ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ನವದೆಹಲಿಯಲ್ಲಿ ಮುಖ್ಯಮಂತ್ರಿ ಅವರು ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.

ಮಾನ್ಯ ಮುಖ್ಯಮಂತ್ರಿ

ಪ್ರಧಾನಿ ಭೇಟಿ ಮಾಡಿದ ಮುಖ್ಯಮಂತ್ರಿ: ಬರ ಪರಿಸ್ಥಿತಿ- ರಾಜ್ಯಕ್ಕೆ ನೆರವು ನೀಡಲು ಮನವಿ

(ನವದೆಹಲಿ), ಜೂನ್ 15, 2019

-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಪ್ರಧಾನಮಂತ್ರಿಯಾಗಿ ಪುನರಾಯ್ಕೆಯಾಗಿರುವುದಕ್ಕೆ ಅಭಿನಂದಿಸಿದರು.

ಮಾನ್ಯ ಮುಖ್ಯಮಂತ್ರಿ

-ಈ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ, ನರೇಗಾ ಬಾಕಿ ಅನುದಾನ ಬಿಡುಗಡೆ ಹಾಗೂ ಸಾಲ ಮನ್ನಾ ಯೋಜನೆಯ ಯಶಸ್ವಿ ಅನುಷ್ಠಾನದ ಕುರಿತು ಚರ್ಚಿಸಿದರು.

-ರಾಜ್ಯದಲ್ಲಿ ಈ ವರ್ಷವೂ ಬರದ ಛಾಯೆ ಇದ್ದು ಶೇ. 45 ರಷ್ಟು ಮಳೆ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕೇಂಂದ್ರ ಸರ್ಕಾರ ರಾಜ್ಯದ ನೆರವಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

-ರಾಜ್ಯದಲ್ಲಿ ಮಹಾತ್ಮಾ ಗಾಂಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ರಾಜ್ಯ ಸರ್ಕಾರ ಕೂಲಿಯ ಬಾಬ್ತು ಪಾವತಿಸಿದ 1200 ಕೋಟಿ ರೂ. ಮುಂಗಡ ಹಣವೂ ಸೇರಿದಂತೆ ಸುಮಾರು 1500 ಕೋಟಿ ರೂ. ಅನುದಾನ ಬಾಕಿ ಇದೆ. ಇದನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೋರಿದರು.

ಮಾನ್ಯ ಮುಖ್ಯಮಂತ್ರಿ

-ರಾಜ್ಯದಲ್ಲಿ ಸಾಲ ಮನ್ನಾ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ, ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗಿದೆ. ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಒಟ್ಟು 30 ಲಕ್ಷ ರೈತರ 16000 ಕೋಟಿ ರೂಪಾಯಿ ಸಾಲಮನ್ನಾ ಸೌಲಭ್ಯಕ್ಕೆ ಅರ್ಹ ಎಂದು ಗುರುತಿಸಲಾಗಿತ್ತು. ಅದರಲ್ಲಿ ಈ ವರೆಗೆ ದಾಖಲೆಗಳನ್ನು ಒದಗಿಸಿದ ರಾಜ್ಯದ ವಾಣಿಜ್ಯ ಬ್ಯಾಂಕುಗಳ 9 ಲಕ್ಷ ಹಾಗೂ ಸಹಕಾರಿ ಬ್ಯಾಂಕುಗಳ 14 ಲಕ್ಷ ಫಲಾನುಭವಿಗಳ ಒಟ್ಟು 12830 ಕೋಟಿ ರೂಪಾಯಿ ಬೆಳೆ ಸಾಲ ಮನ್ನಾ ಮಾಡಲು ಕ್ರಮ ವಹಿಸಲಾಗಿದೆ. ಫಲಾನುಭವಿಗಳನ್ನು ಗುರುತಿಸುವಲ್ಲಿ ಕೆಲವು ಬ್ಯಾಂಕುಗಳಿಂದ ಲೋಪವಾದ್ದರಿಂದ ಸ್ವಲ್ಪ ಗೊಂದಲ ಉಂಟಾಗಿತ್ತು. ನಿನ್ನೆ ಬ್ಯಾಂಕರ್ ಗಳ ಸಭೆ ನಡೆಸಿ ಗೊಂದಲ ಬಗೆಹರಿಸಲಾಯಿತು ಎಂದು ವಿವರಿಸಿದರು.

..............................................................................

