ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

‘ಕಾಯಕ’ ಯೋಜನೆಯ ಉದ್ಘಾಟನೆ ಮತ್ತು 'ಬಡವರ ಬಂಧು' ಯೋಜನೆ ಫಲಾನುಭವಿಗಳಿಗೆ ಚೆಕ್ ವಿತರಿಸಿದ ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ಬೆಳಗಾವಿ, ಡಿಸೆಂಬರ್ 20, 2018

-ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸುವ ಬಡವರ ಬಂಧು ಯೋಜನೆಯ ಲಾಭವನ್ನು ರಾಜ್ಯದಲ್ಲಿರುವ ಒಟ್ಟು 4.5 ಲಕ್ಷ ಬೀದಿಬದಿ ವ್ಯಾಪಾರಿಗಳ ಕುಟುಂಬಗಳಿಗೂ ತಲುಪಿಸಲಾಗುವುದು.

-ಅದೇ ರೀತಿ ಕಾಯಕ ಯೋಜನೆಯಡಿ ಮಹಿಳಾ ಸಂಘಗಳು ತಯಾರಿಸುವ ಉತ್ಪನ್ನಗಳನ್ನು ಸರ್ಕಾರದ ವತಿಯಿಂದಲೇ ಖರೀದಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

-ಸಹಕಾರ ಇಲಾಖೆಯ ವತಿಯಿಂದ ಧರ್ಮನಾಥ ಭವನದಲ್ಲಿ ಏರ್ಪಡಿಸಿದ್ದ 'ಕಾಯಕ' ಯೋಜನೆಯ ಉದ್ಘಾಟನೆ ಮತ್ತು 'ಬಡವರ ಬಂಧು' ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಾನ್ಯ ಮುಖ್ಯಮಂತ್ರಿ

-ಕಾಯಕ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಗೆ ವಿವಿಧ ಬಗೆಯ ಉತ್ಪಾದನೆಗಳ ತಯಾರಿಕೆ ಮತ್ತು ಮಾರಾಟಕ್ಕೆ ತರಬೇತಿ ನೀಡಲಾಗುವುದು. ಅಂತಹ ಸಂಘಗಳು ತಯಾರಿಸುವ ಉತ್ಪನ್ನಗಳನ್ನು ಸರ್ಕಾರದ ಮೂಲಕವೇ ಖರೀದಿಸುವ ಮೂಲಕ ಅವರಿಗೆ ನೆರವಾಗುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

-ಬಡವರು ಸಾಲದಿಂದ ಜೀವನ ನಿರ್ವಹಣೆ ಮಾಡುತ್ತಿದ್ದು, ಅವರಿಗೆ ಆರ್ಥಿಕ ನೆರವು ನೀಡಲು ಬಡವರ ಬಂಧು ಹಾಗೂ ಕಾಯಕ ಯೋಜನೆ ರೂಪಿಸಲಾಗಿದೆ.

-ಪ್ರತಿ ಬಡ ಕುಟುಂಬವು ನೆಮ್ಮದಿಯ ಬದುಕು ನಡೆಸಬೇಕು. ಮುಂದಿನ ದಿನಗಳಲ್ಲಿ ಆ ರೀತಿಯ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶ ನಮ್ಮದು ಎಂದು ಕುಮಾರಸ್ವಾಮಿ ಹೇಳಿದರು.

ಮಾನ್ಯ ಮುಖ್ಯಮಂತ್ರಿ

-ಸಾಲಮನ್ನಾ-ದಾರಿತಪ್ಪಿಸುವ ಕೆಲಸ:

-ರೈತರ 46 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡುವ ಸವಾಲು ನಮ್ಮ ಮುಂದಿದೆ. ಆದರೆ ಕೆಲವರು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದು, ಯಾರೂ ಇದಕ್ಕೆ ಕಿವಿಗೊಡದೇ ನನ್ನ ಮೇಲೆ ವಿಶ್ವಾಸ ಇಡಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿಕೊಂಡರು.

