ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಸರ್ಕಾರ ಮತ್ತು ಜನರ ನಡುವೆ ನಿಕಟ ಸಂಪರ್ಕ ಸಾಧಿಸುವುದು ಗ್ರಾಮವಾಸ್ತವ್ಯ ಉದ್ದೇಶ: ಮುಖ್ಯಮಂತ್ರಿ

ವಿಧಾನಸೌಧ(ಬೆಂಗಳೂರು), ಜೂನ್ 13, 2019

-ಗ್ರಾಮವಾಸ್ತವ್ಯ ಸಾಂಕೇತಿಕ. ಅದು ಜನಪ್ರಿಯತೆಗಾಗಿ ಮಾಡಿದ ಕಾರ್ಯಕ್ರಮವಲ್ಲ. ಗ್ರಾಮವಾಸ್ತವ್ಯದ ನೈಜ ಉದ್ದೇಶ ಸರ್ಕಾರ ಮತ್ತು ಜನತೆ ನಡುವೆ ನಿಕಟ ಸಂಪರ್ಕ ಸಾಧಿಸುವುದು.ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿಕೊಡುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದಿಲ್ಲಿ ತಿಳಿಸಿದರು.

-21.06.2019 ರಂದು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲೂಕಿನ ಚಂದರಕಿ ಗ್ರಾಮ, 22.06.2019ರಂದು ಅಫ್ಜಲ್ಪುರ ತಾಲ್ಲೂಕಿನ ಹೆರೂರು-ಬಿ ಗ್ರಾಮಗಳಲ್ಲಿ ಮತ್ತು 26.06.2019ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರಿಗುಡ್ಡ ಗ್ರಾಮ, 27.06.2019ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಉಜಳಂಬ ಗ್ರಾಮಗಳಲ್ಲಿ ಆಯೋಜಿಸಿರುವ ಗ್ರಾಮವಾಸ್ತವ್ಯ ಕಾರ್ಯಕ್ರಮಗಳ ಪೂರ್ವಬಾವಿ ತಯಾರಿಗಾಗಿ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

-“ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ನನ್ನ ವಾಸ್ತವ್ಯಕ್ಕೆ ಪ್ರಾಮುಖ್ಯತೆ ನೀಡಬೇಕಿಲ್ಲ. ಸರಳ ಸಿದ್ಧತೆಗಳಾದರೆ ಸಾಕು” ಎಂದ ಅವರು “ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನನ್ನಗುರಿ. ರಸ್ತೆ, ಕುಡಿಯುವ ನೀರು, ಶಾಲಾ ಕಾಲೇಜುಗಳ ಸುಧಾರಣೆಯ ಬಗೆಗೆ ನನ್ನ ಆದ್ಯತೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡುವುದು ನನ್ನ ಧ್ಯೇಯ” ಎಂದು ನುಡಿದರು.

-ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಉಸ್ತುವಾರಿ ಸಚಿವರುಗಳಾದ ಪ್ರಿಯಾಂಕ ಖರ್ಗೆ, ಬಂಡೆಪ್ಪ ಕಾಶೆಂಪೂರ, ರಾಜಶೇಖರ್ ಪಾಟೀಲ್ ಅವರುಗಳು ಭಾಗವಹಿಸಿದ್ದ ಸಭೆಯಲ್ಲಿ ಸಚಿವರುಗಳಾದ ಹೆಚ್.ಡಿ. ರೇವಣ್ಣ, ಸಾ.ರಾ ಮಹೇಶ್ ಅವರುಗಳು ಉಪಸ್ಥಿತರಿದ್ದರು.

-ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯದಿಂದ ಸ್ಥಳೀಯ ಸಮಸ್ಯೆಗಳ ಪರಿಹಾರವಷ್ಟೇ ಅಲ್ಲದೆ ಆಯಾ ಜಿಲ್ಲೆಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಇದೊಂದು ಅತ್ಯುತ್ತಮ ಬೆಳವಣಿಗೆ ಎಂಬ ಅಭಿಪ್ರಾಯವನ್ನು ಸಚಿವರುಗಳು ವ್ಯಕ್ತಪಡಿಸಿದರು.

-ಸಂಬಂಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪ್ರಮುಖ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಯವರ ಅಪರ ಮುಖ್ಯಕಾರ್ಯದರ್ಶಿ ರಮಣರೆಡ್ಡಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

*********************************