ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಕರ್ನಾಟಕ ಮುನ್ನಡೆ - ಸಮಾಜದ ವಿವಿಧ ಕ್ಷೇತ್ರಗಳ ಪರಿಣಿತರೊಂದಿಗೆ ಮುಖ್ಯಮಂತ್ರಿ ಸಂವಾದ...

ವಿಧಾನಸೌಧ(ಬೆಂಗಳೂರು), ಮಾರ್ಚ್ 04, 2019

-ರಾಜ್ಯದಲ್ಲಿ ಎರಡು ಪಕ್ಷಗಳ ಜೊತೆ ಸಮ್ಮಿಶ್ರ ಸರ್ಕಾರ ನಡೆಸೋದು ಸವಾಲಿನ ಕೆಲಸ. ನಮ್ಮ ಪಕ್ಷದ ೩೭ ಸ್ಥಾನ ದಾಟದೇ ಇದ್ದಾಗ ರಾಜಕೀಯ ನಿವೃತ್ತಿಹೊಂದಬೇಕು ಅಂತಾ ತೀರ್ಮಾನ ಮಾಡಿದ್ದೆ.

-ರಾಜ್ಯದ ಜನ ಒಪ್ಪಿಲ್ಲ ಅಂದ್ರೇ ಯಾಕೆ ಇರಬೇಕು ಎಂದು ತೀರ್ಮಾನ ಮಾಡಿದ್ದೆ. ನಾನು ಭವಿಷ್ಯದ, ಜ್ಯೋತಿಷ್ಯದ ಹಿಂದೆ ಹೋಗಲ್ಲ. ಆದ್ರೆ ನಮ್ಮ ಕುಟುಂಬದವರು ಜ್ಯೋತಿಷ್ಯ ವನ್ನ ನಂಬ್ತಾರೆ. ನಾನು ದೇವರನ್ನ ನಂಬ್ತೀನಿ. 38-78 ಒಂದು ಕಾಕತಾಳೀಯ ಅಷ್ಟೇ ಎಂದರು.

-ಕರ್ನಾಟಕ ಮುನ್ನಡೆ - ಸಮಾಜದ ವಿವಿಧ ಕ್ಷೇತ್ರಗಳ ಪರಿಣಿತರೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂವಾದ ನಡೆಸಿದರು.

-ರಾಜ್ಯ ಮೈತ್ರಿ ಸರ್ಕಾರದ ಸಾಧನೆಗಳ ಬಗ್ಗೆ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.

-ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು.

-ನಮ್ಮ ಪಕ್ಷಕ್ಕೆ ಕೇವಲ 38 ಶಾಸಕರ ಬಲ ದೊರೆತಾಗ ನಾನು ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ್ದೆ. ಅಷ್ಟರಲ್ಲಿ ಫೋನ್ ಬಂತು. ಮೈತ್ರಿ ಸರ್ಕಾರ ರಚನೆಗೆ ಕಾಂಗ್ರೆಸ್ ಆಹ್ವಾನಿಸಿತು. ನಂತರ ನಿರ್ಧಾರ ಬದಲಿಸಿಕೊಂಡೆ ಎಂದು ತಿಳಿಸಿದರು.

-ಎರಡು ಪಕ್ಷಗಳ ಮೈತ್ರಿ ಸರ್ಕಾರ ನಡೆಸುವುದು ಒಂದು ಸವಾಲು. ಹನ್ನೆರಡು ವರ್ಷಗಳ ಹಿಂದೆ ಮೈತ್ರಿ ಸರಕಾರ ರಚನೆ ಮಾಡಿದಾಗ ನನಗಿದ್ದುದು ದೇವೇಗೌಡರ ಮಗ ಎಂಬ ಅರ್ಹತೆ ಮಾತ್ರ. ಯಾರೋ ಹುಡುಗ ಸರ್ಕಾರ ರಚನೆ ಮಾಡಿದ್ದಾನೆ ಎಂದು ಜನ ಅನುಮಾನದಿಂದಲೇ ನೋಡಿದ್ರು. ಆಗಿನ ಪರಿಸ್ಥಿತಿಯೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ ಎಂದರು.