-ರೈತರ ಸಾಲಮನ್ನಾ ಯೋಜನೆಯಡಿ ಉತ್ತರ ಕರ್ನಾಟಕದ ಬೆಳಗಾವಿ ಮತ್ತು ಗುಲ್ಬರ್ಗ ವಿಭಾಗದ 12 ಜಿಲ್ಲೆಗಳ ರೈತರಿಗೆ ಒಟ್ಟಾರೆ 29 ಸಾವಿರ ಕೋಟಿಯ ಸಾಲಮನ್ನಾ ಸೌಲಭ್ಯ ದೊರಕಲಿದೆ. ಬೀದರ್ ಜಿಲ್ಲೆಯಲ್ಲಿ 1636 ಕೋಟಿ ರೂ., ಕಲಬುರಗಿ ಯಲ್ಲಿ 3065 ಕೋಟಿ , ಯಾದಗಿರಿ ಜಿಲ್ಲೆಯಲ್ಲಿ1179 ಕೋಟಿ, ರಾಯಚೂರು ಜಿಲ್ಲೆಯಲ್ಲಿ 2210 ಕೋಟಿ, ಕೊಪ್ಪಳ ಜಿಲ್ಲೆಯಲ್ಲಿ 1098 ಕೋಟಿ, ಬಳ್ಳಾರಿ ಜಿಲ್ಲೆಯಲ್ಲಿ 2263 ಕೋಟಿ ರೂಪಾಯಿ, ಬೆಳಗಾವಿ ಜಿಲ್ಲೆಯಲ್ಲಿ 4719 ಕೋಟಿ, ಬಾಗಲಕೋಟೆ ಜಿಲ್ಲೆಯಲ್ಲಿ 3962 ಕೋಟಿ , ವಿಜಯಪುರ ಜಿಲ್ಲೆಯಲ್ಲಿ 3271 ಕೋಟಿ, ಧಾರವಾಡ ಜಿಲ್ಲೆಯಲ್ಲಿ 1854 ಕೋಟಿ, ಗದಗ 1815 ಕೋಟಿ ರೂ. ಹಾಗೂ ಹಾವೇರಿ ಜಿಲ್ಲೆಯಲ್ಲಿ 2113 ಕೋಟಿ ರೂಪಾಯಿ ಗಳಷ್ಟು ಮೊತ್ತದ ಸಾಲ ಮನ್ನಾ ಆಗಲಿದೆ.

-ಆದಾಗ್ಯೂ ಉತ್ತರ ಕರ್ನಾಟಕದ ನಿರ್ಲಕ್ಷ್ಯ ಎಂದು ಬಿಂಬಿಸಲಾಗುತ್ತಿದೆ. ಉತ್ತರ ಕರ್ನಾಟಕ ನಿರ್ಲಕ್ಷಿಸುವ ಪ್ರಮೇಯವೇ ಇಲ್ಲ. ನನಗೆ ಉತ್ತರ ಕರ್ನಾಟಕ ಅಥವಾ ದಕ್ಷಿಣ ಕರ್ನಾಟಕ ಎಂಬ ಭೇದಭಾವ ಇಲ್ಲ. ನಾನು ನಿಮ್ಮವ. ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.

-ಬಡವರು ಮತ್ತು ರೈತರ ನೆರವಿಗೆ ಸರ್ಕಾರ ಸದಾ ಬದ್ಧವಾಗಿದೆ:

-ರೈತರ ಸಾಲಮನ್ನಾ ಇಡೀ ರಾಷ್ಟ್ರಕ್ಕೆ ಮಾದರಿ ಯೋಜನೆಯಾಗಿದೆ. ಕೇಂದ್ರ ಸರ್ಕಾರ ಸೇರಿದಂತೆ ಅನೇಕ ರಾಜ್ಯದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಪಡೆಯಲು ಮತ್ತು ಅಧ್ಯಯನಕ್ಕೆ ರಾಜ್ಯಕ್ಕೆ ಬರುತ್ತಿದ್ದಾರೆ.

-ಮುಂದಿನ ದಿನಗಳಲ್ಲಿ ರೈತರರನ್ನು ಸಾಲದಿಂದ ಮುಕ್ತಗೊಳಿಸಲು ವಿಭಿನ್ನ ಕೃಷಿ ಪದ್ಧತಿಗೆ ಪ್ರೋತ್ಸಾಹ ನೀಡಲು ಸರ್ಕಾರ ಉದ್ದೇಶಿಸಿದ್ದು, ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ.

