ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ರೈತರ ಸಾಲ ಮನ್ನಾ: ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

ಗೃಹ ಕಚೇರಿ ಕೃಷ್ಣಾ (ಬೆಂಗಳೂರು), ಮೇ 08, 2019

-ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನ ಕುರಿತಂತೆ ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಉನ್ನತ ಮಟ್ಟದ ಸಭೆಯನ್ನು ಏರ್ಪಡಿಸಿ, ಸಾಲ ಮನ್ನಾ ಯೋಜನೆಯನುಸಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

-ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಸಹಕಾರ ಸಚಿವ ಬಂಡೆಪ್ಪ ಕಾಶಂಪುರ, ಪಶುಸಂಗೋಪನಾ ಸಚಿವ ನಾಡಗೌಡ ಹಾಗೂ ಸಹಕಾರ ಹಾಗೂ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

-ಸಾಲಮನ್ನಾ ಯೋಜನೆಯನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. 2018 ರ ಡಿಸೆಂಬರ್ ತಿಂಗಳಿನಿಂದ ರೈತರ ಸಾಲವನ್ನು ಹಂತಹಂತವಾಗಿ ಅವರ ಖಾತೆಗೆ ಭರ್ತಿ ಮಾಡಲಾಗುತ್ತಿದೆ. ಈವರೆಗೆ ಸಹಕಾರ ಸಂಘಗಳ 8.3 ಲಕ್ಷ ರೈತರಿಗೆ 3500 ಕೋಟಿ ರೂ. ಸಾಲ ಮನ್ನಾ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಸಹಕಾರ ಸಂಘಗಳಲ್ಲಿ ರೈತರು ನಿಯಮಾವಳಿಗಳಂತೆ ಅರ್ಹತೆ ಪಡೆದ ದಿನದಂದು ಅವರ ಖಾತೆಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾ ದೇವಿ ತಿಳಿಸಿದರು.

-ವಾಣಿಜ್ಯ ಬ್ಯಾಂಕುಗಳಲ್ಲಿ 7.5 ಲಕ್ಷ ರೈತರಿಗೆ 3930 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ 1.5 ಲಕ್ಷ ರೈತರ ಸುಮಾರು 900 ಕೋಟಿ ರೂ ಸಾಲಮನ್ನಾ ಮೊತ್ತ ಬಿಡುಗಡೆಗೆ ಸಿದ್ದವಾಗಿದ್ದು ಮೇ 23 ರ ನಂತರ ಬಿಡುಗಡೆ ಮಾಡಲಾಗುವುದು.

-ಒಟ್ಟಾರೆಯಾಗಿ ವಾಣಿಜ್ಯ ಬ್ಯಾಂಕು ಹಾಗೂ ಸಹಕಾರಿ ಬ್ಯಾಂಕುಗಳ 15.5 ಲಕ್ಷ ರೈತರ 7417 ಕೋಟಿ ರೂ. ಮನ್ನಾ ಮಾಡಲಾಗಿದೆ ಎಂದು ಆರ್ಥಿಕ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್ ಅವರು ತಿಳಿಸಿದರು.

-ರೈತರ ಸಾಲ ಮನ್ನಾ ಯೋಜನೆಯನ್ನು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ನಿಯಮಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ರೈತರ ಸಾಲಮನ್ನಾ ಈ ಆರ್ಥಿಕ ವರ್ಷದಲ್ಲೇ ಆಗಲಿದೆ ಎಂದು ಅವರು ತಿಳಿಸಿದರು.

-ರೈತರ ಸಾಲಮನ್ನಾ ಯೋಜನೆಗೆ ಹಣಕಾಸು ಕೊರತೆ ಇರುವುದಿಲ್ಲ ಹಾಗೂ ಈಗಾಗಲೇ ಪ್ರಕಟಿಸಿರುವ ಯೋಜನೆಗಳಿಗೆ ಸಾಲಮನ್ನಾದಿಂದ ಯಾವುದೇ ಅಡ್ಡಿಯೂ ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

-ಸಾಲಮನ್ನಾ ಯೋಜನೆಯ ಅನುಷ್ಠಾನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಪ್ರಕ್ರಿಯೆಯನ್ನು ವಾರಕ್ಕೊಮ್ಮೆ ಪರಿಶೀಲಿಸುವಂತೆ ಸಹಕಾರ ಸಚಿವರಿಗೆ ಹಾಗೂ ಸಹಕಾರ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.

*********************************