ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ರೈತರ ಸಾಲಮನ್ನಾ ಹೇಳಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ಸಿಂಧನೂರು(ರಾಯಚೂರು), ಜನವರಿ 05, 2019

-ರೈತರ ಸಾಲಮನ್ನಾ ಹೇಳಿಕೆಗೆ ನಾನು ಈಗಲೂ ಬದ್ದ. ಫೆಬ್ರವರಿಯಲ್ಲಿ ಮಂಡಿಸಲಾಗುವ ಬಜೆಟ್ ನಲ್ಲಿ ರೈತರ ರಾಷ್ಟ್ರೀಕೃತ ಬ್ಯಾಂಕುಗಳ ಸಂಪೂರ್ಣ ಸಾಲಮನ್ನಾ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಹೇಳಿದರು.

-ಸಿಂಧನೂರಿನ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಪಶು ಮತ್ತು ಮತ್ಸ್ಯ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

-ಈ ಮುಂಚೆ ರೈತರ ಬೆಳೆಸಾಲವನ್ನು 4ಹಂತಗಳಲ್ಲಿ ಮನ್ನಾ ಮಾಡಲಾಗುವುದು ಅಂತ ಹೇಳಿದ್ದೆ. ಆದರೇ ಈಗ ಫೆಬ್ರವರಿಯಲ್ಲಿ ಮಂಡಿಸುವ ಬಜೆಟ್ ನಲ್ಲಿ ಸಂಪೂರ್ಣ ಸಾಲಮನ್ನಾ ಮಾಡಲಾಗುವುದು ಮತ್ತು ಇದಕ್ಕಾಗಿ ಪ್ರತ್ಯೇಕ ಹಣ ತೆಗೆದಿಡಲಾಗುವುದು ಎಂದರು.

-ರೈತರ ಸಾಲಮನ್ನಾ ವಿಷಯದಲ್ಲಿ ರೈತ ಸಮುದಾಯ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವುದು ಬೇಡ ಎಂಬುದನ್ನು ತಮ್ನ ಮಾತುಗಳಲ್ಲಿ ಪ್ರಸ್ತಾಪಿಸಿದ ಸಿಎಂ ಕುಮಾರಸ್ವಾಮಿ ಅವರು ಈಗಾಗಲೇ ರೈತರ ಸಾಲಮನ್ನಾಗೆ ಸಂಬಂಧಿಸಿದಂತೆ ಒಂದು ಸಮಿತಿ ರಚಿಸಲಾಗಿದ್ದು,ವೈಜ್ಞಾನಿಕವಾಗಿ ರೈತನಿಗೆ ಈ ಸಾಲಮನ್ನಾ ಹಣ ತಲುಪಬೇಕು ಎಂಬ ಸದಾಶಯದೊಂದಿಗೆ ಇಡೀ ದೇಶದಲ್ಲಿಯೇ ಅತ್ಯುತ್ತಮವಾದ ವೈಜ್ಞಾನಿಕವಾದ ನಿಯಮವಾಳಿಗಳನ್ನು ಸಿದ್ದಪಡಿಸಲಾಗಿದ್ದು, ರೈತರು ಪಹಣಿ,ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಮಾಹಿತಿ ನೀಡಿ ಎಂದು ಅವರು ಮನವಿ ಮಾಡಿದರು.

-ರೈತರ ಸಾಲಮನ್ನಾಕ್ಕಾಗಿ ಬೇರೆ ಬೇರೆ ಯೋಜನೆಗಳ ಮತ್ತು ಕಾರ್ಯಕ್ರಮಗಳ ಹಾಗೂ ಇಲಾಖೆಗಳ ಅನುದಾನ ಕಡಿತ ಮಾಡಲಾಗುತ್ತಿದೆ ಎಂಬುದು ಶುದ್ದ ಸುಳ್ಳು ಎಂದು ಸ್ಪಷ್ಟಪಡಿಸಿದ ಸಿಎಂ ಕುಮಾರಸ್ವಾಮಿ ಅವರು ಸಾಲಮನ್ನಾಗಾಗಿಯೇ ಪ್ರತ್ಯೇಕ ಹಣ ತೆಗೆದಿರಿಸಿದ್ದು, ಅದರಡಿಯೇ ಸಾಲಮನ್ನಾಗೆ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮಾನ್ಯ ಮುಖ್ಯಮಂತ್ರಿ

-ಸಿದ್ದರಾಮಯ್ಯ ಅವರ ಸರಕಾರದಲ್ಲಿ ಮಾಡಲಾದ ರೈತರ ಸಾಲಮನ್ನಾ ಆದರೇ, ಇದರ ಸಾಲಮನ್ನಾ ಅನ್ವಯ ಆಗಲ್ಲ ಅಂತ ಕೆಲವರು ಹೇಳುತ್ತಿದ್ದಾರೆ. ಅದು ಶುದ್ದ ಸುಳ್ಳು; ಅದುವೇ ಬೇರೆ ಮತ್ತು ಇದೇ ಬೇರೆ ಎಂದರು.