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

(ನವದೆಹಲಿ), ಜೂನ್ 15, 2019

ಮಾನ್ಯ ಮುಖ್ಯಮಂತ್ರಿ

-ಈ ಸಂದರ್ಭದಲ್ಲಿ ಅವರು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ನೇಮಕಾತಿ ಸಂದರ್ಭದಲ್ಲಿ ಸ್ಥಳೀಯ ಭಾಷಾ ಜ್ಞಾನ ಹೊಂದಿರುವ ಸ್ಥಳೀಯರಿಗೆ ಅವಕಾಶ ಒದಗಿಸುವಂತೆ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ (ಐಬಿಪಿಎಸ್) ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ಮನವಿ ಮಾಡಿದರು.

-ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳು ಸಂವಿಧಾನ ಮಾನ್ಯತೆ ನೀಡಿರುವ ಎಲ್ಲ 22 ಭಾಷೆಗಳಲ್ಲಿ ನಡೆಸಬೇಕು ಹಾಗೂ ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳ ನೇಮಕಾತಿಯಲ್ಲೂ ಸ್ಥಳೀಯರಿಗೆ ಅವಕಾಶ ಒದಗಿಸುವ ಕುರಿತು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವಂತೆ ಮನವಿ ಮಾಡಿದರು.

ಮಾನ್ಯ ಮುಖ್ಯಮಂತ್ರಿ

-ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಿಗೆ 2018-19ನೇ ಸಾಲಿಗೆ ಬಾಕಿ ಇರುವ 233 ಕೋಟಿ ರೂ. ಪರ್ಫಾರ್ಮನ್ಸ್ ಗ್ರಾಂಟ್ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

-ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯ ಬ್ಯಾಂಕ್ ಖಾತೆಯಲ್ಲಿರುವ ಮೊತ್ತ ಹಾಗೂ ಬಡ್ಡಿ ಮೊತ್ತವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ವಿನಿಯೋಗಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಕಾಯ್ದೆ 1961 ರ ನಿಯಮ 10(29ಎ) ಅಡಿ ಮಂಡಳಿಯನ್ನು ಸೇರ್ಪಡೆಗೊಳಿಸಿ, ಕಾಫಿ ಮಂಡಳಿ, ರಬ್ಬರ್ ಮಂಡಳಿಗಳಂತೆ, ಆದಾಯ ತೆರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿದರು.

-ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯವು ಅತ್ಯುತ್ತಮ ಸಾಧನೆ ಮಾಡಿದ್ದು, ಕೇಂದ್ರದಿಂದ ಕೂಲಿ ಮುಂಗಡವೂ ಸೇರಿದಂತೆ ಸುಮಾರು 1500 ಕೋಟಿ ರೂ. ಬಿಡುಗಡೆಯಾಗಬೇಕಿದೆ. ಈ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರು.

-ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾಕ್ಟರ್ ಇ.ವಿ. ರಮಣ ರೆಡ್ಡಿ ಉಪಸ್ಥಿತರಿದ್ದರು.

...............................................................................

ಮುಖ್ಯಮಂತ್ರಿ ಅವರು ನವದೆಹಲಿಯಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

(ನವದೆಹಲಿ), ಜೂನ್ 15, 2019

ಮಾನ್ಯ ಮುಖ್ಯಮಂತ್ರಿ

-ಮಹದಾಯಿ ಹಾಗೂ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಗೆಜೆಟ್ ಅಧಿಸೂಚನೆ ಹೊರಡಿಸುವ ಬಗ್ಗೆ ಸಂಬಂಧಿಸಿದ ರಾಜ್ಯಗಳೊಂದಿಗೆ ಸಭೆ ಕರೆದು ಚರ್ಚಿಸುವುದಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ತಿಳಿಸಿದರು.

-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಚಿವರನ್ನು ಭೇಟಿಯಾಗಿ ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಕುರಿತು ಚರ್ಚಿಸಿದರು.

-ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಹಾಗೂ ಕೃಷ್ಣಾ ನ್ಯಾಯಾಧಿಕರಣದ ಆದೇಶ ಹಾಗೂ ಮಹದಾಯಿ ನ್ಯಾಯಾಧಿಕರಣದ ಆದೇಶಗಳ ಗಜೆಟ್ ಅಧಿಸೂಚನೆ ಹೊರಡಿಸಿ, ಶೀಘ್ರವೇ ಈ ಯೋಜನೆಗಳ ಅನುಷ್ಠಾನಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.

