ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಾರ್ಯಕ್ರಮಗಳಲ್ಲಿ ನಾವೀನ್ಯತೆ ತರಲು ಮುಖ್ಯಮಂತ್ರಿಗಳ ಸೂಚನೆ

ವಿಧಾನಸೌಧ(ಬೆಂಗಳೂರು), ಜೂನ್ 04, 2019

-ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ರೂಪಿಸಿರುವ ಯೋಜನೆ ಗಳಲ್ಲಿ ನಾವೀನ್ಯತೆ ತರಲು ಮುಖ್ಯಮಂತ್ರಿ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

-2019-20ನೇ ಸಾಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಉಪಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಅಭಿವೃದ್ಧಿ ಪರಿಷತ್ತಿನ ಸಭೆಯ ಅಧ್ಯಕ್ಷತೆ ವಹಿಸಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.

-ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಉಪಯೋಜನೆಗಳ ಜಾರಿಯಲ್ಲಿ ಹೊಸತನದ ಕೊರತೆಯಿದೆ. ಹಿಂದಿನ ವರ್ಷಗಳ ಯೋಜನೆಗಳೇ ಪುನರಾವರ್ತನೆಯಾಗುತ್ತಿದೆ. ಹೊಸ ಸಾಧ್ಯತೆಗಳ ಕುರಿತು ಚಿಂತಿಸಿ ಎಂದರು.

-ಸರ್ಕಾರ ಪ.ಜಾತಿ/ಪ.ವರ್ಗಗಳ ಉಪಯೋಜನೆಯಡಿ ರೂಪಿಸಿರುವ ಕಾರ್ಯಕ್ರಮಗಳು ಫಲಾನುಭವಿಗಳಿಗೆ ತಲುಪಿರುವ ಬಗ್ಗೆ ಮೌಲ್ಯಮಾಪನ ಮಾಡಲು ಅವರು ಸೂಚಿಸಿದರು.

-ಎಸ್.ಸಿ.ಎಸ್.ಪಿ/ಟಿ. ಎಸ್.ಪಿ ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸಭೆಗೆ ಹಾಜರಾಗುವ ಸಂದರ್ಭದಲ್ಲಿ ಕಳೆದ ವರ್ಷದ ಮಾಹಿತಿಯನ್ನು ಹಾಗೂ ಫಲಾನುಭವಿಗಳ ಅಂಕಿಅಂಶಗಳೊಂದಿಗೆ ಬರಬೇಕು ಎಂದರು.ಯೋಜನೆಗಳ ಪ್ರಯೋಜನವನ್ನು ಪಡೆದ ಫಲಾನುಭವಿಗಳೇ ಮತ್ತೆ ಮತ್ತೆ ಈ ಯೋಜನೆಯಿಂದ ಲಾಭ ಪಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ರೀತಿ ಫಲಾನುಭವಿಗಳ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

-ರಾಜ್ಯದಲ್ಲಿ ಹಿಂದಿನ ಸರ್ಕಾರಅನುಸೂಚಿತ ಜಾತಿ -ಪಂಗಡಗಳಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿದೆ. ಕಳೆದ ವರ್ಷಗಳಲ್ಲಿ 1 ಲಕ್ಷ 40 ಸಾವಿರ ಕೋಟಿ ರೂ.ಗಳನ್ನು ಅನುಸೂಚಿತ ಜಾತಿಗಳು/ಅನುಸೂಚಿತ ಪಂಗಡಗಳ ಅಭಿವೃದ್ಧಿಗೆ ವೆಚ್ಚ ಮಾಡಲಾಗಿದೆ. ಈ ಸಮುದಾಯದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಶಾಶ್ವತ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಯೋಚಿಸಬೇಕು. ಅವರನ್ನು ಮೇಲೆತ್ತಲು ಬದಲಾವಣೆಗಳನ್ನು ತರಬೇಕಿದೆ. ನಿಗದಿತ ಗುರಿ ಮುಟ್ಟುವಲ್ಲಿ ಇರುವ ಲೋಪಗಳನ್ನು ಸರಿಪಡಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

-ಇಲಾಖಾವಾರು ಕಾರ್ಯಕ್ರಮಗಳನ್ನು ರೂಪಿಸುವ ಬದಲು ಆದ್ಯತೆ ಮೇರೆಗೆ ಶಿಕ್ಷಣ, ವಸತಿ, ಆರೋಗ್ಯ ಮುಂತಾದ ಕ್ಷೇತ್ರ ಗಳಲ್ಲಿ ಪ್ರಗತಿ ಸಾಧಿಸುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆಯಬೇಕೆಂದು ತಿಳಿಸಿದರು.

-ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ|| ಜಿ. ಪರಮೇಶ್ವರ್, ಕಂದಾಯ ಸಚಿವರಾದ ಆರ್. ವಿ. ದೇಶಪಾಂಡೆ, ಲೋಕೋಪಯೋಗಿ ಸಚಿವರಾದ ಹೆಚ್. ಡಿ. ರೇವಣ್ಣ, ಸಮಾಜ ಕಲ್ಯಾಣ ಸಚಿವರಾದ ಪ್ರಿಯಾಂಕ್ ಖರ್ಗೆ, ಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

*********************************