ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

34ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಕಾರ್ಯಕ್ರಮ - ಸನ್ಮಾನ್ಯ ಮುಖ್ಯಮಂತ್ರಿಯವರ ಭಾಷಣ

(ಮೈಸೂರು), ಮಾರ್ಚ್ 01, 2019

-ನನ್ನ ಆತ್ಮೀಯ ಮುದ್ರಣ ಮತ್ತು ದೃಶ್ಯ ಮಾಧ್ಯಮದ ಮಿತ್ರರೆ,

-ನಿಮಗೆಲ್ಲರಿಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 34ನೇ ರಾಜ್ಯ ಸಮ್ಮೇಳನದ ಶುಭಾಶಯಗಳು.

1. 1932 ರಲ್ಲಿ ಸಾಹಿತ್ಯ ಕ್ಷೇತ್ರದ ದಿಗ್ಗಜರೂ, ಸ್ವತಃ ಪತ್ರಕರ್ತರೂ ಆಗಿದ್ದ ಡಿ. ವಿ. ಗುಂಡಪ್ಪ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶತಮಾನೋತ್ಸವದತ್ತ ಸಂಘಟನಾತ್ಮಕ ಹೆಜ್ಜೆಗಳನ್ನು ಹಾಕುತ್ತಿರುವುದು ಸಂತೋಷದ ಸಂಗತಿ.

2. ಸಂಘದ ಹುಟ್ಟಿಗೆ ಮೈಸೂರು ಸಂಸ್ಥಾನದ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ ನೆರವು ನೀಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸದಾ ಎತ್ತಿಹಿಡಿಯುವ ನಾಡಿನ ಪರಂಪರೆಯ ದ್ಯೋತಕವಾಗಿದೆ. ಅವರ ಕಾರ್ಯ ಸದಾ ಸ್ಮರಣೀಯವಾದದ್ದು.

3. ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೆಗಳ ಮತ್ತು ಪತ್ರಕರ್ತರ ಗುರಿ ದೇಶಕ್ಕೆ ಸ್ವಾತಂತ್ರ್ಯ ಗಳಿಸುವುದೇ ಆಗಿತ್ತು. ಸಾಹಿತಿಗಳು, ಹೋರಾಟಗಾರರೂ ಪತ್ರಕರ್ತರಾಗಿ ಜನರನ್ನು ಜಾಗೃತಿಗೊಳಿಸಿದ್ದರು.

4. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 80 ವರ್ಷಕ್ಕೂ ಹೆಚ್ಚುಕಾಲ ಸವೆಸಿ ಕ್ರೀಯಾಶೀಲತೆಯನ್ನು ವಿಸ್ತರಿಸುತ್ತಾ ಮುನ್ನೆಡೆದಿರುವುದು ಶ್ಲಾಘನೀಯ. ಈ ಧೀರ್ಘಕಾಲದ ಮುನ್ನಡೆಗೆ ಕಾರಣರಾದ ಎಲ್ಲ ಮಹನೀಯರಿಗೆ ಅಭಿನಂದನೆಗಳು.

5. ಮಹಾತ್ಮ ಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್ ಸ್ವತಃ ಪತ್ರಕರ್ತರಾಗಿ ಈ ದೇಶಕ್ಕಾಗಿ ಕೊಟ್ಟ ಕೊಡುಗೆ ಅನನ್ಯ.

6. ಸ್ವಾತಂತ್ರ್ಯದ ನಂತರ ಪತ್ರಿಕೆಗಳ. ಸುದ್ದಿಮಾಧ್ಯಮಗಳ ಕಾರ್ಯಸ್ವರೂಪ ಪ್ರಜಾಪ್ರಭುತ್ವವನ್ನು ಕಾಯುವುದು ಮತ್ತು ದೇಶದ ಜನರ ಅಭಿವೃದ್ದಿಯ ಮೂಲ ಗುರಿಯಾಗಿ ಬಂದಿರುವುದನ್ನು ಕಾಣುತ್ತಿದ್ದೇವೆ.