-ಸರ್ಕಾರಕ್ಕೆ ನೀಡ್ತಿರುವ ಗಡುವುಗಳನ್ನ ಎದುರಿಸಿ ಹೆಜ್ಜೆ ಇಡ್ತಿದ್ದೀನಿ.ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ 10 ಹೆಜ್ಜೆ ಮುಂದೆ ಸಾಗಿದ್ದೇನೆ. ಆದರೆ, ನಾನು ಮಾಡಿರುವ ಕಾರ್ಯಕ್ರಮಗಳು, ಯೋಜನೆಗಳಿಗೆ ಪ್ರಚಾರದ ಕೊರತೆ ಇದೆ. ಈಗಿನ ಜಿಲ್ಲಾ ಮಂತ್ರಿಗಳು ತಾಲೂಕಿನ ಮಂತ್ರಿಗಳಾಗಿದ್ದಾರೆ. ಜಿಲ್ಲಾ ಮಂತ್ರಿಗಳು ಅಂತಾ ಮಾಡಿದರೂ ಕೇವಲ ತಾಲೂಕಿಗೆ ಮಾತ್ರ ಸೀಮಿತ ಆಗ್ತಿದ್ದಾರೆ ಎಂದು ಕೆಲವು ಜಿಲ್ಲಾ ಮಂತ್ರಿಗಳ ವಿರುದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.

-ಮೊದಲು ಜನರ ಸೇವೆಗೆ ರಾಜಕೀಯಕ್ಕೆ ಬರುತ್ತಿದ್ರು. ಈಗ ಯಾವುದೊ ದುಡ್ಡು ಚೆಲ್ಲಿ ರಾಜಕೀಯಕ್ಕೆ ಬರುತ್ತಾರೆ. ಜಾತಿ ವ್ಯಾಮೋಹ ಹೋಗಬೇಕು. ಜಾತಿ ವ್ಯಾಮೋಹದಲ್ಲಿ ಅಧಿಕಾರ ನಡೆಸಿದ್ರೆ ರಾಜ್ಯಕ್ಕೆ ದ್ರೋಹ ನಡೆಸಿದಂತೆ. ಕೆಲಸ ಮಾಡೋ ಅಧಿಕಾರಿಗಳ ವಿಚಾರದಲ್ಲಿ ಯಡವಟ್ಟಾಗಿದ್ರೇ ತಿಳಿಸಲಿ. ವಿರೋಧಪಕ್ಷದ ನಾಯಕರು ನನ್ನ ಗಮನಕ್ಕೆ ತರಲಿ. ನಾನಾದನ್ನ ತಿದ್ದಿಕೊಳ್ಳುತ್ತೇನೆ ಎಂದು ಸಲಹೆ ನೀಡಿದರು.

-ಈ ಹಿಂದೆ ಬಜೆಟ್ ಮೇಲಿನ ಚರ್ಚೆ ಒಂದೂವರೆ ತಿಂಗಳು ನಡೀತಿತ್ತು. ಇತ್ತೀಚೆಗೆ ಬಜೆಟ್ ಮೇಲೆ ಚರ್ಚೆಯೇ ಆಗಲ್ಲ. ನನ್ನ ದುರಾದೃಷ್ಟ ಚರ್ಚೆಯೇ ಮಾಡದೇ ನನ್ನ ಬಜೆಟ್ ಪಾಸಾಯ್ತು ಎಂದು ಬೇಸರ ವ್ಯಕ್ತಪಡಿಸಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನನ್ನ ತಂದೆಗಿಂತ ನಾನು ಪ್ರತಿದಿನ ಭೇಟಿ ಮಾಡುವವರೇ ನನಗೆ ಆದರ್ಶ ನಮ್ಮ ತಂದೆಯವರು ನನಗೆ ಗುರು, ಮಾರ್ಗದರ್ಶಿ ಒಂದು ಭಾಗ.

