾಮದಲ್ಲಿಂದು ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಡೀ ದಿನ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.

-ಸ್ವಯಂ ಉದ್ಯೋಗ, ಭೂಮಿ ಮಂಜೂರಾತಿ, ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಾಶನ, ವಸತಿ ಸೌಕರ್ಯ ಮೊದಲಾದ ಬೇಡಿಕೆಗಳೊಂದಿಗೆ ಬಂದ ಜನರ ಸಂಕಷ್ಟಗಳನ್ನು ಸಹಾನುಭೂತಿಯಿಂದ ಆಲಿಸಿದರು.

ವಿಕಲಚೇತನರ ಬಳಿಗೆ ತೆರಳಿ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು

-ಈ ಮಧ್ಯೆ ವೇದಿಕೆಯ ಮುಂಭಾಗದಲ್ಲಿ ವಿಕಲಚೇತನರು ಜಮಾವಣೆಯಾಗಿದ್ದನ್ನು ಗಮನಿಸಿದ ಮುಖ್ಯಮಂತ್ರಿಗಳು, ವಿಕಲಚೇತನರು ತೊಂದರೆಪಟ್ಟುಕೊಂಡು ಮುಖ್ಯವೇದಿಕೆಗೆ ಬರುವುದು ಬೇಡ, ಸ್ವತಃ ತಾವೇ ಅಲ್ಲಿಗೆ ಬರುವುದಾಗಿ ತಿಳಿಸಿದರು. ವೇದಿಕೆಯ ಮುಂಭಾಗದಲ್ಲಿದ್ದ ವಿಕಲಚೇತನರ ಬಳಿ ತೆರಳಿ ಅವರ ಮನವಿಗಳನ್ನು ಪಡೆದು, ಅಹವಾಲುಗಳನ್ನು ಸ್ವೀಕರಿಸಿದರು.

ಭೋಜನವನ್ನೂ ಸ್ವೀಕರಿಸದ ಮುಖ್ಯಮಂತ್ರಿಗಳು

-ಜನತಾದರ್ಶನದಲ್ಲಿ ನಿರತರಾದ ಮುಖ್ಯಮಂತ್ರಿಗಳು ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದನ್ನು ಕಂಡು, ತಾವು ಎಲ್ಲಿಯೂ ಹೋಗುವುದಿಲ್ಲ ರಾತ್ರಿ 8 ಗಂಟೆಯಾದರೂ ಸರಿ ನಿಮ್ಮ ಮನವಿಗಳನ್ನು ಸ್ವೀಕರಿಸುತ್ತೇನೆ, ಆತುರ ಪಡಬೇಡಿ ಎಂದು ಮನವಿ ಮಾಡಿದರು.

-ವೇದಿಕೆಯಿಂದ ಕದಲದೇ ಮಧ್ಯಾಹ್ನದ ಭೋಜನವನ್ನೂ ಸ್ವೀಕರಿಸದೇ ಜನತಾ ದರ್ಶನ ನಡೆಸಿದರು.

ಪಟಾಕಿ ಬದಲು ಶಾಲಾ ಬ್ಯಾಗುಗಳ ವಿತರಣೆ

-ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದಿಂದ ಹರ್ಷಗೊಂಡಿರುವ ಅವರ ಅಭಿಮಾನಿಗಳು ಇಂದು ಪಟಾಕಿ ಸಿಡಿಸಿ ಹಣ ವ್ಯಯ ಮಾಡುವ ಬದಲು, ಆ ಹಣದಲ್ಲಿ ಚಂಡ್ರಕಿ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗುಗಳನ್ನು ವಿತರಿಸಲು ಮುಂದಾದರು.

-ಸ್ವತಃ ಮುಖ್ಯಮಂತ್ರಿಗಳ ಮುಖಾಂತರ ಸಾಂಕೇತಿಕವಾಗಿ ಕೆಲವು ವಿದ್ಯಾರ್ಥಿಗಳಿಗೆ ಬ್ಯಾಗುಗಳನ್ನು ವಿತರಿಸಿದ್ದು ವಿಶೇಷ ಹಾಗೂ ಮಾದರಿಯೆನಿಸಿತು.

-----------------------------

ಯಾದಗಿರಿ ಜಿಲ್ಲೆಗೆ ಕುಡಿಯುವ ನೀರು ಪೂರೈಕೆಗೆ 1 ಸಾವಿರ ಕೋಟಿ ರೂ.- ಮುಖ್ಯಮಂತ್ರಿ ಘೋಷಣೆ

-ಯಾದಗಿರಿ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಪ್ರತಿ ಹಳ್ಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು 1 ಸಾವಿರ ಕೋಟಿ ರೂ.ನೀಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಭರವಸೆ ನೀಡಿದರು.