7. ಸಮಾಜದ ಒಳಿತಿಗಾಗಿ ಸುದ್ದಿ ಮಾಧ್ಯಮಕ್ಷೇತ್ರದಲ್ಲಿ ಅವಿರತವಾಗಿ ದುಡಿಯುತ್ತಿರುವ ನೀವುಗಳು ಸಂಘಟನಾತ್ಮಕವಾಗಿ ಇಂದಿಲ್ಲಿ ಸೇರಿರುವುದರ ಉದ್ದೇಶ, ಆಶಯವನ್ನು ಅರ್ಥಮಾಡಿಕೊಂಡಿದ್ದೇನೆ. ನಾನೂ ಕೂಡ ಈ ಮೊದಲಿಂದಲೂ ಮಾಧ್ಯಮಕ್ಷೇತ್ರ ನಂಟು ಮತ್ತು ಅದರ ನಿರ್ವಹಣೆಯ ಜವಾಬ್ದಾರಿಯ ಸಂಪರ್ಕವೂ ಹೊಂದಿರುವುದರಿಂದ ಕೇವಲ ಸುದ್ದಿ ಸಂಸ್ಥೆಯ ನಿರ್ವಹಣೆಯಲ್ಲದೆ ಅಲ್ಲಿ ದುಡಿಯುವ ನಿಮ್ಮೆಲ್ಲರ ಬದುಕು, ಬವಣೆ, ಕಷ್ಟ-ಸುಖಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ.

8. ಈನಾಡಿನ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮಾಜಿಕ ವಲಯವನ್ನು ಹೆಚ್ಚು ಮಾನವೀಯಗೊಳಿಸುವ ಮತ್ತು ಆ ಮೂಲಕ ಪ್ರಜಾಪ್ರಭುತ್ವ ಮೂಲ ಆಶಯ, ಅಂತಿಮ ಗುರಿಯೂ ಆದ ಮಾನವನ ಕಲ್ಯಾಣ - ಅಭಿವೃದ್ದಿಗಾಗಿ ದುಡಿಯುತ್ತಿರುವ ಪತ್ರಕರ್ತರ ಪಾತ್ರ ಬಹುದೊಡ್ಡದು ಎಂದು ಭಾವಿಸಿದ್ದೇನೆ ಮತ್ತು ಅದು ನಿಜವೂ ಕೂಡ.

9. ಮಾಧ್ಯಮ ಕ್ಷೇತ್ರ ನಾಗಾಲೋಟದಲ್ಲಿ ಬೆಳೆಯುತ್ತಿದ್ದು, ವಿದ್ಯುನ್ಮಾನ ಕ್ಷೇತ್ರವಂತೂ ವಿಸ್ತಾರಗೊಳ್ಳುತ್ತಲೇ ಇದೆ. ಹಲವಾರು ಹೊಸ ಟಿ.ವಿ. ಚಾನಲ್ಗಳು ರಾಜ್ಯದಲ್ಲಿ ಕಾರ್ಯಾರಂಭ ಮಾಡಿ, ವೀಕ್ಷಕರಿಗೆ ಸುದ್ದಿ ನೀಡಲು ಪೈಪೋಟಿಗಿಳಿದಿವೆ.

10. ವೃತ್ತ ಪತ್ರಿಕೆಯೇ ಮಾಧ್ಯಮ ಎನ್ನುವ ದಿನಗಳಿಂದ ಅದೆಷ್ಟೋ ದೂರ ಸಾಗಿ ಬಂದಿದ್ದೇವೆ, ತಂತ್ರಜ್ಞಾನಕ್ಕೆ ಹೊರಳಿಕೊಂಡಿದ್ದೇವೆ. ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಕ್ಷಣಾರ್ಧದಲ್ಲಿ ಜನರಿಗೆ ಮಾಹಿತಿ ತಲುಪಿಸುವಂತಾಗಿದೆ.

11. ಆದರೆ ಮಾಧ್ಯಮಗಳು ಮಾನವೀಯ ಕಳಕಳಿಯುಳ್ಳ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಸುದ್ದಿಗಳನ್ನು, ವಿಚಾರಗಳೆಡೆ ಹೆಚ್ಚಿನ ಗಮನ ಹರಿಸಬೇಕಿದೆ.

12. ಸಮಾಜದ ಅಭಿಪ್ರಾಯ ರೂಪಿಸುವಲ್ಲಿ ಮಾಧ್ಯಮಗಳ ಪಾತ್ರ ನಿರ್ಣಾಯಕ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

13. ಅಭಿವೃದ್ಧಿ ಕಾರ್ಯಕ್ರಮಗಳ ಯಶೋಗಾಥೆಯನ್ನು ಹಾಗೂ ಸರ್ಕಾರದ ಜನಪರ ಚಿಂತನೆಗಳ ಬಗೆಗೂ ಮಾಧ್ಯಮಗಳು ಬೆಳಕು ಚೆಲ್ಲುವ ಕೆಲಸವನ್ನು ಮಾಡಬೇಕಿದೆ.