-ಆದರೆ, ಪ್ರತಿದಿನ ನಾನು ಭೇಟಿ ಮಾಡುವ ಜನರೇ ನನಗೆ ಆದರ್ಶ. ಬಡ ಜನತೆಯನ್ನು ಆರ್ಥಿಕವಾಗಿ ಮೇಲೆತ್ತಲು ಏನು ಮಾಡಬೇಕು ಅನ್ನೋದರ ಬಗ್ಗೆ ಚಿಂತನೆ ಮಾಡುತ್ತೇನೆ ಶಿಕ್ಷಣ, ಆರೋಗ್ಯ, ಉದ್ಯೋಗ ನೀಡೋದು ಸಮ್ಮಿಶ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದರು.

-ಬೆಂಗಳೂರಿನಲ್ಲಿ ವಾಸ ಮಾಡೋಕೆ ಆಗದ ವಾತಾವರಣ ನಿರ್ಮಾಣ ಆಗುತ್ತಿದೆ.ಮುಂಚೆ ಕೃಷಿ ಚಟುವಟಿಕೆಗಳನ್ನ ಮಾಡ್ತಿದ್ರು. ನಂತರ ಆ ಜಾಗವನ್ನ ಬಡಾವಣೆ ಮಾಡೋಕೆ ಸ್ವಾಧೀನ ಮಾಡಿಕೊಳ್ಳಲಾಯ್ತು. ಅದ್ರಿಂದ ರೈತಮಕ್ಕಳು ಅಲ್ಲಿ ಹೋಗಿ ಗೇಟ್ ಕಾಯುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

-ಬೆಂಗಳೂರು ಪರಿಸರಕ್ಕೆ ಹಾನಿ ಮಾಡದೇ ಸಮಸ್ಯೆಗೆ ಪರಿಹಾರ ಮಾಡಲಾಗುತ್ತದೆ. ಎಲಿವೇಟೆಡ್ ಕಾರಿಡಾರ್ ಮೂಲಕ ಮರಗಳನ್ನ ಹಾನಿ ಮಾಡ್ತೇವೆ ಅಂತಾ ಹೇಳ್ತಿದ್ದಾರೆ. ವಿಧಾನಸೌಧ ಮುಕ್ತಾವಾಗಿದೆ ಯಾರು ಬೇಕಾದರೂ ಬಂದು ಚರ್ಚೆ ಮಾಡಬಹುದು ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಮುಕ್ತ ಅವಕಾಶ ನೀಡಿದರು.

ಸರ್ಕಾರಿ ಶಾಲೆ, ಆಸ್ಪತ್ರೆಗಳನ್ನ ಬಲಪಡಿಸಿ:

-ಇದೇ ವೇಳೆ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಕೆಲ ಸಲಹೆಗಳನ್ನ ನೀಡಿದ ಸಾಹಿತಿ ಮರುಳಸಿದ್ದಪ್ಪ, ಸರ್ಕಾರಿ ಶಾಲೆ, ಆಸ್ಪತ್ರೆಗಳನ್ನ ಬಲಪಡಿಸಬೇಕು. ಬಜೆಟ್ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು . ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಕೋಡೋದು ಮುಖ್ಯ ಅಲ್ಲ. ಸರ್ಕಾರಿ ಶಾಲೆಗಳಿಗೆ ಆದ್ಯತೆ, ಗುಣಮಟ್ಟ, ಮೂಲಸೌಲಭ್ಯಗಳನ್ನ ಹೆಚ್ಚಿಸಬೇಕು. ಇಲಾಖೆಗಳಲ್ಲಿ ಸ್ಥಿರ ಆಡಳಿತ ನೀಡುವಂತೆ ಸಲಹೆ ನೀಡಿದರು.

