ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ರೇಷ್ಮೆ ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಬದ್ಧ - ಮುಖ್ಯಮಂತ್ರಿ

ಗೃಹ ಕಚೇರಿ ಕೃಷ್ಣಾ (ಬೆಂಗಳೂರು), ಮಾರ್ಚ್ 06, 2019

-ರೇಷ್ಮೆ ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

-ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ರೇಷ್ಮೆ ಬೆಳೆಗಾರರ ಸಮಸ್ಯೆಗಳ ಕುರಿತು ಕರೆದಿದ್ದ ಸಭೆಯಲ್ಲಿ ರೇಷ್ಮೆ ಬೆಳೆಗಾರರ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿಗಳು , ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮತ್ತು ರೈತರ ಸಮಿತಿ ರಚಿಸುವುದಾಗಿ ತಿಳಿಸಿದರು. ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಚೀನಾ ಮಾದರಿಯಲ್ಲಿ , ರಾಜ್ಯದಲ್ಲಿ ರೇಷ್ಮೆ ಉಪ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡಿ, ಉತ್ತಮ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲು ಸಹ ಕ್ರಮ ಕೈಗೊಳ್ಳಲಾಗುವುದು ಹಾಗೂ ಮದ್ಯವರ್ತಿಗಳ ಹಾವಳಿಯನ್ನು ಸಹ ತಪ್ಪಿಸಲಾಗುವುದು. ರೇಷ್ಮೆ ಬೆಳೆಗಾರರಿಗೆ ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ನೀಡಲಾಗುವುದು ಎಂದು ಭರವಸೆ ನೀಡಿದರು. ಶೀಘ್ರದಲ್ಲಿಯೇ ಮತ್ತೊಂದು ಸಭೆ ಕರೆದು ರೇಷ್ಮೆ ಬೆಳೆಗಾರರ ಸಮಸ್ಯೆಗಳ ಪರಿಹಾರದ ಕುರಿತು ವಿವರವಾಗಿ ಚರ್ಚಿಸುವುದಾಗಿ ತಿಳಿಸಿದರು.

-ಸಭೆಯಲ್ಲಿ ವ್ಯಕ್ತವಾದ ರೇಷ್ಮೆ ಬೆಳೆಗಾರರ ಸಲಹೆಗಳು : ಮದ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು, ರೇಷ್ಮೆ ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು, ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು, ವ್ಯವಸ್ಥಿತ ಮಾರುಕಟ್ಟೆ ಸೌಲಭ್ಯ ಅಗತ್ಯ. ರೇಷ್ಮೆ ರಫ್ತಿಗೆ ಅವಕಾಶ ನೀಡಬೇಕು, ರೇಷ್ಮೆ ಉತ್ಪಾದನಾ ವೆಚ್ಚ ಕಡಿಮೆಗೊಳಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಗಮನ ಹರಿಸಬೇಕು, ರೇಷ್ಮೆ ಉಪ ಉತ್ಪನ್ನಗಳಿಗೆ ಒತ್ತು ನೀಡಬೇಕು,ರೇಷ್ಮೆ ಆಮದು ಸುಂಕ ಹೆಚ್ಚಿಸಬೇಕು.

-ಸಭೆಯಲ್ಲಿ ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ|| ಸುಬ್ರಮಣ್ಯ , ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ|| ಇ.ವಿ.ರಮಣರೆಡ್ಡಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ರೇಷ್ಮೆ ಬೆಳೆಗಾರರು ಉಪಸ್ಥಿತರಿದ್ದರು.

*********************************