14. ಅಪರಾಧ ಸುದ್ದಿಗಳಲ್ಲಿ ಕ್ರೌರ್ಯವನ್ನು ಹೆಚ್ಚಾಗಿ ವೈಭವೀಕರಿಸದೆ ವಸ್ತುನಿಷ್ಠ ವರದಿಗಳನ್ನು ಜನರ ಮುಂದಿಡಬೇಕು. ಮನರಂಜನೆಯೊಂದಿಗೆ ಮಾಹಿತಿ ನೀಡುವ ಕೆಲಸವನ್ನೂ ಮಾಧ್ಯಮಗಳು ಇಂದು ಮಾಡಬೇಕಿದೆ.

15. ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಬದ್ಧತೆಯನ್ನು ಅಳವಡಿಸಿಕೊಳ್ಳಬೇಕಾದುದು, ಇಂದಿನ ಅಗತ್ಯವಾಗಿದೆ.

16. ಸರ್ಕಾರ ಹಮ್ಮಿಕೊಳ್ಳುವ ಜನಪರ ಕೆಲಸಗಳನ್ನು ನಾಡಿನ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಮಾಧ್ಯಮಗಳಿಗೆ ಸುಲಭಸಾಧ್ಯ.

17. ಆದರೆ ಸರ್ಕಾರದ ಯೋಜನೆಗಳ ಹಿಂದಿನ ಉದ್ದೇಶ, ಅವುಗಳ ಸಂಪೂರ್ಣ ಮಾಹಿತಿಗಳು ಮಾಧ್ಯಮಗಳಲ್ಲಿ ಬಿಂಬಿತವಾಗದೇ ಇರುವುದು ದುರದೃಷ್ಟಕರ.

18. ಪತ್ರಕರ್ತರು ನೇರವಂತಿಕೆ, ನಿಷ್ಠುರತೆ, ವಸ್ತುನಿಷ್ಠ ಹಾಗೂ ಸತ್ಯನಿಷ್ಠ ವರದಿಗಳನ್ನು ನೀಡುತ್ತಾ ಮಾಧ್ಯಮದ ಮೌಲ್ಯಗಳನ್ನು ಸದಾಕಾಲ ಎತ್ತಿ ಹಿಡಿಯಬೇಕು ಎನ್ನುವುದು ನನ್ನ ಆಶಯ.

19. ಸರ್ಕಾರದ ಆಡಳಿತ. ನೀತಿ- ನಿರೂಪಣೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪತ್ರಕರ್ತರು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕೆಂಬುದು ನನ್ನ ಮನವಿ.

20. ಕಳೆದ ಎಂಟು ತಿಂಗಳ ತಮ್ಮ ಆಡಳಿತದಲ್ಲಿ ರೈತರ ಸಾಲಮನ್ನಾ, ಸಣ್ಣ ವ್ಯಾಪಾರಿಗಳ ಶೋಷಣೆ ತಪ್ಪಿಸಲು ಜಾರಿಗೆ ತಂದಿರುವ ಬಡವರ ಬಂಧು ಯೋಜನೆ, ಕಾಯಕ ಯೋಜನೆಗಳು ಈ ನಾಡಿನ ರೈತ, ಶ್ರಮಿಕ ವರ್ಗಗಳನ್ನು ಕೈ ಹಿಡಿದು ಮೇಲೆತ್ತುವ ಕೆಲಸವಾಗಿದೆ. ಇದು ನನ್ನ ಮತ್ತು ನಮ್ಮ ಸರ್ಕಾರದ ಹೃದಯದಿಂದ ರೂಪಿಸಲ್ಪಟ್ಟ ಈ ಯೋಜನೆಗಳು, ಇವು ಅರ್ಥಪೂರ್ಣ ಅನುಷ್ಠಾನಗೊಳ್ಳುವಲ್ಲಿ ಮಾಧ್ಯಮಗಳ ಪಾತ್ರವೂ ಬಹುಮುಖ್ಯ. ನಿಮ್ಮಗಳ ವಿಮರ್ಶೆಯೂ ಹೃದಯದಿಂದ ಹೊರಬರಲಿ.

