ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಕೊಡಗು ಪ್ರವಾಹ ಪರಿಸ್ಥಿತಿ - ಮುಖ್ಯಮಂತ್ರಿಗಳ ಪತ್ರಿಕಾ ಗೋಷ್ಠಿಯ ಮುಖ್ಯಾಂಶಗಳು

know_the_cm

ಕೊಡಗು 19 ಆಗಸ್ಟ್, 2018 :ಕೊಡಗು ಪ್ರವಾಹ ಪರಿಸ್ಥಿತಿ - ಮುಖ್ಯಮಂತ್ರಿಗಳ ಪತ್ರಿಕಾ ಗೋಷ್ಠಿಯ ಮುಖ್ಯಾಂಶಗಳು

1. ರಕ್ಷಣಾ ಕಾರ್ಯದಲ್ಲಿ ಎನ್‍ಡಿಆರ್‍ಎಫ್, ಸಿವಿಲ್ ಡಿಫೆನ್ಸ್, ಅಗ್ನಿಶಾಮಕ ದಳ, ಭೂ ಸೇನೆಯ ಡೋಗ್ರಾ ರೆಜಿಮೆಂಟ್ , ಎನ್.ಸಿ.ಸಿಯ 200 ಜನ, ವಾಯುಪಡೆಯ ತಂಡ ಸೇರಿದಂತೆ ಒಟ್ಟು 948 ಜನ ತೊಡಗಿದ್ದಾರೆ.

2. ಈವರೆಗೆ 3500 ಜನರನ್ನು ರಕ್ಷಿಸಲಾಗಿದೆ.

3. ಶುಕ್ರವಾರ ಸಂಜೆ ದಕ್ಷಿಣ ಕನ್ನಡ, ಕೊಡಗು ಗಡಿಭಾಗದ ಜೋಡುಪಾಲ ಎಂಬಲ್ಲಿ ಗುಡ್ಡ ಕುಸಿತದಿಂದ ಸಿಲುಕಿಕೊಂಡಿದ್ದ 347 ಜನರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ರಕ್ಷಣೆ ಮಾಡಿದೆ. ಕೊಡಗು ಭಾಗದಲ್ಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

4. 31 ಗಂಜಿ ಕೇಂದ್ರಗಳಲ್ಲಿ 2250 ಜನರು ಆಶ್ರಯ ಪಡೆದಿದ್ದಾರೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಗಂಜಿ ಕೇಂದ್ರಗಳನ್ನು ತೆರೆಯಲಾಗುವುದು.

5. ರಕ್ಷಣಾ ಕಾರ್ಯದ ನಿಮಿತ್ತ ಕೊಡಗು ಜಿಲ್ಲೆಗೆ ಇತರೆ ಜಿಲ್ಲೆಗಳಿಂದ ನಿಯೋಜಿಸಲಾಗಿರುವ ಕಂದಾಯ ಇಲಾಖೆಯ ಅಧಿಕಾರಿಗಳು ತಲುಪಿದ್ದಾರೆ.

6. ತಡೆರಹಿತ ಗ್ಯಾಸ್, ಪೆಟ್ರೋಲ್ ಮತ್ತು ಡೀಸಲ್ ಪೂರೈಕೆ ಮಾಡಲು ಸೂಚನೆ ನೀಡಲಾಗಿದೆ.

7. ಬಿದ್ದುಹೋಗಿರುವ ಮೊಬೈಲ್ ಟವರ್‍ಗಳನ್ನು ಯಥಾಸ್ಥಿತಿಗೆ ತಂದು ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಲಾಗಿದೆ.

8. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಇತರೆ ಜಿಲ್ಲೆಗಳಿಂದ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಸೂಚನೆ ನೀಡಲಾಗಿದೆ.

9. ಕೊಡಗು ಜಿಲ್ಲೆಗೆ 10 ವೈದ್ಯಕೀಯ ಮತ್ತು ನರ್ಸಿಂಗ್ ಸಿಬ್ಬಂದಿಯನ್ನು ಒದಗಿಸಲು ಸೂಚನೆ ನೀಡಲಾಗಿದೆ. ಶಿಶು ಆಹಾರ ಪೂರೈಕೆಗೂ ವ್ಯವಸ್ಥೆ ಮಾಡಲಾಗಿದೆ.

