ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ನವದೆಹಲಿಯಲ್ಲಿ ಮುಖ್ಯಮಂತ್ರಿ ಅವರು ಕೇಂದ್ರ ಸಚಿವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.

ಮಾನ್ಯ ಮುಖ್ಯಮಂತ್ರಿ

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ನಾಗರಿಕ ವಿಮಾನ ಯಾನ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಯಾಗಿ ರಾಜ್ಯದ ವಿವಿಧ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕುರಿತು ಚರ್ಚಿಸಿದರು.

(ನವದೆಹಲಿ), ಡಿಸೆಂಬರ್ 27, 2018

-ಬೀದರ್, ಕಲಬುರಗಿ ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಕ್ರಮ: ಕೇಂದ್ರ ಸಚಿವರಿಗೆ ಮುಖ್ಯಮಂತ್ರಿ ಮನವಿ

-ಕಲಬುರಗಿ ವಿಮಾನ ನಿಲ್ದಾಣದ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು, ವಿವಿಧ ವಿಮಾನ ಯಾನ ಕಂಪೆನಿಗಳು ಕಾರ್ಯಾಚರಣೆ ಆರಂಭಿಸಲು ಉತ್ಸಾಹ ತೋರಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸೂಚನೆಯಂತೆ ವಿಶೇಷ ಉದ್ದೇಶ ವಾಹಕ (ಎಸ್‍ಪಿವಿ)ದ ರಚನೆಯ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಅಗತ್ಯ ಪರವಾನಗಿ ಹಾಗೂ ತಾಂತ್ರಿಕ ಅನುಮತಿಗಳನ್ನು ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಎಸ್‍ಪಿವಿ ರಚನೆಯಾಗುವ ವರೆಗೆ ಕಾಯದೆ, ಕೂಡಲೇ ಕಲಬುರಗಿ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವಂತೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.

-ಈ ಎಸ್‍ಪಿವಿ ಮೂಲಕ ರಾಜ್ಯ ಸರ್ಕಾರವು ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ವಿಜಯಪುರ ಮತ್ತು ಕಾರವಾರಗಳಲ್ಲಿಯೂ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ ಎಂದು ಅವರು ವಿವರಿಸಿದರು.

-ಬೀದರ್ ವಿಮಾನ ನಿಲ್ದಾಣ ನಿರ್ಮಾಣ ಪೂರ್ಣಗೊಂಡು ಕಾರ್ಯಾಚರಣೆಗೆ ಸಜ್ಜಾಗಿದ್ದು, ಈ ಕುರಿತು ಜಿಹೆಚ್‍ಈಎಎಲ್‍ನೊಂದಿಗೆ ಪರಸ್ಪರ ಒಪ್ಪಂದ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಒಪ್ಪಂದ ಸಹಿ ಮಾಡುವಂತೆ ಸಂಬಂಧಿತರಿಗೆ ಸೂಚನೆ ನೀಡುವಂತೆ ಮನವಿ ಮಾಡಿದರು.

-ಭಾರತೀಯ ವಾಯುಪಡೆಯು ಬೆಂಗಳೂರಿನ ಯಲಹಂಕದಲ್ಲಿರುವ ತನ್ನ ಹೆಲಿಕಾಪ್ಟರ್ ತರಬೇತಿ ವಿಭಾಗವನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲು ಪ್ರಸ್ತಾವನೆ ಸಲ್ಲಿಸಿದೆ. ಪುಣೆ, ಶ್ರೀನಗರ, ಚಂಡೀಘಢ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಮೈಸೂರು ವಿಮಾನ ನಿಲ್ದಾಣವನ್ನು ಸಹ ತನ್ನದೇ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ, ನಾಗರಿಕರ ಬಳಕೆ ಹಾಗೂ ಮಿಲಿಟರಿ ಬಳಕೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಮ್ಮತಿಸಿದೆ. ಇದರಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲಿನ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವುದು.

-ರಾಜ್ಯ ಸರ್ಕಾರವು ಈ ಸ್ಥಳಾಂತರಕ್ಕೆ ನಿರಾಕ್ಷೇಪಣಾ ಪತ್ರ ನೀಡಿದ್ದು, ಮೈಸೂರು ವಿಮಾನ ನಿಲ್ದಾಣ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸ್ವಾಧೀನದಲ್ಲಿದ್ದು, ಅವರೇ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಗೆ ಮೈಸೂರು ವಿಮಾನ ನಿಲ್ದಾಣವನ್ನು ಅವರ ಹೆಲಿಕಾಪ್ಟರ್ ಬೇಸ್‍ಗೆ ಬಳಸಿಕೊಳ್ಳಲು ಅನುಮತಿ ನೀಡುವಂತೆ ಪ್ರಾಧಿಕಾರಕ್ಕೆ ಸೂಚನೆ ನೀಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.

-ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಉಪಸ್ಥಿತರಿದ್ದರು.

..............................................................................

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕೇಂದ್ರ ಕಲ್ಲಿದ್ದಲು ಮತ್ತು ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

(ನವದೆಹಲಿ), ಡಿಸೆಂಬರ್ 27, 2018

ಮಾನ್ಯ ಮುಖ್ಯಮಂತ್ರಿ

-ಈ ಸಂದರ್ಭದಲ್ಲಿ ಅವರು ರಾಜ್ಯದ ಆರ್‍ಟಿಪಿಎಸ್, ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರ ಹಾಗೂ ಯರಮರಸ್ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಘಟಕಗಳನ್ನು ಶೀಘ್ರವೇ ಹಂಚಿಕೆ ಮಾಡುವಂತೆ ಮನವಿ ಮಾಡಿದರು.

-ರಾಯಚೂರಿನ ಆರ್‍ಟಿಪಿಎಸ್‍ನಲ್ಲಿ ಕಲ್ಲಿದ್ದಲ್ಲು ಸಂಗ್ರಹ ಕಡಿಮೆ ಇರುವ ಹಿನ್ನಲೆಯಲ್ಲಿ ಕೂಡಲೇ ಕಲ್ಲಿದ್ದಲು ಒದಗಿಸುವಂತೆ ವೆಸ್ಟರ್ನ್ ಕೋಲ್‍ಫೀಲ್ಡ್ಸ್ ಲಿಮಿಟೆಡ್ ಹಾಗೂ ಕೋಲ್ ಇಂಡಿಯಾ ಲಿ. ಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದರು.

-ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಅತ್ಯಂತ ಹಿಂದುಳಿದ ಬೀದರ್‍ನಿಂದ ನಾಂದೇಡ್‍ಗೆ ರೈಲ್ವೆ ಸಂಪರ್ಕ ಕಲ್ಪಿಸುವಂತೆಯೂ ಮನವಿ ಮಾಡಿದರು.

-ನಾಂದೇಡ್ ಯಾತ್ರಾರ್ಥಿ ಮಾರ್ಗದ ವ್ಯಾಪ್ತಿಯಲ್ಲಿರುವ ಬೀದರ್ ಸಿಖ್ಖರ ಯಾತ್ರಾ ಸ್ಥಳವೂ ಹೌದು.

-ಬೀದರ್ –ಔರಾದ್- ದೀಗುಲ-ನಾಂದೇಡ್ 154 ಕಿ.ಮೀ. ಉದ್ದದ ಹೊಸ ರೈಲು ಮಾರ್ಗ ಕುರಿತ ಸಮೀಕ್ಷಾ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ.

-ಈ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸುವಂತೆಯೂ ಮುಖ್ಯಮಂತ್ರಿಗಳು ಸಚಿವ ಪಿಯುಷ್ ಗೋಯಲ್ ಅವರಿಗೆ ಮನವಿ ಮಾಡಿದರು.

-ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

...............................................................................

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳನ್ನು ಚರ್ಚಿಸಿದರು.

(ನವದೆಹಲಿ), ಡಿಸೆಂಬರ್ 27, 2018

ಮಾನ್ಯ ಮುಖ್ಯಮಂತ್ರಿ

-ಜಿಎಸ್ಟಿ ಪರಿಹಾರ ಅವಧಿ 2025ರ ವರೆಗೆ ವಿಸ್ತರಿಸಲು ಮುಖ್ಯಮಂತ್ರಿ ಮನವಿ ಮಾಡಿದರು.

-ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ ಟಿ) ಅನುಷ್ಠಾನದಲ್ಲಿ ಕನಾಟಕ ರಾಜ್ಯವು ದೇಶದ ಉಳಿದ ರಾಜ್ಯಗಳಿಗೆ ಮಾದರಿಯಾಗಿದೆ. ಆದರೂ, ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪರೋಕ್ಷ ತೆರಿಗೆ ಸಂಗ್ರಹಣೆಯಾಗುತ್ತಿಲ್ಲ.