-ನಾನು ಅಥವಾ ಸರ್ಕಾರ ಯಾವುದೇ ಜಾತಿಗೆ ಸೀಮಿತವಾಗಿಲ್ಲ; ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧವಾಗಿದ್ದು, ಕರ್ನಾಟಕವನ್ನು ದೇಶದಲ್ಲಿ ಮಾದರಿ ರಾಜ್ಯವಾಗಿ ನಿರ್ಮಿಸುವ ಗುರಿ ನಮ್ಮದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

-ಪ್ರಾಸ್ತಾವಿಕವಾಗಿ ಮಾತನಾಡಿದ ಸಹಕಾರ ಇಲಾಖೆಯ ಸಚಿವರಾದ ಬಂಡೆಪ್ಪ ಕಾಶೆಂಪುರ, ಬಡವರಬಂಧು ಹಾಗೂ ಕಾಯಕ ಸಮ್ಮಿಶ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾಗಿವೆ. ಮೀಟರ್ ಬಡ್ಡಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಬಡವರ ಬಂಧು ಯೋಜನೆ ಜಾರಿಗೊಳಿಸಲಾಗಿದೆ. ಯಾವುದೇ ಬಡ್ಡಿ ಮತ್ತು ಖಾತ್ರಿ ಇಲ್ಲದೇ ಬೀದಿಬದಿ ವ್ಯಾಪಾರಸ್ಥರಿಗೆ 2 ರಿಂದ 10 ಸಾವಿರ ರೂಪಾಯಿ ವರೆಗೆ ಸಾಲ ನೀಡಲಾಗುತ್ತದೆ.

ಮಾನ್ಯ ಮುಖ್ಯಮಂತ್ರಿ

-ರಾಜ್ಯದಲ್ಲಿ ಇರುವ 4.5 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರ ನೆರವಾಗಬೇಕು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ.

-ಆದಷ್ಟು ಬೇಗನೇ ರಾಜ್ಯದಾದ್ಯಂತ ಎಲ್ಲ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಾಶೆಂಪುರ ಹೇಳಿದರು.

-ಕಾಯಕ ಯೋಜನೆ:

ಮಾನ್ಯ ಮುಖ್ಯಮಂತ್ರಿ

-ಕಾಯಕವೇ ಕೈಲಾಸ ಎಂಬ ಬಸವಣ್ಣನವರ ನುಡಿಯಂತೆ ದುಡಿಯುವ ಕೈಗಳಿಗೆ ಆರ್ಥಿಕ ಬಲ ತುಂಬುವುದು ಈ ಕಾಯಕ ಯೋಜನೆಯ ಉದ್ದೇಶವಾಗಿದೆ.

-ಐದು ಲಕ್ಷ ರೂಪಾಯಿಗಳವರೆಗೆ ಬಡ್ಡಿರಹಿತ ಸಾಲ ನೀಡಲು ಸರ್ಕಾರ ಮುಂದಾಗಿದೆ.

-ಕಾಯಕ ಯೋಜನೆಯು ಇಡೀ ದೇಶದಲ್ಲಿ ಮಾದರಿ.

-ಕಾಯಕ ಯೋಜನೆಯಡಿ ಉತ್ಪಾದಿಸಲಾಗುವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಕೂಡ ಯೋಜನೆ ರೂಪಿಸಲಾಗುತ್ತಿದೆ.

-ಈ ಯೋಜನೆಯಡಿ ಉತ್ಪಾದಿಸಲಾಗುವ ಉತ್ಪನ್ನಗಳು ಹಳ್ಳಿ, ಪಟ್ಟಣದಿಂದ ದೆಹಲಿಯವರೆಗೆ ಬಸ್ ನಿಲ್ದಾಣದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಮಾರಾಟಕ್ಕೆ ಲಭ್ಯ ಇರಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಸಹಕಾರ ಇಲಾಖೆಯು ಕಾರ್ಯಯೋಜನೆ ರೂಪಿಸಲಿದೆ ಎಂದು ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು.

ಮಾನ್ಯ ಮುಖ್ಯಮಂತ್ರಿ

-ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಸಾರಾ ಮಹೇಶ್, ಸಣ್ಣ ಕೈಗಾರಿಕಾ ಸಚಿವರಾದ ಶ್ರೀನಿವಾಸ್, ಪಶುಸಂಗೋಪನೆ ಇಲಾಖೆಯ ಸಚಿವರಾದ ವೆಂಕಟರಾವ್ ನಾಡಗೌಡ, ಶಾಸಕ ಬಾಲಕೃಷ್ಣ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಬಾಗಲಕೋಟೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಅಜಯಕುಮಾರ್ ಸರನಾಯಕ ಸೇರಿದಂತೆ ಹಿರಿಯ ಸಹಕಾರಿಗಳು ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಬಡವರ ಬಂಧು ಯೋಜನೆಯ ಫಲಾನುಭವಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚೆಕ್ ವಿತರಿಸಿದರು.

***********************************************