ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಆನೆ ಹಾವಳಿ: ಶಾಶ್ವತ ಪರಿಹಾರಕ್ಕೆ ಮುಖ್ಯಮಂತ್ರಿ ಸೂಚನೆ

ಮಾನ್ಯ ಮುಖ್ಯಮಂತ್ರಿ

ವಿಧಾನಸೌಧ (ಬೆಂಗಳೂರು), ಡಿಸೆಂಬರ್ 04, 2018

-ರಾಜ್ಯದಲ್ಲಿ ಆನೆ ದಾಳಿಯಿಂದ ಜನ ಸಾಯದಂತೆ ಶಾಶ್ವತ ಪರಿಹಾರ ಕಾರ್ಯಗಳ ಬಗ್ಗೆ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

-ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿಯಿಂದ ತೊಂದರೆಗೊಳಗಾದ ರೈತರ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಕುರಿತು ಸಭೆ ನಡೆಯಿತು.

-ಆನೆಗಳ ಹಾವಳಿಯಿಂದ ಭತ್ತ, ಬಾಳೆ, ಅಡಿಕೆ, ಕಾಫಿ ಬೆಳೆಗಳಿಗೆ ಅಪಾರ ಹಾನಿಯುಂಟಾಗಿದ್ದು, ಮಾನವ - ಆನೆ ಸಂಘರ್ಷ ತಪ್ಪಿಸಲು ವೈಜ್ಞಾನಿಕವಾಗಿ ಪರಿಹಾರವನ್ನು ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ರಾಷ್ಟ್ರದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಸುಮಾರು 6000 ಆನೆಗಳು ರಾಜ್ಯದಲ್ಲಿದ್ದು, ತೊಂದರೆಯುಂಟು ಮಾಡುತ್ತಿರುವ ಆನೆಗಳನ್ನು ಹಿಡಿದು ಶಿಬಿರಗಳಿಗೆ ಕಳುಹಿಸುವುದಕ್ಕೆ ಹೊರ ರಾಜ್ಯಗಳಿಂದ ತಜ್ಞರನ್ನು ಕರೆಸಿಕೊಳ್ಳುವಂತೆ ಸೂಚಿಸಿದರು.

-ರೈಲ್ವೆ ಇಲಾಖೆಯಿಂದ ಕಂಬಿ ಖರೀದಿ ಬೆಲೆ ದುಬಾರಿಯಾಗಿದ್ದು, ಬೇರೆ ಪ್ರದೇಶಗಳಿಂದ ಕಂಬಿ ಸಾಗಾಣಿಕೆ ಮಾಡಬೇಕಾಗಿರುವುದರಿಂದ ಸಾರಿಗೆ ವೆಚ್ಚವೂ ಸೇರುತ್ತದೆ, ಆದ್ದರಿಂದ ರಿಯಾಯಿತಿ ಬೆಲೆಯಲ್ಲಿ ರೈಲು ಕಂಬಿ ನೀಡುವಂತೆ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲು ಸೂಚಿಸಿದ ಮುಖ್ಯಮಂತ್ರಿಗಳು, ರೈಲು ತಡೆಗೋಡೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಸೂಚಿಸಿದರು. ಈ ಕುರಿತು ದೆಹಲಿಗೆ ತೆರಳಿ ಕೇಂದ್ರ ಅರಣ್ಯ ಸಚಿವ ಡಾ ಹರ್ಷವರ್ಧನ್ ಅವರನ್ನು ಭೇಟಿಯಾಗಿ ಸಮಸ್ಯೆಗೆ ನೆರವು ನೀಡಲು ಕೋರುವುದಾಗಿ ಭರವಸೆ ನೀಡಿದರು.

-ಸಭೆಯಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಅರಣ್ಯ ಸಚಿವ ಆರ್. ಶಂಕರ್,ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜರಾಜು, ಶಾಸಕ ಆರಗ ಜ್ಞಾನೇಂದ್ರ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್ ಹಾಗೂ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭಾಗವಹಿಸಿದ್ದರು.

***********************************************