ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ರೈತ ದಿನಾಚರಣೆ ಸಂದರ್ಭದಲ್ಲಿಅನ್ನದಾತರಿಗೆ ಮುಖ್ಯಮಂತ್ರಿ ಸಂದೇಶ

ಮಾನ್ಯ ಮುಖ್ಯಮಂತ್ರಿ

(ಬೆಂಗಳೂರು), ಡಿಸೆಂಬರ್ 23, 2018

-ರೈತಪರ ಸಿದ್ಧಾಂತ, ಘೋಷಣೆಗಳ ಮೂಲಕವೇ ರಾಜಕಾರಣದಲ್ಲಿ ಗುರುತಿಸಿಕೊಂಡು ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರೈತ ದಿನಾಚರಣೆ ಸಂದರ್ಭದಲ್ಲಿ ನಾಡಿನ ಅನ್ನದಾತರಿಗೆ ಶುಭ ಕೋರಿದ್ದಾರೆ.

-ರೈತ ಕಲ್ಯಾಣಕ್ಕಾಗಿ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮ, ಯೋಜನೆಗಳ ಜಾರಿಗೆ ಬದ್ಧ ಎಂದು ವಾಗ್ದಾನ ಮಾಡಿರುವ ಅವರು ತಮ್ಮ ಸಾಧನೆ, ಆಶಯಗಳ ಕನಸುಗಳನ್ನು ಅಕ್ಷರರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

-ಇಂದು ಕಿಸಾನ್ ದಿವಸ್. ರಾಜಕಾರಣದಲ್ಲಿ ರೈತರ ಸಮಸ್ಯೆಗಳಿಗೆ ಗಟ್ಟಿ ದನಿಯಾದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಜನ್ಮದಿನ.

-ರೈತ ಕುಟುಂಬ ದಿಂದ ಬಂದಿದ್ದ ಅವರು ಬ್ರಿಟಿಷರ ಆಳ್ವಿಕೆಯಲ್ಲಿದ್ದ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಗೆ ಆಯ್ಕೆಯಾದಾಗಲೂ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕುರಿತು ಮಸೂದೆ ಮಂಡಿಸಿದವರು. ಅತಿ ಅಲ್ಪಾವಧಿಗೆ ಪ್ರಧಾನಿಯಾಗಿ ದ್ದಾಗಲೂ ರೈತರ ಹಿತಕಾಯಲು ಹಲವು ಕಾಯ್ದೆ ಕಾನೂನು ಜಾರಿಗೆ ತಂದವರು. ಅವರ ದಿವ್ಯ ಚೇತನಕ್ಕೆ ನನ್ನ ನಮನಗಳು.

-ಅನಾದಿಕಾಲದಿಂದಲೂ ಕೃಷಿ ಭಾರತೀಯರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಇದು ಕೇವಲ ಹೊಟ್ಟೆಪಾಡಿನ ವೃತ್ತಿಯಲ್ಲ. ಭೂಮಿತಾಯಿಯೊಂದಿಗೆ ಮನುಷ್ಯನ ಕಳ್ಳುಬಳ್ಳಿ ಸಂಬಂಧ. ಸ್ವಾತಂತ್ರ್ಯಾನಂತರ ಕೈಗಾರಿಕೆಗಳು ವೇಗವಾಗಿ ಬೆಳೆದರೂ ಈಗಲೂ ಭಾರತದಲ್ಲಿ ಕೃಷಿಯೇ ಪ್ರಮುಖ ಉದ್ಯೋಗ. ಇಡೀ ವಿಶ್ವದಲ್ಲಿ ಅತಿ ಹೆಚ್ಚು ಕೃಷಿ ಉತ್ಪನ್ನಗಳನ್ನು ರಫ್ತುಮಾಡುವ ದೇಶಗಳಲ್ಲಿ ಭಾರತ 7ನೇ ಸ್ಥಾನದಲ್ಲಿದೆ. ಕೃಷಿ ಪರಿಸ್ಥಿತಿ ಲಾಭದಾಯಕವಾಗಿ ಉಳಿದಿಲ್ಲ. ಜೀವನ ಕ್ರಮ, ಕೃಷಿ ಪದ್ಧತಿಯಲ್ಲಿನ ಬದಲಾವಣೆ, ಮಾರುಕಟ್ಟೆ ಸಮಸ್ಯೆ, ಕೈಗಾರಿಕೀಕರಣದ ಪ್ರಭಾವ, ಬರ, ನೆರೆ.. ಹೀಗೆ ಹತ್ತು ಹಲವು ಅಂಶಗಳು ಇದಕ್ಕೆ ಕಾರಣ. ರಾಸಾಯನಿಕ ಗೊಬ್ಬರ, ಔಷಧಿಯ ಅವೈಜ್ಞಾನಿಕ ಬಳಕೆ ಮಣ್ಣಿನ ಸತ್ವವನ್ನೇ ಕಳೆದರೆ, ಸಾಲಬಾಧೆ, ಬೆಲೆ ಕುಸಿತ ರೈತನ ಅಂತಃಸತ್ವವನ್ನೇ ಕುಂದಿಸುತ್ತಿವೆ.

