ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಜನತಾ ದರ್ಶನ

ಮುಖ್ಯಮಂತ್ರಿಗಳ ಸಾರ್ವಜನಿಕ ಭೇಟಿ - ಪ್ರತಿ ಶನಿವಾರ ಮಾತ್ರ

know_the_cm

ಗೃಹ ಕಛೇರಿ ಕೃಷ್ಣಾ (ಬೆಂಗಳೂರು) ಸೆಪ್ಟೆಂಬರ್ 01: ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು 12 ವರ್ಷದ ಹಿಂದೆ ನಡೆಸುತ್ತಿದ್ದ ಮಾದರಿಯ ವ್ಯವಸ್ಥಿತ ಜನತಾದರ್ಶನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.

ಮೈತ್ರಿ ಸರ್ಕಾರ 100 ದಿನ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಜನರ ಕಷ್ಟಗಳನ್ನು ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಪ್ರತಿ ಶನಿವಾರ ಬೆಂಗಳೂರಿನಲ್ಲಿ ಇರುವಾಗ 12 ವರ್ಷಗಳ ಹಿಂದಿನಂತೆ ಪರಿಣಾಮಕಾರಿ ಜನತಾದರ್ಶನ ನಡೆಸಲಾಗುವದು. ಈ ನೂರು ದಿನಗಳ ಅವಧಿಯಲ್ಲಿ ಪ್ರತಿ ದಿನ ಜನತಾ ದರ್ಶನ ನಡೆಸಿದ್ದೇನೆ; ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಇಂದಿನಿಂದ ಪ್ರತಿ ಶನಿವಾರ ಮಾತ್ರ ಜನತಾ ದರ್ಶನ ನಡೆಸಲಾಗುವುದು. ಇತರ ದಿನಗಳಲ್ಲಿ ಸರ್ಕಾರದ ಇತರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ಶನಿವಾರ ಜನತಾ ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರ ಕಷ್ಟಗಳನ್ನು ಖುದ್ದು ವಿಚಾರಿಸುವೆ. ರಾತ್ರಿ ಗಂಟೆ ಹನ್ನೊಂದಾದರೂ ಸರಿ, ಎಲ್ಲರ ಸಮಸ್ಯೆ ಆಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಇದಲ್ಲದೆ ತಿಂಗಳಿಗೊಮ್ಮೆ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಲ್ಲದೆ, ಸಾರ್ವಜನಿಕರ ಸಮಸ್ಯೆ ಆಲಿಸುವೆ; ಅರ್ಧ ದಿನವನ್ನು ರೈತರಿಗೆ ಆಧುನಿಕ ಕೃಷಿ ಪದ್ಧತಿಯ ಅರಿವು ಮೂಡಿಸುವುದಕ್ಕಾಗಿ ಮೀಸಲಿಡುವೆ ಎಂದರು.

ಜಿಲ್ಲಾಧಿಕಾರಿಗಳೂ ತಾಲ್ಲೂಕಿಗೆ ಭೇಟಿ ನೀಡಿ ನಿಗದಿತ ದಿನದಂದು ಸಾರ್ವಜನಿಕ ಕುಂದು ಕೊರತೆ ನಿವಾರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಅಚ್ಚುಕಟ್ಟಾದ ವ್ಯವಸ್ಥೆ: ಜನತಾದರ್ಶನಕ್ಕೆ ಮೆಚ್ಚುಗೆ

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಆವರಣದಲ್ಲಿ ಇಂದು ಭಿನ್ನವಾಗಿ ಆರಂಭಿಸಲಾದ ಜನತಾದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

ಮುಖ್ಯಮಂತ್ರಿಗಳನ್ನು ನೋಡಲು ಬರುವವರಿಗೆ ತೊಂದರೆಯಾಗದಂತೆ ಅನುಕೂಲಗಳನ್ನು ಕಲ್ಪಿಸಿಕೊಡಲಾಗಿತ್ತು. ಎಲ್ಲರಿಗೂ ನೆರಳಿರುವಂತೆ ನೋಡಿಕೊಳ್ಳಲಾಗಿತ್ತಲ್ಲದೆ ಕುಳಿತುಕೊಳ್ಳಲು ಖುರ್ಚಿ ವ್ಯವಸ್ಥೆ ಮಾಡಲಾಗಿತ್ತು.

ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಗಮನ ಸೆಳೆಯುವಂತಿತ್ತು. ಎಲ್ಲರಿಗೂ ಕುಡಿಯುವ ನೀರು, ಉಪಾಹಾರದ ವ್ಯವಸ್ಥೆ ಇತ್ತು. ಪ್ರತಿಯೊಬ್ಬರಿಗೂ ಟೋಕನ್ ನೀಡಿದ ಕಾರಣ ವ್ಯವಸ್ಥಿತವಾಗಿ ಜನತಾದರ್ಶನ ಜರುಗಿತು.