10. ಜಿಲ್ಲೆಯ ಮುಕೊಡ್ಲು ಗ್ರಾಮದಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ ಹಲವು ಜನ ಸಿಲುಕಿರುವ ಬಗ್ಗೆ ಮಾಹಿತಿ ಇದ್ದು, ಅವರನ್ನು ರಕ್ಷಿಸಲು ಸೇನಾ ತಂಡ ಈಗಾಗಲೇ ತರಳಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

11. ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಗಳಿಗೆ 50 ಜೆಸಿಬಿಗಳನ್ನು ಬಳಸಿ ತಾತ್ಕಾಲಿಕವಾಗಿ ರಸ್ತೆಗಳನ್ನು ದುರಸ್ತಿ ಮಾಡಿ, ರಕ್ಷಣಾ ಕಾರ್ಯಕ್ಕೆ ಅನುವುಮಾಡಿಕೊಡಲಾಗುತ್ತಿದೆ.

12. ಮಂಗಳೂರು –ಮೈಸೂರು ರಾಷ್ಟ್ರೀಯ ಹೆದ್ದಾರಿ 275 ನ ಬಹುತೇಕ ಕಡೆಗಳಲ್ಲಿ ಬಿರುಕು ಬಿಟ್ಟಿದ್ದು, ಕುಸಿಯುತ್ತಿರುವುದರಿಂದ ಭೂವಿಜ್ಞಾನಿಗಳು ಹಾಗೂ ತಾಂತ್ರಿಕ ತಜ್ಞರನ್ನು ನಿಯೋಜಿಸಲಾಗಿತ್ತಿದೆ.

13. ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿದ್ದು, ಸಂತ್ರಸ್ತರ ದಾಖಲೆಗಳು ನಾಶವಾಗಿದೆ. ತಕ್ಷಣವೇ ಅವುಗಳ ನಕಲು ಪ್ರತಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ.

15. ಪರಿಹಾರ ಕಾರ್ಯಕ್ಕೆ ಅಗತ್ಯವಿರುವ ಫೋರ್ ವ್ಹೀಲ್ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯುವಂತೆ ಸೂಚಿಸಲಾಗಿದೆ. ಪೋಲೀಸ್ ಹಾಗೂ ಅರಣ್ಯ ಇಲಾಖೆಯಿಂದಲೂ ಈ ವಾಹನಗಳನ್ನು ಪಡೆಯಲು ಸೂಚಿಸಲಾಗಿದೆ.

16. ಕೊಡಗು ಜಿಲ್ಲೆಯ ಜಿಲ್ಲಾ ಪಂಚಾಯತ್ ಕಚೇರಿ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿ ಕೋಟೆ ಶಿಥಿಲಾವಸ್ಥೆಯಲ್ಲಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಗಮನಕ್ಕೆ ತರಲು ನಿರ್ಧರಿಸಲಾಯಿತು. ಸರ್ಕಾರಿ ಕಚೇರಿಯ ದುರಸ್ತಿಗೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ.

17. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಯಾವುದೇ ಆರ್ಥಿಕ ಮುಗ್ಗಟ್ಟು ಎದುರಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ.

18. ಪ್ರಕೃತಿ ವಿಕೋಪದೊಂದಿಗೆ ಮಾನವ ನಿರ್ಮಿತ ಲೋಪದೋಷಗಳನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿ, ಮುನ್ನೆಚರಿಕೆ ವಹಿಸಲು ಸೂಚಿಸಲಾಗಿದೆ. ಪಶ್ಚಿಮಘಟ್ಟ ಭಾಗದಲ್ಲಿ ಭೂ ಪರಿವರ್ತನೆ ಕಾರ್ಯಗಳನ್ನು ಸ್ಥಗಿತಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು.

19. ಎಟಿಎಂ ಗಳಲ್ಲಿ ನಗದು ಕೊರತೆಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿರುವುದನ್ನು ಗಮನಿಸಲಾಗಿದೆ. ಈ ಕುರಿತು ಬ್ಯಾಂಕರ್‍ಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸಿದರು.

20. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಫಿ ಹಾಗೂ ಅಡಿಕೆಗೆ ಕೊಳೆ ರೋಗ ಕಾಣಿಸಿಕೊಂಡಿದೆ. ಕಾಫಿ ನಷ್ಟ ಅಂದಾಜು ಮಾಡಲು ಸಂಬಂಧಿಸಿದಂತೆ ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸುವಂತೆ ಕಾಫಿ ಮಂಡಳಿಯನ್ನು ಕೋರಲಾಗುವುದು.

21. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾರ್ವಜನಿಕರು ಉದಾರವಾಗಿ ದೇಣಿಗೆ ನೀಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.