-ಆತ್ಮಹತ್ಯೆಯಂತಹ ವಿಪರೀತದ ನಿರ್ಧಾರಗಳಿಗೂ ಇದು ಕಾರಣವಾಗಿದೆ. ಇದು ಕರ್ನಾಟಕವೊಂದರ ಸಮಸ್ಯೆಯಲ್ಲ; ಇಡೀ ದೇಶವನ್ನು ಕಾಡುತ್ತಿರುವ ಸಮಸ್ಯೆ.

-ಸರ್ಕಾರಗಳು ರೈತರ ಬೆಂಬಲಕ್ಕೆ ನಿಂತು ಅವರ ಬದುಕಿನಲ್ಲಿ ಆಶಾದಾಯಕ ಬದಲಾವಣೆ ತಂದರೆ ಅದೇ ನಾವು ಅವರಿಗೆ ಸಲ್ಲಿಸುವ ಗೌರವ ಎನ್ನುವುದು ನನ್ನ ನಂಬಿಕೆ. ಇದಕ್ಕಾಗಿಯೇ ಕೃಷಿ ವಲಯಕ್ಕೆ ಚೈತನ್ಯ ತುಂಬುವ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಆಶಯ ಹೊತ್ತು ಮೈತ್ರಿ ಸರ್ಕಾರ ರಚಿಸಿದ್ದೇವೆ. ಸಾಲ ಮನ್ನಾ, ಇಸ್ರೇಲ್ ಮಾದರಿ ಕೃಷಿ ಪದ್ಧತಿ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಮೊದಲಾದವು ಅನ್ನದಾತರಿಗೆ ಹೊಸ ಚೇತನ ತುಂಬಲು ನಾವು ಕಂಡುಕೊಂಡ ಕೆಲವು ಮಾರ್ಗಗಳು.