-ಈ ಕುರಿತು ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕನ್ನಡ ಶಾಲೆಗಳು ಉಳಿಯಬೇಕು ಅನ್ನೋವವರಲ್ಲಿ ನಾನು ಮೊದಲಿಗ. ಎಸ್ಎಸ್ಎಲ್ಸಿ ವರೆಗೂ ನಾವು ಕನ್ನಡ ಮಾಧ್ಯಮಗಳಲ್ಲಿ ಓದಿದವರು. ಶಿಕ್ಷಕರು ಎಷ್ಟರ ಮಟ್ಟಿಗೆ ಶಿಕ್ಷಣ ನೀಡುತ್ತಿದ್ದಾರೆ ಎಂದು ಶಿಕ್ಷಕರನ್ನ ಪ್ರತಿನಿಧಿಸೋ ಜನಪ್ರತಿನಿಧಿಗಳು ಚರ್ಚಿಸಲ್ಲ. ಒಂದು ಸೆಕ್ಷನ್ ಕನ್ನಡ, ಒಂದು ಸೆಕ್ಷನ್ ಇಂಗ್ಲೀಷ್ ಇರುತ್ತೆ. ಆಯ್ಕೆಯ ಹಕ್ಕು ಪೋಷಕರಿಗೆ ಬಿಟ್ಟಿದ್ದು. ಮೂಲಸೌಕರ್ಯಗಳ ನೀಡುವಲ್ಲಿ ಲೋಪದೋಷಗಳಿರೋದು ನಿಜ. ಅದನ್ನ ಸರಿಪಡಿಸಿ ಉತ್ತಮ ಕೆಲಸ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.

-ನಮ್ಮ ಹಳ್ಳಿಯಲ್ಲಿ 200 ವಿದ್ಯಾರ್ಥಿಗಳಿದ್ದವರೂ 14ಕ್ಕೆ ಇಳಿದಿದೆ. 35-40 ಸಾವಿರ ದುಡ್ಡು ಆಂಗ್ಲ ಮಾಧ್ಯಮಕ್ಕೆ ಸೇರಿಸ್ತಿದ್ದಾರೆ. ಕನ್ನಡ ಶಾಲೆಗಳ ಉಳಿಸೋಕೆ ಏನ್ ಮಾಡ್ಬೇಕು ಎಂದು ನಾಗತಿಹಳ್ಳಿ ಚಂದ್ರಶೇಖರ್ ಪ್ರಶ್ನೆಮಾಡಿದರು. ಶಿಕ್ಷಕರ ಗುಣಮಟ್ಟ ಕೂಡ ಹೆಚ್ಚಳ ಮಾಡಬೇಕಿದೆ. ಹೀಗಾಗಿ ಅವರಿಗೂ ತರಬೇತಿ ಕೊಡಲು ಉದ್ಧೇಶಿಸಲಾಗಿದೆ ಎಂದು ಹೆಚ್ಡಿಕೆ ತಿಳಿಸಿದರು.

ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು:

-ಪ್ರಸಕ್ತ ಶಿಕ್ಷಣ ವ್ಯವಸ್ಥೆ ಬಗ್ಗೆಯೂ ಹೆಚ್.ಡಿ. ಕುಮಾರಸ್ವಾಮಿ ಇವತ್ತು ಚರ್ಚೆ ನಡೆಸಿದರು. ಕನ್ನಡ ಮಾಧ್ಯಮ ಶಾಲೆಗಳನ್ನು ನಿರ್ಲಕ್ಷಿಸಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಆದ್ಯತೆ ಕೊಡುವುದಕ್ಕೆ ಡಾ. ಕೆ. ಮರುಣಸಿದ್ದಪ್ಪ, ನಾಗತಿಹಳ್ಳಿ ಚಂದ್ರಶೇಖರ್ ವ್ಯಕ್ತಪಡಿಸಿದ ಆತಂಕ್ಕೆ ಸಿಎಂ ಕೆಲ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದರು.