-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಗುರುಮಠಕಲ್ ಕ್ಷೇತ್ರದ ಚಂಡ್ರಕಿಯಲ್ಲಿ ಏರ್ಪಡಿಸಿದ್ದ ಮುಖ್ಯಮಂತ್ರಿಗಳ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ, ಗುರುಮಠಕಲ್ ಕ್ಷೇತ್ರದಲ್ಲಿ 3197 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಸುಮಾರು 20 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

-ಈ ಹಿಂದೆ 2006 ರಲ್ಲಿ ಗ್ರಾಮವಾಸ್ತವ್ಯ ಮಾಡಿದ್ದು ಫಲಪ್ರದವಾಗಿದೆ.ಈ ಬಾರಿ ಪ್ರತಿ ತಿಂಗಳು ಒಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು. ಚಂಡ್ರಕಿ ಗ್ರಾಮದಿಂದ ಈ ಕಾರ್ಯಕ್ರಮ ಆರಂಭವಾಗಿದೆ ಎಂದರು.

-ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮದಲ್ಲಿ ಪಶುಚಿಕಿತ್ಸಾಲಯ ಮಂಜೂರು ಮಾಡಲಾಗಿದೆ. ಪಶುವೈದ್ಯಾಧಿಕಾರಿಗಳನ್ನೂ ನೇಮಕ ಮಾಡಲಾಗಿದೆ. ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಜಿಲ್ಲೆಯಲ್ಲಿ 300 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ಮಂಜೂರಾತಿಗೆ ಇಂದು ಆದೇಶ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಸುಸಜ್ಜಿತ ತೀವ್ರ ನಿಗಾ ಘಟಕದ ಗುಣಮಟ್ಟ ಸುಧಾರಣೆ, ಆಸ್ಪತ್ರೆ ತಲುಪಲು ಅಗತ್ಯವಿರುವ ಸಂಪರ್ಕ ರಸ್ತೆ ನಿರ್ಮಿಸಲಾಗುವುದು.

-ಸಾಲಮನ್ನಾ ಯೋಜನೆಯಡಿ 302 ಕೋಟಿ ರೂ.ಗಳನ್ನು ಸಹಕಾರ ಬ್ಯಾಂಕುಗಳಿಗೆ ಬಿಡುಗಡೆ ಮಾಡಿದೆ. ಸುಮಾರು 75 ಸಾವಿರ ರೈತರಿಗೆ ಈಗಾಗಲೇ ಸೌಲಭ್ಯ ದೊರೆತಿದೆ. ಹೊಸ ಸಾಲಗಳ ಬಿಡುಗಡೆಗೆ ಸಹಕಾರ ಬ್ಯಾಂಕುಗಳಿಗೆ 100 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರುಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

-ಗಣಿ,ಭೂವಿಜ್ಞಾನ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ.ಪಾಟೀಲ, ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಮಾತನಾಡಿದರು.

-ಇದೇ ಸಂದರ್ಭದಲ್ಲಿ ಚಂಡ್ರಕಿ ಗ್ರಾಮದ ಹಲವಾರು ರೈತರಿಗೆ ಸಾಲಮನ್ನಾ ಋಣಮುಕ್ತ ಪ್ರಮಾಣ ಪತ್ರಗಳ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

-ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಶಾಸಕ ಶರಣಬಸಪ್ಪ ದರ್ಶನಾಪೂರ, ಎಸ್.ಎಲ್.ಭೋಜೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್. ಹೆಚ್.ಕೋನರಡ್ಡಿ ಮತ್ತಿತರರು ಇದ್ದರು.

-ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸ್ವಾಗತಿಸಿದರು.ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಮನ್ನಿಕೇರಿ ವಂದಿಸಿದರು.

-----------------------------

ಚಂಡ್ರಕಿ ಗ್ರಾಮದಲ್ಲಿ ವಾರ್ತಾ ಇಲಾಖೆಯಿಂದ ಸ್ಥಾಪಿಸಲಾಗಿರುವ ವಿವಿಧ ಇಲಾಖೆಗಳ ಮಾಹಿತಿಯನ್ನು ಹೊಂದಿರುವ ಪ್ರದರ್ಶನ ಮಳಿಗೆಯನ್ನು ಮುಖ್ಯಮಂತ್ರಿಗಳಾದ ಅವರು ಉದ್ಘಾಟಿಸಿದರು.

-ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಂಡ್ರಕಿ ಗ್ರಾಮದಲ್ಲಿ ವಾರ್ತಾ ಇಲಾಖೆಯಿಂದ ಸ್ಥಾಪಿಸಲಾಗಿರುವ ವಿವಿಧ ಇಲಾಖೆಗಳ ಮಾಹಿತಿಯನ್ನು ಹೊಂದಿರುವ ಪ್ರದರ್ಶನ ಮಳಿಗೆಯನ್ನು ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಉದ್ಘಾಟಿಸಿದರು.