21. ಉತ್ತಮ ಆಡಳಿತ ನೀಡಲು ಪೂರ್ವಾಗ್ರಹವಿಲ್ಲದ ವಿಮರ್ಶೆ ಯೊಂದು ಆಡಳಿತದ ದಾರಿಯನ್ನು ತೋರುತ್ತದೆ. ಅದನ್ನುನಿಮ್ಮಿಂದ ನಿರೀಕ್ಷಿಸುತ್ತೇನೆ.

22. ಪತ್ರಿಕೋದ್ಯಮ ಇಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅನೇಕ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಸುದ್ದಿಮನೆಗಳಲ್ಲಿ ದುಡಿಯುವ ಪತ್ರಕರ್ತರು ಆರೋಗ್ಯ, ಆರ್ಥಿಕ ಸಂಕಷ್ಟಗಳಿಗೆ ಸಿಕ್ಕಿನಲುಗುವುದು ನಾನು ಕಣ್ಣಾರೆ ಕಂಡಿದ್ದೇನೆ. ಪತ್ರಕರ್ತರು ಅನಾರೋಗ್ಯ, ಅಪಘಾತ ದಂತಹ ದುರಂತಗಳಿಗೆ ಈಡಾಗಿ ಅವರ ಕುಟುಂಬ ದ ದುಃಖ ಕಂಡಾಗ ನನ್ನ ಮನಸ್ಸು ಘಾಸಿಗೊಳ್ಳುತ್ತದೆ.

23. ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಪೂರಕ ನೆರವು ನೀಡಲು ರಾಜ್ಯಸರ್ಕಾರ ಸದಾ ಸಿದ್ದವಿದೆ. ಈಗಾಗಲೇ ಜಾರಿಯಲ್ಲಿರುವ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ.

24. ಕಾರ್ಯಾಗಾರ, ವಿಚಾರ ಸಂಕಿರಣಗಳ ಮೂಲಕ ಪತ್ರಕರ್ತರ ಬೌದ್ಧಿಕ ಶಕ್ತಿಯನ್ನು ಇನ್ನಷ್ಟು ಸದೃಢಗೊಳಿಸುವ. ಹೊಸತಲೆಮಾರಿನ ಪತ್ರಕರ್ತರನ್ನು ಸಮಾಜಮುಖಿಯಾಗಿ ಸಜ್ಜುಗೊಳಿಸುವ ರಚನಾತ್ಮಕ ಕೆಲಸಗಳನ್ನು ಸರ್ಕಾರ ಮಾಡುತ್ತಾ ಬಂದಿದೆ.

25. ಇಂದು ದೇಶದಲ್ಲಿ ಸುಳ್ಳುಗಳೆ ವಿಜೃಂಬಿಸುತ್ತಾ ಸತ್ಯವನ್ನು ಮರೆಮಾಚಲಾಗುತ್ತಿದೆ. ನಿಜವಾದ ಸುದ್ದಿ ಯಾವುದು ಎಂಬ ಗೊಂದಲವನ್ನೆ ಜನರಲ್ಲಿ ಹುಟ್ಟು ಹಾಕುವ ಷಡ್ಯಂತ್ರಗಳು ನಡೆಯುತ್ತಿದೆ. ಸಾಂಪ್ರದಾಯಿಕ ಮಾಧ್ಯಮಗಳ ಜೊತೆಗೆ ಇಂದಿನ ನವ ಮಾಧ್ಯಮಗಳು ಜನರ ವಿಶ್ವಾಸಾರ್ಹತೆಯನ್ನೆ ನಾಶ ಮಾಡುವ ಸಂದರ್ಭಗಳು ಆತಂಕಕಾರಿಯಾಗಿವೆ.

26. ದೇಶವನ್ನು ಧರ್ಮ. ಜಾತಿ ಹೆಸರಲ್ಲಿ ವಿಭಜಿಸುವ ಶಕ್ತಿಗಳಿಂದ ಜನರನ್ನು ರಕ್ಷಿಸುವುದು ಮತ್ತು ಸಂವಿಧಾನದ ಆಶಯಗಳನ್ನು ಈಡೇರಿಸುವುದು ಮಾಧ್ಯಮಗಳ, ಪತ್ರಕರ್ತರ ಇವತ್ತಿನ ತುರ್ತು ಕೆಲಸವಾಗಿದೆ. ಇದನ್ನು ತಾವೆಲ್ಲರೂ ಮಾಡುತ್ತೀರ ಎಂಬ ವಿಶ್ವಾಸದೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಎಲ್ಲರಿಗೂ ಮತ್ತೊಮ್ಮೆ ಶುಭಾಶಯಗಳು.

*********************************