-“ಸರಕಾರಿ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಎರಡೂ ಮಾಧ್ಯಮಗಳಲ್ಲಿ ಶಾಲೆಗಳನ್ನು ಪ್ರಾರಂಭಿಸುತ್ತೇವೆ. ಆದರೆ, ಯಾವ ಮೀಡಿಯಂ ಎಂಬುದು ಪೋಷಕರ ಆಯ್ಕೆಯಾಗಲಿದೆ” ಎಂದು ಸಿಎಂ ಸ್ಪಷ್ಟಪಡಿಸಿದರು.

-ವಿಧಾನಪರಿಷತ್ ಸದಸ್ಯರು ತಾವು ಪ್ರತಿನಿಧಿಸುವ ಶಿಕ್ಷಕರ ಸಮಸ್ಯೆಗಳ ಬಗ್ಗೆ ಮಾತ್ರ ಪ್ರಶ್ನೆ ಕೇಳುತ್ತಾರೆ. ಹೆಚ್ಚಿನ ಶಿಕ್ಷಕರು ತಮಗೆ ಬೇಕಾದ ಸೌಲಭ್ಯಗಳಿಗೆ ಮಾತ್ರ ಒತ್ತಾಯ ಮಾಡುತ್ತಾರೆ. ಆದರೆ, ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಮಾತ್ರ ಆದ್ಯತೆ ಕೊಡುತ್ತಿಲ್ಲ. ಹಲವು ಶಿಕ್ಷಕರು ಗುಣಮಟ್ಟದ ಬಗ್ಗೆ ಗಮನ ಹರಿಸುವುದೇ ಇಲ್ಲ. ಶಿಕ್ಷಕರಿಗೂ ಕೋಚಿಂಗ್ ಕೊಡುವ ಯೋಜನೆ ರೂಪಿಸಲು ಉದ್ದೇಶಿಸಿದ್ದೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

-ರಾಜ್ಯದಲ್ಲಿ ವಿವಿಗಳ ಸಂಖ್ಯೆ ಜಾಸ್ತಿ ಇದೆ. ಕುಲಪತಿಗಳ ನೇಮಕವೇ ದೊಡ್ಡ ರಾಜಕೀಯವಾಗಿದೆ. ವಿವಿಗಳ ಕುಲಪತಿಗಳು ಸಹಕಾರ ಕೊಟ್ಟರೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ರೂಪಿಸಬಹುದು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

-ಇನ್ನು, ಚಿತ್ರರಂಗದ ಸಮಸ್ಯೆ ಬಗ್ಗೆಯೂ ಈ ಸಂವಾದದಲ್ಲಿ ಚರ್ಚೆ ಮಾಡಿದ ಕುಮಾರಸ್ವಾಮಿ, ಪರಭಾಷೆ ಚಿತ್ರಗಳ ಬಗ್ಗೆ ಸ್ಪರ್ಧಿಸುವ ಅನಿವಾರ್ಯತೆ ಇದೆ ಎಂದು ಒಪ್ಪಿಕೊಂಡರು. ಹಾಗೆಯೇ, ರಾಮನಗರ ಅಥವಾ ನಂಜನಗೂಡು ಇವೆರಡರಲ್ಲಿ ಎಲ್ಲಿ ಫಿಲಂ ಸಿಟಿ ಮಾಡಬೇಕೆಂಬುದು ಇನ್ನೂ ನಿಶ್ಚಿಯಗೊಂಡಿಲ್ಲ ಎಂದೂ ಸಿಎಂ ಸ್ಪಷ್ಟನೆ ನೀಡಿದರು.