ಮಾನ್ಯ ಮುಖ್ಯಮಂತ್ರಿ

-ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೂ ರಾಜಕೀಯ ಜೀವನದುದ್ದಕ್ಕೂ ರೈತರ ಹಿತ ಚಿಂತನೆಯನ್ನೇ ಉಸಿರಾಡಿದವರು. ಹೀಗಾಗಿ ಸಹಜವಾಗಿ ನನಗೂ ರೈತರ ಹಿತವೇ ಆದ್ಯತೆಯಾಗಿ ಕಾಣುವಂತೆ ಆಗಿದ್ದು ಸುಳ್ಳಲ್ಲ. ನಾನು ರೈತರ ಬದುಕು- ಬವಣೆಗಳನ್ನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ. ಅವರನ್ನು ಕಾಡುವ ಸಮಸ್ಯೆಗಳಿಗೆ ಪರಿಹಾರವಿಲ್ಲವೇ ಎಂದು ಪರಿತಪಿಸಿದ್ದೇನೆ. ದಲ್ಲಾಳಿಗಳು, ಸಾಲಗಾರರ ಶೋಷಣೆಗೆ ಸಿಕ್ಕು ನರಳುವ ಅವರನ್ನು ಈ ವಿಷಚಕ್ರದಿಂದ ಹೊರತರುವುದು ಹೇಗೆಂದು ಚಿಂತಿಸಿದ್ದೇನೆ. ಪರಿಣತರೊಂದಿಗೆ ರ್ಚಚಿಸಿದ್ದೇನೆ. ಹಾಗೆಯೇ ಕೃಷಿಯಲ್ಲಿಯೇ ಬದುಕು ಕಟ್ಟಿಕೊಂಡ ಯಶಸ್ವೀ ಪ್ರಗತಿಪರ ರೈತರನ್ನೂ ಕಂಡಿದ್ದೇನೆ. ಅವರ ವೈಜ್ಞಾನಿಕ, ನಿಖರ ಕೃಷಿ ವಿಧಾನಗಳನ್ನು ಕಂಡು ಬೆರಗಾಗಿದ್ದೇನೆ. ಇಂತಹ ಬದುಕು ಎಲ್ಲ ರೈತ ಬಂಧುಗಳದ್ದಾಗಬೇಕೆಂದು ಆಸೆಪಟ್ಟಿದ್ದೇನೆ.

-ಈ ಹಿನ್ನೆಲೆಯಲ್ಲಿಯೇ ಈ ಬಾರಿ ನಾವಿಟ್ಟ ಮೊದಲ ಹೆಜ್ಜೆ ರೈತರ ಸಾಲಮನ್ನಾ. ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ. ಸಹಕಾರಿ ಬ್ಯಾಂಕುಗಳಲ್ಲಿ 1 ಲಕ್ಷ ರೂ. ವರೆಗಿನ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ 2 ಲಕ್ಷ ರೂ. ಗಳ ವರೆಗಿನ ಸಾಲ ಮನ್ನಾ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಪ್ರಾಯೋಗಿಕವಾಗಿ ಸೇಡಂ ಮತ್ತು ದೊಡ್ಡಬಳ್ಳಾಪುರದಲ್ಲಿ ರೈತರಿಗೆ ಬೇಬಾಕಿ ಪ್ರಮಾಣ ಪತ್ರವನ್ನೂ ನೀಡಲಾಗುತ್ತಿದೆ.

-ರೈತರ ಸಮಸ್ಯೆಗಳಿಗೆ ಸಾಲ ಮನ್ನಾ ಒಂದೇ ಪರಿಹಾರ ಅಲ್ಲ. ಅದು ತತ್ಕಾಲದ ಪರಿಹಾರ ಅಷ್ಟೇ. ಅದಕ್ಕಾಗಿಯೇ ನಮ್ಮ ರಾಜ್ಯದಲ್ಲಿ ಕೃಷಿ ಪದ್ಧತಿಯಲ್ಲಿಯೇ ಆಮೂಲಾಗ್ರ ಬದಲಾವಣೆಯ ಅಗತ್ಯವನ್ನು ಮನಗಂಡಿದ್ದೇವೆ. ಮಂಡ್ಯ ಜಿಲ್ಲೆ ಸೀತಾಪುರದಲ್ಲಿ ಭತ್ತದ ನಾಟಿ ಹಾಗೂ ಕೊಯಿಲಿನಲ್ಲಿ ಭಾಗವಹಿಸಿದ್ದು, ಬೀದರ್ ಜಿಲ್ಲೆಯ ಚಿತ್ತಾ ಗ್ರಾಮದಲ್ಲಿ ಪ್ರಗತಿಪರ ರೈತನ ಹೊಲಕ್ಕೆ ಭೇಟಿ ನೀಡಿ, ಸರ್ಕಾರ ರೈತರೊಂದಿಗೆ ಇದೆ ಎಂಬ ಸಂದೇಶ ನೀಡಿದ್ದೇವೆ.

