ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಸುತ್ತೂರು ಜಾತ್ರೆಯಲ್ಲಿ ನವ ದಂಪತಿಗಳಿಗೆ ಶುಭ ಕೋರಿದ ಮುಖ್ಯಮಂತ್ರಿಗಳು

ಸುತ್ತೂರು(ಮೈಸೂರು), ಫೆಬ್ರವರಿ 02, 2019

-ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಸುತ್ತೂರಿನಲ್ಲಿ ಶನಿವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಭಾಗವಹಿಸಿ, ನವ ವಧು-ವರರಿಗೆ ಶುಭ ಕೋರಿದರು.

-ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಪುಣ್ಯ ಭೂಮಿ ಸುತ್ತೂರಿನಲ್ಲಿ ಪೂಜ್ಯ ಮಹಾಸ್ವಾಮೀಜಿಯವರ ಸನ್ನಿಧಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಶುಭದಾಯಕ. ನವದಂಪತಿಗಳಿಗೆ ತಾಯಿ ಚಾಮುಂಡೇಶ್ವರಿ ದೇವಿ ಹಾಗೂ ಪೂಜ್ಯ ಜಗದ್ಗುರುಗಳ ಆರ್ಶಿವಾದ ಸದಾ ಇರಲಿ ಎಂದು ಆಶಿಸಿದರು.

-ಸುತ್ತೂರಿನಲ್ಲಿ ನಡೆಯುವ ಆರು ದಿನಗಳ ಜಾತ್ರ ಮಹೋತ್ಸವವನ್ನು ಶುಕ್ರವಾರ ಉದ್ಘಾಟಿಸಲು ಸ್ವಾಮೀಜಿಗಳು ಆಹ್ವಾನ ನೀಡಿದ್ದರು. ಆದರೆ 2019-20ರ ಆಯಾವ್ಯಯದ ಸಿದ್ಧತೆ ಹಿನ್ನೆಲೆಯಲ್ಲಿ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದೆ. ಆದರೆ ಎರಡನೇ ದಿನದ ಕಾರ್ಯಕ್ರಮಕ್ಕಾದರೂ ಬರುವಂತೆ ಸ್ವಾಮೀಜಿಗಳು ತಿಳಿಸಿದ ಹಿನ್ನಲೆಯಲ್ಲಿ ಇಂತಹ ಪುಣ್ಯ ಕ್ಷೇತ್ರದಲ್ಲಿ ನಡೆಯುವ ಒಂದು ಶುಭಕಾರ್ಯಕ್ಕೆ ಬರುವ ಸದಾವಕಾಶ ದೊರಕಿತು ಎಂದರು.

-ಸುತ್ತೂರು ಕ್ಷೇತ್ರಕ್ಕೂ ಹೆಚ್.ಡಿ. ದೇವೇಗೌಡರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ಕುಟುಂಬದವರು ಶ್ರದ್ಧೆ, ಭಕ್ತಿಯಿಂದ ಈ ಕ್ಷೇತ್ರಕ್ಕೆ ಬರುತ್ತೇವೆ. ಶ್ರೀ ಮಠ ನಮ್ಮ ಕುಟುಂಬಕ್ಕೆ ದೊಡ್ಡ ಶಕ್ತಿ ತುಂಬಿದೆ ಎಂದರು.

-ಸರ್ಕಾರ ಮಾಡಬೇಕಾದ ಹಲವಾರು ಕಾರ್ಯಕ್ರಮಗಳನ್ನು ಸುತ್ತೂರು ಮಠ ಮಾಡುತ್ತಿದೆ. ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ಸಾಂಸ್ಕøತಿಕವಾಗಿ ನಾಡಿಗೆ ದೊಡ್ಡ ಕೊಡುಗೆ ನೀಡಿದೆ ಎಂದರು.

-ಈ ಜಾತ್ರೆಯಲ್ಲಿ ರೈತರಿಗೆ ತಿಳುವಳಿಕೆ ನೀಡುವಂತ ವಸ್ತುಪ್ರದರ್ಶನ, ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದೆ. ಸಿರಿಧಾನ್ಯ ಬೆಳೆಯುವ ಮೂಲಕ ಕೃಷಿಕರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂಬುದನ್ನ ಶ್ರೀ ಮಠ ತೋರಿಸಿದೆ. ಗ್ರಾಮೀಣ ಸೊಗಡು ಈ ಜಾತ್ರೆಯ ವಿಶೇಷ.

-ಶಾಸಕರಾದ ಅನಿತಾ ಕುಮಾರಸ್ವಾಮಿ ಅವರು ನವದಂಪತಿಗಳಿಗೆ ಪ್ರಮಾಣ ವಚನ ಬೋಧಿಸಿದರು.

-ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಶಾಸಕ ಯತೀಂದ್ರ ಸಿದ್ದರಾಮಯ್ಯ, ಡಾ|| ಶಾಮನೂರು ಶಿವಶಂಕರಪ್ಪ, ಎಂ. ಅಶ್ವಿನ್‍ಕುಮಾರ್, ನಿರಂಜನ್ ಕುಮಾರ್, ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

*********************************