ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಜನತೆಯ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ

know_the_cm

-ಕೆಲವೆಡೆಗಳಲ್ಲಿ ಮುಖ್ಯಮಂತ್ರಿ ಎಂದರೆ ಅತಿ ಹೆಚ್ಚು ಸಂಖ್ಯೆಯ ಅಂಗ ರಕ್ಷಕರ ನಡುವೆ ಓಡಾಡುವವರು ಎಂದೇ ತರ್ಕಿಸುವವರಿದ್ದಾರೆ, ವ್ಯಾಖ್ಯಾನಿಸುವವರಿದ್ದಾರೆ, ಆದರೆ, ನಮ್ಮ ಕರ್ನಾಟಕಕ್ಕೆ ಈ ಮಾತು ಅನ್ವಯವಾಗದು. ಅದರಲ್ಲೂ ಸದಾ ಕಾಲ ಜನರೊಡನೆ ಬೆರೆಯುವ ಹಾಗೂ ಜನರ ನಡುವೆಯೇ ಓಡಾಡುವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಕಂಡಾಗ ಇಂತಹ ಮಾತುಗಳನ್ನು ಒಪ್ಪಲಾಗದು.

-ಹೆಚ್ ಡಿ ದೇವೇಗೌಡ ಹಾಗೂ ಚೆನ್ನಮ್ಮ ಅವರ ಮೂರನೇ ಮಗನಾಗಿ 1959 ರ ಡಿಸೆಂಬರ್ 16 ರಂದು ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಪುಟ್ಟ ಗ್ರಾಮ ಹರದನಹಳ್ಳಿಯಲ್ಲಿ ಜನಿಸಿದ ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಅವರ ಪ್ರಾಥಮಿಕ ಶಿಕ್ಷಣದ ಕಲಿಕೆ ಪ್ರಾರಂಭವಾದದ್ದು ಅದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿ, ಅದೂ ಕನ್ನಡ ಮಾಧ್ಯಮದಲ್ಲಿ !!!

-ನಂತರ, ಬೆಂಗಳೂರಿನ ಜಯನಗರದಲ್ಲಿರುವ ಮಾಡೆಲ್ ಎಜುಕೇಷನ್ ಸೊಸೈಟಿ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಬಸವನಗುಡಿಯ ವಿಜಯಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಹಾಗೂ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದ ಕುಮಾರಸ್ವಾಮಿ ಅವರು ವಿದ್ಯಾರ್ಥಿ ಜೀವನದಲ್ಲಿ ಸಾಧಾರಣರಲ್ಲಿ ಸಾಧಾರಣ ಎನಿಸಿಕೊಂಡರೂ, ಸಾರ್ವತ್ರಿಕ ಜೀವನದಲ್ಲಿ ಅಸಾಧಾರಣ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಕುಮಾರಸ್ವಾಮಿ ಅವರ ಈ ಯಶಸ್ಸಿಗೆ ತಂದೆ ಹೆಚ್ ಡಿ ದೇವೇಗೌಡ ಅವರೇ ಪ್ರೇರಣೆ ಹಾಗೂ ಸ್ಪೂರ್ತಿ ಎಂಬುದನ್ನು ಯಾರೂ ಅಲ್ಲಗೆಳೆಯುವಂತಿಲ್ಲ.

-ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೊಳೆನರಸೀಪುರ ಕ್ಷೇತ್ರದ ಸಂಸ್ಥಾ ಕಾಂಗ್ರೆಸ್ನ ಶಾಸಕರಾಗಿದ್ದ ದೇವೇಗೌಡ ಅವರು ಆಂತರಿಕ ಭದ್ರತಾ ನಿರ್ವಹಣಾ ಕಾಯಿದೆ (ಮೀಸಾ) ಅಡಿಯಲ್ಲಿ ಒಂದೂವರೆ ವರ್ಷಗಳ ಕಾಲ ಕಾರಾಗೃಹ ವಾಸವನ್ನು ಅನುಭವಿಸಿದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ತಮ್ಮ ತಂದೆಯ ಸಂಘಟನಾ ಸಾಮಥ್ರ್ಯ, ದಿಟ್ಟ ನಾಯಕತ್ವ ಹಾಗೂ ಜನಪರ ಹೋರಾಟಗಳತ್ತ ಆಕರ್ಷಿತರಾದರು.