ಮೇಕೆದಾಟು:

-ಕರ್ನಾಟಕ ರಾಜ್ಯವು ಜನವರಿ 18, 2019 ರಂದು ಕೇಂದ್ರ ಸರ್ಕಾರಕ್ಕೆ ಮೇಕೆದಾಟು ಬ್ಯಾಲನ್ಸಿಂಗ್ ರಿಸರ್ವಯರ್ ಕಂ ಕುಡಿಯುವ ನೀರಿನ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಿದೆ. ಈ ಯೋಜನೆಯಿಂದ 4.75 ಟಿಎಂಸಿ ನೀರನ್ನು ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೆ ಬಳಸುವ ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಉದ್ದೇಶವಿದೆ.

-ಇದು ಕರ್ನಾಟಕದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಕರ್ನಾಟಕದ ನೆಲದಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಯಾದ್ದರಿಂದ ಈ ಯೋಜನೆಗೆ ಅನುಮತಿ ನೀಡಲು ತಮಿಳುನಾಡು ಸರ್ಕಾರದ ಅಭಿಪ್ರಾಯ ಪಡೆಯುವ ಅಗತ್ಯವಿರುವುದಿಲ್ಲ. ಆದ್ದರಿಂದ ಶೀಘ್ರವೇ ಈ ಯೋಜನೆಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿಗಳು ಕೇಂದ್ರ ಸಚಿವರನ್ನು ಕೋರಿದರು.

ಕೃಷ್ಣಾ ನ್ಯಾಯಾಧಿಕರಣ-2:

-ಕೃಷ್ಣಾ ಜಲವಿವಾದಗಳ ನ್ಯಾಯಾಧಿಕರಣ-2 ರಾಜ್ಯಕ್ಕೆ 166 ಟಿಎಂಸಿ ನೀರನ್ನು ನೀರಾವರಿ ಮತ್ತು ಇತರ ಉದ್ದೇಶಗಳಿಗಾಗಿ ಹಂಚಿಕೆ ಮಾಡಿದೆ. ಆದರೆ ಕೃಷ್ಣಾ ನ್ಯಾಯಾಧಿಕರಣದ ಆದೇಶ ಗೆಜೆಟ್ ಅಧಿಸೂಚನೆ ಹೊರಡಿಸದ ಕಾರಣ ರಾಜ್ಯದ ಪಾಲಿನ ನೀರಿನ ಸದ್ಬಳಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶೀಘ್ರವೇ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದರು.

-ಮಹದಾಯಿ ಜಲ ವಿವಾದ ನ್ಯಾಯಾಧಿಕರಣವೂ ಸಹ ರಾಜ್ಯಕ್ಕೆ 13.2 ಟಿಎಂಸಿ ನೀರು ಹಂಚಿಕೆ ಮಾಡಿದ್ದು, ಈ ಕುರಿತು ಇನ್ನೂ ಗೆಜೆಟ್ ಅಧಿಸೂಚನೆ ಹೊರಡಿಸದ ಕಾರಣ ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ-ಧಾರವಾಡ ನಗರಗಳು ಹಾಗೂ ದಾರಿಯಲ್ಲಿರುವ ಪಟ್ಟಣ, ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಕಳಸಾ-ಬಂಡೂರಿ ನಾಲಾ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ.

-ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ಹಂಚಿಕೆಗೆ ಸಂಬಂಧಿಸಿದಂತೆ, ನ್ಯಾಯಾಲಯದಲ್ಲಿ ಕಾವೇರಿ ಜಲಾನಯನ ಪ್ರದೇಶದ ರಾಜ್ಯಗಳು ಪ್ರಕರಣಗಳನ್ನು ದಾಖಲಿಸಿದ್ದಾಗ್ಯೂ, ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಡುವ ಷರತ್ತು ವಿಧಿಸಿ, ಗೆಜೆಟ್ ಅಧಿಸೂಚನೆ ಹೊರಡಿಸಲಾಗಿತ್ತು. ಅದೇ ರೀತಿ ಕೃಷ್ಣಾ ಹಾಗೂ ಮಹದಾಯಿ ನ್ಯಾಯಾಧಿಕರಣಗಳ ನೀರು ಹಂಚಿಕೆ ಕುರಿತಂತೆ ನ್ಯಾಯಾಲಯದ ತೀರ್ಪು ನಿರೀಕ್ಷಿಸಿ, ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿದರು.

*********************************