ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ನಿರ್ದಿಷ್ಟ ಕಾಲಮಿತಿಯೊಳಗೆ ರಾಯಚೂರು ಜಿಲ್ಲೆಯ ಜುರಾಲಾ ಯೋಜನೆ ಬಾದೆಗೊಳಗಾದ ಸೇತುವೆ ಕಾಮಗಾರಿಗಳು ಸಂಪೂರ್ಣ - ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ಸುವರ್ಣ ವಿಧಾನಸೌಧ (ಬೆಳಗಾವಿ), ಡಿಸೆಂಬರ್ 13, 2018

-ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಯಚೂರು ಜಿಲ್ಲೆಯ ಪ್ರಿಯದರ್ಶಿನಿ ಜುರಾಲಾ ಯೋಜನೆಯಡಿ ಹಿನ್ನೀರಿನಿಂದ ಮುಳುಗಡೆಯಾಗಿ ಶಿಥಿಲಗೊಂಡ ಅತ್ಕೂರು, ಡೊಂಗರಾಂಪುರ, ಬುರ್ದಿಪಾಡು ಸೇತುವೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಆದೇಶ ನೀಡಿದರು.

-ಮಾಧ್ಯಮಗಳಲ್ಲಿ ಈ ಸಂಬಂಧ ಬಂದ ವರದಿಗಳನ್ನು ಆಧರಿಸಿ ಬುಧವಾರ ರಾತ್ರಿ 8.00 ಗಂಟೆಗೆ ಉನ್ನತಮಟ್ಟದ ಸಭೆಯನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಸಭೆಯಲ್ಲಿ ಲೋಕೋಪಯೋಗಿ ಸಚಿವರಾದ ರೇವಣ್ಣ, ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ, ಅಪರ ಮುಖ್ಯ ಕಾರ್ಯದರ್ಶಿ ಡಾ ರಜನೀಶ್ ಗೋಯಲ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಡಾ ಕೆ ಎಸ್ ಕೃಷ್ಣರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡರು.

-ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದ ಗಡಿಭಾಗದಲ್ಲಿ ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿರುವುದರಿಂದ ಜನಸಾಮಾನ್ಯರು ತೊಂದರೆಗೊಳಗಾಗಿರುವುದನ್ನು ತಾನು ಗಮನಿಸಿದ್ದು, ಇದರಲ್ಲಿ ಕಾಮಗಾರಿ ಗುತ್ತಿಗೆ ಪಡೆದವರ ನಿರ್ಲಕ್ಷ್ಯ ಗಮನಕ್ಕೆ ಬಂದಿದೆ; ಜನರು ನೊಂದಿರುವುದನ್ನು ನೋಡುತ್ತಿದ್ದೇನೆ ಎಂದರು.

-ಆದ್ದರಿಂದ ಈ ಸಂಬಂಧ ಉನ್ನತ ಮಟ್ಟದ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

-ಸಭೆಯಲ್ಲಿ ಉಪಸ್ಥಿತರಿದ್ದ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಮಾತನಾಡಿ, ಜನತೆಯು ಸೇತವೆಗಳಿಲ್ಲದೆ ಸಂಪರ್ಕ ಕೊರತೆಯಿಂದ ಪಡುತ್ತಿರುವ ತೊಂದರೆಗಳನ್ನು ಗಮನಿಸಿದ್ದೇನೆ. ಈ ನಿಟ್ಟಿನಲ್ಲಿ ಹಲವು ಸಭೆಗಳನ್ನು ನಡೆಸಲಾಗಿದೆ; ಆದರೂ ಕೆಲವು ತಾಂತ್ರಿಕ ಕಾರಣಗಳಿಂದ ಕಾಮಗಾರಿಗಳು ನೆನೆಗುದಿಗೆ ಬಿದ್ದಿತ್ತು.

-ಇಂದು ಮುಖ್ಯಮಂತ್ರಿಗಳಿಂದ ಆಡಳಿತಾತ್ಮಕ ಅನುಮೋದನೆ ನೀಡಿರುವುದರಿಂದ ಸಮಯಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

***********************************************