ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ರಾಜ್ಯ ಸಚಿವ ಸಂಪುಟ ವಿಸ್ತರಣೆ : ಎಂಟು ಸಚಿವರ ಪ್ರಮಾಣ ವಚನ ಸ್ವೀಕಾರ

ಮಾನ್ಯ ಮುಖ್ಯಮಂತ್ರಿ

ರಾಜಭವನ (ಬೆಂಗಳೂರು), ಡಿಸೆಂಬರ್ 22, 2018

-ಕಾಂಗ್ರೆಸ್ ಪಕ್ಷದ ಎಂಟು ಸದಸ್ಯರ ಸೇರ್ಪಡೆಯೊಂದಿಗೆ ಎಂಟು ತಿಂಗಳ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಚಿವ ಸಂಪುಟ ಶನಿವಾರ ಸಂಜೆ ವಿಸ್ತರಣೆಯಾಗಿದೆ.

-ಇದರಿಂದ ಜಾತ್ಯಾತೀತ ಜನತಾ ದಳ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಸರ್ಕಾರದ ಸಂಖ್ಯಾಬಲ 32 ಕ್ಕೆ ಏರಿದೆ.

-ಬಬಲೇಶ್ವರ ಕ್ಷೇತ್ರದ ಶಾಸಕ ಎಂ. ಬಿ. ಪಾಟೀಲ್, ರಾಜ್ಯ ವಿಧಾನ ಪರಿಷತ್ ಸದಸ್ಯ ಆರ್. ಬಿ. ತಿಮ್ಮಾಪೂರ್, ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಎಲ್ ಜಾರಕಿಹೊಳಿ, ಕುಂದಗೋಳ ಕ್ಷೇತ್ರದ ಶಾಸಕ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ. ಹೂವಿನ ಹಡಗಲಿ ಕ್ಷೇತ್ರದ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್, ಸಂಡೂರು ಕ್ಷೇತ್ರದ ಶಾಸಕ ಇ. ತುಕಾರಾಂ, ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್ ಹಾಗೂ ಹೊಸಕೋಟೆ ಶಾಸಕ ಎಂ ಟಿ ಬಿ ನಾಗರಾಜ್ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಗಣ್ಯರು.

-ಎಂ ಬಿ ಪಾಟೀಲ್, ಆರ್ ಬಿ ತಿಮ್ಮಾಪೂರ್ ಮತ್ತು ಇ ತುಕಾರಾಂ ಅವರು ದೇವರ ಹೆಸರಿನಲ್ಲಿ, ಸತೀಶ್ ಎಲ್ ಜಾರಕಿಹೊಳಿ ಅವರು ಬಸವ, ಬುದ್ಧ ಮತ್ತು ಅಂಬೇಡ್ಕರ್ ಅವರ ಹೆಸರಿನಲ್ಲಿ, ಸಿ ಎಸ್ ಶಿವಳ್ಳಿ ಅವರು ಈಶ್ವರನ ಹೆಸರಿನಲ್ಲಿ, ಪಿ ಟಿ ಪರಮೇಶ್ವರ ನಾಯ್ಕ್ ಅವರು ತುಳಜಾ ಭವಾನಿ ಅವರ ಹೆಸರಿನಲ್ಲಿ, ರಹೀಂ ಖಾನ್ ಅವರು ಅಲ್ಲಾಹ್ ಹೆಸರಿನಲ್ಲಿ ಹಾಗೂ ಎಂ ಟಿ ಬಿ ನಾಗರಾಜ್ ಅವರು ಮಂಜುನಾಥ ಸ್ವಾಮಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಹೀಂ ಖಾನ್ ಅವರು ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಎಲ್ಲರ ಗಮನ ಸೆಳೆದರು. ಉಳಿದೆಲ್ಲರೂ ಕನ್ನಡ ಭಾಷೆಯಲ್ಲಿಯೇ ಪ್ರಮಾಣ ವಚನವನ್ನು ಸ್ವೀಕರಿಸಿದರು.

-ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ನಾಲ್ಕು ಮಂದಿ ಈಗಾಗಲೇ ಸಚಿವರಾಗಿ ಅನುಭವ ಹೊಂದಿದ್ದಾರೆ. ಉಳಿದ ನಾಲ್ಕು ಮಂದಿ ಪ್ರಥಮ ಬಾರಿಗೆ ಸಚಿವರಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ.

-ನೂತನ ಸಚಿವರಿಗೆ ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾ ಅವರು ಅಧಿಕಾರ ಪದ ಹಾಗೂ ಗೋಪ್ಯತಾ ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಸಚಿವರಿಗೂ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

-ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ಅವರು ಸಮಾರಂಭವನ್ನು ನಿರೂಪಿಸಿದರು.

-ಈ ಸಮಾರಂಭದಲ್ಲಿ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಸದಸ್ಯ ಸಿದ್ದರಾಮಯ್ಯ, ಕುಮಾರಸ್ವಾಮಿ ಸಂಪುಟದ ಸಹೋದ್ಯೋಗಿಗಳಾದ ಡಿ. ಕೆ. ಶಿವಕುಮಾರ್ ಸೇರಿದಂತೆ ಹಲವು ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಮಾನ್ಯ ಮುಖ್ಯಮಂತ್ರಿ

***********************************************