-ತಂದೆ ದೇವೇಗೌಡ ಅವರು ಪ್ರತಿಪಕ್ಷದ ನಾಯಕರು, ಸಚಿವರು, ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಸ್ಥಾನ ಅಲಂಕರಿಸಿದಂತೆಯೇ, ದೇವೇಗೌಡ ಅವರ ದೈತ್ಯ ಪ್ರತಿಭೆಯನ್ನ ಸಮೀಪದಲ್ಲಿಯೇ ನಿಂತು ಗಮನಿಸಿ ಗ್ರಹಿಸುತ್ತಿದ್ದ ಕುಮಾರಸ್ವಾಮಿ ಅವರೂ ಕೂಡಾ ಜನರ ಒಡನಾಟ ಬೆಳೆಸಿಕೊಂಡು ನಾಯಕನಾಗಿ ರೂಪುಗೊಂಡರು.

-ತಮ್ಮ 37 ನೇ ವಯಸ್ಸಿನಲ್ಲಿ, 1996 ನೇ ಇಸವಿಯಲ್ಲಿ, ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಜಾತ್ಯಾತೀತ ಜನತಾ ದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವನ್ನು ಕಂಡ ಕುಮಾರಸ್ವಾಮಿ ಅವರು ತಮ್ಮ ತಂದೆ ಹೆಚ್ ಡಿ ದೇವೇಗೌಡ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಸಂಸತ್ನಲ್ಲಿದ್ದದ್ದು ವಿಶೇಷ.

-ಎರಡೇ ವರ್ಷಗಳಲ್ಲಿ ಅಂದರೆ 1998 ರಲ್ಲಿ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ ಕುಮಾರಸ್ವಾಮಿ ಅವರು ಪರಾಭವಗೊಂಡರು. ಅಲ್ಲದೆ, 1999 ರಲ್ಲಿ ಸಾತನೂರು ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗಲೂ ಮತ್ತೆ ಸೋಲುಂಡರು.

-ನಂತರ, 2004 ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿ ಪ್ರಪ್ರಥಮ ಬಾರಿಗೆ ರಾಜ್ಯ ವಿಧಾನ ಸಭೆ ಪ್ರವೇಶಿಸಿದ ಕುಮಾರಸ್ವಾಮಿ ಅವರು ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ರಾಜ್ಯದ ಪ್ರಪ್ರಥಮ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಂಬಲಿಸಿದರಾದರೂ ಅದಕ್ಕೆ ಅವಕಾಶ ದೊರೆಯದಿದ್ದಾಗ, ತಮ್ಮ ಪಕ್ಷದ ಶಾಸಕರೊಂದಿಗೆ ಹೊರಬಂದು ಭಾರತೀಯ ಜನತಾ ಪಕ್ಷದ ಜೊತೆಗೆ ಕೈ ಜೋಡಿಸಿ, ಮುಖ್ಯಮಂತ್ರಿಯಾದರು.

-ರಾಜ್ಯದಲ್ಲಿ 20-ತಿಂಗಳ ಕಾಲ ಅಂದರೆ 2006 ರ ಫೆಬ್ರವರಿ 3 ರಿಂದ 2007 ರ ಅಕ್ಟೋಬರ್ 9 ರವರೆಗೆ ಅಸ್ತಿತ್ವದಲ್ಲಿದ್ದ ಜಾತ್ಯತೀತ ಜನತಾದಳ ಹಾಗೂ ಭಾರತೀಯ ಜನತಾ ಪಕ್ಷ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದಕುಮಾರಸ್ವಾಮಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಸರ್ಕಾರದ ಹತ್ತು ಹಲವು ಯೋಜನೆಗಳನ್ನು ಜನರ ಮನೆಯ ಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡಿದರು.