ಮಾನ್ಯ ಮುಖ್ಯಮಂತ್ರಿ

-ಇಸ್ರೇಲ್ ಮಾದರಿ ಕೃಷಿ, ಶೂನ್ಯ ಬಂಡವಾಳ, ನೈಸರ್ಗಿಕ ಕೃಷಿ ಕಾರ್ಯಕ್ರಮಗಳು ನಮ್ಮ ರೈತರ ಕೃಷಿ ಪದ್ಧತಿ ಹೆಚ್ಚು ವೈಜ್ಞಾನಿಕವಾಗಿ, ನೀರು, ಗೊಬ್ಬರಗಳ ಬಳಕೆಯಲ್ಲಿ ದಕ್ಷತೆ ತರುವ, ಕೃಷಿಯನ್ನು ಲಾಭದಾಯಕವಾಗಿಸುವ ಗುರಿ ಹೊಂದಿದೆ. ಕೃಷಿ ಲಾಭದಾಯಕವಾಗಿಸುವ ನಿಟ್ಟಿನಲ್ಲಿ ನನ್ನನ್ನು ಬಹುವಾಗಿ ಪ್ರಭಾವಿಸಿದ್ದು, ಇಸ್ರೇಲ್ ಮಾದರಿ ಕೃಷಿ ಪದ್ಧತಿ. ಅಲ್ಲಿ ಹನಿ ಹನಿ ನೀರನ್ನೂ ಸದ್ಬಳಕೆ ಮಾಡಿಕೊಳ್ಳುವ ರೀತಿ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ, ಅತಿ ಕಡಿಮೆ ಭೂಮಿಯಲ್ಲಿ ಹೆಚ್ಚು ಇಳುವರಿ ಮೊದಲಾದ ಅಂಶಗಳು ಅನುಕರಣೀಯ ಎಂದು ನನಗನಿಸಿದೆ.

-ಕೃಷಿ ಯೋಜನೆಗಳನ್ನು ರೈತರ ಅಗತ್ಯಕ್ಕೆ ತಕ್ಕಂತೆ ರೂಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆಯವ್ಯಯದಲ್ಲಿ ಘೊಷಿಸಿದಂತೆ ಪ್ರತಿ ಜಿಲ್ಲೆಯ ತಲಾ ಇಬ್ಬರು ಪ್ರಗತಿ ಪರ ರೈತರನ್ನೊಳಗೊಂಡ ರೈತ ಸಲಹಾ ಸಮಿತಿ ರಚಿಸಲಾಗಿದೆ. ಮೊದಲ ಸಭೆಯಲ್ಲಿಯೇ ಹಲವಾರು ಉತ್ತಮ ಸಲಹೆಗಳು ಹೊರಹೊಮ್ಮಿವೆ. ಈ ಎಲ್ಲ ಉಪಕ್ರಮಗಳು ಕೃಷಿ ಇಲಾಖೆಯನ್ನು ಇನ್ನಷ್ಟು ರೈತ ಸ್ನೇಹಿಯಾಗಿಸಲು ನೆರವಾಗುವುದು ಎನ್ನುವುದು ನನ್ನ ವಿಶ್ವಾಸ.

-ಸರ್ಕಾರ ರೂಪಿಸಿದ ಕಾರ್ಯಕ್ರಮ ಯಶಸ್ವಿಯಾಗುವುದು, ಫಲಾನುಭವಿಗಳಿಗೆ ಅದು ತಲುಪಿದಾಗ ಮಾತ್ರ.