ಕೆಎಸ್ಆರ್ಟಿಸಿ ನಷ್ಟದಲ್ಲಿದೆ:

-ಕೆಎಸ್ಆರ್ಟಿಸಿ ನಷ್ಟದಲ್ಲಿದೆ. ಪ್ರತಿದಿನ ಕೋಟ್ಯಂತರ ರೂಪಾಯಿ ನಷ್ಟ ಆಗ್ತಿದ್ದು, ದರ ಹೆಚ್ಚಳ ಮಾಡುವಂತೆ ನನ್ನ ಮೇಲೆ ಒತ್ತಡ ಇದೆ. ಆದ್ರೆ ಲೋಕಸಭಾ ಚುನಾವಣೆಯಿಂದಾಗಿ, ಇದು ಸಮಸ್ಯೆಯಾಗುತ್ತದೆ. ದರ ಹೆಚ್ಚಳ ಮಾಡಿದ್ರೇ ಅದನ್ನೆ ದೊಡ್ಡದು ಮಾಡ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

-ಚಿತ್ರರಂಗ ಕುರಿತು ಹಲವು ಮಾತನಾಡಿದ ಹಿರಿಯ ನಿರ್ದೇಶಕ ಭಗವಾನ್, ಚಲನಚಿತ್ರದಲ್ಲಿ ನಟಿಸಬೇಕು ಅಂತಾ ಗ್ರಾಮೀಣ ಭಾಗದವರು ಬರ್ತಿದ್ದಾರೆ. ಆದ್ರೆ ಅವರಿಗೆ ಸೂಕ್ತ ಜಾಗ, ವಸತಿ ಇಲ್ಲದಂತಾಗಿದೆ. ಚಲನಚಿತ್ರ ತರಬೇತಿ ಶಾಲೆಗೆ ಜಾಗ ನೀಡುವಂತೆ ಮನವಿ ಮಾಡಿದರು.

-ಈ ಬಗ್ಗೆ ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಿನಿಮಾದ ಬಗ್ಗೆ ಆಸಕ್ತಿ ಇರೋವರಿಗೆ ತರಬೇತಿ ನೀಡಲು ಯೂನಿವರ್ಸಿಟಿ ಮಾಡೋಕೆ ಪ್ಲಾನ್ ಮಾಡಲಾಗಿದೆ. ತಾಂತ್ರಿಕವಾಗಿ ಹಳ್ಳಿಮಕ್ಕಳಿಗೂ ತರಬೇತಿ ಸಿಗಬೇಕು. ಚಿತ್ರರಂಗಕ್ಕೆ ಎಲ್ಲಾ ರೀತಿಯ ಸಹಾಯ ಮಾಡೋಕೆ ನಾನು ಸಿದ್ದನಿದ್ದೇನೆ. ಸಿಂಗಲ್ ಸ್ಕ್ರೀನ್ ಥಿಯೇಟರ್ ಮುಚ್ಚಲಾಗ್ತಿದೆ. ಮಲ್ಟಿಸ್ಕ್ರೀನ್ ಥಿಯೇಟರ್ಗಳಲ್ಲಿ ಕನ್ನಡ ಸಿನಿಮಾವನ್ನ ಸೆಕೆಂಡ್ ಗ್ರೇಡ್ ರೀತಿ ನೋಡ್ತಿದ್ದಾರೆ. ಬಾಡಿಗೆ ಅಡ್ವಾನ್ಸ್ ಕೊಟ್ಟು ಸಿನಿಮಾ ಪ್ರದರ್ಶನ ಮಾಡುವಂತೆ ಪರಿಸ್ಥಿತಿ ನಿರ್ಮಾಣ ಆಗಿದೆ. ಒಂದು ಬ್ಲೂಪ್ರಿಂಟ್ ಕೊಟ್ಟರೇ ನಾನು ಕಾರ್ಯಗತಗೊಳಿಸುತ್ತೇನೆ ಎಂದು ತಿಳಿಸಿದರು.