-ಮಳಿಗೆಯಲ್ಲಿ ಮುಖ್ಯಮಂತ್ರಿಗಳ ಮಹಾತ್ವಾಕಾಂಕ್ಷೆಯ ಬೆಳೆ ಸಾಲ ಮನ್ನಾ, ಬಡವರ ಬಂಧು, ಕಾಯಕ, ಎಲ್ಲರಿಗೂ ಶಿಕ್ಷಣ, ತಳಸಮುದಾಯಗಳ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮೂಲಕ ಕೈಗೊಂಡಿರುವ ಚಟುವಟಿಕೆಗಳನ್ನು ಸಚಿತ್ರವಾಗಿ ,ನಿಖರ ಮಾಹಿತಿಯೊಂದಿಗೆ ಅಳವಡಿಸಿ ಜನರಿಗೆ ಪರಿಚಯಿಸುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

-ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಂದ ಸ್ಥಾಪಿಸಲಾಗಿರುವ ವಸ್ತುಪ್ರದರ್ಶನ ಮಳಿಗೆಗಳನ್ನು ಸಹ ಉದ್ಘಾಟಿಸಿದರು.

-ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಗಣಿ ,ಭೂವಿಜ್ಞಾನ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ,ಶಾಸಕ ನಾಗನಗೌಡ ಕಂದಕೂರ,ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ, ಯಾದಗಿರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ.ಅನಿಲಕುಮಾರ್, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಭೃಂಗೀಶ್, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್,ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

-----------------------------

ಬಸ್ ನಲ್ಲಿ ಚಂಡ್ರಕಿಯತ್ತ ಮುಖ್ಯಮಂತ್ರಿ

-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಂಡ್ರಕಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಯಾದಗಿರಿಯಿಂದ ಬಸ್ ಮೂಲಕ ಪ್ರಯಾಣ ಬೆಳೆಸಿದರು.

-ಚಂಡರಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜನತಾ ದರ್ಶನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

-ಜನತಾ ದರ್ಶನದ ನಂತರ ಮುಖ್ಯಮಂತ್ರಿಗಳು ಚಂಡರಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.

-ಮುಖ್ಯಮಂತ್ರಿಗಳು ದಾರಿಯುದ್ದಕ್ಕೂ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.

-ಸಚಿವರಾದ ಶ್ರೀ ವೆಂಕಟರಾವ ನಾಡಗೌಡ, ಶಾಸಕರುಗಳಾದ ನಾಗನಗೌಡ ಕಂದಕೂರ, ಶರಣಬಸಪ್ಪ ದರ್ಶನಾಪೂರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೋನರೆಡ್ಡಿ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ. ಜಿಲ್ಲಾಧಿಕಾರಿ ಕೂರ್ಮರಾ, ಉಪಸ್ಥಿತರಿದ್ದರು.

-----------------------------

ಮುಖ್ಯಮಂತ್ರಿಗಳ ಜನತಾದರ್ಶನಕ್ಕೆ ಸಿದ್ಧವಾಗಿರುವ ಚಂಡ್ರಕಿ : ಗ್ರಾಮದತ್ತ ಹರಿದು ಬರುತ್ತಿರುವ ಜನಸಾಗರ

-ರಾಜ್ಯದ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಂಡ್ರಕಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಜನತಾದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸನ್ನದ್ಧವಾಗಿದೆ.

-ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಮಾರಂಭದ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಜನತಾ ದರ್ಶನಕ್ಕೆ ಅರ್ಜಿ ಸಲ್ಲಿಸಲು ಇಂದು ಬೆಳಿಗ್ಗೆ ಏಳು ಗಂಟೆಯಿಂದಲೇ ಸಾರ್ವಜನಿಕರು ಬರುತ್ತಿದ್ದಾರೆ, ಇದಕ್ಕಾಗಿ ಜಿಲ್ಲಾಡಳಿತ ಕೌಂಟರ್ ಗಳನ್ನು ತೆರೆದಿದ್ದು, ಅರ್ಜಿ ಸಲ್ಲಿಸಿದವರಿಗೆ ಟೋಕನ್ ನೀಡಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿ ಸವಲತ್ತುಗಳ ವಿತರಣೆ ಕಾರ್ಯಕ್ರಮವೂ ಜರುಗಲಿದೆ.

-ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಮುಖ್ಯಮಂತ್ರಿಗಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.

-ಯಾದಗಿರಿಯಿಂದ ಗುರುಮಠಕಲ್ ಮಾರ್ಗವಾಗಿ ಚಂಡ್ರಕಿ ಗ್ರಾಮಕ್ಕೆ ಮುಖ್ಯಮಂತ್ರಿಗಳ ಸಾರಿಗೆ ಸಂಸ್ಥೆಯ ಬಸ್ ಮೂಲಕ ಆಗಮಿಸಲಿದ್ದಾರೆ.