ರೈತ ಸಾಲದ ಸುಳಿಗೆ ಸಿಲುಕದಂತೆ ಮಾಡುವ ನಿಟ್ಟಿನಲ್ಲಿ ಕ್ರಮ:

-ರೈತರು ಇನ್ಮುಂದೆ ಯಾವುದೇ ರೀತಿಯ ಸಾಲದ ಸುಳಿಗೆ ಸಿಲುಕುದಂತೆ ಅವರನ್ನು ಕಾಪಾಡುವ ಮತ್ತು ಅವರಲ್ಲಿ ಚೈತನ್ಯ ತುಂಬಿ ನಗುಮೊಗದೊಂದಿಗೆ ಬಾಳುವ ನಿಟ್ಟಿನಲ್ಲಿ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

-ಇಸ್ರೇಲ್ ಕೃಷಿ ಪದ್ದತಿ, ರಾಜ್ಯ ಸರಕಾರವೇ ಬೆಂಬಲ ಬೆಲೆ ನೀಡುವಂತ ಕ್ರಮ ಸೇರಿ ಇನ್ನಿತರ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಸೋನಾಮಸೂರಿ ಭತ್ತಕ್ಕೆ ಕ್ವಿಂಟಾಲ್ ಗೆ 2 ಸಾವಿರ ಬೆಂಬಲ ಬೆಲೆ ಒದಗಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದರು.

-ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಅಂತ ಕೇಂದ್ರದ ಮುಂದೆ ಪತ್ರ ಹಿಡಿದುಕೊಂಡು ಹೋಗುವುದಕ್ಕೆ ಇತಿ ಶ್ರೀ ಹಾಡಬೇಕೆಂದಿದ್ದು,ಬೆಂಬಲ ಬೆಲೆ, ಎಪಿಎಂಸಿ ಬಲವರ್ಧನೆ, ಮಧ್ಯವರ್ತಿಗಳ ಬ್ರೇಕ್ ಸೇರಿದಂತೆ ಇನ್ನೀತರ ಕ್ರಮಗಳನ್ನು ಬರುವ ಬಜೆಟ್ ನಲ್ಲಿ ಘೋಷಿಸಲಾಗುವುದು ಎಂದರು.

ಮಾನ್ಯ ಮುಖ್ಯಮಂತ್ರಿ

-ಮೈತ್ರಿ ಸರಕಾರದ ಮೇಲೆ ವಿಶ್ವಾಸವಿಡಿ, ರೈತರು ಯುವಕರು ಯಾವುದೇ ಕಾರಣಕ್ಕೂ ನಿರಾಶೆಗೆ ಒಳಗಾಗುವುದು ಬೇಡ. ಎಲ್ಲ ಬದಲಾವಣೆ ಮಾಡಲು ಮತ್ತು ಕ್ರಮ ಕೈಗೊಳ್ಳಲು ಸಮಯದ ಅವಶ್ಯಕತೆ ಎಂಬುದನ್ನು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದ ಸಿಎಂ ಎಚ್ಡಿಕೆ ಅವರು, ತಾವು ಅಧಿಕಾರವಿರಲಿ; ಇಲ್ಲದಿರಲಿ ನನಗೆ ತೋರಿದ ಪ್ರೀತಿಗೆ ಚಿರ ಋಣಿಯಾಗಿದ್ದು, ತಮ್ಮ ನಿರೀಕ್ಷೆಗಳಿಗೆ ಸ್ಪಂದಿಸುವ ಕೆಲಸ ಸರಕಾರ ಮಾಡಲಿದೆ ಎಂದರು.

ಸಹಕಾರ ಬ್ಯಾಂಕುಗಳಲ್ಲಿ 23ಲಕ್ಷ ರೈತರಿಗೆ ಸಾಲ ನೀಡಲಾಗುತ್ತಿದ್ದು, ಉಳಿದ ರೈತರಿಗೂ ವಿತರಿಸುವುದಕ್ಕೆ ಚಿಂತನೆ; ಈ ಮೂಲಕ ಖಾಸಗಿ ಲೇವಾದೇವಿಗಾರರ ಆಟೋಟಪಕ್ಕೆ ಬ್ರೇಕ್ ಹಾಕಲಾಗುವುದು. ಬೀದಿ ಬದಿ ವ್ಯಾಪಾರಿಗಳಿಗೆ ಬಡವರ ಬಂಧು, ಸ್ತ್ರೀ ಶಕ್ತಿ ಗುಂಪುಗಳಿಗೆ 10ಲಕ್ಷದವರೆಗೆ ಸಾಲವನ್ನು ನಮ್ಮ ಸರಕಾರ ವಿತರಿಸುತ್ತಿದೆ ಎಂದರು.

-ಸರಕಾರದ ಮುಂದೆ ಹಲವಾರು ಸವಾಲುಗಳಿದ್ದು, ಅವುಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.

-ಪಶುಸಂಗೋಪನೆ ಇಲಾಖೆಗೆ ಸಂಬಂಧಿಸಿದ ವಿವಿಧ ಕಿರುಹೊತ್ತಿಗೆಗಳನ್ನು ಬಿಡುಗಡೆ ಮಾಡಲಾಯಿತು.

-ಈ ಸಂದರ್ಭದಲ್ಲಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಶಾಸಕರಾದ ಅಮರೇಗೌಡ ಬಯ್ಯಾಪುರ,ಪ್ರತಾಪ್ ಗೌಡ , ವೆಂಕಟಪ್ಪ ನಾಯಕ, ಬಸವರಾಜ ದಡೇಸೂಗುರು, ಬಸವರಾಜ ಗದ್ದಲ್, ಬಸವರಾಜ ಇಟಗಿ, ಡಿ.ಎಸ್.ಹೂಲಗೇರಿ ಸೇರಿದಂತೆ ತಾಪಂ,ಜಿಪಂ ಮತ್ತು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲಾಧಿಕಾರಿ ಶರತ್, ಜಿಪಂ ಸಿಇಒ ನಳಿನಿ ಅತುಲ್, ಪ್ರೊಬೆಷನರಿ ಐಎಎಸ್ ಅಧಿಕಾರಿಗಳು ಮತ್ತಿತರರು ಇದ್ದರು.

*********************************