-ಸಬ್ಸಿಡಿ, ಪರಿಹಾರ, ಸಾಲಮನ್ನಾ ಹೀಗೆ ಫಲಾನುಭವಿ ಆಧಾರಿತ ಯೋಜನೆಗಳನ್ನು ರೂಪಿಸುವುದರಿಂದ ಸಮಗ್ರವಾಗಿ ಕೃಷಿ ವಲಯದ ಅಭಿವೃದ್ಧಿಯಾಗುವುದೆಂಬ ಭ್ರಮೆ ನನಗಿಲ್ಲ. ಬದಲಿಗೆ ರೈತರು ಆಧುನಿಕ, ಸುಸ್ಥಿರ ಕೃಷಿಗೆ ತೆರೆದುಕೊಳ್ಳುವುದು ಹೆಚ್ಚು ಮುಖ್ಯ ಎನ್ನುವುದು ನನ್ನ ಭಾವನೆ. ರೈತರಿಗೆ ಈ ನಿಟ್ಟಿನಲ್ಲಿ ಮೂಡುವ ಅರಿವು ಅವರ ಬದುಕಿನಲ್ಲಿ ಬದಲಾವಣೆ ತರುವುದೆಂಬ ನಂಬಿಕೆ ನನ್ನದು.

ಮಾನ್ಯ ಮುಖ್ಯಮಂತ್ರಿ

-ಭವಿಷ್ಯದಲ್ಲಿ ಆಹಾರಧಾನ್ಯ ಒದಗಿಸುವ ದೇಶಗಳದ್ದೇ ಪಾರುಪತ್ಯ, ಆಯುಧ ಒದಗಿಸುವ ದೇಶಗಳದ್ದಲ್ಲ ಎಂದು ಹಸಿರು ಕ್ರಾಂತಿಯ ಪಿತಾಮಹ ಡಾ. ಎಂ.ಎಸ್. ಸ್ವಾಮಿನಾಥನ್ ಹೇಳುತ್ತಾರೆ. ನಮ್ಮ ದೇಶಕ್ಕೀಗ ಸದಾ ಹಸಿರು ಕ್ರಾಂತಿಯ ಅಗತ್ಯವಿದೆ. ಇದಕ್ಕಾಗಿ ಭೂಮಿ, ನೀರಿನ ಸಮರ್ಥ ನಿರ್ವಹಣೆಗೆ ಆದ್ಯತೆ ನೀಡಬೇಕಾಗಿದೆ ಎಂಬ ಅವರ ಮಾತು ಗಮನಾರ್ಹ. ಇದನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಉತ್ಸುಕವಾಗಿದೆ.

-ಮುಂದಿನ ದಿನಗಳಲ್ಲಿ ಕೃಷಿ ವಲಯದಲ್ಲಿ ಆಶಾದಾಯಕ ಬೆಳವಣಿಗೆ ಕಾಣುವ ಕನಸು ಹೊತ್ತಿದ್ದೇನೆ. ರೈತರು ನೇಣಿನ ಕುಣಿಕೆಯತ್ತ ಮುಖ ಮಾಡದೆ, ತಮ್ಮ ಸಮಸ್ಯೆಗಳನ್ನೇ ಕಟ್ಟಿಹಾಕುವಂತಾಗಬೇಕು. ರೈತ ಸಾಲ ಮಾಡಿ ಕೃಷಿ ಮಾಡುವ ದಿನಗಳು ದೂರಾಗಬೇಕು. ಬೆಳೆದ ಬೆಲೆಗೆ ತಾನೇ ದರ ನಿಗದಿ ಮಾಡುವ ದಿನಗಳು ಬರಬೇಕು. ಒಕ್ಕಲುತನದ ಮೇಲೆ ಎಲ್ಲರಿಗೂ ಪ್ರೀತಿ, ವಿಶ್ವಾಸ ಚಿಗುರಬೇಕು- ಈ ಎಲ್ಲ ಕನಸುಗಳನ್ನು ನನಸಾಗಿಸುವ ಛಲ ನಮ್ಮ ಸರ್ಕಾರಕ್ಕಿದೆ. ಈ ಪ್ರಯತ್ನ ಪ್ರಾರಂಭವಾಗಿದೆ. ಎಲ್ಲರ ಸಹಕಾರದೊಂದಿಗೆ ಮುಂದುವರಿಯಲಿದೆ.

***********************************************