-ಆಡಳಿತ ವಿಕೇಂದ್ರೀಕರಣದ ದೃಷ್ಠಿಯಿಂದ ಎಂಟು ತಾಲ್ಲೂಕುಗಳ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು 2007 ನೇ ಇಸವಿಯಲ್ಲಿ ವಿಭಜಿಸಿ ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ತಾಲ್ಲೂಕುಗಳನ್ನು ಒಳಗೊಂಡ ರಾಮನಗರ ಜಿಲ್ಲೆಯನ್ನು ಅಸ್ತಿತ್ವಕ್ಕೆ ತಂದರು. ಅದೇ ರೀತಿ, ಕೋಲಾರ ಜಿಲ್ಲೆಯನ್ನು ವಿಭಜಿಸಿ ಚಿಕ್ಕಬಳ್ಳಾಪುರ, ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿ, ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕುಗಳನ್ನು ಒಳಗೊಂಡಂತೆ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ರಚಿಸಿದರು.

-ಗ್ರಾಮ ವಾಸ್ತವ್ಯ. ಕಾರ್ಯಕ್ರಮದ ಹೆಸರಿನಲ್ಲಿ ಯಾವುದೋ ಒಂದು ಕುಗ್ರಾಮದಲ್ಲಿರುವ ಓರ್ವ ಕಡು ಬಡವನ ಮನೆಯಲ್ಲಿಯೇ ವಾಸ್ತವ್ಯ ಹೂಡಿ, ಆತನ ಕಷ್ಟ-ಸಂಕಷ್ಟಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ ಕುಮಾರಸ್ವಾಮಿ ಅವರು ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಜನರ ಅಪಾರ ಪ್ರೀತಿ ಮತ್ತು ಅಗಾಧ ವಿಶ್ವಾಸವನ್ನು ಗಳಿಸಿ ಎಲ್ಲರ ಮನೆ ಮಾತಾದರು.

-ನಂತರ, 2008 ರ ರಾಜ್ಯ ವಿಧಾನ ಸಭಾ ಚುನಾವಣೆಗಳಲ್ಲಿ ರಾಮನಗರ ಕ್ಷೇತ್ರದಲ್ಲಿ ಜಯಶೀಲರಾದ ಕುಮಾರಸ್ವಾಮಿ ಅವರು 2009 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೂಲಕ ಎರಡನೇ ಬಾರಿಗೆ ಲೋಕಸಭೆಯನ್ನು ಪ್ರವೇಶಿಸಿದರು. ತದ ನಂತರ, 2013 ರ ಚುನಾವಣೆಗಳಲ್ಲಿ ರಾಜ್ಯ ವಿಧಾನ ಸಭೆಯಲ್ಲಿ ರಾಮನಗರ ಕ್ಷೇತ್ರವನ್ನೇ ಪ್ರತಿನಿಧಿಸಿದ ಕುಮಾರ ಸ್ವಾಮಿ ಅವರು 2018 ರ ಸಾರ್ವತ್ರಿಕ ಚುನಾವಣೆಗಳಲ್ಲಿ ತಾವು ಸ್ಪರ್ಧಿಸಿದ ರಾಮನಗರ ಮತ್ತು ಚನ್ನಪಟ್ಟಣ ಎರಡೂ ವಿಧಾನ ಸಭಾ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿ ರಾಜ್ಯ ರಾಜಕಾರಣದಲ್ಲಿ ತಮ್ಮ ರಾಜಕೀಯ ಶಕ್ತಿ ಮತ್ತು ಸಂಘಟನಾ ಸಾಮಥ್ರ್ಯವನ್ನು ಸಾಬೀತುಪಡಿಸಿದ್ದಾರೆ.

-ವೃತ್ತಿಯಲ್ಲಿ ಚಿತ್ರ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ಮಾತ್ರವಲ್ಲ, ಕನ್ನಡ ಭಾಷೆಯಲ್ಲಿ ಕಸ್ತೂರಿ ಎಂಬ ಮನರಂಜನಾ ವಾಹಿನಿ ಮತ್ತು ಕಸ್ತೂರಿ ನ್ಯೂಜ್ ಎಂಬ ಸುದ್ದಿ ವಾಹಿನಿಯ ಮಾಲೀಕರೂ ಆಗಿರುವ ಕುಮಾರ ಸ್ವಾಮಿ ಅವರು ತಮ್ಮ ಅಭಿಪ್ರಾಯ ಮತ್ತು ಚಿಂತನೆಗಳನ್ನು ಜನಸಾಮಾನ್ಯರಿಗೆ ಮನಮುಟ್ಟುವಂತೆ ಮಾತನಾಡುವ ವಾಗ್ಮಿಯಾಗಿ ರೂಪುಗೊಂಡಿದ್ದಾರೆ.