-ಹೈದರಾಬಾದ್ ಕರ್ನಾಟಕ ಪ್ರದೇಶದ ಈ ಭಾಗದ ಜನತೆ ಮುಖ್ಯಮಂತ್ರಿಗಳ ಈ ಐತಿಹಾಸಿಕ ಕಾರ್ಯಕ್ರಮವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

-----------------------------

ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಯಾದಗಿರಿಯಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಸಭೆ ನಡೆಸಿದರು.

-ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ, ಶಾಸಕರಾದ ನಾಗನಗೌಡ ಕಂದಕೂರ, ಶರಣಬಸಪ್ಪ ದರ್ಶನಾಪುರ, ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಭೋದ್ ಯಾದವ್, ಯಾದಗಿರಿ ಜಿಲ್ಲಾಧಿಕಾರಿ ಕೂರ್ಮರಾವ ಉಪಸ್ಥಿತರಿದ್ದರು.

-ಯಾದಗಿರಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸುವುದು, ಯಾದಗಿರಿ ಜಿಲ್ಲೆಯ ಪ್ರತಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ, ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಚರ್ಚಿಸಲಾಯಿತು.

-----------------------------

ಗ್ರಾಮ ವಾಸ್ತವ್ಯ ಮಾಡಲಿರುವ ಮುಖ್ಯಮಂತ್ರಿ ಅವರು ಯಾದಗಿರಿ ರೈಲು ನಿಲ್ದಾಣಕ್ಕೆ ಕರ್ನಾಟಕ ಎಕ್ಸ್ಪ್ರೆಸ್ ನಲ್ಲಿ ಬಂದಿಳಿದರು.

-ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಯಾದಗಿರಿ ರೈಲು ನಿಲ್ದಾಣಕ್ಕೆ ಮುಂಜಾನೆ 4.45 ಕ್ಕೆ ಕರ್ನಾಟಕ ಎಕ್ಸ್ಪ್ರೆಸ್ ನಲ್ಲಿ ಬಂದಿಳಿದರು.

-ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ್ ಪಾಟೀಲ್, ಶಾಸಕ ನಾಗನಗೌಡ ಕಂದಕೂರ ಬರಮಾಡಿಕೊಂಡರು.

-----------------------------

(ಬೆಂಗಳೂರು), ಜೂನ್ 20, 2019

ಜನರ ಬಳಿಗೆ ಮುಖ್ಯಮಂತ್ರಿ: ರೈಲು ನಿಲ್ದಾಣದಲ್ಲಿ ಆತ್ಮೀಯ ಹಾರೈಕೆ

-ಬೆಂಗಳೂರು ರೈಲ್ವೆ ನಿಲ್ದಾಣ ಕಿಕ್ಕಿರಿದಿತ್ತು. ರಾಜ್ಯದ ಮುಖ್ಯಮಂತ್ರಿ ಜನತೆಯ ದುಃಖ ದುಮ್ಮಾನಗಳನ್ನು ಆಲಿಸಲು, ಅದಕ್ಕೆ ಅಲ್ಲಿಯೇ ಪರಿಹಾರ ಒದಗಿಸಿಕೊಡಲು ಜನರ ಬಳಿಯೇ ತೆರಳುವುದಕ್ಕೆ ಸಾವಿರಾರು ಜನ ಸಾಕ್ಷಿಯಾದರು.

-ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಆರಂಭಿಸಿದ 'ಗ್ರಾಮ ವಾಸ್ತವ್ಯ' ಜನಮನವನ್ನು ಗೆದ್ದಿತ್ತು. ನಾಡಿನ ಎಲ್ಲರ ಮನದಲ್ಲಿ ಅಚ್ಚಳಿಯದೆ ನಿಂತಿತ್ತು.

-ಈಗ ಮುಖ್ಯಮಂತ್ರಿಗಳು ಎರಡನೆಯ ಸುತ್ತಿನ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಲು ಇಂದು ರೈಲು ನಿಲ್ದಾಣಕ್ಕೆ ಬಂದರು. ಇವರನ್ನು ನೋಡಲು, ಶುಭ ಹಾರೈಸಿ ಬೀಳ್ಕೊಡಲು ಬಂದವರು ಲೆಕ್ಕವಿಲ್ಲದಷ್ಟು ಮಂದಿ.

-ಮುಖ್ಯಮಂತ್ರಿಗಳು ಕೈ ಬೀಸಿ ಗ್ರಾಮ ವಾಸ್ತವ್ಯ ನನ್ನ ಮುಖ್ಯ ಕನಸು. ಜನರ ಜೊತೆ ಬೆರೆಯುವ ಅವಕಾಶ ನನಗೆ ಮುಖ್ಯ ಎಂದರು.

*********************************