-300 ಚಿತ್ರಗಳಾದ್ರೂ ಸಬ್ಸಿಡಿಯನ್ನ ನೀಡಲಾಗ್ತಿದೆ. ಆದ್ರೆ ಗುಣಮಟ್ಟದ ಚಿತ್ರಗಳಿಗೆ ಸಬ್ಸಿಡಿ ನೀಡಿದ್ರೆ ಒಳ್ಳೇಯದು. ಸಿನಿಮಾವನ್ನ ಮಾಹಿತಿ ಇಲಾಖೆಯಿಂದ ಸಂಸ್ಕೃತಿ ಇಲಾಖೆ ವರ್ಗಾಯಿಸಿ ಎಂದು ನಿರ್ದೇಶಕ ನಾಗಾಭರಣ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು. ನಾಗಭರಣ ಅವರ ಸಲಹೆಗೆ ದನಿಗೂಡಿಸಿದ ನಾಗತಿಹಳ್ಳಿ ಗುಣಮಟ್ಟದ ಚಿತ್ರಗಳಿಗೆ ಸಬ್ಸಿಡಿ ನೀಡುವಂತೆ ತಿಳಿಸಿದರು.

-ಇನ್ನು ಮಹಿಳೆಯರಿಗಾಗಿ ಹೆಚ್ಚಿನ ಅನುದಾನ ಮೀಸಲಿಡುವಂತೆ ಕೋರಿದ ಮಹಿಳಾ ವಿವಿ ಪ್ರಾಧ್ಯಾಪಕಿ ಸುನಂದಮ್ಮ, ಬಜೆಟ್ನಲ್ಲಿ ಸೂಕ್ತ ಅನುದಾನ ಸಿಕ್ಕಿಲ್ಲ.ಕೇವಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬರುವ ಅನುದಾನ ಮಾತ್ರ. ಹೀಗಾಗಿ ಮಹಿಳಯರಿಗೆ ಸ್ವಲ್ಪ ಹೆಚ್ಚಿನ ಪ್ರತ್ಯೇಕ ಅನುದಾನ ನೀಡುಬೇಕೆಂದು ಮನವಿ ಮಾಡಿದರು.

-ಟ್ರೇಡಿಂಗ್ ವಿಭಾಗದಿಂದ ಮೂರ್ತಿ ಎಂಬುವವರು ಸಂವಾದದಲ್ಲಿ ಪ್ರಶ್ನಿಸಿದರು. ಕರ್ನಾಟಕದಲ್ಲಿ ಇತ್ತೀಚೆಗೆ ಬಂದ್ ಹೆಚ್ಚಾಗ್ತಿದೆ. ಕಳೆದ ವರ್ಷ 11 ಬಂದ್ಗಳಾಗಿವೆ. ಇದ್ರಿಂದ ಟ್ರೇಡಿಂಗ್ ವ್ಯವಸ್ಥೆಗೆ ನಷ್ಟ ಆಗ್ತಿದೆ. ಅನಾವಶ್ಯಕ ಬಂದ್ ಕರೆಯುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

-ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಇತ್ತೀಚಿಗೆ ಕೆಲವರು ಬಂದ್ ಮಾಡೋದನ್ನೆ ಹವ್ಯಾಸ ಮಾಡ್ಕೊಂಡಿದ್ದಾರೆ. ಕೆಲವರು ತಮ್ಮ ಶೋಕಿಗೋಸ್ಕರ ಬಂದ್ ಆಚರಿಸ್ತಾರೆ ಬಂದ್ನಿಂದ ನಮಗೆ ನಷ್ಟ ಆಗುತ್ತೆ ಅನ್ನೋದನ್ನ ತಿಳ್ಕೊಂಡಿಲ್ಲ ಎಂದರು.

-ನಮ್ಮ ಪಕ್ಷಕ್ಕೆ ಕೇವಲ 38 ಶಾಸಕರ ಬಲ ದೊರೆತಾಗ ನಾನು ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ್ದೆ. ಅಷ್ಟರಲ್ಲಿ ಫೋನ್ ಬಂತು. ಮೈತ್ರಿ ಸರ್ಕಾರ ರಚನೆಗೆ ಕಾಂಗ್ರೆಸ್ ಆಹ್ವಾನಿಸಿತು. ನಂತರ ನಿರ್ಧಾರ ಬದಲಿಸಿಕೊಂಡೆ ಎಂದು ತಿಳಿಸಿದರು.

*********************************