-ಇಂದರಿಂದಾಗಿ ರಾಜ್ಯದ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅನುದಾನದ ಕೊರತೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಜಿಎಸ್ಟಿ ಪರಿಹಾರದ ಅನುದಾನದ ನೆರವನ್ನು 2025ರ ವರೆಗೆ ವಿಸ್ತರಿಸುವಂತೆ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

-ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿಗಳು ಇಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಜಿಎಸ್ ಟಿ ಅನುಷ್ಠಾನ ಕುರಿತಂತೆ ರಾಜ್ಯವು ಕೈಗೊಂಡಿರುವ ಕ್ರಮಗಳು ಮತ್ತು ತೆರಿಗೆ ಸಂಗ್ರಹಣೆ ಕುರಿತು ಅಂಕಿ-ಅಂಶಗಳ ಸಹಿತ ಮನವರಿಕೆ ಮಾಡಿಕೊಟ್ಟರು.

-ಜಿಎಸ್ ಟಿ ಜಾರಿಗೊಳ್ಳುವ ಮುನ್ನ ರಾಜ್ಯದ ತೆರಿಗೆ ಸಂಗ್ರಹವು ವಾರ್ಷಿಕವಾಗಿ ಏರುಗತಿಯಲ್ಲಿತ್ತು.

-ಮೌಲ್ಯ ವರ್ಧಿತ ತೆರಿಗೆ ವ್ಯವಸ್ಥೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ತೆರಿಗೆ ಸಂಗ್ರಹದಲ್ಲಿ ಸರಾಸರಿ ಶೇ. 10-12 ರಷ್ಟು ವಾರ್ಷಿಕ ವೃದ್ಧಿದರವನ್ನು ಹೊಂದಿತ್ತು.

-ಆದರೆ ರಾಜ್ಯದಲ್ಲಿ ಜಿಎಸ್ಟಿ ವ್ಯವಸ್ಥೆಯನ್ನು ಅಳವಡಿಸಿಕೊಂಡ ಬಳಿಕ ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ.

-ರಾಜ್ಯವು ನಿರೀಕ್ಷಿಸಿದ್ದ ತೆರಿಗೆ ಸಂಗ್ರಹಕ್ಕಿಂತಲೂ ಶೇ. 20 ರಷ್ಟು ಕೊರತೆ ಕಂಡುಬಂದಿದೆ.

-ಹೀಗಾಗಿ, ವಿವಿಧ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತದೆ ಎನ್ನುವ ಅಂಶವನ್ನು ಮುಖ್ಯಮಂತ್ರಿಗಳು ವಿತ್ತ ಸಚಿವರಿಗೆ ವಿವರಿಸಿದರು.

-ರಾಜ್ಯದಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯನ್ನು ಬಲಪಡಿಸಲಾಗಿದೆ.

-ಎಲ್ಲ ಪ್ರಯತ್ನಗಳ ಹೊರತಾಗಿಯೂ ಪ್ರಸಕ್ತ ತೆರಿಗೆ ದರಗಳು, ಸೇವಾ ವಲಯದಲ್ಲಿ ನಿರೀಕ್ಷೆಗಿಂತ ಕಡಿಮೆ ತೆರಿಗೆ ಸಂಗ್ರಹ ಮತ್ತಿತರ ಮೂಲಭೂತ ಕಾರಣಗಳಿಂದ ಈ ಕೊರತೆ ಕಂಡುಬರುತ್ತಿದೆ.

-2017-18ಕ್ಕೆ ಹೋಲಿಸಿದರೆ 2018-19ರಲ್ಲಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ.

-ಆದರೆ ಈ ಏರಿಕೆಯು ರಾಜ್ಯ ಸರ್ಕಾರವು ನಿರೀಕ್ಷಿಸಿದ್ದ ಪ್ರಮಾಣಕ್ಕಿಂತಲೂ ಕಡಿಮೆ ಇದೆ.

-ಈ ಚಿತ್ರಣವು 2022ರ ನಂತರವೂ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ, ಜಿಎಸ್ ಟಿ ಅನುಷ್ಠಾನಕ್ಕಾಗಿ ಕೇಂದ್ರವು ನೀಡುವ ಪರಿಹಾರ ನೆರವನ್ನು 2022ರ ಬಳಿಕವೂ 2025ರ ವರೆಗೆ ಮುಂದುವರಿಸುವುದು ರಾಜ್ಯ ಅಭಿವೃದ್ಧಿಯ ದೃಷ್ಟಿಯಿಂದ ಹೆಚ್ಚಿನ ಪ್ರಯೋಜನ ತಂದುಕೊಂಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

...............................................................................

ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಸಿಎಂ: ರಾಜ್ಯದ ವಿವಿಧ ಯೋಜನೆ ಕುರಿತು ಚರ್ಚೆ

(ನವದೆಹಲಿ), ಡಿಸೆಂಬರ್ 26, 2018

ಮಾನ್ಯ ಮುಖ್ಯಮಂತ್ರಿ

-ಮುಖ್ಯಮಂತ್ರಿ ಅವರು ನವದೆಹಲಿಯಲ್ಲಿ ಕೇಂದ್ರ ಭೂಹೆದ್ದಾರಿ ಮತ್ತು ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಭೇಟಿಯಾಗಿ ವಿವಿಧ ವಿಷಯಗಳನ್ನು ಚರ್ಚಿಸಿದರು.

-ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ನಡುವೆ ಎಲಿವೇಟೆಡ್ ರಸ್ತೆ ನಿರ್ಮಿಸುವ ಕುರಿತು ಕೇಂದ್ರ ಭೂಸಾರಿಗೆ, ಹೆದ್ದಾರಿ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರು ಸಮ್ಮತಿಸಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ ಕೂಡಲೇ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

-ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕೇಂದ್ರ ಭೂ ಹೆದ್ದಾರಿ ಮತ್ತು ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ರಾಜ್ಯದ ವಿವಿಧ ಹೆದ್ದಾರಿಗಳ ಅಭಿವೃದ್ಧಿ ಕುರಿತು ಚರ್ಚಿಸಿದರು.

-ಈ ಸಂದರ್ಭದಲ್ಲಿ ಕರ್ನಾಟಕ ಗೋವಾ ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ಎ ಪ್ರಸ್ತುತ ಎರಡು ಪಥಗಳದ್ದಾಗಿದ್ದು ಇದರ ಅಗಲೀಕರಣಕ್ಕಾಗಿ ಮುಂದಿನ 18 ತಿಂಗಳ ಕಾಲ ಬಂದ್ ಮಾಡಲಾಗುತ್ತಿದೆ.

-ಈ ಹಿನ್ನೆಲೆಯಲ್ಲಿ ಬಳಸಬಹುದಾದ ಪರ್ಯಾಯ ಸಂಪರ್ಕ ಮಾರ್ಗಗಳ ಅಭಿವೃದ್ಧಿಯನ್ನು ಈ ಯೋಜನೆಯಡಿಯಲ್ಲಿಯೇ ಕೈಗೆತ್ತಿಕೊಳ್ಳುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರ್ ಅವರನ್ನು ಮನವಿ ಮಾಡಿದರು.

-ಇದಲ್ಲದೆ ಈ ಸಂದರ್ಭದಲ್ಲಿ ಬೇಲೂರು ಹಾಸನ ನಡುವೆ ರಾಷ್ಟ್ರೀಯ ಹೆದ್ದಾರಿ 373ರ ಅಭಿವೃದ್ಧಿ, ಹಾಸನ-ಹೊಳೆನರಸೀಪುರ ಚತುಷ್ಪಥ ರಸ್ತೆ, ಚನ್ನರಾಯಪಟ್ಟಣ-ಹೊಳೆನರಸೀಪುರ-ಅರಕಲಗೂಡು-ಕೊಡ್ಲಿಪೇಟೆ-ಮಡಿಕೇರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸುವ ಬಗ್ಗೆ ಚರ್ಚಿಸಲಾಯಿತು.

-ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.

ಮೇಕೆದಾಟು: ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಮ್ಮತಿ

ಮಾನ್ಯ ಮುಖ್ಯಮಂತ್ರಿ

-ಮೇಕೆದಾಟು ಯೋಜನೆ ಕುರಿತು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸುವುದಾಗಿ ಕೇಂದ್ರ ಭೂಸಾರಿಗೆ, ಹೆದ್ದಾರಿ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.

-ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಗಡ್ಕರಿ ಭೇಟಿ ಮಾಡಿ ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ವಾಸ್ತವವಾಗಿ ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಗಳಿಗೆ, ಅದರಲ್ಲೂ ತಮಿಳುನಾಡಿಗೇ ಹೆಚ್ಚು ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು.

-ಈ ಕುರಿತು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ, ಈ ವಿಷಯವನ್ನು ಬಗೆಹರಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ನಿತಿನ್ ಗಡ್ಕರಿ ಅವರು ಸಭೆ ನಡೆಸಲು ಸಹಮತಿ ವ್ಯಕ್ತಪಡಿಸಿದರು.

-ಮಹಾದಾಯಿ ನ್ಯಾಯಾಧಿಕರಣ ತೀರ್ಪಿಗೆ ಸಂಬಂಧಿಸಿದಂತೆ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದರಿಂದ ರಾಜ್ಯದ ಪಾಲಿನ ನೀರಿನ ಬಳಕೆಗೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಗೋವಾ ಸರ್ಕಾರದೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು. ಈ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಗಡ್ಕರಿ ಅವರು ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.

*********************************