-ಲಕ್ಷೋಪಲಕ್ಷ ಅಭಿಮಾನಿಗಳ ವಲಯದಲ್ಲಿ ಕುಮಾರಣ್ಣ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಐವತ್ತೆಂಟು ವರ್ಷಗಳ ವಯೋಮಾನದ ಹೆಚ್ ಡಿ ಕುಮಾರಸ್ವಾಮಿ ಅವರು ಜಾತ್ಯಾತೀತ ಜನತಾ ದಳ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಗಳ ಸಮ್ಮಿಶ್ರ ಸರ್ಕಾರದ ನೇತೃತ್ವವಹಿಸಿ 2018 ರ ಮೇ 23 ರಂದು ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಎರಡನೇ ಬಾರಿಗೆ ಅಲಂಕರಿಸಿದ್ದಾರೆ. ಜನತೆಯ ಮುಖ್ಯಮಂತ್ರಿಯಾಗಿ ಎಲ್ಲರ ಮನ-ಮನೆ ಹೊಕ್ಕಿದ್ದಾರೆ.

-ಪತ್ನಿ ಅನಿತಾ ಅವರೂ ಕೂಡಾ ರಾಜಕೀಯ ರಂಗದಲ್ಲಿದ್ದಾರೆ. ಪುತ್ರ ನಿಖಿಲ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹಿರಿಯ ಸಹೋದರ ಹೆಚ್ ಡಿ ಬಾಲಕೃಷ್ಣ ಅವರು ರಾಜ್ಯ ಸರ್ಕಾರದ ನಿವೃತ್ತ ಅಧಿಕಾರಿ. ಮತ್ತೋರ್ವ ಹಿರಿಯ ಸಹೋದರ ಹೆಚ್ ಡಿ ರೇವಣ್ಣ ಅವರೂ ರಾಜ್ಯ ಸಹಕಾರಿ ಕ್ಷೇತ್ರದಲ್ಲಿ ಮಾತ್ರವಲ್ಲದೆ, ರಾಜ್ಯ ರಾಜಕಾರಣದಲ್ಲಿಯೂ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದ್ದಾರೆ. ಧರ್ಮಸಿಂಗ್ ಮತ್ತು ಹೆಚ್ ಡಿ ಕುಮಾರಸ್ವಾಮಿ ಸರ್ಕಾರಗಳಲ್ಲಿ ಲೋಕೋಪಯೋಗಿ ಮತ್ತು ಇಂಧನ ಖಾತೆಗಳನ್ನು ನಿರ್ವಹಿಸಿದ್ದಾರೆ. ಅಲ್ಲದೆ, ಕಿರಿಯ ಸಹೋದರ ಡಾ ಹೆಚ್ ಡಿ ರಮೇಶ್ ಅವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗೃಹಿಣಿಯಾಗಿರುವ ಕಿರಿಯ ಸಹೋದರಿ ಹೆಚ್ ಡಿ ಅನಸೂಯ ಅವರು ಸುಪ್ರಸಿದ್ಧ ಹೃದ್ರೋಗ ತಜ್ಞ ಹಾಗೂ ಶ್ರೀ ಜಯದೇವ ಹೃದಯ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ ಸಿ ಎನ್ ಮಂಜುನಾಥ್ ಅವರನ್ನು ಮದುವೆಯಾಗಿದ್ದಾರೆ. ಮತ್ತೋರ್ವ ಕಿರಿಯ ಸಹೋದರಿ ಹೆಚ್ ಡಿ ಶೈಲಜಾ ಅವರೂ ಕೂಡಾ ಗೃಹಿಣಿ. ಹೆಚ್ ಡಿ ಶೈಲಜಾ ಅವರ ಪತಿ ಹೆಸರಾಂತ ಮೂಳೆ ಚಿಕಿತ್ಸಾ ತಜ್ಞರೂ ಹಾಗೂ ಸಂಜಯ್ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ನಿರ್ದೇಶಕರಾದ ಡಾ ಹೆಚ್ ಎಸ್ ಚಂದ್ರಶೇಖರ್.